ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ತಡೆಗೆ ಹೀಗೊಂದು ತಂತ್ರ

Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

10,537 - ಇದು 2014ರಲ್ಲಿ ದೇಶದ ವಿವಿಧೆಡೆ ಬಸ್ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆ. ಜೊತೆಗೆ ಮೃತಪಟ್ಟವರ ಸಂಬಂಧಿಗಳು, ಪ್ರೀತಿಪಾತ್ರರು, ಅವರ ಜೀವನದಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಂಡು ಅನುಭವಿಸುತ್ತಿದ್ದ ನೋವು... ಇವೆಲ್ಲವೂ ಆ ಹುಡುಗನ ಅಂತಃಕರಣ ಕಲುಕುವಂತೆ ಮಾಡಿತ್ತು.

ಇದಕ್ಕೆಲ್ಲಾ ಕಾರಣವೇ ಅಪಘಾತ. ಇದನ್ನೇ ತಡೆಯುವಂಥ ಪ್ರಯತ್ನ ಮಾಡಿದರೆ ಹೇಗೆ? ಎಂಬ ಆಲೋಚನೆ ಹೊಳೆದದ್ದೂ ಆಗಲೇ. ಈ ಒಂದು ಯೋಚನೆಯೇ ‘ಸ್ಮಾರ್ಟ್ ಡಿವೈಸ್‌ ಫಾರ್‌ ಸ್ಮಾರ್ಟ್‌ ಬಸ್‌’ ಎಂಬ ಪರಿಕಲ್ಪನೆಯೊಂದಿಗೆ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು.

ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಆಗುವುದನ್ನು ತಡೆಯುವುದು ಹೇಗೆ, ಎದುರಿಗೆ ಬರುವ ವಾಹನದ ಬೆಳಕನ್ನು ಸ್ವಯಂಚಾಲಿತವಾಗಿ ಕಡಿಮೆಗೊಳಿಸುವುದು ಹೇಗೆ, ವೈರ್‌ಲೆಸ್‌ ಚಾರ್ಜ್‌ ಸಾಧ್ಯವೇ? ಹೀಗೆ ಪ್ರಶ್ನೆಗಳನ್ನು ಹಿಂಬಾಲಿಸಿ ಹೊರಟ ಹುಡುಗನ ಹೆಸರು ಹರೀಶ ಗದಗಿನ.

ಅಪಘಾತಕ್ಕೆ ಹದಗೆಟ್ಟ ರಸ್ತೆ, ಗುಡ್ಡಗಾಡು ಪ್ರದೇಶ, ಜನರ ಮನೋವೃತ್ತಿ ಅಷ್ಟೇ ಅಲ್ಲ, ಎದುರಿಗೆ ಬರುವ ಚಾಲಕನ ವರ್ತನೆ, ಬಸ್ ಚಾಲಕರ ಮನಸ್ಥಿತಿ, ರಾತ್ರಿ ಉಂಟಾಗುವ ಬೆಳಕಿನ ವ್ಯತ್ಯಾಸವೂ ಕಾರಣವಾಗುತ್ತದೆ ಎಂಬುದನ್ನು ಅರಿತ ಹರೀಶ್‌, ಇದಕ್ಕೆಂದೇ ನೂತನ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.

ಇದರ ಹೆಸರು ‘ಸ್ಮಾರ್ಟ್‌ ಡಿವೈಸ್‌ ಫಾರ್‌ ಸ್ಮಾರ್ಟ್‌ ಬಸ್‌’. ಸೀಟ್ ಸ್ಲೈಡಿಂಗ್ ಸಿಸ್ಟಂ, ವಾಹನಗಳ ಬೆಳಕು ಸ್ವಯಂಚಾಲಿತವಾಗಿ ಹೊಂದಿಕೊಳ್ಳುವುದು, ವೈರ್‌ಲೆಸ್‌  ಚಾರ್ಜಿಂಗ್ ಆಫ್ ಬ್ಯಾಟರಿ ಎಂಬ ವಿನೂತನ ಆವಿಷ್ಕಾರಗಳು ಇವು.

ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಹರೀಶ್‌ ‘ಸೀಟ್‌ ಸ್ಲೈಡಿಂಗ್‌ ಸಿಸ್ಟಂ’ನಲ್ಲಿ ಕಾರಿನಲ್ಲಿನ ಏರ್‌ಬ್ಯಾಗ್‌ಗೆ ಅಗತ್ಯವಾಗಿರುವ ಸರ್ಕ್ಯೂಟ್‌ ಅಳವಡಿಸಿದ್ದಾರೆ. ಸ್ಟೀರಿಂಗ್ ಮಧ್ಯೆ ಇರುವ ಬ್ಯಾಗ್ ಮೇಲೆ ಒತ್ತಡ ಬಿದ್ದಾಗ ಹೇಗೆ ಬಲೂನ್‌ ಊದಿಕೊಳ್ಳುತ್ತದೋ ಅದೇ ತರಹ ಒತ್ತಡದಿಂದ ರ್‌್ಯಾಕ್‌ ಹಿಂದೆ ಸರಿಯುತ್ತದೆ. ವಾಹನ ಇನ್ನೇನು ಅಪ್ಪಳಿಸಲಿದೆ ಎನ್ನುವಷ್ಟರಲ್ಲಿ ಸಂದೇಶ ರವಾನಿಸುತ್ತದೆ. ಗುದ್ದಿದ ತಕ್ಷಣವೇ ಇಡೀ ವಾಹನದ ಎಲ್ಲ ಸೀಟುಗಳು 2 ಮೀಟರ್‌ ಹಿಂದಕ್ಕೆ ಹೋಗುತ್ತವೆ. ಇದರಿಂದ ಅಪಘಾತವನ್ನು ತಡೆಯಬಹುದಾಗಿದೆ.

ಇನ್ನು ‘ಸ್ವಯಂ ಚಾಲಿತ ಡಿಪ್, ಡಿಮ್ ಲೈಟ್‌’ ರಾತ್ರಿ ಬಸ್ ಚಾಲನೆ ವೇಳೆ ಹೆಡ್‌ಲೈಟ್ ಅತ್ಯಗತ್ಯ. ಆ ಬೆಳಕು ಸ್ವಲ್ಪ ವ್ಯತ್ಯಾಸವಾದರೂ ಅಪಾಯ ಖಚಿತ. ಅದಕ್ಕಾಗಿ ಅಳೆದು ತೂಗಿ ಡಿಪ್, ಡಿಮ್ ಬಳಸಬೇಕಾಗುತ್ತದೆ. ಆದರೆ ಕೆಲ ಬಾರಿ ಉಂಟಾಗುವ ಮನುಷ್ಯ ಸಹಜ ತಪ್ಪುಗಳಿಂದ ಅವಘಡ ಉಂಟಾಗುತ್ತದೆ. ದ್ವಿಪಥ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳಿಗೆ ಸ್ವಯಂಚಾಲಿತವಾಗಿ ಬೆಳಕಿನ ಬಗ್ಗೆ ತಿಳಿಸಿದರೆ ಅನುಕೂಲವಾಗುತ್ತದೆ ಎಂಬುದನ್ನು ಅರಿತ ಹರೀಶ್, ಇದರ ಮಾದರಿ ವಿನ್ಯಾಸಗೊಳಿಸಿದ್ದಾರೆ.

ಇದು ಎದುರು ದಿಕ್ಕಿನಿಂದ ಬರುವ ವಾಹನಗಳ ಬೆಳಕನ್ನು ಅರಿತು ಹೆಚ್ಚು, ಕಡಿಮೆ ಮಾಡಿ ಎಂದು ಸಿಗ್ನಲ್‌ ಹೊರಹಾಕುತ್ತದೆ. ಇದೆಲ್ಲ ಸರಳ ವಿದ್ಯುನ್ಮಾನ ಸರ್ಕ್ಯುಟ್‌ ಹೊಂದಾಣಿಕೆ ಎನ್ನುತ್ತಾರೆ ಹರೀಶ್‌. ಇಲ್ಲಿ ಬಳಸಲಾಗಿರುವ ಎಲ್‌ಡಿಆರ್ ಸೆನ್ಸಾರ್ ಹೈಬೀಮ್‌ನಿಂದ ರಿಫ್ಲೆಕ್ಟ್ ಆಗುವ ಸಿಗ್ನಲ್ ಅನ್ನು ಪಡೆದು ಲೋ ಬೀಮ್ ಸೆನ್ಸಾರ್ ಅನ್ನು ಆಕ್ಟಿವೇಟ್ ಮಾಡಿ, ಹೈಬೀಮ್ ಅನ್ನು ಡಿಆಕ್ಟಿವೇಟ್‌ ಮಾಡುತ್ತದೆ. ಇದು ಸಂವೇದಿಗಳ ಮೂಲಕ ಸಿಗ್ನಲ್ ಕಳುಹಿಸುತ್ತದೆ.

ವೈರ್‌ಲೆಸ್‌ ಚಾರ್ಜಿಂಗ್ ಸಿಸ್ಟಂ: ಬಸ್‌ನಲ್ಲಿ ಇರುವ ಎರಡು ಕಾಪರ್‌ ಕಾಯಲ್‌ಗಳು ಎಲೆಕ್ಟ್ರೋಮ್ಯಾಗ್ನೆಟಿಕ್‌ ಇಂಡಕ್ಷನ್‌ ತತ್ವದಡಿ ತಾನೇ ಬ್ಯಾಟರಿ ಚಾರ್ಜ್‌ ಮಾಡುತ್ತವೆ.
ಬಸ್‌ನ ಹೊರ ನೋಟಕ್ಕೆ ಕೊಡುವ ಪ್ರಾಮುಖ್ಯ ಸುರಕ್ಷತೆಗೆ ಇಂದಿಗೂ ನೀಡುವುದಿಲ್ಲ. 2013ರಲ್ಲಿ ದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 1,37,000 ಜನ ಸತ್ತಿದ್ದಾರೆ. ಆದರೂ ನೂತನ ತಂತ್ರಜ್ಞಾನಕ್ಕೆ ನಾವು ಪ್ರಾಮುಖ್ಯ ನೀಡಿರುವುದು ಅಷ್ಟಕ್ಕಷ್ಟೆ. ಈ ನೂತನ ಸಾಧನ ಅಳವಡಿಸುವುದರಿಂದ ಬಸ್‌ನ ಮುಖಾಮುಖಿ ಡಿಕ್ಕಿಯಿಂದ ಉಂಟಾಗುವ ಪ್ರಾಣಹಾನಿ ತಪ್ಪಿಸಬಹುದು ಎನ್ನುತ್ತಾರೆ ಹರೀಶ್.

ಬಸ್ ಅಪಘಾತದಲ್ಲಿ ಮೊದಲು ಮೂರು ಸ್ಥಾನಗಳು ಕ್ರಮವಾಗಿ ತಮಿಳುನಾಡು, ಉತ್ತರ ಪ್ರದೇಶ ಹಾಗೂ ಕರ್ನಾಟಕಕ್ಕೆ ಇದೆ. ಇಂಥ ವಿಚಾರದಲ್ಲಿ ಯಾವ ರಾಜ್ಯವೂ ಸ್ಥಾನ ಪಡೆಯಬಾರದು ಎನ್ನುವ ಹರೀಶ್‌ ಅವರ ಆವಿಷ್ಕಾರಕ್ಕೆ ಬಾಷ್ ಕಂಪೆನಿಯಿಂದ ಮೆಚ್ಚುಗೆ ಪತ್ರ ದೊರೆತಿದೆ. ಈ ಸಾಧನಗಳಿಗೆ ₹ 1 ಲಕ್ಷ ವೆಚ್ಚವಾಗುತ್ತದೆ. ಜೀವದ ಬೆಲೆ ಕಟ್ಟವುದಕ್ಕೆ ಸಾಧ್ಯವೇ?

ಬಿಡುವಿನ ವೇಳೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹರೀಶ್‌, ಐವರು ಸ್ನೇಹಿತರ ಜತೆ ಸೇರಿ ಸ್ವಚ್ಛತಾ ಕಾರ್ಯ, ಪ್ಲಾಸ್ಟಿಕ್‌ ಬಳಕೆ ಜಾಗೃತಿಯನ್ನೂ ಆರಂಭಿಸಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ಹುಬ್ಬಳ್ಳಿಯ ‘ಲೀಡ್‌ ಪ್ರೋಗ್ರಾಂ’ ನೀಡಿದ ಪ್ರೇರಣೆ ಎನ್ನುತ್ತಾರೆ ಹರೀಶ್‌. ಅವರ ಸಂಪರ್ಕಕ್ಕೆ:8553362858.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT