ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮೂಲ ಕಾಯಕದ ಸಂಜೀವಿನಿ ಸೂಲಗಿತ್ತಿ ನರಸಮ್ಮ

Last Updated 12 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಸೂಲಗಿತ್ತಿಯ ಕೆಲಸವೇ ಆ ಬಗೆಯದು. ಎರಡು ಜೀವಗಳನ್ನು ಕಾಪಿಡುವುದು. ಅರ್ಥಾತ್ ಆ ಜೀವಗಳಿಗೆ ಉಸಿರು ತುಂಬುವ ಮೂಲಕ ಮರುಜನ್ಮ ನೀಡುವುದೇ ಆಗಿರುತ್ತದೆ.

೨೦೧೩ರ ‘ವಯೋಶ್ರೇಷ್ಠ ಸಮ್ಮಾನ್‌’ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ ಸಂಖ್ಯೆಯಲ್ಲಿ ೧೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿದರೂ ಅದು ಉಸಿರು ತುಂಬಿಸುವ ಕಾಯಕವೇ ಆಗಿದೆ.

ನಮ್ಮ ದೇಸೀ ಜ್ಞಾನ ಪರಂಪರೆಗೆ ಸೇರ್ಪಡೆಯಾಗುವ ಈ ನರಸಮ್ಮ ವೈಯುಕ್ತಿಕವಾಗಿಯೂ ಸಾಕಷ್ಟು ನೋವು ತಿಂದವರು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರವೆಂಬ ಗ್ರಾಮದ ನಿವಾಸಿಯಾದ ಅವರು  ಬಾಲ್ಯವಿವಾಹಕ್ಕೆ ತುತ್ತಾದವರು. ಹನ್ನೆರಡು ಮಕ್ಕಳ ತಾಯಿಯಾಗಿ ಬೆಳೆದವರು. ಹೀಗಾಗಿ ಹೆಣ್ಣಿನ ದೇಹದ ಆಂತರಿಕ ನೋವುಗಳನ್ನು ಅನುಭವಿಸಿದ ನರಸಮ್ಮ, ಏಕಕಾಲಕ್ಕೆ ದೇಹ ಪ್ರಕೃತಿ ಮತ್ತು ಸಹಜ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡಿದ್ದರು. ಅಕ್ಷರ ವಂಚಿತ ಸಮುದಾಯದಲ್ಲಿ ಹುಟ್ಟಿ ಬೆಳೆದವರು ಅವರು.  

ಪ್ರತಿಯೊಂದು ಗ್ರಾಮಗಳಲ್ಲೂ ಈ ವೃತ್ತಿ ಮೂಲದವರು ಇರುತ್ತಾರೆ; ಇದ್ದಾರೆ. ರಾಜ್ಯದ ಹಿಂದುಳಿದ ಪ್ರದೇಶವಾದ ಪಾವಗಡದ ಅನೇಕ ಹಳ್ಳಿಗಳು ಇಂದಿಗೂ ವಾಹನ ಸಂಚಾರದಿಂದ ವಂಚಿತಗೊಂಡಿವೆ. ಈ ಸಂದರ್ಭದಲ್ಲಿ ಕೃಷ್ಣಾಪುರದ ಸುತ್ತಮುತ್ತಲಿನ ಗ್ರಾಮಗಳಿಗೆ ನರಸಮ್ಮ ಅವರೇ ವೈದ್ಯೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪಾವಗಡ ತಾಲೂಕಿನಲ್ಲಿ ಇಲ್ಲವೆನ್ನುವಷ್ಟು ಅಪರೂಪವಾಗಿದ್ದವು. ಅಂತಹ ಕೃಷ್ಣಾಪುರದಲ್ಲಿ ನರಸಮ್ಮನವರೇ ದೊಡ್ಡಆರೋಗ್ಯ ಕೇಂದ್ರ ಆಗಿದ್ದರು ಎಂದರೆ ತಪ್ಪಾಗಲಾರದು.

ಈ ಸೂಲಗಿತ್ತಿಯ ಕೆಲಸ ಕುಲ ಭೇದವಿಲ್ಲದ್ದು. ಅದನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆ. ತಮ್ಮ ಮಧ್ಯವಯಸ್ಸಿನಲ್ಲಿ ಈ ನೆಲಮೂಲ ಕಾಯಕವನ್ನು ಕೈಗೊಂಡ ನರಸಮ್ಮ, ಯಾವ ಎಗ್ಗು ಇಲ್ಲದೆ  ಅನೇಕ ಜೀವಗಳನ್ನು ಉಳಿಸಿದ್ದಾರೆ.
ಸಾಮಾನ್ಯವಾಗಿ ಅಂದಿನ  ಗಂಡು ಸಮಾಜ ಈ ಬಗೆಯ ವೃತ್ತಿಗಳನ್ನು ಗುಮಾನಿಯಿಂದ ನೋಡುತಿತ್ತು. ನರಸಮ್ಮನವರ ಕುಟುಂಬ ಅವರಿಗೆ ಅಂದೇ ಬೆಂಬಲವಾಗಿ ನಿಂತಿತ್ತು.

ಈಗ ಅವರಿಗೆ ೯೩ ವರ್ಷ. ಈ ಪಯಣ ಸಾಮಾನ್ಯವಾದುದಲ್ಲ. ತಾಯಿಯ ಗರ್ಭವನ್ನು ಗುಡಿಯಾಗಿ ಒಪ್ಪಿಕೊಂಡ ಪರಂಪರೆ ನಮ್ಮದು.  ತಮ್ಮ ಬದುಕಿನ ಉದ್ದಕ್ಕೂ ಅನೇಕ ತಾಯಂದಿರ ಗರ್ಭಗಳ ಮುಖೇನ ಗುಡಿಯನ್ನು ನೋಡಿದ ಅವರು ಹಲವು ತಲೆಮಾರುಗಳನ್ನು ವೈಯುಕ್ತಿಕವಾಗಿ ಕಂಡಿದ್ದರೂ ತನ್ನ ಅನುಭವ ಜಗತ್ತಿನಲ್ಲಿ ಸೂಲಗಿತ್ತಿಯ ವೃತ್ತಿಯನ್ನು ಬೆನ್ನಿಗಂಟಿಸಿಕೊಂಡಿದ್ದಾರೆ. ಊರಿನ ಒಳಗು ಮಾತ್ರವಲ್ಲ, ಊರಿನ ಹೊರಗೆ ಇದ್ದ ಬುಡಬುಡಿಕೆ ಸಮುದಾಯ
ದ­ವರಿಗೂ ಹೆರಿಗೆ ಮಾಡಿಸಿದ ಅವರಿಗೆ ಸರಿಯಾಗಿ ಕನ್ನಡ ಬಾರದಿದ್ದರೂ ಕನ್ನಡ ನೆಲಕ್ಕೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದು ಕೊಟ್ಟಿದ್ದಾರೆ.

ನರಸಮ್ಮನವರಿಗೆ ೩೩ ಜನ ಮೊಮ್ಮಕ್ಕಳು. ತುಂಬು ಕುಟುಂಬದಲ್ಲಿ ಸಂತೋಷದಿಂದ ಬಾಳುತ್ತಿರುವ ಅವರು ಇಳಿವಯಸ್ಸಿನಲ್ಲೂ ಯಾವುದೇ ಆಧುನಿಕ ರೋಗಗಳಿಗೆ ತುತ್ತಾಗಿಲ್ಲ. ಉತ್ಸಾಹದಿಂದ ಊರಿನಲ್ಲಿ ಓಡಾಡುತ್ತಿದ್ದಾರೆ. ಕಣ್ಣು ಚೆನ್ನಾಗಿ ಕಾಣಿಸುತ್ತಿದೆ. ಸದ್ಯ ನಮ್ಮ ಜನಪದ ವೈದ್ಯ ಪರಂಪರೆಯನ್ನು ನಂಬುವ ಜನಕ್ಕೆ ತಾನು ಅಲೆಮಾರಿ ಜನಾಂಗದಿಂದ ಕಲಿತ ವಿದ್ಯೆಯಿಂದ ಔಷಧ ನೀಡುತ್ತಾರೆ.

ಹೆರಿಗೆ ಸರಿಯಾದ ಸಮಯಕ್ಕೆ ಆಗದಿದ್ದರೆ ಅದಕ್ಕೆ ತಕ್ಕ ಔಷಧಿಯನ್ನು ನೀಡುತ್ತಿದ್ದರು. ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿಗಳು ನರಸಜ್ಜಿಯವರ ಸಾಧನೆಯ ಬೆನ್ನಿಗಿದೆ.
ಹೆಣ್ಣು ತನ್ನ ಭ್ರೂಣದ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿರುವ ಸಂದರ್ಭವಿದು. ಆಧುನಿಕ ತಂತ್ರಜ್ಞಾನ ತಾಯಿ ಮತ್ತು ಮಗುವಿನ ಆತ್ಮೀಯ ಬಂಧವನ್ನು ಮರೆ ಮಾಚಿಸುತ್ತಿರುವ ಈ ಗಳಿಗೆಯಲ್ಲಿ ಸಾವಿರಾರು ಮಕ್ಕಳಿಗೆ ಜೀವ ಕೊಟ್ಟ ಸೂಲಗಿತ್ತಿ ನರಸಮ್ಮ ಅವರನ್ನು ನಾವು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ.

ಕೆಲ ಸಂದರ್ಭಗಳಲ್ಲಿ ಅನಗತ್ಯವಾಗುವ ಸಿಜೇರಿಯನ್‌ಗಳು ಅನಿವಾರ್ಯವೆಂಬಂತೆ ಆಧುನಿಕ ವೈದ್ಯ ಲೋಕ ನಂಬಿಸುತ್ತಿದೆ. ಸ್ತ್ರೀಯರ ಪುನರ್‌ಸೃಷ್ಟಿ ಶಕ್ತಿಯು ಆಧುನಿಕ ತಂತ್ರಜ್ಞಾನ ವೃತ್ತಿಜ್ಞತೆ, ವ್ಯಾಪಾರೀಕೃತ ಮತ್ತು ವಸಾಹತುಕರಣದಿಂದ ನಾಶ ಹೊಂದಿದೆ ಎಂಬ ವಂದನಾಶಿವ ಅವರ ಮಾತುಗಳನ್ನು ನೆನಪಿಸಿಕೊಂಡರೆ ಅವರ ಕಾಯಕ ನಿಷ್ಠೆ ಯಾವ ಬಗೆಯದು ಎಂಬುದು ತಿಳಿಯುತ್ತದೆ.

ಪಾವಗಡದ್ದು ದ್ವಿಭಾಷಿಕ ಜಗತ್ತು.  ಇಂದು ಅನೇಕ ಪ್ರತಿಭೆಗಳು ಅಲ್ಲಿಂದ ಹೊರಬರುತ್ತಿವೆ. ಆ ಬಗೆಯ ಪ್ರತಿಭೆಗಳಿಗೆ ನರಸಮ್ಮ ಬಹುದೊಡ್ಡ  ಸ್ಫೂರ್ತಿ. ಅನಕ್ಷರಸ್ಥೆಯಾದರೂ  ಬಾಣಂತಿಯರಿಗೆ ಅಗತ್ಯ ಸಲಹೆ ಸೂಚನೆ ಕೊಡುತ್ತಾರೆ. ಜಾಗೃತಿ ಮೂಡಿಸುತ್ತಾರೆ. ಇಳಿವಯಸ್ಸಿನಲ್ಲಿ ಅನುಭವ ಮಾಸಿಲ್ಲ. ಅವರ ಮತ್ತೊಂದು ಮುಖ ಜಾನಪದ ಹಾಡುಗಾರ್ತಿ. ಸೋಬಾನೆ ಪದ, ಜೋಗುಳದ ಪದಗಳನ್ನು ಹಾಡುತ್ತಾರೆ. ಕನ್ನಡ ನೆಲ ಸಾಲುಮರದ ತಿಮ್ಮಕ್ಕನಂತೆ ಸೂಲಗಿತ್ತಿ ನರಸಮ್ಮ ಅವರನ್ನು ಮರೆಯದಿರಲಿ.

ಇಂದು ಆಕೆಗೆ ‘ವಯೋಶ್ರೇಷ್ಠ ಸಮ್ಮಾನ್‌’ ರಾಷ್ಟ್ರೀಯ ಪ್ರಶಸ್ತಿ ದಕ್ಕಿರಬಹುದು. ಆದರೆ ಈ ಬಗೆಯ ಕಾಯಕಗಳು ಎಂದಿಗೂ ಪ್ರಶಸ್ತಿಗಳನ್ನು ಮನದಲ್ಲಿಟ್ಟುಕೊಂಡಿರುವುದಿಲ್ಲ. ಅವರಿಗೆ ಬದುಕಿನ ಬಗ್ಗೆ ಇರುವ ಗೌರವ ಮತ್ತು ತಾಳ್ಮೆ ಬಹುಮುಖ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT