ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ ಚೆಲುವೆಗೆ...

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ ತೀರ್ಪುಗಾರರು ಮೆಚ್ಚಿದ ಪತ್ರ
Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನಮ್ಮೂರಿನ ಗೌರಮ್ಮನ ಜಾತ್ರೆಯಲಿ ಗಿರ‌್ರೆಂದು ತಿರುಗುತ್ತಿದ್ದ ಗಿರಗಟ್ಟೆಯ ತೊಟ್ಟಿಲಲ್ಲಿ ಕುಳಿತು ಸಣ್ಣ ಭಯದಲ್ಲಿ ತುಂಬಿದ ಜೋರು ನಗೆಯನು ಚೆಲ್ಲಿ ನಿನ್ನ ಗೆಳತಿ ಜೊತೆ ಸೇರಿ ತಿನ್ನುತ್ತಿದ್ದ ಸೌತೆಕಾಯಿಯನ್ನು ನನ್ನ ಮೇಲೆ ಕೈ ಜಾರಿಸಿದಾಗ ಮನಸ್ಸು ಸಂಜೆ ಬಿಸಿಲಿನ ಬೆನ್ನೇರಿ ನಿನ್ನೆಡೆಗೆ ಜಾರಿತು. ತೊಟ್ಟಿಲಿಳಿದು ನನ್ನ ನೋಡಿ ನಕ್ಕು ಮಿಂಚುಳ್ಳಿಯಂತೆ ನನ್ನೊಳಗೆ ಇಳಿದು ಕಣ್ಮರೆಯಾದ ನೀನು ಮಳ್ಳಿಯಂತೆ ನನ್ನೊಳಗೆ ಉಳಿದೆ. ಇದ್ದ ಒಂದೇ ಹೊಸ ಅಂಗಿ ಕಲೆಯಾಗಿದ್ದು ಗೊತ್ತೆ ಆಗಲಿಲ್ಲ. ಮನಸ್ಸು ಕರಗಿದ್ದು ಗೊತ್ತಾಗಲಿಲ್ಲ! ಜಾತ್ರೆಯ ಸದ್ದಿನೊಳಗೆ, ಗುಡಿಯ ಗಂಟೆಯೊಳಗೆ, ಮಕ್ಕಳಾಡುವ ಪೀಪಿಯೊಳಗೆ ನಿನ್ನ ನಗುವಿನಲೆಯದ್ದೆ ಪಾರುಪತ್ಯ. ಹುಡುಕಾಡಿದೆ .... ಹುಡುಕಾಡಿದೆ .... ಸಿಗಲೇ ಇಲ್ಲ. ಆದರೆ ಕೇಳಿಸುತ್ತಲೇ .... ಇದ್ದೆ!

ನೀನು ಯಾರೆಂದು ತಿಳಿಯದೆ ನಿನ್ನನ್ನು ಮನಸೊಳಗಡೆ ತಂದುಕೊಂಡೆ. `ಜಾತ್ರೆ ಚೆಲುವೆ' ಅಂತ ಮುದ್ದಾದ ಹೆಸರಿಟ್ಟೆ. ಜಾತ್ರೆಯಲಿ ಹೊಳೆದು, ಸೆಳೆದು, ಕಳೆದು ಹೋದ ನೀನು ಮತ್ತೆ ಸಿಕ್ಕಿದ್ದು ನಿಮ್ಮ ಕೇರಿಯಲ್ಲಿ. ರಜೆ ಕಳೆಯಲು ನಮ್ಮೂರಿಗೆ ಬಂದಿದ್ದೀಯ ಎಂಬ ವಿಷಯ ತಿಳಿಯಿತು. `ಜಾತಿ ಬೇರೆಯಾದ್ರು ಪ್ರೀತಿಗೆ ಜಾತಿ ಇಲ್ಲ' ಎಂದು ಧೈರ್ಯ ಮಾಡಿದೆ. ನಿನಗಾಗಿ ನನ್ನನ್ನೆ ಮೀಸಲಿಟ್ಟು ನಿನ್ನನ್ನೆ ಪ್ರೀತಿಸಲು ಶುರು ಮಾಡಿದೆ.

ನಿನ್ನ ನೀಳ ಕೂದಲು, ಹಣೆಯ ಮೇಲಿನ ಸಣ್ಣ ಬೊಟ್ಟು, ಹುಬ್ಬಿನ ಬಳುಕಾಟ, ಕಣ್ಣ ಕುಡಿ ನೋಟ, ಗಿಣಿಯೆ ನಾಚುವಂತಹ ಮೂಗು, ಕೆನ್ನೆಯ ಮೇಲಿನ ಕಪ್ಪು ಚುಕ್ಕಿ, ಆಗಾಗ ರಂಗೇರುವ ತುಟಿ ತೆರೆದಾಗ ಹೊಳೆವ ರತ್ನ ಖಚಿತ ಮಣಿಗಳು, ಕೈತುಂಬಿದ ಬಳೆ, ಸಣ್ಣ ನಡು, ಸಣ್ಣ ನಡಿಗೆ ಇವೆಲ್ಲವು ನನ್ನನ್ನು ಹಗುರಗೊಳಿಸಿದವು. ಹಾರಾಡುವ ಹಕ್ಕಿಗಳ ಮೇಲೇರಿ ಆಕಾಶ ಸುಂದರಿಯರಿಗೆ ನಿನ್ನ ಪರಿಚಯಿಸಿದೆ. ಅವರ ಕಣ್ಣೀರು ಮಳೆಹನಿಯಾಗಿ ಭೂಮಿಗೆ ಬಿದ್ದು ಒದ್ದಾಡುವಾಗ ನನಗಂತೂ ದೊಡ್ಡ ಹಬ್ಬ! ಕೆಳಗಿಳಿದ ನಾನು ಕುಣಿಯ ತೊಡಗಿದೆ. ಕುಣಿಯುತ್ತಾ ಕುಣಿಯುತ್ತಾ ಹಾಡ ತೊಡಗಿದೆ. ಹಾಡುತ್ತಾ .... ಹಾಡುತ್ತಾ ನಲಿದಾಡತೊಡಗಿದೆ.

ಮಟ ಮಟ ಮಧ್ಯಾಹ್ನ ಅರಳಿಕಟ್ಟೆಯ ಮೇಲೆ ಕುಳಿತು ಹುಣಸೆ ಹಣ್ಣನ್ನು ತಿನ್ನುತ್ತಾ .... ನಿನ್ನ ಕನಸು ಕಾಣುತ್ತಿದ್ದಾಗ .... ನೀನು ನಿನ್ನ ಗೆಳತಿಯೊಡನೆ ನನ್ನೆದುರಿಗೆ ಬಂದದ್ದು ಆಶ್ಚರ್ಯವಾಯಿತು! ಇದು ಕನಸೊ? ನನಸೋ? ಎಂಬ ಅನುಮಾನದಲ್ಲಿದ್ದೆ. ಆಗ ನಿನ್ನ ನಗು ಸತ್ಯ ಹೇಳಿತು. ನೀನು ಹತ್ತಿರ ಬಂದಂತೆಲ್ಲಾ ತಂಗಾಳಿ ಸಾಲೆ ಸುಳಿದಂತಾಯಿತು. ಸಂಭ್ರಮದ ಗೊಂಚಲು ಮೈಮುಚ್ಚಿತು. ಮತ್ತದೇ ನೋಟ. `ನನಗೂ ಹುಣಸೆ ಹಣ್ಣು ಬೇಕು' ಎಂದು ಕೇಳಿದ ನಿನ್ನ ಧೈರ್ಯ ನನಗೆ ಬರಲೇ ಇಲ್ಲ. ಹುಣಸೆ ಹಣ್ಣಿಂದ ಮಾಡಿದ ಕುಟ್ಟುಂಡಿಯನ್ನು ಚೀಪುತ್ತಾ .... ನಾವಿಬ್ಬರು ಚೌಕಬರ ಆಡುವಾಗ ನಾನು ಬೇಕಂತಲೇ ಸೋತು ತುಪ್ಪ ಕಾಯಿಸುತ್ತಾ ನನ್ನ ಎರಡು ಕೈಗಳಿಗೆ ನಿನ್ನಿಂದ ಹೊಡೆಸಿಕೊಂಡ ಆ ಅನುಭವ ನಮ್ಮಿಬ್ಬರನ್ನು ಇನ್ನೂ ಹತ್ತಿರಗೊಳಿಸಿತು. `ನೀ ಎಷ್ಟೊಂದು ಒಳ್ಳೆ ಹುಡುಗ. ನಂಗೆ ನೀನು ತುಂಬ ಇಷ್ಟ ಆದೆ ಕಣೊ. ನಮ್ಮೂರಿಗೆ ಒಂದ್ಸಾರಿ ಬಾ' ಎಂದ ಮಾತು ಇಂದಿಗೂ ಎದೆಯಲ್ಲಿದೆ. ಈ ಸುಧಾನುಭ ನಮ್ಮ ಸ್ನೇಹಕ್ಕೆ ಹತ್ತಿರದ ಸಾಕ್ಷಿಯಾಯ್ತು. ಆದರೆ ನನ್ನೊಳಗಿನ ಪ್ರೀತಿಯನ್ನು ನಿನ್ನೊಡನೆ ಹೇಳಿಕೊಳ್ಳಲು ತಾವರೆ ಎಲೆ ಮೇಲಿನ ನೀರ ಬಿಂದುವಿನಂತಾದೆ!

ನಮ್ಮ ಮನೆ ಮತ್ತು ನಿಮ್ಮ ಕೇರಿ ಹತ್ತಿರವಾಗುವ ಅಡ್ಡ ದಾರಿಯಲ್ಲಿ ಅಡ್ಡವಾಗಿದ್ದ ಮುಳ್ಳುತಂತಿ ಬೇಲಿಯನ್ನು ನುಗ್ಗಿ ಬಂದು ಕದ್ದು ಮುಚ್ಚಿ ನಿನ್ನನ್ನು ನೋಡುತ್ತಿದ್ದೆ. ನೀನು ಎಲೆ ಮರೆ ಹಣ್ಣಂತೆ ಕಂಗೊಳಿಸುತ್ತಿದ್ದೆ! ಒಮ್ಮೆ ನೀನು ತಿರುಗಾಡುವಾಗ ಎಡವಿ ಗಾಯ ಮಾಡಿಕೊಂಡಿದ್ದನ್ನು ನೋಡಿದ ನಾನು ಓಡಿ ಬಂದು ತಂತಿ ಬೇಲಿಯನ್ನು ನುಗ್ಗಿ ನಿನ್ನ ಹೆಬ್ಬೆರಳಿನ ಗಾಯಕ್ಕೆ ತುಂಬೆ ರಸ ಹಾಕಿ ಬಿಸಿ ಉಸಿರು ಊದುವಾಗ ನೀನು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯನ್ನು ಬರೆದೆ. ಬೆನ್ನ ಹಿಂದೆ ಹರಿದ ಅಂಗಿಯನ್ನು ಮುಟ್ಟಿ ಪಿಸು ನಕ್ಕಿದ್ದು ಈಗಲೂ ನನ್ನನ್ನು ರೋಮಾಂಚನಗೊಳಿಸುತ್ತದೆ. ನೀ ಕುಂಟುತ್ತಾ .... ಒಳಗೆ ಹೋಗುವಾಗ ಪ್ರೀತಿಯಿಂದ ಬೀರಿದ ಕಿರು ವಾರೆ ನೋಟ ನನ್ನೆದೆಯ ಆಳಕ್ಕೆ ಸಿಕ್ಕಿಕೊಂಡಿತು. ಮನೆಗೆ ಹೋಗಿ ಅಂಗಿಯನ್ನು ನೋಡಿದರೆ ಎಲ್ ಆಕಾರದಲ್ಲಿ ಹರಿದಿತ್ತು!

ನಿಜ ಹೇಳ್ತಿದಿನಿ ಜಾತ್ರೆ ಚೆಲುವೆ .... ಜಗತ್ತು ಉರಿಯುತ್ತಿರುವಾಗ ನೀ ನನ್ನ ಜೊತೆಯಲ್ಲಿದ್ದರೆ ಬೆಂಕಿಯೂ ಮಂಜಿನ ಹನಿಯಾಗುತ್ತದೆ! ನಿನ್ನ ಸಾನಿಧ್ಯದ ಆ ಮೂರು ದಿನಗಳು ನನ್ನ ಮನಸ್ಸಿನ ಭಾವನೆಗಳು ಉತ್ತುಂಗದ ಶಿಖರವೇರಿದ, ಹೊಸ ಕನಸುಗಳು ಗರಿಗೆದರಿ ಹಾರಾಡಿದ, ಭಾವನೆಗಳು ನುಗ್ಗಿ ನುಗ್ಗಿ ಬಂದ ಅಮೃತಘಳಿಗೆಗಳು. ನೀ ಊರಿಗೆ ಹೊರಟ ಸುದ್ದಿ ಕೇಳಿ ನನ್ನೆದೆಯ ಮೇಲೆ ರೋಣ್ಗಲ್ಲು ಹತ್ತಿದಂತಾಯ್ತು! ಕದ್ದು ಮುಚ್ಚಿ ನೋಡುವ ಜಾಗದಲ್ಲಿ ನೀನು ಬಂದು ಪೇಪರ್‌ನಲ್ಲಿ ಏನನ್ನೋ ಸುತ್ತಿ ತಂದಿದ್ದನ್ನು ನಂಗೆ ಕೊಟ್ಟು `ಇದನ್ನು ಸಂಜೆ ನೋಡು' ಎಂದು ಹೇಳಿ ನಾಚಿಕೆಯಿಂದ ನಗು ಬೀರಿ ಟಾಟಾ ಮಾಡಿ ಹೊರಟು ಹೋದವಳು ನೀನು. ನಿನ್ನ ಆ ಕೈಬೆರಳುಗಳ ಸ್ಪರ್ಶ ವಸಂತದ ಅನುಭವದ ಹೂರಣವಾಯ್ತು. ನೀ ಹೇಳಿದಂತೆ ನೀ ಕೊಟ್ಟೆ ಸಂಜೆ ನೋಡಿದೆ. ಅದರಲ್ಲಿ ಸೌತೆಕಾಯಿ! ಅಷ್ಟೆ ಅಲ್ಲಿ ಅದರ ಮೇಲೆ ಐ ಲವ್ ಯು ಎಂದು ಕೊರೆದಿದ್ದನ್ನು ನೋಡಿ ಕುಣಿದು ಕುಪ್ಪಳಿಸಿದೆ. ಪ್ರೇಮದ ಉತ್ಕಟತೆಯಲಿ ಮುಳುಗಿ ಹೋದೆ.

ಜಾತ್ರೆ ಚೆಲುವೆ .... ನನ್ನ ಬದುಕಿನಲ್ಲಿ ಭಗವಂತ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು. ನಿನ್ನ ಪ್ರೇಮವನ್ನೇನೊ ನಿವೇದಿಸಿ ಹೋದೆ. ಆದರೆ ನಾನು `ನಿನ್ನನ್ನು ತುಂಂಂಂಬ ಪ್ರೀತಿಸ್ತಿದಿನಿ' ಅಂತ ಹೇಳುವಲ್ಲಿ ವಿಫಲನಾದೆ. ಪ್ರೇಮದ ವಿಷಯವನ್ನು ತಿಳಿಸಬೇಕೆಂದೆ ನಿಮ್ಮೂರಿಗೆ ಹೊರಟಿದ್ದೆ. ಆದರೆ ಅಂದು ಬೆಳಿಗ್ಗೆ ಬಂದ ನಿನ್ನ ಸಾವಿನ ಸುದ್ದಿ ನನ್ನನ್ನು ಜರ್ಜರಿತನನ್ನಾಗಿ ಮಾಡಿತು. ನಿಂತ ನೆಲವೆ ಕುಳಿ ಆಯಿತು. ಹೃದಯ ಅತ್ತಿ ಬಂತು. ಆಗ ನಿನ್ನ ನೋಡುತ್ತಿದ್ದಾಗ ಮೈಯೆಲ್ಲಾ ಕಣ್ಣಾಗಿತ್ತು! ಆದರೆ ಈಗ ಕಣ್ಣಿರುವ ಮೈಯೆಲ್ಲೆಲ್ಲಾ ಕಣ್ಣೀರ ಧಾರೆ! ನಿನ್ನ ನೋಡಲು ಓಡೋಡಿ ಬಂದ ನನಗೆ ನಿಮ್ಮ ಸಂಪ್ರದಾಯ ಅಡ್ಡಿಯಾಯಿತು. ದೂರದಿಂದಲೇ ನಿನ್ನ ದರ್ಶನ ಮಾಡಿದೆ. ನನಗೂ ತಿಳಿಸದೆ ನಿನ್ನ ಎಡಗೈಗೆ ಹಾಕಿಸಿಕೊಂಡಿದ್ದ ನನ್ನ ಹೆಸರಿನ ಮೊದಲಕ್ಷರದ ಹಚ್ಚೆ ನಿನ್ನೊಳಗೆ ಪಂಚಭೂತಗಳಲ್ಲಿ ಲೀನವಾಗಿದ್ದು ತಿಳಿ ಪ್ರೇಮದ ಸಾಕ್ಷಿಯಾಯ್ತು.

ನಿನ್ನನ್ನು ಕಳೆದುಕೊಂಡ ನಾನು ನನ್ನನ್ನೆ ನಾನು ಕಳೆದುಕೊಂಡೆ. ನಮ್ಮಿಬ್ಬರ ಈ ಪ್ರೀತಿ ಆ ಸೃಷ್ಟಕರ್ತನಿಗೂ ಹೊಟ್ಟೆಕಿಚ್ಚು ಅನ್ಸುತ್ತೆ. ಅದ್ಕೆ ಏನೋ ಕೊಟ್ಟ ಉಡುಗೊರೆಯನ್ನು ಕಿತ್ಕೊಬಿಟ್ಟ. ನಿನ್ನ ಸಾವಿನ ಕಾರಣವನ್ನು ನಿಗೂಢವಾಗಿಯೇ ಇಟ್ಟ. ನನ್ನ ಪ್ರೇಮವನ್ನು ನಿವೇದಿಸದಂತೆ ಮಾಡಲು ತಡೆಗೋಡೆಯಾದ.

ದಯವಿಟ್ಟು ಕ್ಷಮಿಸು ಗೆಳತಿ ... ಏಳು ವರ್ಷಗಳ ನಂತರ ನಿನ್ನಲ್ಲಿ ನನ್ನ ಪ್ರೇಮವನ್ನು ನಿವೇದಿಸಿ ಕೊಳ್ಳುತ್ತಿದ್ದೇನೆ.
ಜಾತ್ರೆ ಚೆಲುವೇ .... ನಾನು ನಿನ್ನನ್ನು ತುಂಬಾ ಪ್ರೀತಿಸ್ತಿದಿನಿ.

ಎಂದೆಂದಿಗೂ ನಾ ನಿನ್ನ ಮರೆಯಲಾರೆ....

ನಿನ್ನ ನೆನಪಲ್ಲೆ ಇರುವ ನಿನ್ನವ
ಹಳ್ಳಿ ಹುಡುಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT