ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚು ಹೊತ್ತಿಸುವ ಸ್ಪಾರ್ಕ್ ಪ್ಲಗ್‍

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೈಕ್‌ಗಳ ನಿರ್ವಹಣೆಯಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಭಾಗವೆಂದರೆ ಸ್ಪಾರ್ಕ್ ಪ್ಲಗ್‌ಗಳು. ಆದರೆ ಎಂಜಿನ್‌ನ ಆರೋಗ್ಯ ಸುಸ್ಥಿರವಾಗಿಡುವಲ್ಲಿ ಸ್ಪಾರ್ಕ್ ಪ್ಲಗ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಇದಷ್ಟೇ ಅಲ್ಲದೆ, ಉತ್ತಮ ಪಿಕ್‍ಅಪ್, ಅಕ್ಸಲರೇಷನ್ ಮತ್ತು ಉತ್ತಮ ಮೈಲೇಜ್ ಎಲ್ಲವೂ ಸ್ಪಾರ್ಕ್ ಪ್ಲಗ್‌ನ ಆರೋಗ್ಯವನ್ನು ಆಧರಿಸಿರುತ್ತದೆ.

ಸಾಮಾನ್ಯವಾಗಿ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಬೈಕ್‍ ಮತ್ತು ಸ್ಕೂಟರ್‌ಗಳಲ್ಲಿ ಕಾಪರ್ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್‌ಗಳಿರುತ್ತವೆ. ಎಂಜಿನ್‍ ಸಿಲಿಂಡರ್‍ ಒಳಗೆ ತುಂಬಿಕೊಂಡ ಇಂಧನ ಮತ್ತು ಗಾಳಿ ಮಿಶ್ರಣಕ್ಕೆ ಕಿಡಿ ಹಚ್ಚುವ ಮಹತ್ವದ ಕೆಲಸ ಸ್ಪಾರ್ಕ್ ಪ್ಲಗ್‌ಗಳದ್ದು. ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್‌ಗೆ ಪ್ರವೇಶಿಸಿ, ಹೆಚ್ಚಿನ ಒತ್ತಡ ನಿರ್ಮಾಣವಾದಾಗ ಪ್ಲಗ್‌ಗಳು ಕಿಡಿ ಹೊತ್ತಿಸಬೇಕು. ಆಗ ಮಾತ್ರ ಸಿಲಿಂಡರ್ ಪ್ರವೇಶಿಸುವ ಇಂಧನ ಮತ್ತು ಗಾಳಿ ಮಿಶ್ರಣ ಭಾಗಶಃ ದಹಿಸುತ್ತದೆ.

ಒಂದೊಮ್ಮೆ ಇವು ಸರಿಯಾಗಿ ಕಾರ್ಯನಿರ್ವಹಿಸಿದರೆ ನಿಮ್ಮ ಬೈಕ್‌ನ ಪಿಕ್‍ಅಪ್ ಮತ್ತು ಮೈಲೇಜ್ ಉತ್ತಮವಾಗಿರುತ್ತದೆ. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಇಂಧನ ಮಿಶ್ರಣದ ದಹನದ ಪ್ರಮಾಣ ಕಡಿಮೆಯಾಗಿ ಬೈಕ್‌ನ ಪರ್ಫಾರ್ಮೆನ್ಸ್ ಕುಗ್ಗುತ್ತದೆ. ಮೈಲೇಜ್ ಮತ್ತು ಪಿಕ್‍ಅಪ್ ಕಡಿಮೆಯಾಗುತ್ತದೆ. ಹೀಗಾಗಿ ಸ್ಪಾರ್ಕ್ ಪ್ಲಗ್‌ಗಳ ನಿರ್ವಹಣೆ ಅತ್ಯಗತ್ಯ.

ಇವುಗಳ ನಿರ್ವಹಣೆ ಸುಲಭ. ಬೈಕ್‌ಗಳನ್ನು ಸರ್ವೀಸ್‌ಗೆ ಕೊಟ್ಟಾಗ ಮೆಕ್ಯಾನಿಕ್‌ಗಳು ಸ್ಪಾರ್ಕ್ ಪ್ಲಗ್‌ಗಳನ್ನು ಸ್ವಚ್ಛಗೊಳಿಸಿರುತ್ತಾರೆ. ಹಾಗೆಂದು ಮತ್ತೊಂದು ಸರ್ವೀಸ್‌ವರೆಗೆ ಕಾದು ಕುಳಿತುಕೊಳ್ಳಬೇಕಿಲ್ಲ. ಸ್ಪಾರ್ಕ್ ಪ್ಲಗ್‌ಗಳನ್ನು ಹೊರತೆಗೆದು ಅದರಲ್ಲಿರುವ ಸೆಂಟರ್ ಎಲೆಕ್ಟ್ರೋಡ್ ಮತ್ತು ಗ್ರೌಂಡ್ ಎಲೆಕ್ಟ್ರೋಡ್‌ಗಳನ್ನು ಮತ್ತೊಂದು ಲೋಹ ಅಥವಾ ಉಪ್ಪುಕಾಗದದಿಂದ ಉಜ್ಜಿ ಸ್ವಚ್ಛಗೊಳಿಸಬಹುದು. ಇದೆಲ್ಲಾ ಹೆಚ್ಚೆಂದರೆ ಕೇವಲ ಐದು ನಿಮಿಷದ ಕೆಲಸ.

ಹೀಗಿದ್ದೂ ಕಾಪರ್ ಎಲೆಕ್ಟ್ರೋಡ್  ಸ್ಪಾರ್ಕ್ ಪ್ಲಗ್‌ಗಳ ಆಯಸ್ಸು ಗರಿಷ್ಠ 10 ರಿಂದ 12 ಸಾವಿರ ಕಿ.ಮೀ. ನಂತರ ಅವುಗಳನ್ನು ಬದಲಿಸುವುದು ಅತ್ಯಗತ್ಯ. ಇವುಗಳ ಬೆಲೆ ಹೆಚ್ಚೆಂದರೂ 100 ರೂಪಾಯಿ ಮೀರಲಾರದು. ಆದರೂ ಕಾಪರ್ ಸ್ಪಾರ್ಕ್ ಪ್ಲಗ್‌ಗಳು ಇಂಧನವನ್ನು ಸಂಪೂರ್ಣವಾಗಿ ದಹಿಸುವುದಿಲ್ಲ ಎಂದು ತಿಳಿದವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹೀಗಾಗಿ ಸ್ಪಾರ್ಕ್ ಪ್ಲಗ್‌ಗಳ ಅಪ್‌ಗ್ರೇಡ್‌ಗೆ ಬಹಳ ಮಂದಿ ಮುಂದಾಗುತ್ತಾರೆ.

ಸ್ವತಃ ಬೈಕ್‍ ತಯಾರಕರೇ ಕಾಪರ್ ಸ್ಪಾರ್ಕ್ ಪ್ಲಗ್‌ಗಳಿಗೆ ಬದಲಾಗಿ ಪ್ಲಾಟಿನಂ ಸ್ಪಾರ್ಕ್ ಪ್ಲಗ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು ಎಂಬ ಅಂಶವನ್ನು ಮ್ಯಾನುಯಲ್‌ನಲ್ಲಿ ಉಲ್ಲೇಖಿಸಿರುತ್ತಾರೆ. ಆದರೂ ಅಧಿಕೃತ  ಸರ್ವೀಸ್ ಸೆಂಟರ್‌ಗಳಲ್ಲಿ ಈ ಸ್ಪಾರ್ಕ್ ಪ್ಲಗ್‌ಗಳು ದೊರೆಯುವುದಿಲ್ಲ. ಮಾರುಕಟ್ಟೆಯಲ್ಲೇ ಇವನ್ನು ಕೊಂಡುಕೊಳ್ಳಬೇಕಾಗುತ್ತದೆ. ಪ್ಲಾಟಿನಂ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್‌ಗಳ ಬೆಲೆ 200 ರೂಪಾಯಿ ಮೀರಲಾರದು.

ಸ್ಪಾರ್ಕ್ ಪ್ಲಗ್‌ಗಳ ಅಪ್‌ಗ್ರೇಡ್ ಆದರೂ ಏಕೆ ಎಂಬ ಪ್ರಶ್ನೆ ಮೂಡಬಹುದು. ಪ್ಲಾಟಿನಂ ಲೋಹ ಕಾಪರ್ ಅರ್ಥಾತ್ ತಾಮ್ರಕ್ಕಿಂತ ದಕ್ಷ ವಿದ್ಯುತ್‍ವಾಹಕ. ಹೀಗಾಗಿ ಇಗ್ನಿಷನ್‌ನಿಂದ ಬಂದ ವಿದ್ಯುತ್ ವೋಲ್ಟೇಜ್ ಪ್ರಮಾಣ ಕಡಿಮೆಯಿದ್ದರೂ ಪ್ಲಾಟಿನಂ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್‍ ಕಿಡಿ ಹೊತ್ತಿಸುತ್ತದೆ. ಕಿಡಿಯ ಪ್ರಮಾಣವೂ ಸಾಮಾನ್ಯ ಸ್ಪಾರ್ಕ್ ಪ್ಲಗ್‌ಗಳು ಹೊತ್ತಿಸುವ ಕಿಡಿಗಿಂತಲೂ ಹೆಚ್ಚಾಗಿರುತ್ತದೆ. ಹೀಗಾಗಿ ಸಿಲಿಂಡರ್ ಪ್ರವೇಶಿಸಿದ ಇಂಧನ ಗರಿಷ್ಠ ಪ್ರಮಾಣದಲ್ಲಿ ಉರಿಯುತ್ತದೆ.

ಹೀಗಾಗಿ ಸಾಮಾನ್ಯ ಸ್ಪಾರ್ಕ್ ಪ್ಲಗ್‌ಗಳಿಗಿಂತ ಪ್ಲಾಟಿನಂ ಸ್ಪಾರ್ಕ್ ಪ್ಲಗ್ ಅಳವಡಿಸಿದ ಬೈಕ್‌ಗಳ ಪಿಕ್ಅಪ್ ಮತ್ತು ಮೈಲೇಜ್ ಉತ್ತಮವಾಗಿರುತ್ತದೆ. ಅಲ್ಲದೆ ಪ್ಲಾಟಿನಂ ಸ್ಪಾರ್ಕ್ ಪ್ಲಗ್‌ಗಳು 17 ಸಾವಿರದಿಂದ 20 ಸಾವಿರ ಕಿ.ಮೀ.ಗಳವರೆಗೂ ದಕ್ಷವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಾಗಿ ಕೊಟ್ಟ ಹಣಕ್ಕೆ ಮೋಸವಿಲ್ಲ.

ಇವುಗಳ ಹೊರತಾಗಿಯೂ ಮತ್ತೊಂದು ಅತ್ಯುತ್ತಮ ಆಯ್ಕೆಯೊಂದನ್ನು ಬೈಕ್ ಮೆಕ್ಯಾನಿಕ್‌ಗಳು ನಿಮ್ಮ ಮುಂದಿಡುತ್ತಾರೆ. ಅದು ಇರಿಡಿಯಂ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್‍. ಇರಿಡಿಯಂ ಲೋಹದ ವಿದ್ಯುತ್‍ವಾಹಕ ಶಕ್ತಿ ಕಾಪರ್ ಮತ್ತು ಪ್ಲಾಟಿನಂ ಲೋಹಗಳಿಗಿಂತ ಹಲವು ಪಟ್ಟು ಹೆಚ್ಚು. ಇಗ್ನಿಷನ್‌ನಿಂದ ಕಡಿಮೆ ವಿದ್ಯುತ್ ಪ್ರವಹಿಸಿದರೂ ಈ ಪ್ಲಗ್‌ಗಳು ಗರಿಷ್ಠ ಪ್ರಮಾಣದಲ್ಲಿ ಕಿಡಿ ಹೊತ್ತಿಸುತ್ತವೆ, ಇಂಧನ ಸಂಪೂರ್ಣವಾಗಿ ದಹಿಸುತ್ತದೆ.

ಹೀಗಾಗಿ ಇರಿಡಿಯಂ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್‍ ಅಳವಡಿಸಿದ ಬೈಕ್‌ಗಳು ಪಿಕ್‍ಅಪ್ ಮತ್ತು ಮೈಲೇಜ್ ಅತ್ಯುತ್ತಮವಾಗಿರುತ್ತದೆ. ಇರಿಡಿಯಂ ಸ್ಪಾರ್ಕ್ ಪ್ಲಗ್ + ಉತ್ತಮ ರೈಡರ್ + ಉತ್ತಮ ಚಾಲನಾ ಹವ್ಯಾಸ ಜತೆಗೂಡಿದರೆ 223 ಸಿಸಿ ಸಾಮರ್ಥ್ಯದ ಹೀರೊ ಕರಿಝ್ಮಾ ಬೈಕ್‌ನಲ್ಲಿ ಪ್ರತಿ ಲೀಟರ್ ಗರಿಷ್ಠ 45 ಕಿ.ಮೀ ಮೈಲೇಜ್ ತೆಗೆಯಲು ಸಾಧ್ಯ. ಅಲ್ಲದೆ, ಇದರಿಂದ ಬೈಕ್‌ನ ಅಕ್ಸಲರೇಷನ್ ಸಹ ವೃದ್ಧಿಸುತ್ತದೆ. ಅಂದರೆ ಬೈಕ್‌ನ ಎಂಜಿನ್‍ ತ್ವರಿತವಾಗಿ ಗರಿಷ್ಠ ಆರ್‌ಪಿಎಂ ತಲುಪುತ್ತದೆ. ಜತೆಗೆ ಗರಿಷ್ಠ ವೇಗ ಶೇ 2ರಿಂದ 3ರಷ್ಟು ಹೆಚ್ಚುತ್ತದೆ.­

ಇರಿಡಿಯಂ ಸ್ಪಾರ್ಕ್ ಪ್ಲಗ್‍ ಬಳಸಲು ಮತ್ತೊಂದು ಪ್ರಬಲ ಕಾರಣವಿದೆ. ದಿನದಲ್ಲಿ ಮೊದಲ ಬಾರಿ ಬೈಕ್ ಸ್ಟಾರ್ಟ್ ಮಾಡುವಾಗ ಕೋಲ್ಡ್ ಸ್ಟಾರ್ಟ್ ಅನುಭವ ಯಾರಿಗೆ ಆಗಿರುವುದಿಲ್ಲ ಹೇಳಿ. ಮಿಸ್‌ಫೈರಿಂಗ್ ಒಂದೆಡೆಯಾದರೆ, ಒಂದೆರಡು ನಿಮಿಷಗಳ ಕಾಲ ಎಂಜಿನ್ ವಾರ್ಮ್ ಅಪ್ ಮಾಡುವುದು ಅನಿವಾರ್ಯ. ನಂತರವಷ್ಟೇ ಬೈಕ್‍ ಎಂಜಿನ್ ನಯವಾಗಿ ಓಡುತ್ತದೆ. ಇರಿಡಿಯಂ ಸ್ಪಾರ್ಕ್ ಪ್ಲಗ್ ಅಳವಡಿಸಿದರೆ ಕೋಲ್ಡ್ ಸ್ಟಾರ್ಟ್‌ನ ಸಮಸ್ಯೆ ಇರುವುದಿಲ್ಲ, ಮೊದಲ ಕಿಕ್‌ಗೇ ಬೈಕ್‌ಗಳು ಸ್ಟಾರ್ಟ್ ಆಗುತ್ತವೆ. ಅಲ್ಲದೆ ಹೆಚ್ಚು ಹೊತ್ತು ಎಂಜಿನ್‍ ವಾರ್ಮ್ ಅಪ್ ಮಾಡುವ ಅಗತ್ಯವೂ ಇರುವುದಿಲ್ಲ.

ಈ ಎಲ್ಲಾ ಪ್ರಯೋಜನಗಳ ಪ್ರಮಾಣ ಹೆಚ್ಚು ಸಾಮರ್ಥ್ಯದ ಬೈಕ್‌ಗಳಲ್ಲಿ ಹೆಚ್ಚಾಗಿರುತ್ತದೆ. ಯಮಾಹಾ ರಾಜ್‌ದೂತ್ 350, ಆರ್‍ಎಕ್ಸ್, ರಾಯಲ್‍ ಎನ್‌ಫೀಲ್ಡ್ ಬಳಗದ 500 ಸಿ.ಸಿ ಎಂಜಿನ್ ಸಾಮರ್ಥ್ಯದ ಬೈಕ್‌ಗಳಲ್ಲಿ ಇರಿಡಿಯಂ ಸ್ಪಾರ್ಕ್ ಪ್ಲಗ್‌ಗಳ ದಕ್ಷತೆ ಮತ್ತಷ್ಟು ಹೆಚ್ಚಾಗಿರುತ್ತದೆ. 150 ಸಿ.ಸಿ ಮತ್ತು ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕ್‌ಗಳಲ್ಲಿ ಇವುಗಳನ್ನು ಬಳಸಲು ಅಡ್ಡಿಯಿಲ್ಲ.

ಅಲ್ಲದೆ ದೂರದ ಪ್ರಯಾಣದಲ್ಲಿ ಇರಿಡಿಯಂ ಸ್ಪಾರ್ಕ್ ಪ್ಲಗ್‌ಗಳು ಹೆಚ್ಚು ಪ್ರಯೋಜನಕ್ಕೆ ಬರುತ್ತವೆ. ಇವುಗಳ ಬೆಲೆ 600 ರೂ ಇಂದ 1000 ರೂಪಾಯಿಗಳವರೆಗೂ ಇದೆ. ಹುಬ್ಬೇರಿಸುವುದು ಬೇಡ. ಇವುಗಳ ಜೀವಿತಾವಧಿ 40 ಸಾವಿರ ಕಿ.ಮೀ ನಿಂದ 45 ಸಾವಿರ ಕಿ.ಮೀವರೆಗೂ. ಆನಂತರವೂ ಒಂದೆರಡು ಸಾವಿರ ಕಿ.ಮೀ ಅವುಗಳನ್ನು ಸ್ವಚ್ಛಗೊಳಿಸಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT