ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಸೋಲುವ ಮುನ್ನ ಟೆನಿಸ್‌ ಜಗತ್ತು ಗೆದ್ದವ ಜೊಕೊವಿಚ್‌!
ಸೋಲುವ ಮುನ್ನ ಟೆನಿಸ್‌ ಜಗತ್ತು ಗೆದ್ದವ ಜೊಕೊವಿಚ್‌!
Published 22 ಜುಲೈ 2023, 0:21 IST
Last Updated 22 ಜುಲೈ 2023, 0:21 IST
ಅಕ್ಷರ ಗಾತ್ರ

ಟೆನಿಸ್‌ ಜಗತ್ತಿನಲ್ಲಿ ಒಬ್ಬ ಆಟಗಾರನಿಗೆ 36 ವರ್ಷವೆಂದರೆ ‘ವಯಸ್ಸಾಯಿತು ಬೇರೆ ದಾರಿ ಕಂಡುಕೊಳ್ಳಬೇಕು’ ಎಂಬ ಅರ್ಥವಿದೆ. ಬಹುತೇಕ ಕ್ರೀಡೆಗಳಲ್ಲಿ ಈ ಮಾತು ಚಾಲ್ತಿಯಲ್ಲಿದೆ. ಇಷ್ಟು ವಯಸ್ಸಾದರೂ ಕಣಕ್ಕಿಳಿದು ಗೆಲ್ಲುತ್ತಿದ್ದರೆ ಅದು ಅದ್ಭುತವೇ ಸರಿ. ಗ್ರ್ಯಾಂಡ್‌ಸ್ಲಾಮ್‌ ಗೆಲ್ಲುವ ತಾಕತ್ತು ಉಳಿಸಿಕೊಂಡಿದ್ದರೆ ಅದೊಂದು ವಿಸ್ಮಯ!

ಆ ವಿಸ್ಮಯವೇ ಸರ್ಬಿಯಾದ ನೊವಾಕ್‌ ಜೊಕೊವಿಚ್‌. ಇವರು ಮೊನ್ನೆ ವಿಂಬಲ್ಡನ್‌ ಫೈನಲ್‌ನಲ್ಲಿ ವಿರೋಚಿತ ಸೋಲು ಕಂಡಿರಬಹುದು. ಆ ಸೋಲಿಗೂ ಮುನ್ನ ಸತತವಾಗಿ 34 ಪಂದ್ಯ ಗೆದ್ದ ಆಟಗಾರ ಎಂದರೆ ಊಹಿಸಿಕೊಳ್ಳಿ. 2018ರಿಂದ 2022ರವರೆಗೆ ಇವರೇ ವಿಂಬಲ್ಡನ್‌ ಚಾಂಪಿಯನ್‌.

ಈಗ ಇಡೀ ಟೆನಿಸ್‌ ಲೋಕ 20ರ ಹರೆಯದ ಆಟಗಾರ, ನೂತನ ವಿಂಬಲ್ಡನ್‌ ಚಾಂಪಿಯನ್‌ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಹಿಂದೆ ಬಿದ್ದಿದೆ. ಆದರೆ, 23 ಗ್ರ್ಯಾಂಡ್‌ಸ್ಲಾಮ್‌ ಗೆದ್ದು ವಿಶ್ವ ದಾಖಲೆ ಬರೆದಿರುವ ನೊವಾಕ್‌ ಸಾಧನೆ ಮರೆಯುವಂತಿಲ್ಲ.

ಎಟಿಪಿ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ 378 ವಾರ ಕಾಲ ಅಗ್ರಸ್ಥಾನ ಕಾಪಿಟ್ಟುಕೊಂಡ ಏಕೈಕ ಟೆನ್ನಿಸಿಗ. ಟೆನಿಸ್‌ ಆಟದಿಂದಲೇ ₹ 1,190 ಕೋಟಿ ಸಂಪಾದಿಸಿರುವ ಚಾಂಪಿಯನ್‌.‌ 

ಟೆನಿಸ್‌ ದಿಗ್ಗಜರಾದ ಜಾನ್‌ ಮೆಕೆನ್ರೊ, ರಾಡ್‌ ಲೇವರ್‌, ಬೋರ್ನ್‌ ಬೋರ್ಗ್‌, ಇವಾನ್‌ ಲೆಂಡ್ಲ್‌, ಬೋರಿಸ್‌ ಬೇಕರ್‌, ಪೀಟ್‌ ಸಾಂಪ್ರಾಸ್‌, ಆ್ಯಂಡ್ರೆ ಅಗಾಸ್ಸಿ, ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಅವರಂಥವರ ಸಾಲಿನಲ್ಲಿ ನಿಲ್ಲುವ ಚಾಂಪಿಯನ್‌. ಅಂಕಿಅಂಶಗಳ ಪ್ರಕಾರ ಟೆನಿಸ್‌ ಲೋಕದ ಸರ್ವಶ್ರೇಷ್ಠ ಆಟಗಾರ.

ಈಗ ಇವರಿಗೆ ವಯಸ್ಸು 36; ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ 35 ಬಾರಿ ಫೈನಲ್‌ ತಲುಪಿ 23ರಲ್ಲಿ ಚಾಂಪಿಯನ್‌ ಆಗಿದ್ದಾರೆ. ಈ ಹಾದಿಯಲ್ಲಿ ಹತ್ತಾರು ದಾಖಲೆ. 10 ಆಸ್ಟ್ರೇಲಿಯ ಓಪನ್, 7 ವಿಂಬಲ್ಡನ್‌, 3 ಫ್ರೆಂಚ್‌ ಓಪನ್‌, 3 ಅಮೆರಿಕ ಓಪನ್‌ ಟ್ರೋಫಿ ಇವರ ಜೋಳಿಗೆಯಲ್ಲಿವೆ.

ಸರ್ಬಿಯಾದ ಈ ಆಟಗಾರ ಹದಿನಾರನೇ ವಯಸ್ಸಿನಲ್ಲೇ ವೃತ್ತಿಪರ ಟೆನಿಸ್‌ ಆಡಲಾರಂಭಿಸಿದರು. 2005ರಲ್ಲಿ ಆಸ್ಟ್ರೇಲಿಯ ಓಪನ್‌ ಮೂಲಕ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗೆ ಪ್ರವೇಶ ಗಿಟ್ಟಿಸಿದರು. ಆಗಿನ್ನೂ ಅವರಿಗೆ 18 ವರ್ಷ. 2008ರಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್‌ ಗೆದ್ದರು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಕೊರಗು ಅವರಿಗಿದೆ. ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವಷ್ಟೇ ಲಭಿಸಿದೆ. 

ಕೋವಿಡ್‌ ಲಸಿಕೆ ವಿಚಾರವಾಗಿ ತಮ್ಮ ಹಟದಿಂದ 2022ರಲ್ಲಿ ಆಸ್ಟ್ರೇಲಿಯ ಓಪನ್‌ನಿಂದಲೇ ಹೊರಗುಳಿಯಬೇಕಾಯಿತು. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಕಾರಣ ಇವರಿಗೆ ನೀಡಿದ್ದ ವೀಸಾವನ್ನು ಆಸ್ಟ್ರೇಲಿಯ ಸರ್ಕಾರ ರದ್ದುಪಡಿಸಿತ್ತು. ಅಮೆರಿಕ ಕೂಡ ಪ್ರವೇಶ ನಿಷೇಧಿಸಿತ್ತು. ಹೀಗಾಗಿ, ಆ ವರ್ಷ ಅಮೆರಿಕ ಓಪನ್‌ ಕೂಡ ಆಡಲು ಸಾಧ್ಯವಾಗಲಿಲ್ಲ. 

ಮೊನ್ನೆಯ ಸೋಲು ನೊವಾಕ್‌ ಅವರನ್ನು ಹೆಚ್ಚಾಗಿ ಬಾಧಿಸಿದೆ. ಫೈನಲ್‌ ಬಳಿಕ ಅವರಿಗೆ ಸಂದರ್ಶಕಿ, ‘ನಿಮ್ಮ ಕುಟುಂಬ ಗ್ಯಾಲರಿಯಲ್ಲಿ ಕುಳಿತು ಈ ಪಂದ್ಯ ವೀಕ್ಷಿಸಿದೆ. ಈ ಬಗ್ಗೆ ಹೇಳಿ' ಎಂದು ಕೇಳುತ್ತಾರೆ. ಆಗ ನೊವಾಕ್‌,‌ ಚಪ್ಪಾಳೆ ತಟ್ಟುತ್ತಿದ್ದ ಮಗನ ಮುಖ ನೋಡಿ ಭಾವುಕರಾಗಿ ಅಂಗಳದಲ್ಲೇ ಕಣ್ಣೀರಿಟ್ಟರು. ಬಾಲ್ಯದ ಗೆಳತಿ, ತನ್ನ ಅಭಿಮಾನಿ ಜೆಲೆನಾಳನ್ನು ಮದುವೆಯಾಗಿರುವ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

‘ಸೋಲನ್ನು ಅರಗಿಸಿಕೊಳ್ಳಲು ನನಗೆ ಕಷ್ಟ. ಆದರೆ, ಅಲ್ಕರಾಜ್‌ ಆಟ ಅದ್ಭುತ. ಆತನ ಆಟಕ್ಕೆ ತಲೆಬಾಗಲೇಬೇಕು’ ಎಂಬ ಅದ್ಭುತ ಮಾತಿನಿಂದ ಮತ್ತೆ ಚಾಂಪಿಯನ್ ಆಗಿದ್ದಾರೆ.

ಅದೇನೇ ಇರಲಿ, 2003ರಿಂದ ಟೆನಿಸ್‌ ಜಗತ್ತು ಫೆಡರರ್‌, ನಡಾಲ್‌, ಜೊಕೊವಿಚ್‌ ಬಿಟ್ಟು ಹೊರಬಂದಿರಲಿಲ್ಲ. ಈ ಅವಧಿಯಲ್ಲಿ ಈ ಮೂವರೇ 65 ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿ ಹಂಚಿಕೊಂಡಿದ್ದಾರೆ. ಆದರೆ, ಅಲ್ಕರಾಜ್‌ ಉದಯದ ಬಳಿಕ ಹೊಸ ಗಾಳಿ ಬೀಸಿದಂತಿದೆ. ಹಾಗಂತ ಜೊಕೊವಿಚ್‌ ಕಾಲ ಮುಗಿಯಿತೇ? ಮುಂದಿನ ತಿಂಗಳು ಅಮೆರಿಕ ಓಪನ್‌ ನಡೆಯಲಿದೆ. ಅಲ್ಲಿಗೆ ಜೊಕೊವಿಚ್‌ ಕೂಡ ಬರಲಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT