ಪ್ರಬಲ ಚಂಡಮಾರುತ ಬೀಸುವಾಗ ಥಟ್ಟನೆ ಒಂದು ಬೆಂಕಿ ಕಡ್ಡಿ ಗೀರಿದರೆ ಏನಾಗುತ್ತದೆ? ಇದೆಂಥ ಮೂರ್ಖ ಪ್ರಶ್ನೆ ಎಂದು ದೊಡ್ಡವರಿರಲಿ; ಚಿಕ್ಕ ಮಕ್ಕಳೂ ನಕ್ಕು ಬಿಡಬಹುದು. ಇನ್ನು ಮುಂದೆ ಅಂತಹ ಪ್ರಶ್ನೆ ಎದುರಾದರೆ ನಗಬೇಕಿಲ್ಲ. ಹೌದು, lighting a match stick in hurricane ಎಂಬ ಆಂಗ್ಲ ನುಡಿಗಟ್ಟಿನಂತೆ, ಆ ಹಂತವನ್ನು ದಾಟಿ ಪ್ರಬಲ ಚಂಡಮಾರುತವನ್ನು ಎದುರಿಸಿ ಬೆಂಕಿಯ ಕಿಡಿ ಪ್ರಜ್ವಲಿಸಿ, ಸುಸ್ಥಿರಗೊಳ್ಳುವಂತೆ ಮಾಡಿ ಮುನ್ನುಗ್ಗುವ ತಂತ್ರಜ್ಞಾನವೇ ‘ಸ್ಕ್ರಾಮ್‌ಜೆಟ್’. ಪ್ರಚಂಡ ವೇಗದಲ್ಲಿ ಉಸಿರು ಎಳೆದುಕೊಳ್ಳುತ್ತಾ, ಇಂಧನವನ್ನು ದಹಿಸಿ, ಚೈತನ್ಯವನ್ನು ತುಂಬಿ ಬಾಹ್ಯಾಕಾಶ ನೌಕೆಯನ್ನು ಮುನ್ನುಗ್ಗುವಂತೆ ಮಾಡುವ ‘ಶ್ವಾಸಕೋಶ’ವಿದು ಎನ್ನಬಹುದು.

ಶಬ್ದದ ವೇಗಕ್ಕಿಂತ ಹಲವು ಪಟ್ಟು ವೇಗದಲ್ಲಿ ರಾಕೆಟ್ ಸಾಗುವಂತೆ ಮಾಡುವ ಎಂಜಿನ್ ಇದು. ಸರಳ ಎನಿಸಿದರೂ ಅತ್ಯಂತ ಸಂಕೀರ್ಣ ತಂತ್ರಜ್ಞಾನ.
ಸ್ಕ್ರಾಮ್‌ಜೆಟ್ ಪ್ರೊಪೆಲ್ಷನ್ ಅಥವಾ ನೋದನಾ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಸೇನಾ ಬತ್ತಳಿಕೆಯ ಕ್ರೂಸ್ ಮಿಸೈಲ್ ಎಂಬ ‘ಬ್ರಹ್ಮಾಸ್ತ್ರ’ವನ್ನು ತಯಾರಿಸಬಹುದು.

ಅಲ್ಲದೆ, ಭವಿಷ್ಯದಲ್ಲಿ ರಾಕೆಟ್‌ಗಳು ಬೆಳಿಗ್ಗೆ ಉಡಾವಣೆಗೊಂಡು ಭೂಸ್ಥಾಯಿ ಕಕ್ಷೆಗೆ ತೆರಳಿ, ಕಕ್ಷೆಯಲ್ಲಿ ಉಪಗ್ರಹ ಕೂರಿಸಿ ಸಂಜೆಗೆ ಮರಳಿ ಬಂದು, ಮಾರನೇ ದಿನ ಮತ್ತೊಂದು ಉಪಗ್ರಹ ಒಯ್ಯಲು ಅಣಿಯಾಗಬಲ್ಲವು. ಇವೆಲ್ಲ ಸಾಕಾರಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ಆದರೆ, ಇದಕ್ಕೆ ಬೇಕಾಗುವ ತಂತ್ರಜ್ಞಾನದ ಮೂಲ ತತ್ವ ಸಿದ್ಧಿಸಿಕೊಳ್ಳುವಲ್ಲಿ ಭಾರತೀಯ ವಿಜ್ಞಾನಿಗಳು ಇದೀಗ ಯಶಸ್ವಿಯಾಗಿದ್ದಾರೆ. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆ.

ಈ ಅದ್ಭುತ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುತ್ತಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ತಂತ್ರಜ್ಞಾನದ ರೂವಾರಿ ಯಾರೆಂಬುದನ್ನು ಪತ್ತೆ ಮಾಡಲು ಹೊರಟಾಗ, ಇಸ್ರೊ ವಿಜ್ಞಾನಿಗಳು ಬೊಟ್ಟು ಮಾಡಿದ್ದು ಹಿರಿಯ ವಿಜ್ಞಾನಿ, ಕನ್ನಡಿಗ ಡಾ. ಬಿ.ಎನ್.ಸುರೇಶ್ ಅವರತ್ತ. ಆದರೆ, ಸುರೇಶ್ ಅವರು ಆ ‘ಕೀರ್ತಿಯ ಕಿರೀಟ’ ತಮ್ಮದೆಂದು ಹೇಳಿಕೊಳ್ಳಲು ಖಡಾಖಂಡಿತ ನಿರಾಕರಿಸಿದ್ದು ಮಾತ್ರವಲ್ಲದೆ.

‘ಅದು ಸಮಸ್ತ ಇಸ್ರೊ ವಿಜ್ಞಾನಿ ಸಮುದಾಯಕ್ಕೆ ಸಲ್ಲುತ್ತದೆ’ ಎಂದರು. ಯಾವುದೇ ಕಾರಣಕ್ಕೂ ‘ನಾನೇ ಕಾರಣಕರ್ತ ಎಂಬಂತೆ ಬರೆಯಬೇಡಿ’ ಎಂದೂ ತಾಕೀತು ಮಾಡಿದರು. ಸ್ಕ್ರಾಮ್‌ಜೆಟ್ ತಂತ್ರಜ್ಞಾನದ ಕ್ಷಮತೆ, ಸಾಧ್ಯತೆ ಮತ್ತು ದೇಶಕ್ಕೆ ಅದರ ಪ್ರಯೋಜನ ಏನು ಎಂಬುದರ ಮಾಹಿತಿಯನ್ನು ಡಾ. ಸುರೇಶ್ ಅವರು ‘ಪ್ರಜಾವಾಣಿ’ಗೆ ಹಂಚಿಕೊಂಡರು.

‘ನಾನು ತಿರುವನಂತಪುರ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕನಾಗಿದ್ದಾಗ ಸ್ಕ್ರಾಮ್‌ಜೆಟ್ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ ಆರಂಭಗೊಂಡಿತು ಎಂಬುದು ನಿಜ. ಆದರೆ, ಇಡೀ ಯೋಜನೆಯ ಕೀರ್ತಿ ನನಗೊಬ್ಬನಿಗೆ ಸೇರುವುದಿಲ್ಲ, ಇದರಲ್ಲಿ ಸಾಕಷ್ಟು ಜನರ ಶ್ರಮ ಇದೆ’ ಎನ್ನುತ್ತಲೇ ಸ್ಕ್ರಾಮ್‌ಜೆಟ್ ಅದ್ಭುತ ಸಾಧ್ಯತೆಯನ್ನು ವಿನಯದಿಂದಲೇ ವಿವರಿಸಿದರು.

ನಭಕ್ಕೆ ಉಪಗ್ರಹಗಳನ್ನು ಹೆಗಲ ಮೇಲೆ ಹೊತ್ತೊಯ್ಯುವ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ಗಳಲ್ಲಿ ನೋದನ ಇಂಧನವು (ಪ್ರೊಪೆಲ್ಷನ್ ಫ್ಯೂಯೆಲ್) ಘನ ಅಥವಾ ದ್ರವ ರೂಪದಲ್ಲಿ ಇದ್ದು, ಅವುಗಳ ತೂಕವೇ ಹೆಚ್ಚಾಗಿರುತ್ತದೆ. ಆಮ್ಲಜನಕ ಇಲ್ಲದೆ ಯಾವುದೇ ಇಂಧನವೂ ಕೆಲಸ ಮಾಡುವುದಿಲ್ಲ. ರಾಕೆಟ್‌ಗಳಲ್ಲಿ ಜಲಜನಕವನ್ನೇ ಪ್ರಧಾನ ಇಂಧನವನ್ನಾಗಿ ಬಳಸಲಾಗುತ್ತದೆ.

ಆಮ್ಲಜನಕವು ಜಲಜನಕದ ಜೊತೆ ಮಿಶ್ರಣಗೊಂಡಾಗಲೇ ಇಂಧನವಾಗಿ ಕೆಲಸ ಮಾಡುತ್ತದೆ. ಸ್ಕ್ರಾಮ್‌ಜೆಟ್ ಎಂಜಿನ್‌ನ ವಿಶೇಷವೆಂದರೆ, ಆಮ್ಲಜನಕವನ್ನು ವಾತಾವರಣದಿಂದ ಅದು ಹೀರಿಕೊಳ್ಳುತ್ತದೆ. ಜಲಜನಕದ ಜೊತೆಗೆ ಮಿಶ್ರಣಗೊಳಿಸಿ ದಹಿಸುತ್ತದೆ. ಇದರಿಂದಾಗಿ ರಾಕೆಟ್ ಪ್ರತ್ಯೇಕವಾಗಿ ಆಮ್ಲಜನಕದ ಹೊರೆ ಒಯ್ಯಬೇಕಾಗುವುದಿಲ್ಲ. ಆಮ್ಲಜನಕ ರಹಿತ ರಾಕೆಟ್ ತೀರಾ ಹಗುರವಾಗುತ್ತದೆ. ಇದೇ ಪ್ಲಸ್ ಪಾಯಿಂಟ್.

ಈಗ ಕಾರ್ಯಾಚರಣೆಯಲ್ಲಿರುವ ಪಿಎಸ್‌ಎಲ್‌ವಿ ಅಥವಾ ಜಿಎಸ್‌ಎಲ್‌ವಿಯು 1 ಮ್ಯಾಕ್ ವೇಗದಲ್ಲಿ (ಶಬ್ದದ ವೇಗ) ಸಾಗುತ್ತದೆ. ಆದರೆ, ಸ್ಕ್ರಾಮ್ ಜೆಟ್ ಎಂಜಿನ್‌ನ ಆರಂಭದ ವೇಗವೇ ಮ್ಯಾಕ್ 5 ಅಥವಾ 6 ಆಗಿರುತ್ತದೆ. ಅಂದರೆ, ಪ್ರಚಂಡ ವೇಗ ಮತ್ತು ಶಕ್ತಿಯ ಮೂಲಕ ಉಪಗ್ರಹಗಳನ್ನು ರಾಕೆಟ್ ಒಯ್ಯುತ್ತದೆ.

ಇಲ್ಲಿಯವರೆಗೆ ಅಮೆರಿಕ ಮತ್ತು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಗಳು ಈ ಸಾಧನೆ ಮಾಡಿದ್ದವು. ರಷ್ಯಾ ಕೂಡ ಮಾಡಿದೆ ಎಂದು ಹೇಳಿಕೊಂಡರೂ ಪರೀಕ್ಷೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲ. ‘ನಮ್ಮ ಪ್ರಯೋಗ ಒಳ್ಳೆ ಫಲಿತಾಂಶವನ್ನು ನೀಡಿದೆ. ದಹನ ಕ್ರಿಯೆ, ಒತ್ತಡ ಸೃಷ್ಟಿ ಮತ್ತು ಐದು ಸೆಕೆಂಡುಗಳ ಹಾರಾಟವು ಯೋಜನಾಬದ್ಧವಾಗಿಯೇ ನಡೆದಿದೆ’ ಎಂಬ ತೃಪ್ತಿಯ ಮಂದಹಾಸ ಸುರೇಶ್ ಅವರದು.

‘ಸ್ಕ್ರಾಮ್‌ಜೆಟ್ ತಂತ್ರಜ್ಞಾನಕ್ಕೆ ಮರುಬಳಕೆಯ ವಾಹನ (ರೀ ಯೂಸಬಲ್ ವೆಹಿಕಲ್) ಜೋಡಿಸಿ ಬಳಸಿದರೆ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಹುದು. ಭಾರತ ಸಾಕಷ್ಟು ಹಣವನ್ನೂ ಉಳಿಸಬಹುದು. ಈಗ ಒಂದು ಕೆ.ಜಿ ತೂಕದ (ಉಪಗ್ರಹ) ಉಡಾವಣೆಗೆ ಸುಮಾರು ₹10 ಲಕ್ಷದಿಂದ 14 ಲಕ್ಷ (15 ಸಾವಿರದಿಂದ 20 ಸಾವಿರ ಡಾಲರ್‌ಗಳು) ಆಗುತ್ತದೆ. ಸ್ಕ್ರಾಮ್‌ಜೆಟ್ ಮತ್ತು ಆರ್‌ಯುವಿ ಬಳಸಿದರೆ ಆ ವೆಚ್ಚವು ಒಂದು ಕೆ.ಜಿಗೆ ಸುಮಾರು ₹1.5 ಲಕ್ಷದಿಂದ ₹ 2 ಲಕ್ಷಕ್ಕೆ (5 ಸಾವಿರದಿಂದ 6 ಸಾವಿರ ಡಾಲರ್) ಇಳಿಯುತ್ತದೆ’ ಎನ್ನುವ ಲೆಕ್ಕಾಚಾರ ಅವರದು.

‘ಇದನ್ನು ಕೇವಲ ಭೂ ವಾತಾವರಣದಲ್ಲಿ ಬಳಸಲು ಸಾಧ್ಯ. ಅದರಿಂದ ಆಚೆಗೆ ಒಯ್ಯಲು ಸಾಧ್ಯವಿಲ್ಲ. ಬಾಹ್ಯಾಕಾಶ ಟೂರಿಸಂನಂತಹ ಕಾರ್ಯಕ್ರಮಗಳಿಗಂತೂ ಬಳಸಲು ಸಾಧ್ಯವಿಲ್ಲ. ಭೂಮಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ಊಹಾತೀತ ವೇಗದಲ್ಲಿ ಸಾಗುವ ಕ್ರೂಸ್ ಕ್ಷಿಪಣಿಗಳನ್ನು ತಯಾರಿಸಬಹುದು. ಹೈದ್ರಾಬಾದ್‌ನಲ್ಲಿ ರಕ್ಷಣಾ ಇಲಾಖೆಯಿಂದ ಇದರ ಸಂಶೋಧನೆ ಮತ್ತು ಅಭಿವೃದ್ಧಿಯೂ ನಡೆದಿದೆ’ ಎಂಬುದಾಗಿ ಹೇಳಿದರು.

‘ನಾವು ಎಂಜಿನ್ ಪರೀಕ್ಷೆಗಾಗಿ ರಾಕೆಟ್‌ನ ವಿನ್ಯಾಸವನ್ನು ಕೊಂಚ ಬದಲಾವಣೆ ಮಾಡಿದ್ದೆವು. ರಾಕೆಟ್‌ನ ಎರಡೂ ಬದಿಯಲ್ಲಿ ಅವಳಿ ಸ್ಕ್ರಾಮ್‌ಜೆಟ್ ಎಂಜಿನ್‌ಗಳನ್ನು ಅಳವಡಿಸಿದೆವು. ರಾಕೆಟ್‌ನ ಎರಡನೇ ಹಂತದ ಬೂಸ್ಟರ್‌ನ ದಹನ ಮುಗಿಯುತ್ತಿದ್ದಂತೆ ಸ್ಕ್ರಾಮ್‌ಜೆಟ್ ಆನ್ ಮಾಡಲಾಯಿತು. ಮ್ಯಾಕ್ 5ರ ವೇಗದಲ್ಲಿ ದಹನ ಕ್ರಿಯೆ ಆರಂಭಗೊಂಡು ಐದು ಸೆಕೆಂಡ್‌ಗಳಷ್ಟು ಕಾರ್ಯ ನಿರ್ವಹಿಸಿತು. ನಮ್ಮ ಯೋಜನೆಯಂತೆ ಎಲ್ಲವೂ ಚಾಚೂ ತಪ್ಪದೆ ನಡೆಯಿತು’.

‘ತಿರುವನಂತಪುರ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕನಾಗಿದ್ದಾಗ 2002ರಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಲಾಗಿತ್ತು. ಕಡಿಮೆ ವೆಚ್ಚದಲ್ಲಿ ಹಂತಹಂತವಾಗಿ ಅಭಿವೃದ್ಧಿಪಡಿಸುವ ನಮ್ಮ ಉದ್ದೇಶ ಫಲ ನೀಡಿದೆ. ಇಲ್ಲವಾದಲ್ಲಿ ಅಮೆರಿಕದ ‘ಸ್ಪೇಸ್ ಎಕ್ಸ್’ನಂತೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಚಂದ್ರಯಾನ–1ರಲ್ಲಿ ಸಾಕಷ್ಟು ಪಾಠ ಕಲಿತು ಅದನ್ನು ಮಂಗಳಯಾನದಲ್ಲಿ ಬಳಸಿದ್ದರಿಂದ ಮಂಗಳ ನೌಕೆಯು ಇನ್ನೂ ಕಾರ್ಯ ನಿರ್ವಹಿಸುತ್ತಿದೆ’ ಎಂಬ ಅನುಭವದ ನುಡಿ ಅವರದು.

‘ಮಾನವ ಸಹಿತ ಯಾನ’ದ ಕ್ಯಾಪ್ಸೂಲ್ ನಿರ್ಮಾಣದ ಯೋಜನೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ, ಅದರ ಉಡಾವಣೆ ಮತ್ತು 10 ದಿನಗಳ ಹಾರಾಟದ ಬಳಿಕ ಕ್ಯಾಪ್ಸೂಲ್ ಮರುವಶದ ಉಸ್ತುವಾರಿ ಯಶಸ್ವಿಯಾಗಿ ನೋಡಿಕೊಂಡಿದ್ದರು. ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿಗಳ ವಿನ್ಯಾಸ ಮತ್ತು ನಿಯಂತ್ರಣ ಕಾರ್ಯದಲ್ಲಿ ಬಹಳಷ್ಟು ವರ್ಷಗಳ ಶ್ರಮ ಸುರೇಶ್ ಅವರದು.

ಕುಗ್ರಾಮದಿಂದ ‘ಸ್ಕ್ರಾಮ್‌ಜೆಟ್’ವರೆಗೆ...
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು 50ರ ದಶಕದ ಆಸುಪಾಸಿನಲ್ಲಿ ‘ಮಲೇರಿಯಾ ಕೊಂಪೆ’ ಎನಿಸಿಕೊಂಡಿತ್ತು. ‘ತಪ್ಪು ಮಾಡಿದವನಿಗೆ ಕೊಪ್ಪಕ್ಕೆ ಹಾಕು’ ಎಂಬ ಮಾತಿನಂತೆ ಸರ್ಕಾರಿ ಅಧಿಕಾರಿಗಳನ್ನು ಕೊಪ್ಪಕ್ಕೆ ವರ್ಗಾವಣೆ ಮಾಡುವ ಮೂಲಕ ಶಿಕ್ಷೆ ನೀಡುವುದು ಚಾಲ್ತಿಯಲ್ಲಿದ್ದ ಕಾಲದಲ್ಲಿ ಕೊಪ್ಪ ಸಮೀಪದ ಹಳ್ಳಿ ಅಂದಗಾರಿನಲ್ಲಿ ಹುಟ್ಟಿ–ಬೆಳೆದದ್ದು. ಅಪ್ಪಟ ಕೃಷಿಕ ತಂದೆಯ ಪ್ರೋತ್ಸಾಹದಿಂದ ಶಾಲೆಯ ಮೆಟ್ಟಿಲು ಹತ್ತಿದ ಬಿ.ಎನ್.ಸುರೇಶ್ ಕೊಪ್ಪದ ‘ಲೋಕಸೇವಾ ನಿರತ ದೇವೇಗೌಡರ ಸರ್ಕಾರಿ ಪ್ರೌಢಶಾಲೆ’ಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು.

ಬಾಲ್ಯದಲ್ಲೇ ದೊಡ್ಡಪ್ಪನಿಂದ ಸಣ್ಣಪುಟ್ಟ ಮೆಕ್ಯಾನಿಕ್ ಕೆಲಸಗಳನ್ನು ಕಲಿತಿದ್ದರು. ಎಂಜಿನಿಯರಿಂಗ್ ಬಗ್ಗೆ ಆಸಕ್ತಿಯ ಚಿಗುರು ಮೂಡಿದ್ದೂ ಅವರಿಂದಲೆ. ಚಿಕ್ಕಂದಿನಲ್ಲಿ ಪಡೆದ ಪ್ರೇರಣೆಯೇ ಸ್ಕ್ರಾಮ್‌ಜೆಟ್, ಮ್ಯಾನ್ಡ್ ಮಿಷನ್‌ನ ಕ್ಯಾಪ್ಸೂಲ್ ನಿರ್ಮಾಣ, ರಾಕೆಟ್ ವಿನ್ಯಾಸದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಯಿತು.

‘ಚಿಕ್ಕಂದಿನಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಇತ್ತು. ಆದರೆ, ವಿಜ್ಞಾನಿ ಆಗಬೇಕು ಎಂಬಿತ್ಯಾದಿ ಕಲ್ಪನೆಯೇ ಇರಲಿಲ್ಲ. ನನ್ನ ಮೆಕ್ಯಾನಿಕ್ ಕಸರತ್ತು ನೋಡಿ ಮಗ ಎಂಜಿನಿಯರ್ ಆಗಲಿ ಎಂಬ ಆಸೆ ತಂದೆಯವರಿಗಿತ್ತು. ಹೈಸ್ಕೂಲ್ ಮುಗಿದ ಮೇಲೆ ಮುಂದೆ ಏನು ಓದಬೇಕು ಎಂಬ ತಿಳಿವಳಿಕೆಯೂ ಇರಲಿಲ್ಲ’ ಎಂದು ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾ ಮಲೆನಾಡಿನ ದಿನಗಳಿಗೆ ಜಾರಿದರು.

‘ಅಂದಗಾರಿನಿಂದ ಕೊಪ್ಪದ ಸರ್ಕಾರಿ ಹೈಸ್ಕೂಲ್‌ಗೆ ನಡೆದುಕೊಂಡೇ ಹೋಗುತ್ತಿದ್ದೆ. ಅಂದಿನ ವಿಪರೀತ ಮಳೆಯ ಬಗ್ಗೆ ಈಗ ಊಹಿಸುವುದೂ ಕಷ್ಟ. ದೊಡ್ಡಪ್ಪ ನನಗೆ ಸ್ಫೂರ್ತಿ ಆಗಿದ್ದರು. ಅವರು ಓದಿದವರಲ್ಲ. ಆದರೆ, ಮನೆಯಲ್ಲಿ ಪಂಪ್‌ಸೆಟ್, ಎಲೆಕ್ಟ್ರಿಕಲ್ ಕೆಲಸ, ಇನ್ನಿತರ ಯಾವುದೇ ಮೆಕ್ಯಾನಿಕ್ ಕೆಲಸಗಳನ್ನು ಸುಲಲಿತವಾಗಿ ಮಾಡುತ್ತಿದ್ದರು. ನನ್ನ ಕೈಗೂ ಟೂಲ್ ಕೊಟ್ಟು ಮಾಡಿಸುತ್ತಿದ್ದರು.

ಆಗ ನನಗೇ ಗೊತ್ತಿಲ್ಲದೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೊಳೆಯಿತು. ಬಡಗಿ ಕೆಲಸ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಈಗಲೂ ಮನೆಯಲ್ಲಿ ಎಲೆಕ್ಟ್ರಿಕ್, ಪ್ಲಂಬಿಂಗ್ ಸೇರಿದಂತೆ ಹಲವು ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ಸಣ್ಣವನಿದ್ದಾಗ ಅಮ್ಮನ ಊರು ಮಂಗಳೂರು ಬಿಟ್ಟು ಬೇರೆ ಎಲ್ಲಿಗೂ ಹೋಗಿದ್ದಿಲ್ಲ. ಹೊರ ಪ್ರಪಂಚದ ಜ್ಞಾನವೇ ಇರಲಿಲ್ಲ’.

‘ನಾನೊಬ್ಬ ವಿಜ್ಞಾನಿ ಎಂಬುದು ನಮ್ಮೂರಿನಲ್ಲಿ ಗೊತ್ತೇ ಇರಲಿಲ್ಲ. ಒಮ್ಮೆ ಕಲಾಂ ಅವರನ್ನು ನಮ್ಮ ಹಳ್ಳಿಯ ಮನೆಗೆ ಕರೆದುಕೊಂಡು ಹೋದಾಗ, ಹೋ ಇವನೊಬ್ಬ ಸಾಮಾನ್ಯ ಎಂಜಿನಿಯರ್ ಅಲ್ಲ ಎಂಬ ಉದ್ಗಾರ ಕೇಳಿ ಬಂತು. ಪದ್ಮಶ್ರೀ, ಪದ್ಮಭೂಷಣ ಬಂದ ಮೇಲೆ ಇವನೊಬ್ಬ ವಿಜ್ಞಾನಿ ಹೌದು ಎಂಬ ತೀರ್ಮಾನಕ್ಕೆ ಬಂದರು’ ಎಂದು ತಮ್ಮ ಬಗ್ಗೆಯೇ ಹಾಸ್ಯ ಮಾಡಿಕೊಂಡು ನಕ್ಕರು.

‘ಪ್ರಜಾವಾಣಿ’ ಅಭಿಮಾನಿ
ತಿರುವನಂತಪುರದಲ್ಲಿ ನಾಲ್ಕು ದಶಕಗಳನ್ನು ಕಳೆದು ಬಳಿಕ ಬೆಂಗಳೂರಿಗೆ ಬಂದು ನೆಲೆ ನಿಂತ ಸುರೇಶ್ ಅವರು ತಮ್ಮ ಕನ್ನಡ ಭಾಷೆಯನ್ನು ಉತ್ತಮಪಡಿಸಿಕೊಳ್ಳಲು ನೆಚ್ಚಿಕೊಂಡಿದ್ದು ‘ಪ್ರಜಾವಾಣಿ’ಯನ್ನು. ದೇಶ–ವಿದೇಶ ಸುತ್ತುವ ಅವರು ಸಮಯ ಸಿಕ್ಕಾಗಲೆಲ್ಲ ‘ಪ್ರಜಾವಾಣಿ’ ಓದುವುದನ್ನು ತಪ್ಪಿಸುವುದಿಲ್ಲ. ಪ್ರಸ್ತುತ ಅವರು ‘ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್’ನ ಅಧ್ಯಕ್ಷರೂ ಹೌದು. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದಾರೆ.

ಕೈಗೂಡದ ಕನಸು
‘ಶೃಂಗೇರಿ ಪಟ್ಟಣದಲ್ಲಿ ಶೃಂಗೇರಿ ಸೈನ್ಸ್ ಸೆಂಟರ್ ಆರಂಭಿಸಬೇಕು ಎಂಬ ಉದ್ದೇಶದಿಂದ 2010ರಲ್ಲಿ ಟ್ರಸ್ಟ್ ರಚಿಸಿದ್ದೆ. ಒಂದೂವರೆ ಎಕರೆ ಜಮೀನಿನಲ್ಲಿ ಈ ಕೇಂದ್ರ ಸ್ಥಾಪಿಸುವ ಉದ್ದೇಶ ನನ್ನದಾಗಿತ್ತು. ಸರ್ಕಾರ ಮತ್ತು ಸ್ಥಳೀಯರಿಂದ ಹೆಚ್ಚಿನ ಸಹಕಾರ ಸಿಗದ ಕಾರಣ ಆ ಯೋಜನೆ ಕೈ ಬಿಡಬೇಕಾಯಿತು.

ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನದ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿವಿಧ ಶಾಖೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು, ಯುವಪೀಳಿಗೆ ಆ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುವುದು ಉದ್ದೇಶವಾಗಿತ್ತು. ಏಕೆಂದರೆ, ಇಂದಿಗೂ ಈ ಭಾಗದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಒಂದೇ ಒಂದು ಸಂಸ್ಥೆ ಇಲ್ಲ. ಕೇಂದ್ರ ಸ್ಥಾಪಿಸಲು ಹೊರಟಾಗ ಸರ್ಕಾರದಿಂದ ಮತ್ತು ಸ್ಥಳೀಯವಾಗಿ ಎದುರಾದ ಸಮಸ್ಯೆಗಳಿಂದ ಹಿಂದಕ್ಕೆ ಸರಿಯಬೇಕಾಯಿತು.

ಅದೇ ಸಮಯದಲ್ಲಿ ನನ್ನ ಪತ್ನಿಯೂ ತೀರಿಕೊಂಡಿದ್ದರಿಂದ ಕನಸಿನ ಯೋಜನೆ ಕೈಬಿಡಬೇಕಾಯಿತು’ ಎಂದು ಮಲೆನಾಡಿಗರ ನಿರಾಸಕ್ತಿಯ ಬಗ್ಗೆ ಬೇಸರಿಸಿದರು.

ತಿರುವನಂತಪುರ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ನಿರ್ದೇಶಕ ಮತ್ತು ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಅಂಡ್ ಟೆಕ್ನಾಲಜಿ’ ಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಕೇರಳದ ನೆಲದಲ್ಲಿ ಕನ್ನಡ ಸಂಘವನ್ನು ಕಟ್ಟಿ ಕನ್ನಡ ಉಳಿಸುವ ಕೆಲಸ ಮಾಡಿದ್ದರು. ಕನ್ನಡ ಪುಸ್ತಕಗಳ ದೊಡ್ಡ ಓದುಗರಾಗಿರುವ ಇವರಿಗೆ ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳೆಂದರೆ ಅಚ್ಚುಮೆಚ್ಚು.

‘ಬಾಹ್ಯಾಕಾಶ ವಿಜ್ಞಾನ ಕುರಿತಾದ ‘ಯಾನ’ ಸೈನ್ಸ್ ಫಿಕ್ಷನ್ ಕಾದಂಬರಿ ಆದ್ರೂ, ಅಲ್ಲಿ ಬಂದಿರುವ ಪರಿಕಲ್ಪನೆ ಮುಂದೊಂದು ದಿನ ನಿಜವಾದರೂ ಅಚ್ಚರಿ ಇಲ್ಲ’ ಎಂಬ ವಿಶ್ವಾಸ ಅವರದು. ‘ಅರ್ಥರ್ ಡಿಕ್ಲರ್ಕ್ ಅವರು ದೂರ ಸಂವೇದಿ ಉಪಗ್ರಹಗಳು, ಒಡೆಸ್ಸಿ ಬಗ್ಗೆ ಬರೆದ ಕೃತಿಗಳಲ್ಲಿದ್ದ ಅಂಶಗಳು ಈಗ ನಿಜವಾಗಿವೆ. ಸೈನ್ಸ್ ಫಿಕ್ಷನ್‌ಗಳೇ ನಿಜವಾಗುತ್ತಿವೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.