ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಟ ಹುಡುಗಿಯ ಕನಸು ಮತ್ತೆ ರೋಡಿಗಿಳಿಯಿತು!

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ತುಂಟ ಹುಡುಗನ ಸೊಂಟಾ ಸುತ್ತಿ
ಲ್ಯಾಂಬ್ರೆಟ ವೆಸ್ಪಾ ಬೆನ್ನನು ಹತ್ತಿ
ಕೀಲು ಕುದುರಿ ರಾಜಕುಮಾರಿ
ಒಮ್ಮೆಯಾದರೂ ಆದೇನು! ನರಕಕ್ಕೂ ಹೋದೇನು...

 ನಳಿನಿ ದೇಶಪಾಂಡೆ. ಅಕ್ಷರ ಹೊಸ ಕಾವ್ಯ
_____________________________________________________

ವೆಸ್ಪಾ ಸ್ಕೂಟರ್ ಕೇವಲ ಒಂದು ವಾಹನ ಮಾತ್ರ ಅಲ್ಲ. ಕನ್ನಡ ಕಾವ್ಯದ ಒಂದು ಕಾಲದಲ್ಲಿ ಪ್ರತಿಮೆಯಾಗಿ ಸ್ವೀಕರಿಸಿಬಿಟ್ಟ ಯಂತ್ರ. ನಳಿನಿ ದೇಶಪಾಂಡೆಯವರ ಕವಿತೆಯಲ್ಲಿ ತುಂಟ ಹುಡುಗ ಓಡಿಸುವ ಈ ವಾಹನ ವಾಸ್ತವದಲ್ಲಿ ರೂಪುಗೊಂಡದ್ದು ತುಂಟ ಹುಡುಗಿಯರಿಗಾಗಿ ಎಂಬುದು ಮತ್ತೂ ಕುತೂಹಲಕರ.

ಇಂದಿಗೂ ವೆಸ್ಪಾದ ಹಳೆಯ ಜಾಹೀರಾತುಗಳನ್ನು ನೋಡಿದರೆ, ವೆಸ್ಪಾದ ಸವಾರರು ಮಹಿಳೆಯರೇ. ಅಷ್ಟೇಕೆ ಆ ಕಾಲದಲ್ಲಿ ಹೆಂಗಳೆಯರ ರೇಝರ್‌ಗಳ ಜಾಹೀರಾತುಗಳಲ್ಲಿಯೂ ವೆಸ್ಪಾ ಸ್ಕೂಟರ್ ವಿಜೃಂಭಿಸಿತ್ತು.

ಇಟಲಿಯ ಪಿಯಾಜ್ಜಿಯೋ ಅಂಡ್ ಕಂಪೆನಿ 1946 ರಲ್ಲಿ ವೆಸ್ಪಾ ಸ್ಕೂಟರ್ ಉತ್ಪಾದನೆ ಪ್ರಾರಂಭಿಸಿತು. ಆ ಹೊತ್ತಿಗಾಗಲೇ ಪುರುಷರಿಗೆ ಸಾಕಷ್ಟು ಮಾದರಿಯ ಮೋಟಾರ್ ಸೈಕಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಆದರೆ ಮಹಿಳೆಯರಿಗೆ ಈ ಮೋಟಾರ್ ಸೈಕಲ್‌ಗಳ ಬಳಕೆ ಕಷ್ಟವಿತ್ತು.

ಅತಿಯಾದ ಭಾರ, ಕಿಕ್‌ಸ್ಟಾರ್ಟ್, ಎತ್ತರ, ಜತೆಗೆ ಮಹಿಳೆಯರ ಧಿರಿಸುಗಳಿಗೆ ತೊಂದರೆ ನೀಡುತ್ತಿದ್ದ ಬೈಕ್‌ನ ಆಕಾರ ಮಹಿಳೆಯರಿಗೆ ಅಸಮಾಧಾನ ಮೂಡಿಸಿತ್ತು. ಆಗ ಸ್ಕೂಟರ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಪಿಯಾಜ್ಜಿಯೋ ವೆಸ್ಪಾ ಮೂಲಕ ಮಹಿಳೆಯರ ಮನ ಗೆದ್ದಿತು. ಇದು ಎಷ್ಟರ ಮಟ್ಟಿಗೆ ಮಹಿಳೆಯರ ಪ್ರಿಯ ವಾಹನವಾಗಿತ್ತು ಎಂದರೆ ಆ ಕಾಲದಲ್ಲಿ ಮಹಿಳೆಯರ ಕೈಕಾಲುಗಳಲ್ಲಿರುವ ಕೂದಲುಗಳನ್ನು ತೆಗೆಯುವ ಉದ್ದೇಶದಿಂದ ಬಿಡುಗಡೆ ಮಾಡಿದ ರೇಜರ್‌ನ ಜಾಹೀರಾತಿನಲ್ಲೂ ವೆಸ್ಪಾ ಮಿಂಚಿತ್ತು.

ಭಾರತದಲ್ಲಿ ಆದ ಸ್ಕೂಟರ್ ಕ್ರಾಂತಿಯಲ್ಲಿ ವೆಸ್ಪಾ ಜತೆಗೆ, ಬಜಾಜ್‌ನ ಪಾತ್ರವೂ ಇತ್ತು. ಅಂಥ ಬಜಾಜ್ ಈಗ ಸ್ಕೂಟರ್ ವಿಭಾಗದಿಂದಲೇ ಹಿಂದಕ್ಕೆ ಸರಿದಿದೆ. ವೆಸ್ಪಾ ನಯವಾದ ಚಾಲನೆಗೆ ಹೆಸರುವಾಸಿಯಾದರೆ, ಬಜಾಜ್ ಗಡಸುತನಕ್ಕೆ ಸಾಕ್ಷಿ ಎಂಬಂತೆ ಇತ್ತು. 2 ಸ್ಟ್ರೋಕ್ ಎಂಜಿನ್ ಹೊಂದಿದ್ದರೂ, ಈಗಿನ 4 ಸ್ಟ್ರೋಕ್ ಬೈಕ್‌ಗಳಿಗೆ ಸರಿ ಸಮಾನವಾಗಿ ಈ ಸ್ಕೂಟರ್‌ಗಳು ಕಾರ್ಯನಿರ್ವಹಿಸಿದ್ದು ಮಾತ್ರ ಅಚ್ಚರಿಯೇ ಸರಿ.

ಮೋಟಾರ್ ಸೈಕಲ್‌ನಲ್ಲಿ ಅನುಕೂಲತೆಯ ಜತೆಗೆ ಕೆಲವು ಅತಿ ಮುಖ್ಯವಾದ ಅನಾನುಕೂಲತೆಗಳಿವೆ. ಮೋಟಾರ್ ಸೈಕಲ್ ತೆರೆದ ವಾಹನವಾಗಿದ್ದು ಎಂಜಿನ್‌ನ ಶಾಖ ನೇರವಾಗಿ ಸವಾರನ ಕೈಕಾಲುಗಳಿಗೆ ತಾಗುತ್ತದೆ. ಜತೆಗೆ ಅದರಲ್ಲಿನ ಗ್ರೀಸ್, ಎಣ್ಣೆಗಳೂ ತಾಗಬಹುದು. ಪೆಟ್ರೋಲ್ ಟ್ಯಾಂಕ್ ಮೇಲಿದ್ದು ಎಣ್ಣೆ ಸೋರಿ ಗಲೀಜಾಗುತ್ತದೆ.

ಈ ಅನಾನುಕೂಲತೆಗಳನ್ನೇ ಧನಾತ್ಮಕವಾಗಿ ಬಳಸಿಕೊಂಡಿರುವ ತಂತ್ರಜ್ಞರು ಈಗ ಅಂದವನ್ನು ಹೆಚ್ಚಿಸಿ, ಸಮಸ್ಯೆ ನೀಗಿಸಿದ್ದರಾದರೂ, ಸ್ಕೂಟರ್ ಅದರದೇ ಆದ ವಿಶೇಷತೆಗಳಿಂದಾಗಿ ಮನಗೆಲ್ಲುತ್ತದೆ. ಇದನ್ನು ಪರಿಚಯಿಸಿದ ಕೀರ್ತಿಯಂತೂ ವೆಸ್ಪಾಗೆ ಸಲ್ಲಲೇ ಬೇಕು.

ಸಾಮಾನ್ಯವಾಗಿ ವಾಹನಗಳಿಗೆ ಫ್ರೇಂ ದೇಹದ ಒಳಗಿದ್ದರೆ, ಸ್ಕೂಟರ್‌ಗಳಲ್ಲಿ ಫ್ರೇಂ ದೇಹದ ಹೊರಗಿರುತ್ತದೆ. ಫ್ರೇಂ ಇದರ ದೇಹ. ವಾಸ್ತವದಲ್ಲಿ ಇದು ಜೀವ ಲೋಕದ ಅನುಕರಣೆ. ಜೀವಿಗಳಲ್ಲಿ, ಮುಖ್ಯವಾಗಿ ಪ್ರಾಣಿಗಳಲ್ಲಿ ಅಸ್ತಿಪಂಜರ ದೇಹದ ಒಳಗಿರುತ್ತದೆ. ಆದರೆ ಕೀಟಪ್ರಪಂಚದಲ್ಲಿ ಉಲ್ಟಾ. ಅಂದರೆ ಅಸ್ತಿಪಂಜರ ಚಿಪ್ಪಿನಂತೆ, ಕವಚದಂತೆ ದೇಹವನ್ನು ಆವರಿಸಿ ಸುತ್ತಿಕೊಂಡಿರುತ್ತದೆ. ಸ್ಕೂಟರ್‌ನ ದೇಹವೇ ಫ್ರೇಂನಂತೆ ಕೆಲಸ ಮಾಡುತ್ತದೆ.

ಈ ಫ್ರೇಂ ಪೆಟ್ಟಿಗೆಯಂತೆ ಎಂಜಿನ್‌ನ್ನು ಒಳಗೆ ಬಂಧಿಸಿಡುತ್ತದೆ. ಹಾಗಾಗಿ ಸ್ಕೂಟರ್‌ನ ಎಂಜಿನ್ ಮೇಲ್ನೋಟಕ್ಕೆ ಕಾಣುವುದೇ ಇಲ್ಲ. ಈ ಎಂಜಿನ್‌ಗೆ ಹಿಂದಿನ ಚಕ್ರ ಅಳವಡಿತಗೊಂಡಿದ್ದು ಎಂಜಿನ್‌ನ ಪುಲ್ಲಿ (ಎಂಜಿನ್‌ನ ಕನೆಕ್ಟಿಂಗ್ ರಾಡ್‌ಗೆ ಜೋಡಿತಗೊಂಡಿರುವ ತಿರುಗುವ ಕಡ್ಡಿ) ಜತೆಗೆ ತಿರುತ್ತದೆ.

ಇಂದಿನ ಆಧುನಿಕ ಸ್ಕೂಟರ್‌ಗಳಲ್ಲಿ ಪುಲ್ಲಿ ಹಾಗೂ ಚಕ್ರ ಪ್ರತ್ಯೇಕವಿದ್ದು, ಬೆಲ್ಟ್ ಡ್ರೈವ್‌ನಿಂದ ಚಾಲನೆ ಪಡೆಯುತ್ತವೆ. ಆದರೆ ಹಿಂದಿನ ಕಾಲದ ಸ್ಕೂಟರ್‌ಗಳಲ್ಲಿ ಈ ರೀತಿಯಿರದೆ, ಚಕ್ರ ನೇರವಾಗಿ ಚಲನೆಗೆ ಒಳಪಡುತ್ತಿತ್ತು.

ಅಲ್ಲದೇ, ಗಾಳಿಯನ್ನು ಪ್ರತಿರೋಧಿಸುವ ವಾಹನದ ಮುಂಭಾಗವೇ ಪ್ರಧಾನವಾಗಿರುವ ದೇಹವೂ ಫ್ರೇಂನ ಒಂದು ಭಾಗ. ಕಾಲನ್ನು ಆರಾಮಾಗಿ ಇಟ್ಟುಕೊಳ್ಳಬಲ್ಲ ಸಮತಟ್ಟಾದ ಪಟ್ಟಿಯೂ ಕಾಲ ಬಳಿ. ಜತೆಗೆ ಸ್ಕೂಟರ್‌ನಲ್ಲಿ ಚಕ್ರಗಳಲ್ಲಿ ಸ್ಪೋಕ್ಸ್ ಸಹ ಇರುವುದಿಲ್ಲ.

ಸಮತಟ್ಟಾದ ತಟ್ಟೆ ಮಾದರಿಯ ಚಕ್ರ ಇರುತ್ತವೆ. ಈ ಚಕ್ರಗಳ ಪೈಕಿ ಹಿಂದಿನ ಚಕ್ರ ದೇಹದೊಳಗೆ ಹುದುಗಿದ್ದು, ಮುಂದಿನ ಚಕ್ರಕ್ಕೆ ಅಗಲವಾದ ಮಡ್ ಗಾರ್ಡ್, ಚಕ್ರದ ಹಿಂದೆ ಇರುವ ವಿಂಡ್ ಶೀಲ್ಡ್ ಮಾದರಿಯ ದೇಹದಿಂದಾಗಿ ಚಕ್ರಕ್ಕೆ ಮಹಿಳಾ ಸವಾರರ ಬಟ್ಟೆ ಸುತ್ತಿಕೊಳ್ಳುವ ತೊಂದರೆಯೇ ಇಲ್ಲ.

ಇದರ ಜತೆಗೆ ಮನೆಗೆ ಬೇಕಾದ, ಅಥವಾ ಕೆಲಸಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಇಟ್ಟುಕೊಂಡು ಹೋಗಬಲ್ಲ ಸ್ಥಳಾವಕಾಶವೂ ಸಾಕಷ್ಟು ಇದ್ದು ಮಹಿಳೆಯರ ಫೇವರೇಟ್ ವಾಹನ ಇದಾಯಿತು. ಮಹಿಳೆಯರಿಗಷ್ಟವಾದದ್ದು ಪುರುಷರಿಗೆ ಇಷ್ಟವಾಗಲು ಹೆಚ್ಚು ಕಾಲ ಬೇಕಿಲ್ಲ ತಾನೆ. ಅನೇಕ ಹಳೆಯ ಕನ್ನಡ ಸಿನಿಮಾಗಳಲ್ಲಿ `ಸದ್ಗೃಹಸ್ಥ~ರ ವಾಹನ ಸ್ಕೂಟರ್. ಆದರೆ ಇಂಗ್ಲಿಷ್ ಸಿನಿಮಾಗಳಲ್ಲಿ ಹಾಗಿರಲಿಲ್ಲ. ಜೇಮ್ಸ ಬಾಂಡ್ ಕೂಡಾ ವೆಸ್ಪಾ ಸ್ಕೂಟರ್ ಓಡಿಸುತ್ತಿದ್ದ!

ಹ್ಯಾಂಡ್ ಗಿಯರ್
ವಾಹನಗಳಲ್ಲಿ ಹ್ಯಾಂಡ್ ಗಿಯರ್ ಸಿಸ್ಟಂ ಪರಿಚಯಗೊಂಡಿದ್ದು ಸ್ಕೂಟರ್‌ಗಳ ಮೂಲಕವೇ. ಮೋಟಾರ್ ಸೈಕಲ್‌ಗಳಲ್ಲಿನ ಹ್ಯಾಂಡಲ್‌ಬಾರ್‌ನಲ್ಲಿ ಕೈಯಲ್ಲಿ ಕ್ಲಚ್ ಬಳಸುವ ಅವಕಾಶ ಇರುವುದಾದರೂ, ಗಿಯರ್ ಬದಲಿಸಲು ಕಾಲ ಬಳಿ ಇರುವ ಗಿಯರ್ ಶಿಫ್ಟರ್‌ನ್ನು ಬಳಸಲೇ ಬೇಕು. ಆದರೆ ಸ್ಕೂಟರ್‌ನಲ್ಲಿ ಕ್ಲಚ್ ಹಾಗೂ ಗಿಯರ್ ಶಿಫ್ಟರ್‌ಗಳೆರಡೂ ಹ್ಯಾಂಡಲ್‌ಬಾರ್‌ನಲ್ಲೇ ಇರುವುದು ವಿಶೇಷ. ಈ ನೂತನ ವ್ಯವಸ್ಥೆ ಸ್ಕೂಟರ್‌ನ ಮೂಲಕ ಪರಿಚಿತಗೊಂಡದ್ದೂ ಮಹಿಳೆಯರ ಸಲುವಾಗಿಯೇ. 

ಮೊದಲಿಗೆ ಭಾರತದಲ್ಲಿ ಡಾಲರ್‌ಗಳನ್ನು ತೆತ್ತು ವೆಸ್ಪಾ ಸ್ಕೂಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಮೊದ ಮೊದಲು ಕೇವಲ 3 ಗಿಯರ್‌ಗಳು ಮಾತ್ರ ವೆಸ್ಪಾಕ್ಕೆ ಇದ್ದವು. ನಂತರ 4 ಗಿಯರ್‌ಗಳು ಪರಿಚಿತಗೊಂಡವು.

ಆಮೇಲೆ ಕೊಂಚ ಕಡಿಮೆ ಬೆಲೆಗೆ ಬಜಾಜ್ ಸಂಸ್ಥೆ ಸ್ಕೂಟರ್‌ಗಳನ್ನು ದೇಶೀಯವಾಗಿ ನಿರ್ಮಿಸಲು ಆರಂಭಿಸಿತು. ವೆಸ್ಪಾದಿಂದ ತಂತ್ರಜ್ಞಾನದ ಪೇಟೆಂಟ್ ಪಡೆದು ಸ್ಕೂಟರ್ ನಿರ್ಮಾಣ ಆರಂಭಿಸಿ 2000 ನೇ ಇಸವಿಯವರೆಗೂ ಬಜಾಜ್ ಸ್ಕೂಟರ್‌ಗಳನ್ನು ನಿರ್ಮಿಸಿತು. ಬಜಾಜ್‌ನ ಚೇತಕ್, ಸೂಪರ್‌ಗಳು ಯಶಸ್ಸು ಪಡೆದವು. ಕೊನೆಯಲ್ಲಿ 4 ಸ್ಟ್ರೋಕ್ ಸ್ಕೂಟರ್‌ಗಳನ್ನು ಬಜಾಜ್ ನಿರ್ಮಿಸಿತಾದರೂ ಯಶಸ್ಸು ಸಿಗಲಿಲ್ಲ.

ಅಷ್ಟರಲ್ಲಾಗಲೇ ಕೈನೆಟಿಕ್‌ನ ಹೋಂಡಾ ಪರಿಚಯಗೊಂಡು ಯಶಸ್ಸು ಪಡೆದಿತ್ತು. ಗಿಯರ್‌ಲೆಸ್ ಸ್ಕೂಟರ್ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಆಧುನಿಕ ಸ್ಪೋರ್ಟ್ಸ್ ಮಾದರಿಯ ನೋಟವಿತ್ತು. ಅದರ ತಳಕು ಬಳುಕಿನ ಸೌಂದರ್ಯದ ಮುಂದೆ ಸ್ಕೂಟರ್‌ಗಳು ಪೇಲವವಾಗಿ ಕಂಡವು.

ನಿಧಾನವಾಗಿ ಮಾರಾಟ ಕುಸಿಯಿತು. ಗಿಯರ್‌ಲೆಸ್ ಸ್ಕೂಟರ್‌ನಂತೆ ಆರಾಮವಾದ ಚಾಲನೆ ಹಳೆಯ ಸ್ಕೂಟರ್‌ನಲ್ಲಿ ಇರಲಿಲ್ಲ. ಜತೆಗೆ ಕೈನೆಟಿಕ್ ಹೋಂಡಾದ ಮುಂಭಾಗದಲ್ಲಿ ಸಮತಟ್ಟಾದ ಭಾಗವಿದ್ದು ಆರಾಮಾಗಿತ್ತು.

ಬಜಾಜ್ ಸ್ಕೂಟರ್ ಇತಿಹಾಸ ಸೇರಿತು. ವೆಸ್ಪಾಗೂ ಸಹ ಇದೇ ಗತಿ ಕಾದಿತ್ತು. ಆರಂಭದಲ್ಲಿ ತಾನೇ ಸ್ವಂತ ಭಾರತದಲ್ಲಿ ಸ್ಕೂಟರ್ ಮಾರಾಟ ಮಾಡುತ್ತಿದ್ದು, ನಂತರ ಎಲ್‌ಎಂಎಲ್ ಮೂಲಕ ಉತ್ಪಾದನೆ, ಮಾರಾಟ ಮಾಡುತ್ತಿತ್ತು. ಆದರೆ ಕೊನೆಗೆ ಎಲ್‌ಎಂಎಲ್ ಸಂಸ್ಥೆಯೇ ಮುಚ್ಚಿಹೋಗಿ, ವೆಸ್ಪಾ ಶಾಶ್ವತವಾಗಿ ಭಾರತದಿಂದ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.

ಮತ್ತೆ ಬಂದಿದೆ ವೆಸ್ಪಾ
ವೆಸ್ಪಾ ಅನೇಕ ಎಡರು ತೊಡರುಗಳನ್ನು ಎದುರಿಸಿ ಕೊನೆಗೂ ಭಾರತದ ರಸ್ತೆಗಳಿಗೆ ರೀ ಎಂಟ್ರಿ ಕೊಟ್ಟಿದೆ. ಪ್ರಪಂಚದಲ್ಲೇ ಸ್ಕೂಟರ್ ಉತ್ಪಾದನೆಯಲ್ಲಿ ನಂ. 1 ಸ್ಥಾನದಲ್ಲಿರುವ ಪಿಯಾಜ್ಜಿಯೋ ಭಾರತದಲ್ಲಿ ತಾನೇ ನೇರವಾಗಿ ವೆಸ್ಪಾ ಸ್ಕೂಟರ್‌ಗಳನ್ನು ಉತ್ಪಾದಿಸಿ, ಮಾರಾಟ ಮಾಡಲಿದೆ.
 
ಈಗಾಗಲೇ ವೆಸ್ಪಾ ಆರಂಭಿಕ ಉತ್ಪಾದನೆಯನ್ನು ಆರಂಭಿಸಿದ್ದು, ಪೂರ್ಣಪ್ರಮಾಣದ ಉತ್ಪಾದನೆ ಪ್ರಾರಂಭದ ಮೂಲಕ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮಾರಾಟ ಆರಂಭಿಸಲಿದೆ. ತನ್ನ ಹೊಸ ಸ್ಕೂಟರ್‌ಗೆ ಯಾವುದೇ ಹೊಸ ಹೆಸರನ್ನು ಇಡದೇ ಸರಳವಾಗಿ ವೆಸ್ಪಾ ಎಂದು ಮಾತ್ರ ಹೆಸರಿಟ್ಟು ಬಿಡುಗಡೆ ಮಾಡಿದೆ.

125 ಸಿಸಿ 4 ಸ್ಟ್ರೋಕ್ ಎಂಜಿನ್‌ನ ಈ ಸ್ಕೂಟರ್ ಗಿಯರ್‌ಲೆಸ್ ಆಗಿದ್ದು, 10.06 ಪಿಎಸ್ ಶಕ್ತಿ (7500 ಆರ್‌ಪಿಎಂ), 10.6 ಎನ್‌ಎಂ ಟಾರ್ಕ್ (6000 ಆರ್‌ಪಿಎಂ) ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ. ಸೆಲ್ಫ್ ಹಾಗೂ ಕಿಕ್ ಸ್ಟಾರ್ಟ್ ಆಪ್ಷನ್ ಹೊಂದಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಹೊಂದಿದೆ.

ವೆಸ್ಪಾದ ವಿಶೇಷ ಎಂಬಂತೆ ಈಗಿನ ಎಲ್ಲ ಆಧುನಿಕ ಸ್ಕೂಟರ್‌ಗಳಿಗೆ ವ್ಯತಿರಿಕ್ತವಾಗಿ ಮಾನೋಕಾಕ್ ಫ್ರೇಂ ಹೊಂದಿದೆ. ಅಂದರೆ ತನ್ನ ಹಿಂದಿನ ಸ್ಕೂಟರ್‌ಗಳಂತೆ ಇದಕ್ಕೆ ದೇಹವೇ ಫ್ರೇಂ. ಹೊಸ ವೆಸ್ಪಾದಲ್ಲಿ ಸಂಪೂರ್ಣ ಉಕ್ಕಿನ  ದೇಹವಿದ್ದು, ಹಗುರ ಹಾಗೂ ಬಲಶಾಲಿಯಾಗಿದೆ. ಹಾಗಾಗಿ ಕಾರ್ಯಕ್ಷಮತೆ ಹಾಗೂ ಮೈಲೇಜ್‌ನ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರದು. ದೇಹವೂ ಉತ್ತಮ ಗಾತ್ರ ಹೊಂದಿದೆ. 1770 ಎಂಎಂ ಉದ್ದ, 690 ಎಂಎಂ ಅಗಲ ಹಾಗೂ 1140 ಎಂಎಂ ಎತ್ತರವಿದ್ದು, ಹಳ್ಳ ಕೊಳ್ಳಗಳ ರಸ್ತೆಯಲ್ಲೂ ಸರಾಗವಾಗಿ ಸಾಗಬಲ್ಲದು.

ಸುಮಾರು 2 ವರ್ಷದ ಹಿಂದಿನಿಂದಲೇ ವೆಸ್ಪಾ ಭಾರತದಲ್ಲಿ ಸಂಶೋಧನೆ ಆರಂಭಿಸಿತ್ತು. ಮಾರುಕಟ್ಟೆ ಅಧ್ಯಯನ ಮಾಡಿತ್ತು. ಹಳೆಯ ವೆಸ್ಪಾ ಸ್ಕೂಟರ್‌ಗಳನ್ನು ಲಕ್ಷಗಟ್ಟಲೇ ಹಣ ಕೊಟ್ಟಿ ಕೊಂಡುಕೊಂಡಿತ್ತು. ಹಾಗಾಗಿ ಈಗ ಹೊರಬಿಟ್ಟಿರುವ ವೆಸ್ಪಾ ಸ್ಕೂಟರ್‌ನಲ್ಲಿ ಲೆಜೆಂಟರಿ ವೆಸ್ಪಾ ಹಾಲೋಗ್ರಾಂ, ಮೀಟರ್ ಕ್ಲಸ್ಟರ್ ವ್ಯವಸ್ಥೆಗಳು ಹಳೆಯ ವೆಸ್ಪಾವನ್ನು ನೆನಪಿಸುತ್ತದೆ.

ಗಟ್ಟಿಮುಟ್ಟಾದ ದೇಹ
ಸಂಪೂರ್ಣ ದೇಹ ಲೋಹದ್ದಾಗಿದ್ದು, ಹುಡುಕಿದರೂ ಫೈಬರ್ ಸಿಗದು. ಮಡ್‌ಫ್ಲಾಪ್, ಹ್ಯಾಂಡಲ್‌ಬಾರ್‌ನ ಗ್ರಿಪ್, ಮೀಟರ್ ಕ್ಲಸ್ಟರ್ ಮುಂತಾದ ಕೆಲವು ಭಾಗಗಳು ಮಾತ್ರ ಫೈಬರ್‌ನದಾಗಿವೆ. ಮಿಕ್ಕಂತೆ ಎಲ್ಲವೂ ಉಕ್ಕಿನಿಂದಲೇ ಮಾಡಿದ್ದಾಗಿದೆ. ಮಿರರ್‌ಗಳೂ ಸ್ಟೀಲ್‌ನದೇ ಆಗಿದ್ದು ಗಮನ ಸೆಳೆಯುತ್ತವೆ. ಜತೆಗೆ ವಿಶಾಲವಾದ ಸೀಟ್, ಸ್ಟೋರೇಜ್ ಬೂಟ್ ವ್ಯವಸ್ಥೆ ಅತ್ಯುತ್ತಮವಾಗಿದೆ.
 
ಡಿಜಿಟಲ್- ಆನಲಾಗ್ ಮೀಟರ್ ಕ್ಲಸ್ಟರ್ ಆಧುನಿಕ ಫೀಲ್ ನೀಡುತ್ತದೆ. ಈ ತಂತ್ರಜ್ಞಾನಗಳು ಈಗಿನ ಹೊಸ ಇತರೆ ಕಂಪೆನಿಗಳ ಸ್ಕೂಟರ್‌ಗಳಲ್ಲಿ ಇವೆಯಾದರೂ ಗುಣಮಟ್ಟ ಶ್ರೇಷ್ಠ ಎಂದು ಪಿಯಾಜ್ಜಿಯೋ ಹೇಳಿಕೊಂಡಿದೆ. ಹಾಗಾಗೇ ಬೆಲೆಯೂ ಭಾರತದ ಮಿಕ್ಕೆಲ್ಲ ಸ್ಕೂಟರ್‌ಗಳಿಂತಲೂ ದುಬಾರಿಯೇ ಆಗಿದೆ. ಬೆಂಗಳೂರಿನಲ್ಲಿ ಎಕ್ಸ್ ಶೋರೂಂ ಬೆಲೆ 68,860 ರೂಪಾಯಿಗಳು. ಸದ್ಯಕ್ಕೆ ಕೇವಲ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಾತ್ರ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT