ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ಮಾದರಿ

ವ್ಯಕ್ತಿ
Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಅದು 2005ರ ಏಪ್ರಿಲ್ ತಿಂಗಳು. ಪೋಪ್ ಎರಡನೇ ಜಾನ್ ಪಾಲ್ ಅವರ ನಿಧನದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿಯ ಆಯ್ಕೆಗಾಗಿ ವ್ಯಾಟಿಕನ್‌ನಲ್ಲಿ ಕಾರ್ಡಿನಲ್‌ಗಳು ಸಭೆ ಸೇರಿದ್ದರು. ನಾಲ್ಕು ಬಾರಿ ಸಭೆ ನಡೆದರೂ ನೂತನ ಪೋಪ್ ಆಯ್ಕೆ ನಡೆದಿಲ್ಲ ಎಂದು ಸೂಚಿಸುವ ಕಪ್ಪು ಹೊಗೆ ಸಿಸ್ಟೈನ್ ಚಾಪೆಲ್‌ನಿಂದ ಹೊರಬಂದಿತ್ತು.

ಏಪ್ರಿಲ್ 18ರಂದು ಆರಂಭಗೊಂಡ ಐದನೇ ಸಭೆಯ ಎರಡನೇ ದಿನ ಸಂಜೆ 6.04ಕ್ಕೆ (ಭಾರತೀಯ ಸಮಯ ರಾತ್ರಿ 9.34) ಪೋಪ್ ಆಯ್ಕೆಯಾದರು ಎಂದು ಸೂಚಿಸುವ ಬಿಳಿ ಹೊಗೆ ಹೊರಬಂದಾಗ ಸೇಂಟ್ ಪೀಟರ್ಸ್ ಚೌಕದಲ್ಲಿ ಕುತೂಹಲದಲ್ಲಿ ನಿಂತಿದ್ದ ಜನಸ್ತೋಮ ಸಂತಸದಿಂದ ಕುಣಿದು ಕುಪ್ಪಳಿಸಿತ್ತು.

ರಾತ್ರಿ 10.19ಕ್ಕೆ ಕಾರ್ಡಿನಲ್‌ಗಳಲ್ಲಿ ಹಿರಿಯವರಾದ ಚಿಲಿಯ ಸ್ಯಾಂಟಿಯಾಗೊ ಆರ್ಚ್‌ಬಿಷಪ್, ಹರ್ಷೋದ್ಗಾರ ಮೊಳಗಿಸುತ್ತಿದ್ದ ಜನರ ಮಧ್ಯೆ ನಿಂತು ಲ್ಯಾಟಿನ್ ಭಾಷೆಯಲ್ಲಿ  `ಹಬೇಮೂಸ್ ಪಾಪ್ಪಾಂ' (ನಮಗೆ ಪೋಪ್ ಲಭಿಸಿದ್ದಾರೆ) ಎಂದು ಉದ್ಗರಿಸಿದಾಗ ನೆರೆದಿದ್ದವರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಷ್ಟರಲ್ಲೇ 78ರ ಹರೆಯದ ನೂತನ ಪೋಪ್ ಹದಿನಾರನೇ ಬೆನಡಿಕ್ಟ್ ಅವರು, ಪೋಪ್ ಧರಿಸುವ ಮೇಲುಡುಪು ಧರಿಸಿ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಪ್ರತ್ಯಕ್ಷರಾಗಿ ಜನರನ್ನು ಆಶೀರ್ವದಿಸಿದ್ದರು.

`ನಿಮ್ಮ ಪ್ರಾರ್ಥನೆಗಳೇ ನನಗೆ ಅಭಯ' ಎಂದು ಹೇಳುತ್ತಾ ವಿನಮ್ರತೆಯಿಂದ ತಮ್ಮ ಸಂದೇಶಕ್ಕೆ ವಿರಾಮ ಹಾಡಿದ್ದರು. ಇದಾಗಿ ಏಳು ವರ್ಷಗಳ ಬಳಿಕ ಅದೇ ಪೋಪ್ 16ನೇ ಬೆನೆಡಿಕ್ಟ್ ಅವರು ಅದೇ ವಿನಮ್ರತೆಯಿಂದ ಫೆ. 11ರಂದು ತಮ್ಮ ಪದತ್ಯಾಗವನ್ನು ಘೋಷಿಸಿದಾಗ, ಇಡೀ ಜಗತ್ತು ಅದನ್ನು ಆಶ್ಚರ್ಯದಿಂದ ಕಂಡಿತ್ತು. ಏಕೆಂದರೆ ಅದೊಂದು ಅಸಾಧಾರಣ ನಿರ್ಧಾರವಾಗಿತ್ತು.

ಮಾತ್ರವಲ್ಲ, ಕೆಥೊಲಿಕ್ ಧರ್ಮಸಭೆಯ ಸಮೀಪಕಾಲದ ಚರಿತ್ರೆಯಲ್ಲೆಲ್ಲೂ ಈ ರೀತಿಯ ರಾಜೀನಾಮೆ ಕಂಡುಬಂದಿರಲಿಲ್ಲ. ಅನಾರೋಗ್ಯದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪೋಪ್ ಹೇಳಿಕೊಂಡರೂ, ಅದನ್ನು ಒಮ್ಮೆಲೆ ಸಮ್ಮತಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ.

ಅದು ನಿಜವೇ ಅನ್ನಿ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕೆಥೊಲಿಕ್ ಧರ್ಮಸಭೆಯ ಪರಮೋಚ್ಚ ಧರ್ಮಗುರುವಿನ ಸ್ಥಾನವನ್ನು ತ್ಯಜಿಸುವುದು ಸಾಧಾರಣ ಸಂಗತಿಯಲ್ಲ. ಕೊನೆಯುಸಿರಿರುವವರೆಗೆ ಅಧಿಕಾರದಲ್ಲಿರಬಹುದಾದ ಪದವಿ ಅದು. ಜೊತೆಗೆ ಗೌರವದ್ದೂ ಹೌದು.

ಅಂಥದ್ದನ್ನೇ ತ್ಯಜಿಸುವುದು ಎಂದರೆ ಅದೊಂದು ಮಹಾತ್ಯಾಗವೇ ಸರಿ.  ಜೊತೆಗೆ, ಪೋಪ್ ಅವರಿಗೆ ಆ ಪದವಿಯಲ್ಲಿ ಮುಂದುವರಿಯಲು ಯಾವುದೇ ಅಡೆತಡೆಗಳೂ ಇರಲಿಲ್ಲ.  `ರಾಜೀನಾಮೆಯ ನನ್ನ ಮನಃಸ್ಸಾಕ್ಷಿಯ ನಿರ್ಧಾರವನ್ನು ದೇವರ ಮುಂದೆ ಹಲವು ಬಾರಿ ಪರೀಕ್ಷೆಗೊಳಪಡಿಸಿದ್ದೇನೆ. ನನಗೂ ವಯಸ್ಸಾಗಿದೆ. ನಿಶ್ಯಕ್ತಿ ಕಾಡುತ್ತಿದೆ. ಈ ಹಂತದಲ್ಲಿ ಮಹತ್ವಪೂರ್ಣ ಜವಾಬ್ದಾರಿಯ ದೊಡ್ಡ ಹುದ್ದೆಯನ್ನು ನಿಭಾಯಿಸುವುದು ಅಸಾಧ್ಯ' ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.

ರಾಜೀನಾಮೆಯ ನಿರ್ಧಾರವು ಪೋಪ್ ಅವರನ್ನು ಔನ್ನತ್ಯಕ್ಕೇರಿಸಿದೆ. ತಮ್ಮ ನಿರ್ಧಾರದ ಮೂಲಕ ಹೊಸ ತಲೆಮಾರಿಗೆ ಅದರಲ್ಲೂ ಅಧಿಕಾರಕ್ಕಾಗಿ ಕಚ್ಚಾಟ ನಡೆಸುವವರಿಗೆ ಅವರು ಹಾಕಿಕೊಟ್ಟ ಮಾದರಿ ಅನುಕರಣೀಯ. ಪರಮೋಚ್ಚ ಸ್ಥಾನದಿಂದ ಕೆಳಗಿಳಿಯಬೇಕಾದ ಸಮಯ ಸನ್ನಿಹಿತವಾಗಿದೆ ಎಂಬುದನ್ನು ಸ್ವತಃ ಮನಗಂಡರಲ್ಲದೆ ಅದನ್ನು ಪೂರ್ಣ ಸಮ್ಮತಿಯಿಂದಲೇ ಜಗತ್ತಿನ ಮುಂದೆ ಬಹಿರಂಗಗೊಳಿಸಿದರು.

ಇಂಥದ್ದೊಂದು ಘಟನೆ ಚರಿತ್ರೆಯಲ್ಲೇ ಅಪರೂಪದ್ದು.  ಕೆಥೊಲಿಕ್ ಧರ್ಮಸಭೆಯ ಚರಿತ್ರೆಯಲ್ಲಿ ಇದುವರೆಗೆ ಐದು ಪೋಪ್‌ಗಳು ಸ್ಥಾನ ತ್ಯಾಗ ಮಾಡಿದ್ದು, 1415ರಲ್ಲಿ ಪೋಪ್ 12ನೇ ಗ್ರಿಗರಿ ಅವರ ರಾಜೀನಾಮೆಯೇ ಕೊನೆಯ ರಾಜೀನಾಮೆ ಎಂದು ಪರಿಗಣಿಸಲ್ಪಟ್ಟಿತ್ತು.

ಪೋಪ್ ಬೆನೆಡಿಕ್ಟ್ 16 ಅವರ ಮೂಲ ಹೆಸರು ಜೋಸೆಫ್ ಅಲೋಷಿಯಸ್ ರ‌್ಯಾಟ್‌ಜಿಂಗರ್. ಜರ್ಮನಿಯ ಬವೇರಿ ಪ್ರಾಂತ್ಯದ ಮಾರ್ಕ್‌ಟಲೀನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಜೋಸೆಫ್ ರ‌್ಯಾಟ್‌ಜಿಂಗರ್ ಸೀನಿಯರ್ ಮತ್ತು ಮರಿಯ ದಂಪತಿಯ ಮೂರು ಮಕ್ಕಳಲ್ಲಿ ಕೊನೆಯವರಾಗಿ 1927 ಏಪ್ರಿಲ್ 16ರಂದು ಜನಿಸಿದರು.  ಧರ್ಮಗುರುವಾಗುವ ಉದ್ದೇಶದಿಂದ 1939ರಲ್ಲಿ ಮೈನರ್ ಸೆಮಿನರಿಗೆ ಸೇರಿದರೂ 1941ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಅಡಾಲ್ಫ್  ಹಿಟ್ಲರ್‌ನ ಯುವ ಸೈನ್ಯಕ್ಕೆ ಸೇರ್ಪಡೆಗೊಂಡರು.

ಅಂದು 14 ವಯಸ್ಸು ತುಂಬಿದ ಬಾಲಕರು ಸೇನೆ ಸೇರುವುದು ಕಡ್ಡಾಯವಾಗಿತ್ತು. 1941ರಿಂದ 1945ರವರೆಗೆ ಸೈನ್ಯದಲ್ಲಿದ್ದ ಅವರನ್ನು ಅಮೆರಿಕ ಸೇನೆ ಯುದ್ಧ ಕೈದಿಯಾಗಿ ಬಂಧಿಸಿತ್ತು. ಬಳಿಕ ಅಲ್ಲಿಂದ ಬಿಡುಗಡೆ ಹೊಂದಿ 1945ರಲ್ಲಿ ಸಹೋದರ ಜಾರ್ಜ್ ರ‌್ಯಾಟ್‌ಜಿಂಗರ್ ಜೊತೆಗೆ ಪುನಃ ಸೆಮಿನರಿಗೆ ಸೇರಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಕಾನ್‌ಸನ್‌ಟ್ರೇಷನ್ ಕ್ಯಾಂಪ್‌ಗಳಲ್ಲಿ ನಡೆದ ಕ್ರೌರ‌್ಯವನ್ನು ಕಂಡು ಅವರು ನಲುಗಿದ್ದರು. ಅಂತೆಯೇ ನಾಜಿ ಸೈನಿಕರು ನಡೆಸಿದ ಯೆಹೂದಿಗಳ ಸಾಮೂಹಿಕ ಹತ್ಯೆಯ ನೋವು ಅವರಲ್ಲಿ ಹೆಪ್ಪುಗಟ್ಟಿತ್ತು. ಆ ನೋವೇ ಅವರಿಗೆ ಧರ್ಮಗುರುಗಳಾಗಲು ಪ್ರೇರಣೆ ನೀಡಿತ್ತು. ವಿಶ್ವಶಾಂತಿಗಾಗಿ ತನ್ನಿಂದಾದ ಸೇವೆಯನ್ನು ಮಾಡಬೇಕೆಂದು ಮನಗಂಡ ಅವರು 1951ರಲ್ಲಿ ದೀಕ್ಷೆ ಪಡೆದು  ಧರ್ಮಗುರುಗಳಾದರು. ಧರ್ಮಶಾಸ್ತ್ರದಲ್ಲಿ ಆಳವಾದ ಅಭ್ಯಾಸ ನಡೆಸುವ ಮೂಲಕ ಪಂಡಿತರಾದರು.

ಧರ್ಮಶಾಸ್ತ್ರ ಮಾತ್ರವಲ್ಲದೆ ತತ್ವಶಾಸ್ತ್ರಕ್ಕೂ ಚಿಂತನೆಯ ಹೊಸ ಆಯಾಮಗಳನ್ನು ನೀಡುವುದರೊಂದಿಗೆ ಕೆಥೊಲಿಕ್ ಸಭೆಯ ನಂಬಿಕೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟರು. 1959ರಿಂದ 63ರವರೆಗೆ ಜರ್ಮನಿಯ ಬಾನ್ ವಿಶ್ವವಿದ್ಯಾಲಯ ಮತ್ತು ಮ್ಯೂನ್‌ಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿ, 1969ರಲ್ಲಿ ಜರ್ಮನಿಯ  ರೀಗೆನ್ಸ್‌ಬರ್ಗ್ ವಿಶ್ವವಿದ್ಯಾಲಯದ ವೈಸ್ ಪ್ರೆಸಿಡೆಂಟ್ ಹಾಗೂ ಧರ್ಮಶಾಸ್ತ್ರ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. 1977ರಲ್ಲಿ ಕಾರ್ಡಿನಲ್ ಆಗಿ ನೇಮಕಗೊಂಡ ಅವರು ಬಳಿಕ ಕೆಥೊಲಿಕ್ ಧರ್ಮಸಭೆಯ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು.

ಎರಡನೇ ಪೋಪ್ ಜಾನ್ ಪಾಲ್ ಅವರ ಹಾದಿಯಲ್ಲೇ ಮುನ್ನಡೆದ ಪೋಪ್ ಬೆನೆಡಿಕ್ಟ್ ಅವರದ್ದು ಹಳೆ  ಬೇರು ಹೊಸ ಚಿಗುರಿನ ಸಮ್ಮಿಶ್ರ ವ್ಯಕ್ತಿತ್ವ. ಧಾರ್ಮಿಕ ವಿಷಯಗಳಲ್ಲಿ ಅವರೊಬ್ಬ ಕಟ್ಟಾ ಸಂಪ್ರದಾಯವಾದಿಯಾಗಿದ್ದರೂ ಆಧುನಿಕ ವಿಚಾರಧಾರೆಗಳಿಂದ ಎಂದೂ ದೂರ ಸರಿದಿರಲಿಲ್ಲ.

ಮಹಿಳೆಯರು ಧರ್ಮಗುರುಗಳಾಗುವುದನ್ನು ಜಾನ್ ಪಾಲ್ ಅವರಂತೆಯೇ ಇವರೂ ವಿರೋಧಿಸಿದ್ದರು. ಅಂತೆಯೇ ಗರ್ಭಪಾತ, ವಿವಾಹ ಬಾಹಿರ ಸಂಬಂಧಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದರು. `ಮಾನವ ಜೀವನ ದೇವರ ಕೊಡುಗೆ. ಅದರಲ್ಲಿ ಕೃತಕ ಮಾರ್ಗಗಳು ಸಲ್ಲದು' ಎಂದು ಸಾರಿದರು.

ಐವಿಎಫ್‌ನಂತಹ ಕೃತಕ ಗರ್ಭಧಾರಣೆಯ ಮಾರ್ಗಗಳನ್ನು ತ್ಯಜಿಸಬೇಕೆಂದು ಪುನರುಚ್ಚರಿಸುತ್ತಿದ್ದ ವೇಳೆಯಲ್ಲಿಯೇ ಕೆಥೊಲಿಕ್ ಸಭೆಯ ಬೋಧನೆಗಳು ಯುವಕರನ್ನು ಹೆಚ್ಚೆಚ್ಚು ತಲುಪಲು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದ್ದರು. ಅದಕ್ಕೆಂದೇ ಟ್ವಿಟರ್‌ನಲ್ಲಿ ತಮ್ಮದೇ ಹೆಸರಿನಲ್ಲಿ ಅಕೌಂಟ್ ತೆರೆದರು.

ಯುವಜನರೊಂದಿಗೆ ಸಂವಹನಕ್ಕಾಗಿ ಎಸ್‌ಎಂಎಸ್‌ಗಳನ್ನು ಬಳಸಬೇಕೆಂದು ಅವರು ಆದೇಶಿಸಿದ್ದರು. ಧಾರ್ಮಿಕ ವಿಧಿವಿಧಾನಗಳು ಮತ್ತು ಕಟ್ಟುಕಟ್ಟಳೆಗಳ ವಿಷಯದಲ್ಲಿ ಕಟ್ಟಾ ಸಂಪ್ರದಾಯವಾದಿಯಾಗಿದ್ದರಿಂದಲೇ  ಅವರು ಅನೇಕ ವಿರೋಧಗಳನ್ನು ಎದುರಿಸಿದರು.

ಮಕ್ಕಳ ಮೇಲೆ ಧರ್ಮಗುರುಗಳು ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಪೋಪ್ ಅವರು ಬಹಿರಂಗ ಕ್ಷಮೆಯಾಚನೆ ಮಾಡಿದರು. ಪೋಪ್ ಜಾನ್ ಪಾಲ್ ಅವರ ಧಾರ್ಮಿಕ ಬೋಧನೆಗಳಲ್ಲಿ ಬೆನೆಡಿಕ್ಟ್ ಅವರ ಪ್ರಭಾವ ಬಹಳಷ್ಟಿತ್ತು. ತನ್ನಂತೆಯೇ ವಿಚಾರಧಾರೆಯನ್ನು ಹೊಂದಿದ್ದರಿಂದಲೇ ಅವರು ಬಿಷಪ್‌ಗಳ ಸಿನಡ್‌ಗಳಲ್ಲಿ ಪ್ರಸ್ತಾಪಿಸಬೇಕಾಗಿದ್ದ ವರದಿಗಳನ್ನು ತಯಾರಿಸುವ ಜವಾಬ್ದಾರಿಯನ್ನು ಪೋಪ್ ಬೆನೆಡಿಕ್ಟ್ ಅವರಿಗೇ ವಹಿಸಿದ್ದರು.
 
ಪೋಪ್ ಜಾನ್ ಪಾಲ್ ಅವರ ಕ್ಯೂಬಾ ಸಂದರ್ಶನದ ಬಳಿಕ ಕಮ್ಯುನಿಸ್ಟ್ ಸರ್ಕಾರ ಮತ್ತು ಕೆಥೊಲಿಕ್ ಸಭೆಯ ನಡುವೆ ಉತ್ತಮ ಬಾಂಧವ್ಯ ನೆಲೆಸಿತ್ತು. ಈ ಹಿನ್ನೆಲೆಯಲ್ಲಿ ಬೆನೆಡಿಕ್ಟ್ ಅವರು ವಿವಾದಗಳನ್ನು ಹುಟ್ಟುಹಾಕಲಾರರು ಎಂದೇ ನಂಬಲಾಗಿತ್ತು. ಆದರೆ ಕೆಥೊಲಿಕ್ ಸಭೆಯ ಸಾಂಪ್ರದಾಯಿಕ ಕಮ್ಯುನಿಸ್ಟ್ ವಿರೋಧಿ ನಿಲುವನ್ನೇ ಎತ್ತಿಹಿಡಿದ ಪೋಪ್ ಬೆನೆಡಿಕ್ಟ್, ಕಮ್ಯುನಿಸಂ ತತ್ವಗಳ ಆಧಾರದಲ್ಲಿ ಒಂದು ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಕ್ಯೂಬಾದಲ್ಲಿ ಕಮ್ಯುನಿಸಂ ನೆಲಕಚ್ಚಿದೆ ಎನ್ನುವ ಧೈರ್ಯ ತೋರಿದರಲ್ಲದೆ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅವರನ್ನು ಭೇಟಿ ಮಾಡುವ ಮೂಲಕ ಕ್ರಾಂತಿಗೆ ಕಾರಣರಾದರು. ಪ್ರತಿದಿನ ಮಧ್ಯಾಹ್ನ ಸುಮಾರು 15 ನಿಮಿಷಗಳ ಕಾಲ ಪಿಯಾನೊದ ಮುಂದೆ ಕಾಲಕಳೆಯುವ ಪೋಪ್ ಬೆನೆಡಿಕ್ಟ್ ಅವರು ಸಂಗೀತಪ್ರಿಯರು. ಕಂಪ್ಯೂಟರ್, ಸ್ಟೀರಿಯೊ, ಕಾರುಗಳು ಹೀಗೆ ಆಧುನಿಕ ಜಗತ್ತಿನ ಐಷಾರಾಮಿ ವಸ್ತುಗಳತ್ತ ಆರಂಭದಲ್ಲಿ ಯಾವುದೇ ಆಸಕ್ತಿಯನ್ನು ಅವರು ಪ್ರದರ್ಶಿಸಿರಲಿಲ್ಲ.

ಅಷ್ಟೇ ಏಕೆ ಪೋಪ್ ಆಗಿ ನೇಮಕಗೊಳ್ಳುವವರೆಗೆ ವಾಹನ ಚಾಲನೆಯ ಪರವಾನಿಗೆಯನ್ನೂ ಅವರು ಪಡೆದುಕೊಂಡಿರಲಿಲ್ಲವಂತೆ. ಕೆಥೊಲಿಕ್ ಸಭೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಿಷನರಿಗಳನ್ನು ನೀಡಿದ ಭಾರತ ಕೆಥೊಲಿಕ್ ಸಭೆಯ ಬಗ್ಗೆ ಪೋಪ್ ಬೆನೆಡಿಕ್ಟ್ ಅವರು ಅಪಾರ ಗೌರವ ಹೊಂದಿದ್ದರು.

ಭಾರತದ ಸಿಸ್ಟರ್ ಅಲ್ಫೋನ್ಸಾ ಅವರು ಸಂತ ಪದವಿಗೇರಿದ್ದು ಇವರ ಅಧಿಕಾರಾವಧಿಯಲ್ಲೇ. ಸೀರೋ ಮಲಬಾರ್ ಸಭೆ ಮತ್ತು ಸೀರೊ ಮಲಂಕರ ಸಭೆಯಿಂದ ತಲಾ ಒಬ್ಬೊಬ್ಬ ಕಾರ್ಡಿನಲ್‌ಗಳನ್ನು ನೇಮಿಸುವ ಮೂಲಕ ಭಾರತ ಕೆಥೊಲಿಕ್ ಸಭೆಗೆ ಜಾಗತಿಕ ಮಟ್ಟದಲ್ಲಿ ಸ್ಥಾನ ದೊರೆಯುವಂತೆ ಮಾಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.

ಇದೀಗ ರಾಜೀನಾಮೆ ನೀಡುವ ಮೂಲಕ ಇತಿಹಾಸ ಬರೆದ ಪೋಪ್ ಬೆನೆಡಿಕ್ಟ್ ಅವರ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದಕ್ಕಾಗಿ ಕಾದು ನೋಡಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT