ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲ್‌ಕ್ಯುಲೇಟರ್‌ ಕಥೆ

Last Updated 2 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲೆಕ್ಕ (ಕೂಡಿಸು, ಕಳೆ, ಗುಣಿಸು, ಭಾಗಿಸು) ಎಂದರೆ ಮನುಷ್ಯರಿಗೆ ಯಾವಾಗಲೂ ಕಿರಿಕಿರಿಯೇ. ಗಣಿತ ಎಂದಾಕ್ಷಣ ಮೂಗುಮುರಿಯುವವರೇ ಹೆಚ್ಚು. ಲೆಕ್ಕಶಾಸ್ತ್ರದಲ್ಲಿ ಆಸಕ್ತಿ ತೋರುವವರ ಸಂಖ್ಯೆ ಕಡಿಮೆಯೇ. ಅದು ಯಾಕೋ ಗೊತ್ತಿಲ್ಲ. ಹಿಂದಿನಿಂದಲೇ ಅದು ನಡೆದುಕೊಂಡು ಬಂದಿದೆ.

ಈಗಲೂ ಅದೇ ಪರಿಸ್ಥಿತಿ ಇದೆ. ಗಣಿತದಲ್ಲಿ ಹಲವಾರು ಕವಲುಗಳಿವೆ. ಅವುಗಳಲ್ಲಿ ಕೆಲವು ಕ್ಲಿಷ್ಟವಾದ ವಿಷಯಗಳೇ. ಆದರೆ, ಅದರ ಮೂಲ ನಾಲ್ಕು ಅಂಶಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಕಾರ ಮಾಡುವುದಕ್ಕೂ ಕಷ್ಟ ಪಡುವವರಿದ್ದಾರೆ. ಲೆಕ್ಕ ಹಾಕಲು ಅವರಿಗೆ ಕಂಪ್ಯೂಟರೋ, ಮೊಬೈಲೋ ಇಲ್ಲವೇ ಕ್ಯಾಲ್‌ಕ್ಯುಲೇಟರ್‌ ಬೇಕೇ ಬೇಕು. ಮೊಬೈಲ್‌, ಕಂಪ್ಯೂಟರ್‌ಗಳು ಇತ್ತೀಚೆಗೆ ಸಿಕ್ಕಿದ ಪರಿಹಾರಗಳು.

ಆದರೆ, ಕ್ಯಾಲ್‌ಕ್ಯುಲೇಟರ್‌ ಇತ್ತೀಚಿನದ್ದಲ್ಲ.  ಕೆಲವು ಶತಮಾನಗಳಿಂದ ಅದು ಲೆಕ್ಕಾಚಾರವನ್ನು ಸುಲಭಗೊಳಿಸುತ್ತಾ ಬಂದಿದೆ.

ನಾವೀಗ ಜೇಬಲ್ಲಿಟ್ಟುಕೊಳ್ಳಬಹುದಾದ ಎಲೆಕ್ಟ್ರಾನಿಕ್‌ ಕ್ಯಾಲ್‌ಕ್ಯುಲೇಟರ್‌ ಬಳಕೆ ಬಂದು ಅರ್ಧ ಶತಮಾನ ಕಳೆದಿದೆಯಷ್ಟೆ. ಆ ರೂಪಕ್ಕೆ ಬರುವುದಕ್ಕೂ ಮುನ್ನ ಕ್ಯಾಲ್‌ಕ್ಯುಲೇಟರ್‌ ಹಲವು ಮಜಲುಗಳನ್ನು ಕಂಡಿದೆ. ಅದರ ಹಿಂದೆ ಹಲವು ತಜ್ಞರ ಪರಿಶ್ರಮವೂ ಇದೆ. ಆಧುನಿಕ ಕಂಪ್ಯೂಟರ್‌, ಕ್ಯಾಲ್‌ಕ್ಯುಲೇಟರ್‌ನ ಅತ್ಯಾಧುನಿಕ ಪರಿಷ್ಕೃತ ರೂಪ ಎನ್ನಬಹುದೇನೋ.

ಯಾಕೆಂದರೆ ಕಂಪ್ಯೂಟರ್‌ನ ಉದ್ದೇಶವೂ ಕಂಪ್ಯೂಟಿಂಗ್‌ ಮಾಡುವುದು. ಅಂದರೆ ಲೆಕ್ಕ ಹಾಕುವುದು. ಒಂದು ವೇಳೆ ಕ್ಯಾಲ್‌ಕ್ಯುಲೇಟರ್‌ನ ಆವಿಷ್ಕಾರ ಸಾಧ್ಯವಾಗದೇ ಇರುತ್ತಿದ್ದರೆ, ಜಗತ್ತಿನಲ್ಲಿ ಲೆಕ್ಕ ಹಾಕುವಿಕೆ ಯಾವ ರೀತಿ ಇರುತ್ತಿತ್ತೋ ಏನೋ? ಲೆಕ್ಕಿಗ, ಗಣಕ ಎಂದೆಲ್ಲ ಕರೆದುಕೊಳ್ಳುವ ಕ್ಯಾಲ್‌ಕ್ಯುಲೇಟರ್‌ನ ಇತಿಹಾಸ ಕುತೂಹಲಗಳ ಕಂತೆ.

ಮೊದಲೇ ಹೇಳಿದಂತೆ, ಲೆಕ್ಕ ಹಾಕುವುದು ನಮಗೆ ಮಾತ್ರ ಕಷ್ಟದ ಕೆಲಸ ಅಲ್ಲ. ನಮ್ಮ ಪೂರ್ವಜರಿಗೂ ತಲೆನೋವಿನ ಕೆಲಸ ಆಗಿತ್ತು. ಅಕ್ಷರ ಜ್ಞಾನ, ಬರವಣಿಗೆ ಅರಿತ ಪ್ರಾಚೀನ ಕಾಲದ ಮಾನವ ಲೆಕ್ಕ ಮಾಡಲು ಆರಂಭದಲ್ಲಿ ಮೊರೆ ಹೋಗಿದ್ದು ಕೈ ಕಾಲುಗಳ ಬೆರಳುಗಳಿಗೆ. ಅದಕ್ಕಿಂತ ದೊಡ್ಡ ಲೆಕ್ಕಕ್ಕೆ ಮೂಳೆಗಳು, ನೈಸರ್ಗಿಕವಾಗಿ ಸಿಗುತ್ತಿದ್ದ ಹರಳು ಕಲ್ಲುಗಳು.. ಹೀಗೆ ಬೇರೆ ಬೇರೆ ವಸ್ತುಗಳನ್ನು ಬಳಸುತ್ತಿದ್ದ.

ಒಂದು ಕಡೆ ನೆಲೆ ನಿಂತು, ನಾಗರಿಕತೆ ಬೆಳೆದ ನಂತರ ಬುದ್ಧಿವಂತ ಮಾನವ ಲೆಕ್ಕಹಾಕಲು ಬೇರೆ ಬೇರೆ ವಿಧಾನಗಳನ್ನು ಕಂಡುಕೊಂಡ. ಇತ್ತೀಚೆಗೆ ಜನಪ್ರಿಯವಾಗಿರುವ ‘ಅಬಾಕಸ್‌’, ಅವುಗಳಲ್ಲೊಂದು. ಅಂದರೆ ಕ್ರಿ.ಪೂ 2000ಕ್ಕೂ ಮೊದಲೇ ಈಜಿಪ್ಟಿಯನ್ನರು ಮತ್ತು ಸುಮೇರಿಯನ್ನರು ಅಬಾಕಸ್‌ ಬಳಸಿ ಲೆಕ್ಕಾಚಾರ ಮಾಡುತ್ತಿದ್ದರು. ಕೂಡಿಸುವುದು ಮತ್ತು ಕಳೆಯುವ ಲೆಕ್ಕಕ್ಕೆ ಅಂದಿನ ಜನರು ಇದನ್ನು ಬಳಸಿರಬಹುದು ಎಂಬುದು ಕೆಲವು ಇತಿಹಾಸ ತಜ್ಞರ ವಾದ. ಪುರಾತನ ಈಜಿಪ್ಟ್‌ನಲ್ಲಿ ಅಬಾಕಸ್‌ ಬಳಕೆ ಇದ್ದುದನ್ನು ಹೆರೊಡೊಟಸ್‌ ಎಂಬ ಗ್ರೀಸ್‌ ಇತಿಹಾಸಕಾರ ಲಿಖಿತವಾಗಿ ದಾಖಲಿಸಿದ್ದಾನೆ.

ಅಬಾಕಸ್‌ಗೂ ಮೊದಲು ವಿಶಿಷ್ಟವಾದ ಫಲಕವನ್ನು ಲೆಕ್ಕ ಮಾಡಲು ಬಳಸಲಾಗುತ್ತಿತ್ತು. ಇದನ್ನು ಇಂಗ್ಲಿಷ್‌ನಲ್ಲಿ ‘ಕೌಂಟಿಂಗ್‌ ಬೋರ್ಡ್‌’ ಎಂದು ಕರೆಯಲಾಗಿದೆ. ಮರ ಅಥವಾ ಕಲ್ಲಿನಿಂದ ಈ ಫಲಕವನ್ನು ತಯಾರಿಸಲಾಗುತ್ತಿತ್ತು. ಈ ಫಲಕದಲ್ಲಿ ಸಣ್ಣ ಗುಂಡುಗಳು, ಕಲ್ಲು ಹರಳುಗಳಂತಹ ವಸ್ತುಗಳನ್ನು ಬಳಸಿ ಲೆಕ್ಕ ಹಾಕುತ್ತಿದ್ದರು. ಕ್ರಿ.ಪೂ 300ರಲ್ಲಿ ಬಳಸಲಾಗಿದ್ದ ಕೌಂಟಿಂಗ್‌ ಬೋರ್ಡ್‌ ಒಂದು ಗ್ರೀಸ್‌ನ ಸಲಾಮಿಸ್‌ ದ್ವೀಪದಲ್ಲಿ ಪತ್ತೆಯಾಗಿದೆ. ಅಥೆನ್ಸ್‌ನ ಗ್ರೀಕ್‌ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಇವುಗಳ ಜೊತೆಯಲ್ಲಿ ಪುರಾತನ ಗ್ರೀಸ್‌ನಲ್ಲಿ ಇನ್ನೊಂದು ಲೆಕ್ಕಾಚಾರದ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಆದರೆ ಅದು ಗುಣಾಕಾರ, ಭಾಗಾಕಾರಕ್ಕೆ ಸಂಬಂಧಿಸಿದ್ದಲ್ಲ. ಆಕಾಶಕಾಯಗಳ ಸ್ಥಾನಗಳನ್ನು ಗುರುತಿಸುವಂತಹದ್ದು ‘ಆ್ಯಂಟಿಕೀತೆರ ವ್ಯವಸ್ಥೆ’ (ಮೆಕ್ಯಾನಿಸಮ್‌) ಎಂದು ಕರೆಯಲಾಗುತ್ತಿದ್ದ ಇದನ್ನು ಖಗೋಳಕ್ಕೆ ಸಂಬಂಧಿಸಿದ ಉದ್ದೇಶಕ್ಕೆ ಮಾತ್ರ ಬಳಸುತ್ತಿದ್ದರಂತೆ.

ನಂತರ ಹಲವು ಶತಮಾನಗಳ ಕಾಲ ಲೆಕ್ಕ ಮಾಡುವ ಸಾಧನಗಳ ಅಭಿವೃದ್ಧಿಯಲ್ಲಿ ಹೇಳಿಕೊಳ್ಳುವ ಪ್ರಗತಿಯಾಗಲಿಲ್ಲ. ಅದಕ್ಕಾಗಿ 17ನೇ ಶತಮಾನದವರೆಗೆ ಕಾಯಬೇಕಾಯಿತು.

⇒(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT