ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಹರಿವು: ಚಮಚ ಸಮಾಚಾರ!

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾಗರಿಕತೆಯ ಆರಂಭದಿಂದಲೂ ತನ್ನ ದಿನನಿತ್ಯದ ಬಳಕೆಗೆ ಬೇಕಾದ ವಸ್ತುಗಳನ್ನು ಆವಿಷ್ಕರಿಸುವುದನ್ನು ಮಾನವ ಹವ್ಯಾಸವನ್ನೇ ಮಾಡಿಕೊಂಡಿದ್ದ. ಅದರಲ್ಲೂ ಆಹಾರ ತಯಾರಿಸಲು ಬಳಸುವ ಪರಿಕರಗಳ ಮೇಲೆಯೇ ಅವನ ಗಮನ ಹೆಚ್ಚಿತ್ತು. ಇಂದು ನಾವು ಬಳಸುವ ಬಹುಪಾಲು ವಸ್ತುಗಳು ಪುರಾತನ ಜನರ ಕೊಡುಗೆಗಳು. ರೂಪ, ವಿನ್ಯಾಸ, ತಯಾರಿಸಲು ಬಳಸುವ ವಸ್ತು ಬದಲಾಗಿರಬರಹುದು. ಆದರೆ ಉದ್ದೇಶ? ಉಹ್ಞುಂ... ಇಲ್ಲ. ಆಹಾರ ಉದ್ಯಮದಲ್ಲಿ ಬಳಸಲಾಗುತ್ತಿರುವ ಚಮಚ ಅಥವಾ ಸ್ಪೂನ್‌ ಇದಕ್ಕೊಂದು ತಾಜಾ ಉದಾಹರಣೆ.

ಆಹಾರ ಸೇವಿಸಲು ಉಪಯೋಗಿಸುವ ಚಮಚದ ಇತಿಹಾಸವೇ ಅಚ್ಚರಿ. ಇವುಗಳ ಬಳಕೆ ಯಾವಾಗ ಆರಂಭವಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಚಮಚದ ಮೂಲ ರೂಪ ಏನು ಗೊತ್ತೆ? ಚಿಪ್ಪು ಎಂದು ಹೇಳುತ್ತಾರೆ ಇತಿಹಾಸಕಾರರು. ನದಿ, ಸಾಗರದ ದಂಡೆಗಳಲ್ಲಿ ಸಿಗುತ್ತಿದ್ದ ಚಿಪ್ಪು ಅಂದಿನ ಜನರ ಚಮಚವಾಗಿತ್ತು. ನಂತರದ ದಿನಗಳಲ್ಲಿ ಮರದಿಂದ ಇದನ್ನು ತಯಾರಿಸುವ ಕಲೆಯನ್ನು ಅವರು ಕರಗತ ಮಾಡಿಕೊಂಡರು. 

ಪುರಾತನ ಚೀನಾದಲ್ಲಿ (ಶಾಂಗ್‌ ರಾಜವಂಶದ ಆಡಳಿತಾವಧಿಯಲ್ಲಿ) ಎಲುಬಿನಿಂದ ತಯಾರಿಸಿದ ಚಮಚ ಬಳಕೆಯಲ್ಲಿತ್ತು ಎಂದು ಹೇಳುತ್ತದೆ ಚರಿತ್ರೆ. ಪುರತಾನ ಭಾರತಕ್ಕೂ ಚಮಚದ ಪರಿಚಯವಿತ್ತಂತೆ. ಋಗ್ವೇದದಲ್ಲಿ ಇದರ ಬಗ್ಗೆ ಉಲ್ಲೇಖ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.

ಕ್ರಿ.ಪೂ 1000ದಲ್ಲಿ ಚಮಚವನ್ನು ಉಪಯೋಗಿಸುತ್ತಿದ್ದ ಬಗ್ಗೆ ಹಲವು ಆಧಾರಗಳು ಲಭ್ಯವಾಗಿವೆ. ಈಜಿಪ್ಟ್‌ನಲ್ಲಿ ಆಭರಣ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ದೇಶಗಳಿಗೆ ಇವುಗಳನ್ನು ಬಳಸಲಾಗುತ್ತಿತ್ತು ಎಂಬ ಬಗ್ಗೆ ದಾಖಲೆಗಳಿವೆ. ಈ ಚಮಚಗಳನ್ನು  ಮರ, ಚಕಮುಕಿ ಕಲ್ಲು (ಫ್ಲಿಂಟ್‌), ಬಳಪದ ಕಲ್ಲು ಮತ್ತು ಆನೆ ದಂತದಿಂದ ಮಾಡಿದ್ದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಚಿತ್ರಗಳನ್ನು ಅವುಗಳಲ್ಲಿ ಚಿತ್ರಿಸಲಾಗಿತ್ತು. ಪುರಾತನ ಗ್ರೀಸ್‌, ರೋಮ್‌ನಲ್ಲಿ ಕಂಚು ಮತ್ತು ಬೆಳ್ಳಿ ಲೋಹಗಳಿಂದ ಮಾಡಿದ ಚಮಚಗಳು ಬಳಕೆಯಲ್ಲಿದ್ದವು. ಆದರೆ, ಇವುಗಳನ್ನು ಶ್ರೀಮಂತರು ಮಾತ್ರ ಬಳಸುತ್ತಿದ್ದರು.

ಮಧ್ಯಕಾಲೀನ ಯೂರೋಪ್‌ನಲ್ಲಿ ಚಮಚಗಳನ್ನು ಪಶುಗಳ ಕೊಂಬು, ಮರ, ಹಿತ್ತಾಳೆ, ತವರ ಹಾಗೂ ಸೀಸದ ಮಿಶ್ರಲೋಹಗಳಿಂದ ಮಾಡುತ್ತಿದ್ದರು. 15ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ಮರದ ಚಮಚಗಳು ಹೆಚ್ಚು ಜನಪ್ರಿಯಗೊಂಡವು. ಅಲ್ಲೂ ಬಡವರಿಗೆ ಇವು ಕೈಗೆಟುಕುತ್ತಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.

ಇಂಗ್ಲೆಂಡ್‌ ಜನರಿಗೆ ಚಮಚ ಪರಿಚಯವಾಗಿದ್ದು 13ನೇ ಶತಮಾನದಲ್ಲಿ. ಅಲ್ಲಿ ಇದು ಕೇವಲ ಆಹಾರ ಸೇವಿಸುವುದಕ್ಕೆ ಮೀಸಲಾಗಿರಲಿಲ್ಲ. ಅಧಿಕಾರ ಮತ್ತು ಸಿರಿವಂತಿಕೆಯ ಧ್ಯೋತಕವಾಗಿತ್ತು. ರಾಜನ ಪಟ್ಟಾಭಿಷೇಕದ ಸಂದರ್ಭದಲ್ಲಿ ಸುಗಂಧ ದ್ರವ್ಯ ಸೇರಿದಂತೆ ಇತರ ದ್ರವ ಪದಾರ್ಥಗಳನ್ನು ಪ್ರೋಕ್ಷಣೆ ಅಥವಾ ಲೇಪನ ಮಾಡಲು ವಿಶೇಷ ಚಮಚಗಳನ್ನು ಬಳಸಲಾಗುತ್ತಿತ್ತಂತೆ.

ನವೋದಯ ಕಾಲ (14ರಿಂದ 16ನೇ ಶತಮಾನದ ನಡುವೆ), ಬರೋಕ್‌ ಯುಗಗಳಲ್ಲಿ (17 ಮತ್ತು 18ನೇ ಶತಮಾನದ ಅವಧಿ) ಚಮಚದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಯಿತು. 18ನೇ ಶತಮಾನದ ಕೊನೆಯಲ್ಲಿ, ಅಂದರೆ 1760ರಲ್ಲಿ ಚಮಚಕ್ಕೆ ಆಧುನಿಕ ರೂಪ ಸಿಕ್ಕಿತು.

ಆಧುನಿಕ ಆಹಾರ ಉದ್ಯಮದ ಭಾಗವೇ ಆಗಿರುವ ಚಮಚ 50ಕ್ಕೂ ಹೆಚ್ಚು ಬಗೆಯಲ್ಲಿ ಲಭ್ಯವಿದೆ. ಸ್ಟೀಲ್‌, ಪ್ಲಾಸ್ಟಿಕ್‌, ಮರ, ವಿವಿಧ ಲೋಹಗಳಿಂದ ಮಾಡಿರುವ ಚಮಚಗಳ ವಿನ್ಯಾಸ, ಗಾತ್ರ ಬಳಕೆಯ ಉದ್ದೇಶಕ್ಕೆ (ಐಸ್‌ ಕ್ರೀಂ ಸೇವನೆಗೆ ಬೇರೆ, ಹಣ್ಣುಗಳ ತುಂಡನ್ನು ಸೇವಿಸಲು ಬೇರೆ ಇತ್ಯಾದಿ) ಅನುಸಾರವಾಗಿ ಬದಲಾಗುತ್ತವೆ. ಚಿನ್ನ ಸೇರಿದಂತೆ ಬೆಲೆಬಾಳುವ ಲೋಹ, ವಸ್ತುಗಳಿಂದ ಮಾಡಿದ ಚಮಚವನ್ನು ಉಪಯೋಗಿಸುವ ಸಿರಿವಂತರು, ಶೋಕಿಲಾಲರೂ ನಮ್ಮ ನಡುವೆ ಇದ್ದಾರೆ. ಚಮಚಗಳ ಸಂಗ್ರಹವನ್ನು ಹವ್ಯಾಸ ಮಾಡಿಕೊಂಡಿರುವರೂ ಇದ್ದಾರೆ.

ಅಂದ ಹಾಗೆ, ತಮ್ಮ ಲಾಭಕ್ಕಾಗಿ ಇನ್ನೊಬ್ಬರನ್ನು ಓಲೈಸುವುದಕ್ಕೆ ವ್ಯಂಗ್ಯವಾಗಿ ಹೇಳಲಾಗುವ ‘ಚಮಚಾಗಿರಿ’ಗೂ ಈ ಚಮಚಕ್ಕೂ ಯಾವುದೇ ಸಂಬಂಧವಿಲ್ಲ!

ಅಳತೆಯ ಮಾನದಂಡ!
ಆಹಾರ ಸೇವನೆಯ ಹೊರತಾಗಿ ಚಮಚದಿಂದ ಮತ್ತೊಂದು ಪ್ರಮುಖ ಪ್ರಯೋಜನವೂ ಇದೆ. ಅಡುಗೆ ಮಾಡುವ ಸಂದರ್ಭದಲ್ಲಿ ಸಾಂಬಾರ ಪದಾರ್ಥಗಳನ್ನು ಚಮಚದಲ್ಲೇ ಅಳೆದು ಹಾಕಲಾಗುತ್ತದೆ. ಅಡುಗೆ ಪಠ್ಯದಲ್ಲಿ, ಕಾರ್ಯಕ್ರಮಗಳಲ್ಲಿ ‘ಟೀಸ್ಪೂನ್‌’ ಅಥವಾ ‘ಸ್ಪೂನ್‌ಫುಲ್‌ಆಫ್‌’ ಹೇಳುವುದನ್ನು ಗಮನಿಸಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT