ಕಮ್ಯುನಿಸ್ಟ್ ದೇಶವಾಗಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಇಲ್ ಅವರ ಸಾವಿನ ನಂತರ ಆಡಳಿತದ ಅನುಭವವಿಲ್ಲದ ಅವರ ಎರಡನೆಯ ಮಗ ಇಪ್ಪತ್ತೆಂಟು ವರ್ಷದ ಕಿಮ್ ಜಾಂಗ್ ಉನ್ ದೇಶದ ಹೊಸ ನಾಯಕರಾಗಿ ಅಧಿಕಾರ ವಹಿಸಿಕೊಂಡಿರುವುದು ಸಹಜವಾಗಿಯೇ ಕೊರಿಯಾ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಯಾವುದೇ ರೀತಿಯಲ್ಲಿ ನಾಯಕತ್ವದ ಗೊಂದಲ ಉಂಟಾಗದಿದ್ದುದು ಸಮಾಧಾನಕರ ವಿಷಯವಾದರೂ ಈಗಾಗಲೇ ನಿಗೂಢವಾಗಿರುವ ಉತ್ತರ ಕೊರಿಯಾದ ವಿದ್ಯಮಾನಗಳಿಗೆ ಜಾಂಗ್ ಉನ್ ಮತ್ತಷ್ಟು ನಿಗೂಢವನ್ನು ಸೇರಿಸಿದ್ದಾರೆ. ಜಾಂಗ್ ಉನ್ ಅವರ ನಡವಳಿಕೆ, ಧೋರಣೆ ಮತ್ತು ವಿಚಾರಗಳ ಬಗ್ಗೆ ಹೊರ ಜಗತ್ತಿಗೆ ಏನೇನೂ ತಿಳಿಯದಿರುವುದೇ ತಳಮಳಕ್ಕೆ ಮುಖ್ಯ ಕಾರಣ.

ಕಿಮ್ ಜಾಂಗ್ ಉನ್ ಸ್ವಿಟ್ಜರ್ಲ್ಯಾಂಡಿನಲ್ಲಿ ರಹಸ್ಯವಾಗಿ ಶಿಕ್ಷಣ ಪಡೆದು ಬಂದು ಕಳೆದ ಒಂದು ವರ್ಷದಿಂದ ತಂದೆಯ ಜೊತೆ ಕೆಲಸಮಾಡುತ್ತಿದ್ದರು ಎಂಬುದನ್ನು ಬಿಟ್ಟರೆ ಅವರ ಬಗೆಗೆ ಬಹುಶಃ ಮತ್ತಾವುದೇ ಮಾಹಿತಿ ಲಭ್ಯವಿಲ್ಲ. ಜಾಂಗ್ ಇಲ್ ಅವರು ಸತ್ತ ಎರಡು ದಿನಗಳ ನಂತರ, ಅದೂ ಸರ್ಕಾರವೇ ಅಧಿಕೃತವಾಗಿ ಪ್ರಕಟಿಸುವವರೆಗೆ ಆ ವಿಷಯ ನೆರೆಯ ದಕ್ಷಿಣ ಕೊರಿಯಕ್ಕಾಗಲಿ, ಅಮೆರಿಕಕ್ಕಾಗಲೀ, ಅಷ್ಟೇ ಏಕೆ ಮಿತ್ರ ದೇಶ ಚೀನಾಕ್ಕೂ ತಿಳಿದಿರಲಿಲ್ಲ ಎನ್ನುವುದು ವಿಚಿತ್ರವೇ ಸರಿ. ಉತ್ತರ ಕೊರಿಯಾ ಎಷ್ಟು ನಿಗೂಢವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಾರದು.

ಉತ್ತರ ಕೊರಿಯಾ ದೊಡ್ಡ ದೇಶವೇನಲ್ಲ. ಜನಸಂಖ್ಯೆ ಸುಮಾರು ಎರಡೂವರೆ ಕೋಟಿ ಅಷ್ಟೆ. ಇಷ್ಟು ಸಣ್ಣ ದೇಶ ಕೊರಿಯಾ ವಲಯದ ಎಲ್ಲ ಬಲಿಷ್ಠ ದೇಶಗಳನ್ನು ಹಲವು ದಶಕಗಳಿಂದ ಕಾಡುತ್ತ ಬಂದಿದೆ. ಜಾಂಗ್ ಇಲ್ ಸತ್ತ ಸುದ್ದಿ ಬಹಿರಂಗವಾದ ನಂತರ ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಚೀನಾ ದೇಶಗಳ ಆಡಳಿತಗಾರರು ಸಂಪರ್ಕದಲ್ಲಿದ್ದಾರೆ.

ಪರಮಾಣು ಅಸ್ತ್ರಗಳಿರುವ ಉತ್ತರ ಕೊರಿಯಾದಲ್ಲಿ ಅಧಿಕಾರ ಹಸ್ತಾಂತರ ಮತ್ತು ರಾಜಕೀಯ ಬದಲಾವಣೆಗಳು ಹೇಗೆ ಆಗುತ್ತಿವೆ ಎನ್ನುವುದನ್ನು ಅವರು ಬಿಟ್ಟ ಕಣ್ಣು ಮುಚ್ಚದಂತೆ ಗಮನಿಸುತ್ತಿದ್ದಾರೆ. ಎರಡೂ ಕೊರಿಯಾಗಳ ನಡುವೆ ಈ ಹಿಂದೆ ನಡೆದ ಯುದ್ಧದ ಕಿಡಿ ಆರಿಲ್ಲದಿರುವುದೇ ಇದಕ್ಕೆ ಕಾರಣ.

ಎರಡನೆಯ ಮಹಾಯುದ್ಧ ಅಂತ್ಯಗೊಂಡ ಸಂದರ್ಭದಲ್ಲಿ ಕೊರಿಯಾದ (ಉತ್ತರ) ಕೆಲ ಭಾಗಗಳು ಸೋವಿಯತ್ ಸೇನೆಯ ವಶದಲ್ಲಿತ್ತು. ಕೆಲ ಭಾಗ (ದಕ್ಷಿಣ) ಅಮೆರಿಕದ ಸೇನೆಯ ವಶದಲ್ಲಿತ್ತು. ಯುದ್ಧ ಅಂತ್ಯವಾದ ನಂತರ ಆ ಎರಡೂ ದೇಶಗಳು ಸ್ಥಳೀಯ ನಾಯಕರ ಆಡಳಿತ ಸಮಿತಿಗಳನ್ನು ರಚಿಸಿ ತಮ್ಮ ಸೇನೆಗಳನ್ನು ವಾಪಸ್ ಪಡೆದವು.

ಆದರೆ ಆ ಪ್ರದೇಶಗಳ ಮೇಲೆ ತಮ್ಮ ಹಿಡಿತ ಸಡಿಲಿಸಲಿಲ್ಲ. ಅಮೆರಿಕದ ಪ್ರಭಾವದಿಂದಾಗಿ ದಕ್ಷ್ಷಿಣ ಕೊರಿಯಾ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಬೆಳೆಯಿತು. ಉತ್ತರ ಕೊರಿಯಾ ಸೋವಿಯತ್ ಒಕ್ಕೂಟದ ಆಗಿನ ನಾಯಕ ಜೋಸೆಫ್ ಸ್ಟಾಲಿನ್ನ ಕಮ್ಯುನಿಸಂ ಮಾದರಿಯನ್ನು ಅನುಸರಿಸಿತು. ದಕ್ಷಿಣ ಕೊರಿಯಾ ಪ್ರತ್ಯೇಕ ದೇಶವಾಗಿರುವುದನ್ನು ಉತ್ತರ ಕೊರಿಯಾದ ಆಗಿನ ನಾಯಕ ಎರಡನೆಯ ಕಿಮ್ ಸಂಗ್ ಸಹಿಸಲಿಲ್ಲ.

ದಕ್ಷಿಣ ಕೊರಿಯಾವನ್ನು ಆಕ್ರಮಿಸಿಕೊಳ್ಳಲು ಸಿದ್ಧತೆ ನಡೆಸಿದರು. ಆ ಆಲೋಚನೆಗೆ ಸ್ಟಾಲಿನ್ ನೈತಿಕ ಬೆಂಬಲ ನೀಡಿದರೇ ಹೊರತು ಸೈನ್ಯ ಕಳುಹಿಸಲು ಒಪ್ಪಲಿಲ್ಲ. ಕಿಮ್ ಸಂಗ್ ಸುಮ್ಮನಿರಲಿಲ್ಲ. ಚೀನಾ ನಾಯಕ ಮಾವೋತ್ಸೆ ತುಂಗ್ ಬೆಂಬಲ ಕೋರಿದರು.

ಕಮ್ಯುನಿಸಂ ವಿಸ್ತರಿಸುವ ಅವಕಾಶವೆಂದು ಭಾವಿಸಿದ ಮಾವೋ ಅವರು ಕಿಮ್ ಸಂಗ್ಗೆ ಎಲ್ಲ ನೆರವು ನೀಡಲು ಮುಂದಾದರು. 1950ರಲ್ಲಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಿತು. ಇದು ಭೀಕರ ಯುದ್ಧಕ್ಕೆ ಕಾರಣವಾಯಿತು. ಇದೇ ಕಾರಣವಾಗಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ ಆರಂಭವಾಯಿತು.

ವಾಸ್ತವವಾಗಿ ವಿಶ್ವಸಂಸ್ಥೆ ನೇತೃತ್ವದ ಅಂದರೆ ಅಮೆರಿಕದ ಸೇನೆ ದಕ್ಷಿಣ ಕೊರಿಯಾ ಬೆಂಬಲಕ್ಕೆ ನಿಂತರೆ ಉತ್ತರ ಕೊರಿಯಾಕ್ಕೆ ನೆರೆಯ ಮಾವೋ ನಾಯಕತ್ವದ ಚೀನಾ ಬೆಂಬಲವಾಗಿ ನಿಂತಿತು. ಚೀನಾ ತನ್ನ ಪ್ರಬಲ ಸೇನೆಯನ್ನೇ ಯುದ್ಧಕ್ಕಿಳಿಸಿತು.

ಸೋವಿಯತ್ ಒಕ್ಕೂಟ ಯುದ್ಧಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಮಾತ್ರ ಪೂರೈಸಿತು.
1953ರಲ್ಲಿ ಅಂತ್ಯವಾದ ಈ ಯುದ್ಧದಲ್ಲಿ ಸತ್ತವರ ಸಂಖ್ಯೆ ಹನ್ನೆರಡು ಲಕ್ಷಕ್ಕೂ ಹೆಚ್ಚು.

ಮಾವೋ ಅವರ ಪುತ್ರ ಕೂಡಾ ಈ ಯುದ್ಧದಲ್ಲಿ ಸತ್ತವರಲ್ಲಿ ಒಬ್ಬರು. ಅಪಾರ ಪ್ರಮಾಣದ ಸಾವು, ನೋವು ಹಾನಿಯನ್ನು ಗಮನಿಸಿ ಯುದ್ಧ ನಿಲ್ಲಿಸಲು ಸಂಬಂಧಿಸಿದ ದೇಶಗಳೇ ಮುಂದಾದವು.

ಶಾಂತಿ ಒಪ್ಪಂದ ಆಗಲಿಲ್ಲ. ಹೀಗಾಗಿ ಯುದ್ಧ ಅಂತ್ಯವಾದರೂ ವೈಮನಸ್ಸು ಅಳಿಯಲಿಲ್ಲ. ಪರಸ್ಪರ ವಿಶ್ವಾಸ ಇಲ್ಲದ್ದರಿಂದಾಗಿ ಎರಡೂ ದೇಶಗಳು ತಮ್ಮ ಗಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ದಾಸ್ತಾನು ಮಾಡಿವೆ. ಲಕ್ಷಾಂತರ ಸೈನಿಕರನ್ನು ನಿಲ್ಲಿಸಲಾಗಿದೆ. ಕೊರಿಯಾ ದ್ವೀಪಕಲ್ಪದಲ್ಲಿ ಮಿಲಿಟರಿ ಸಂಘರ್ಷದ ವಾತಾವರಣ ಸದಾ ಕಾಡುತ್ತ ಬಂದಿದೆ.

ಆದರೂ ಎರಡೂ ಕೊರಿಯಾಗಳು ಒಂದಾಗುವ ದಿಸೆಯಲ್ಲಿ ಮಾತುಕತೆಗಳು ನಡೆಯುತ್ತ ಬಂದಿವೆ. ಅಹಿತಕರ ಘಟನೆಗಳೂ ನಡೆಯುತ್ತಿವೆ. ಸಮುದ್ರದ ಗಡಿ ದಾಟಿದ ಆರೋಪದ ಮೇಲೆ ಕಳೆದ ವರ್ಷ ದಕ್ಷಿಣ ಕೊರಿಯಾದ ನೌಕಾದಳದ ನೌಕೆಯೊಂದನ್ನು ಉತ್ತರ ಕೊರಿಯಾದ ನೌಕಾದಳ ಮುಳುಗಿಸಿದ ಘಟನೆ ಮತ್ತು ಗಡಿಯಲ್ಲಿರುವ ದ್ವೀಪವೊಂದರ ಮೇಲೆ ನಡೆಸಿದ ಗುಂಡಿನ ದಾಳಿ ಸಂಘರ್ಷದ ವಾತಾವರಣಕ್ಕೆ ಕಾರಣವಾಗಿತ್ತು.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಉತ್ತರ ಕೊರಿಯಾ ಕಿಮ್ ಜಾಂಗ್ ಇಲ್ ಸಾವಿನಿಂದ ಮತ್ತಷ್ಟು ಸಂಕಷ್ಟಕ್ಕೆ ಹೊರಳಿರುವಂತಿದೆ. ಅನುಭವವಿಲ್ಲದ ಅವರ ಮಗ ಜಾಂಗ್ ಉನ್ ಅಧಿಕಾರ ವಹಿಸಿಕೊಂಡಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಂಥ ಸಾಮರ್ಥ್ಯ ಅವರಲ್ಲಿ ಇದೆಯೇ ಎಂಬ ಬಗ್ಗೆ ಅನುಮಾನಗಳಿವೆ. ಅಕಸ್ಮಾತ್ ದೇಶ ಅರಾಜಕತೆಯತ್ತ ಹೊರಳಿದ ಸನ್ನಿವೇಶದಲ್ಲಿ ಅದರ ಹೊಡೆತ ಬೀಳುವುದು ದಕ್ಷಿಣ ಕೊರಿಯಾ ಮತ್ತು ಚೀನಾದ ಮೇಲೆ. ಇದು ಒಂದು ರೀತಿಯ ಸಮಸ್ಯೆಯಾದರೆ ಮತ್ತೊಂದು ರೀತಿಯ ಸಮಸ್ಯೆ ಉತ್ತರ ಕೊರಿಯದಲ್ಲಿರುವ ಪರಮಾಣು ಅಸ್ತ್ರಗಳದ್ದು.

ಉತ್ತರ ಕೊರಿಯಾ ಪರಮಾಣು ತಂತ್ರಜ್ಞಾನ ಪಡೆಯದಂತೆ ಮಾಡಲು ಅಮೆರಿಕ ಹಲವು ದಶಕಗಳಿಂದ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಕೊನೆಗೂ ರಹಸ್ಯವಾಗಿ ಅದು ಪರಮಾಣು ಅಸ್ತ್ರಗಳನ್ನು ನಿರ್ಮಿಸುವಲ್ಲಿ ಸಫಲವಾಗಿದೆ. ಈಗಲೂ ಪರಮಾಣು ಶಕ್ತಿ ಸ್ಥಾವರಗಳನ್ನು ನಿಷ್ಕ್ರಿಯಗೊಳಿಸಲು ಅಂತರರಾಷ್ಟ್ರೀಯ ಯತ್ನಗಳು ನಡೆಯುತ್ತಲೇ ಇವೆ.

ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆ ಆರ್ಥಿಕ ನಿರ್ಬಂಧಗಳಿವೆ. ವಿಶ್ವದಲ್ಲಿ ಕಮ್ಯುನಿಸಂ ಕುಸಿದ ಮೇಲೆ ಉತ್ತರ ಕೊರಿಯಾ ಒಂಟಿಯಾಗಿದೆ. ಚೀನಾ ಬಿಟ್ಟರೆ ಯಾವುದೇ ದೇಶದ ಜೊತೆ ಅದಕ್ಕೆ ಬಾಂಧವ್ಯವಿಲ್ಲ. ಉತ್ತರ ಕೊರಿಯಾಕ್ಕೆ ಬೇಕಾದ್ದೆಲ್ಲವನ್ನು ಕೊಡುವ ಸ್ಥಿತಿಯಲ್ಲಿ ಚೀನಾ ಕೂಡಾ ಇಲ್ಲ. ಹೀಗಾಗಿ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದೆ.

ಈ ಸಂದರ್ಭ ಬಳಸಿಕೊಂಡು ಪರಮಾಣು ಶಕ್ತಿ ತಂತ್ರಜ್ಞಾನ ಸ್ಥಾವರಗಳನ್ನು ಬಂದ್ ಮಾಡಿದರೆ ಅಗತ್ಯ ಆಹಾರ, ಇಂಧನ ಮತ್ತಿತರೆ ವಸ್ತುಗಳನ್ನು ಕೊಡುವುದಾಗಿ ಅಮೆರಿಕ, ದಕ್ಷಿಣ ಕೊರಿಯಾ ಹೇಳುತ್ತಿವೆ. ಒಮ್ಮೆ ಹಾಗೆ ನೆರವು ನೀಡಲಾಗಿದೆ ಕೂಡ. ಒಂದು ಒಪ್ಪಂದಕ್ಕೆ ಬರುವ ದಿಸೆಯಲ್ಲಿ ಮಾತುಕತೆ ನಡೆಸಲು ಒತ್ತಡ ಹೇರಲಾಗುತ್ತಿದೆ.

ಕೊರಿಯಾ ವಲಯದ ಎಲ್ಲ ದೇಶಗಳ ಪ್ರತಿನಿಧಿಗಳು ಇರುವ (ಚೀನಾ, ದಕ್ಷಿಣ ಕೊರಿಯಾ, ರಷ್ಯಾ, ಉತ್ತರ ಕೊರಿಯಾ, ಅಮೆರಿಕ) ಉನ್ನತ ಸಮಿತಿಯೊಂದನ್ನು ರಚಿಸಿ ಮಾತುಕತೆ ನಡೆಯಬೇಕೆಂದು ಅಮೆರಿಕ ಒತ್ತಾಯಿಸುತ್ತಿದೆ. ಆದರೆ ಅದಕ್ಕೆ ಉತ್ತರ ಕೊರಿಯಾ ಒಪ್ಪುತ್ತಿಲ್ಲ. ನೇರವಾಗಿ ಅಮೆರಿಕದ ಜೊತೆಗೆ ಮಾತ್ರ ಮಾತುಕತೆ ನಡೆಸುವುದಾಗಿ ಉತ್ತರ ಕೊರಿಯಾ ನಾಯಕರು ಹೇಳುತ್ತ ಬಂದಿದ್ದಾರೆ.

ಉತ್ತರ ಕೊರಿಯಾಕ್ಕೆ ಇರುವ ಒಂದೇ ಮಿತ್ರ ದೇಶ ಚೀನಾ. ಹೀಗಾಗಿ ಉತ್ತರ ಕೊರಿಯಾ ಮಾತುಕತೆಗೆ ಬರುವಂತೆ ಮಾಡಲು ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಚೀನಾದ ಮೇಲೆ ಒತ್ತಡ ಹೇರುತ್ತಿವೆ.

ಈ ಹಿಂದೆ ಒಂದೆರಡು ಬಾರಿ ಚೀನಾ ಮಧ್ಯ ಪ್ರವೇಶದಿಂದಾಗಿ ಕೊರಿಯಾ ವಲಯದಲ್ಲಿ ನಿರ್ಮಾಣವಾಗಿದ್ದ ಸಂಘರ್ಷದ ವಾತಾವರಣ ತಿಳಿಯಾಗಿದ್ದಿದೆ. ಆದರೆ ಪರಮಾಣು ಶಕ್ತಿ ಸ್ಥಾವರಗಳನ್ನು ನಿಷ್ಕ್ರಿಯಗೊಳಿಸುವ ವಿಚಾರದಲ್ಲಿ ಉತ್ತರ ಕೊರಿಯಾದ ನಾಯಕರು ಚೀನಾದ ನಾಯಕರ ಮಾತನ್ನೂ ಕೇಳುತ್ತಿಲ್ಲ.

ಪರಮಾಣು ತಂತ್ರಜ್ಞಾನವನ್ನು ದಾಳವಾಗಿ ಬಳಸಿಕೊಂಡು ಅಗತ್ಯ ಬಿದ್ದಾಗಲೆಲ್ಲಾ ನೆರವು ಪಡೆಯುವುದು ಉತ್ತರ ಕೊರಿಯಾದ ತಂತ್ರವಾಗಿರುವಂತಿದೆ ಎಂದು ಅಮೆರಿಕ ಆರೋಪಿಸುತ್ತಿದೆ.

ನಿಗೂಢ ಅನ್ನಿಸಿದರೂ ಅಪಾಯದ ದಾರಿ ತುಳಿಯದೆ ಪರಿಸ್ಥಿತಿ ನಿಭಾಯಿಸಿದ ಕಿಮ್ ಜಾಂಗ್ ಈಗ ಇಲ್ಲ. ಅವರ ಸ್ಥಾನದಲ್ಲಿ ಯುವಕ ಜಾಂಗ್ ಉನ್ ಕುಳಿತಿದ್ದಾರೆ. ಆದರೆ ಅವರ ತಂದೆಗೆ ಸಲಹೆ ನೀಡುತ್ತಿದ್ದ ಜಾಂಗ್ ಸಂಗ್ ಥಾಕ್ ಮತ್ತು ಮಿಲಿಟರಿ ಮುಖ್ಯಸ್ಥ ರಿಯಾಂಗ್ ಹೂ ಜಾಂಗ್ ಉನ್ಗೆ ನೆರವಾಗಲಿದ್ದಾರೆ. ಕೆಟ್ಟದ್ದೇನೂ ಆಗಲಾರದು.

ಕಮ್ಯುನಿಸ್ಟ್ ನಾಯಕರನ್ನು ಗೇಲಿಮಾಡುವುದು ಮತ್ತು ಅವರಿಂದ ವಿಶ್ವಕ್ಕೇ ಅಪಾಯ ಎಂದು ಕೂಗುವುದು ಬಂಡವಾಳ ಶಾಹಿ ಅಮೆರಿಕ ಮತ್ತು ಪಾಶ್ಚಾತ್ಯ ಮಾಧ್ಯಮಗಳ ಗೀಳು. ಉತ್ತರ ಕೊರಿಯಾ ನಾಯಕರ ವಿಚಾರದಲ್ಲಿಯೂ ಹಾಗೇ ಆಗಿದೆ. ಉತ್ತರ ಕೊರಿಯಾದಿಂದ ಆಗಬಾರದ ಅನಾಹುತ ಆಗಬಹುದು ಎಂಬ ಅಮೆರಿಕದ ಭೀತಿ ಕೇವಲ ಭ್ರಮೆ ಆಗಿರಬಹುದಾದ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.