ಪಾಕಿಸ್ತಾನ ಮತ್ತು ಅಮೆರಿಕದ ನಡುವಣ ಮೈತ್ರಿ ಮತ್ತೊಮ್ಮೆ ಹದಗೆಟ್ಟಿದೆ. ಈ ಬಾರಿ ಸ್ವಲ್ಪ ಜಾಸ್ತಿಯೇ ಹಾಳಾದಂತೆ ಕಾಣುತ್ತಿದೆ. ಆಫ್ಘಾನಿಸ್ತಾನದ ಗಡಿಯ ಮಹಮಾಂಡ್ ಗುಡ್ಡ ಪ್ರದೇಶದಲ್ಲಿರುವ ಸಲಾಲಾ ಮಿಲಿಟರಿ ನೆಲೆಯೊಂದರ ಮೇಲೆ ಅಮೆರಿಕ ನೇತೃತ್ವದ `ನ್ಯಾಟೋ~ ಹೆಲಿಕಾಪ್ಟರ್ಗಳು ಕಳೆದ ಶನಿವಾರ ಹಠಾತ್ತನೆ ನಡೆಸಿದ ದಾಳಿಯಲ್ಲಿ ಪಾಕ್ನ ಇಬ್ಬರು ಉನ್ನತ ಅಧಿಕಾರಿಗಳೂ ಸೇರಿ 28 ಸೈನಿಕರು ಸತ್ತಿದ್ದಾರೆ. ಇದರ ಬೆನ್ನಲ್ಲೇ ನ್ಯಾಟೋ ದಾಳಿಗೆ ಪಾಕಿಸ್ತಾನದ ಇನ್ನೂ ಇಬ್ಬರು ಸೈನಿಕರು ಬಲಿಯಾಗಿದ್ದು, ಪರಿಸ್ಥಿತಿ ಉಲ್ಬಣಗೊಂಡಿದೆ.

ಸಲಾಲಾ ನೆಲೆಯ ಮೇಲಿನ ದಾಳಿ ಉದ್ದೇಶಪೂರ್ವಕ ಎಂಬುದು ಪಾಕಿಸ್ತಾನದ ಆರೋಪ. ಆ ಕಡೆಯಿಂದಲೇ ರಾಕೆಟ್ ದಾಳಿ ನಡೆದದ್ದರಿಂದಾಗಿ ತಾನು ಪ್ರತಿ ದಾಳಿ ನಡೆಸಿದ್ದಾಗಿ ನ್ಯಾಟೋ ವಾದ. ಈ ಕುರಿತು ತನಿಖೆಯ ಭರವಸೆ ನೀಡಿದೆ. ಆದರೆ `ಇದೆಲ್ಲಾ ನಾಟಕ~ ಎಂದು ಪಾಕಿಸ್ತಾನ ವರ್ಣಿಸಿದೆ.

ಈ ಬಗ್ಗೆ ಪಾಕಿಸ್ತಾನ ಈಗಾಗಲೇ ವಿಶ್ವಸಂಸ್ಥೆಗೆ ದೂರು ನೀಡಿದೆ. ನಮ್ಮ ಸಾರ್ವಭೌಮತ್ವ ಗೌರವಿಸದಿದ್ದರೆ ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟಕ್ಕೆ ಸಹಕಾರ ಇಲ್ಲ ಎಂದು ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಹೇಳಿರುವುದು ಸ್ಥಿತಿ ಬಿಗಡಾಯಿಸುತ್ತಿರುವ ಸೂಚನೆ. ದೇಶದ ಗಡಿಯನ್ನು ಅಮೆರಿಕ ಅಥವಾ ನ್ಯಾಟೋ ಪಡೆಗಳು ಉಲ್ಲಂಘಿಸಿದರೆ ಪ್ರತಿದಾಳಿ ನಡೆಸುವಂತೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಶ್ಫಾಕ್ ಪರ್ವೇಜ್ ಕಯಾನಿ ಮಿಲಿಟರಿಗೆ ಸೂಚಿಸಿರುವುದು ಆತಂಕಕಾರಿ.
ನ್ಯಾಟೋ ಮುಖ್ಯಸ್ಥರು ಕ್ಷಮೆ ಕೋರಿದ ನಂತರವೂ ಪಾಕಿಸ್ತಾನ ಸುಮ್ಮನಾಗಿಲ್ಲ. ಪ್ರತೀಕಾರವಾಗಿ ದಾಳಿ ನಡೆದ ಸ್ಥಳದ ಬಳಿಯ ಷಂಶಿ ವಾಯು ನೆಲೆಯನ್ನು 15 ದಿನಗಳೊಳಗೆ ತೆರವು ಮಾಡುವಂತೆ ನ್ಯಾಟೋಗೆ ಸೂಚಿಸಿದೆ. ಆಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಗಳಿಗೆ ಶಸ್ತ್ರಾಸ್ತ್ರ, ಆಹಾರ ಪೂರೈಕೆಯಾಗುತ್ತಿದ್ದ ರಸ್ತೆ ಮಾರ್ಗ ಮುಚ್ಚಲಾಗಿದೆ. ಇದನ್ನು ನೋಡಿದರೆ ಪಾಕಿಸ್ತಾನ ಮತ್ತು ಅಮೆರಿಕದ ಮೈತ್ರಿ ಇಷ್ಟೊಂದು ಕೆಟ್ಟಿರುವುದು ಇದೇ ಮೊದಲು.

2014ರಲ್ಲಿ ಆಫ್ಘಾನಿಸ್ತಾನದಿಂದ ತನ್ನ ಸೇನೆಯೂ ಸೇರಿದಂತೆ ಎಲ್ಲ ನ್ಯಾಟೋ ಪಡೆಗಳು ವಾಪಸಾಗುವುದಾಗಿ ಅಮೆರಿಕ ಈಗಾಗಲೇ ಪ್ರಕಟಿಸಿದೆ. ಅಷ್ಟರೊಳಗೆ ಆಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅದು ಕಸರತ್ತು ನಡೆಸುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತನ್ನ ಜೊತೆ ಕೈ ಜೋಡಿಸಿರುವ ಪಾಕಿಸ್ತಾನ ಏನೇ ಆದರೂ ಅರ್ಧದಲ್ಲಿ ಕೈಕೊಡುವುದಿಲ್ಲ ಎನ್ನುವ ಲೆಕ್ಕಾಚಾರದಲ್ಲಿದೆ. ತಮ್ಮನ್ನು ಬಿಟ್ಟು ಏನೂ ಮಾಡಲು ಪಾಕ್ಗೆ ಸಾಧ್ಯವಿಲ್ಲ ಎನ್ನುವ ಅಮೆರಿಕ ಆಡಳಿತಗಾರರ ಆತ್ಮವಿಶ್ವಾಸ ನಿಜವಿದ್ದರೂ ಇರಬಹುದು.

ಅನಿವಾರ್ಯ
ಹಾಗೆಯೇ ಅಮೆರಿಕವೂ ಈ ಸನ್ನಿವೇಶದಲ್ಲಿ ಪಾಕಿಸ್ತಾನದ ಮೈತ್ರಿ ಕಡಿದುಕೊಂಡು ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎನ್ನುವುದೂ ನಿಜ. ಇರಾನ್, ರಷ್ಯಾ, ಚೀನಾ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ವಲಯದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು ಅಮೆರಿಕಕ್ಕೆ ಆಫ್ಘಾನಿಸ್ತಾನದಲ್ಲಿ ನೆಲೆ ಬೇಕು. ಹೀಗೆ ಒಬ್ಬರಿಗೆ ಮತ್ತೊಬ್ಬರು ಅನಿವಾರ್ಯ. ಆದ್ದರಿಂದ ಪ್ರಸ್ತುತ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆ ಇದ್ದೇ ಇದೆ. ಪಾಕಿಸ್ತಾನದ ವೀರಾವೇಶ ಬಹಳ ಕಾಲ ಇರಲಾರದು. ಅದು ಈ ಸನ್ನಿವೇಶ ಬಳಸಿ ಸ್ವಲ್ಪ ಹೆಚ್ಚು ನೆರವನ್ನು ಕೋರಬಹುದಷ್ಟೆ.

ಸರ್ಕಾರದ ವಿರುದ್ಧದ ಜನರ ಕೋಪ ಕಡಿಮೆ ಮಾಡುವಂಥ ಯಾವುದಾದರೂ ಭರವಸೆ ಅಮೆರಿಕದಿಂದ ಪಾಕಿಸ್ತಾನದ ಆಡಳಿತಗಾರರಿಗೆ ಬೇಕಿದೆ. ಕಳೆದ ಹತ್ತು ವರ್ಷಗಳಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ನೀಡಿರುವ ನೆರವಿನ ಮೊತ್ತ ಸುಮಾರು 2000 ಕೋಟಿ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ). ತನ್ನ ಗುರಿ ಸಾಧನೆಗಾಗಿ ಅಮೆರಿಕ ಮತ್ತಷ್ಟು ನೆರವು ಹಾಗೂ ಭರವಸೆ ನೀಡಲು ಹಿಂಜರಿಯುವುದಿಲ್ಲ. ಪಾಕಿಸ್ತಾನಕ್ಕೆ ಬೇಕಿರುವುದೂ ಇದೇ. ಇಷ್ಟೇ ಆದರೆ ಸಮಸ್ಯೆ ಇರದು.

ಎರಡೂ ದೇಶಗಳ ನಡುವಣ ಬಾಂಧವ್ಯ ಕಳೆದ ಒಂದು ವರ್ಷದಿಂದ ಹದಗೆಡುತ್ತಲೇ ಬಂದಿದೆ. ಸೆಪ್ಟೆಂಬರ್ 2010 ರಲ್ಲಿ ನ್ಯಾಟೋ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಮೂವರು ಸೈನಿಕರು ಸತ್ತಾಗ ಉಭಯ ದೇಶಗಳ ಸಂಬಂಧ ಕೆಟ್ಟಿತ್ತು.

ಮೂಲಭೂತವಾದಿ ಮುಸ್ಲಿಂ ಸಂಘಟನೆಗಳು ಇದನ್ನೇ ಮುಂದಿಟ್ಟುಕೊಂಡು ಭಾರೀ ಪ್ರತಿಭಟನೆಗಳನ್ನು ನಡೆಸಿದ್ದವು. ಆಫ್ಘಾನಿಸ್ತಾನದ ನ್ಯಾಟೋ ನೆಲೆಗಳಿಗೆ ಶಸ್ತ್ರಾಸ್ತ್ರ, ಇಂಧನ ಮತ್ತು ಆಹಾರ ಸಾಗಿಸುವ ಮಾರ್ಗ ಕೆಲ ದಿನ ಮುಚ್ಚುವ ಮೂಲಕ ಜನರ ಅಮೆರಿಕ ವಿರೋಧಿ ಭಾವನೆಯನ್ನು ಪಾಕ್ ತಣಿಸಿತ್ತು. ಇದು ಮರೆಯುವಷ್ಟರಲ್ಲೇ ಮಾರ್ಚ್ನಲ್ಲಿ ಅಮೆರಿಕದ ರೈಮ್ಯೋಡ್ ಡೇವಿಸ್ ಎಂಬುವವರು ಮೂವರು ಪಾಕಿಸ್ತಾನಿಯರನ್ನು ಗುಂಡಿಟ್ಟು ಕೊಂದ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಪಾಕಿಸ್ತಾನ ಅಂತರರಾಷ್ಟ್ರೀಯವಾಗಿ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನನ್ನು ಅಮೆರಿಕ ರಹಸ್ಯ ದಾಳಿಯಲ್ಲಿ ಕೊಂದದ್ದು.

ಸ್ವಾರ್ಥ, ಸ್ವಹಿತ
ಹಾಗೆ ನೋಡಿದರೆ ಪಾಕಿಸ್ತಾನ ಮತ್ತು ಅಮೆರಿಕದ ನಡುವಣ ಬಾಂಧವ್ಯ ಎಂದೂ ನಿಜವಾದ ಸ್ನೇಹದ ಮೇಲೆ ಬೆಳೆದದ್ದಲ್ಲ. ಐವತ್ತರ ದಶಕದಿಂದಲೂ ಎರಡೂ ದೇಶಗಳು ಸ್ವಾರ್ಥ ಇಟ್ಟುಕೊಂಡೇ ಮೈತ್ರಿ ಮಾಡಿಕೊಳ್ಳುತ್ತ ಬಂದಿವೆ. ಈ ವಲಯದಲ್ಲಿ ಸೋವಿಯತ್ ಪ್ರಾಬಲ್ಯವನ್ನು ಅಡಗಿಸಿ ತಮ್ಮ ಪ್ರಾಬಲ್ಯ ಸಾಧಿಸುವ ತಂತ್ರವಾಗಿ ಅಮೆರಿಕದ ಆಡಳಿತಗಾರರು ಪಾಕ್ ಜೊತೆ ಮೈತ್ರಿ ಸಾಧಿಸುತ್ತ ಬಂದಿದ್ದಾರೆ. ಹೇಗಿದ್ದರೂ ಭಾರತದ ವಿರುದ್ಧ ಕತ್ತಿ ಮಸೆಯಲು ಪಾಕ್ಗೆ ರಾಜಕೀಯ ಮತ್ತು ಮಿಲಿಟರಿ ನೆರವು ಬೇಕು. ಈ ಕಾರಣದಿಂದ ಅದು ಅಗತ್ಯ ಕಂಡುಬಂದಾಗೆಲ್ಲ ಅಮೆರಿಕದ ಜೊತೆ ಮೈತ್ರಿ ಸಾಧಿಸುತ್ತ ಬಂದಿದೆ.

ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಅಮೆರಿಕ ಭಾರತವನ್ನು ಬೆಂಬಲಿಸಿತು. ಪಾಕಿಸ್ತಾನ ಚೀನಾಕ್ಕೆ ಬೆಂಬಲವಾಗಿ ನಿಂತಿತ್ತು. 70ರ ದಶಕದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆದಾಗ ಅಮೆರಿಕ ಪಾಕಿಸ್ತಾನದ ಕಡೆಗೆ ನಿಂತಿತ್ತು. ಪರಮಾಣು ಬಾಂಬ್ ಪಡೆಯಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಆರ್ಥಿಕ ದಿಗ್ಬಂಧನವನ್ನು ವಿಧಿಸಿತ್ತು. ಸೋವಿಯತ್ ಸೇನೆ 1979ರಲ್ಲಿ ಆಫ್ಘಾನಿಸ್ತಾನವನ್ನು ಆಕ್ರಮಿಸಿದ ನಂತರ ಅದರ ವಿರುದ್ಧ ಹೋರಾಡಲು ಅಮೆರಿಕ ಸ್ನೇಹ ಬೆಳೆಸಿಕೊಂಡಿದ್ದು ಪಾಕಿಸ್ತಾನದ ಜೊತೆ. ಮುಜಾಹಿದ್ದೀನ್ ಹೋರಾಟಗಾರರಿಗೆ ಎಲ್ಲ ರೀತಿಯ ಮಿಲಿಟರಿ ಮತ್ತಿತರ ನೆರವು ನೀಡಿದ್ದು ಪಾಕಿಸ್ತಾನದ ಮೂಲಕವೇ.

ಆಫ್ಘಾನಿಸ್ತಾನವನ್ನು 1989ರಲ್ಲಿ ಸೋವಿಯತ್ ರಷ್ಯಾ ತೆರವು ಮಾಡಿದ ನಂತರ ಅಮೆರಿಕದ ಆಡಳಿತಗಾರರು ಪಾಕಿಸ್ತಾನವನ್ನು ಕೈಬಿಟ್ಟರು. ಪಾಕಿಸ್ತಾನ ಪ್ರಯೋಗಾರ್ಥ ಪರಮಾಣು ಬಾಂಬ್ ಸ್ಫೋಟಿಸಿದ ನಂತರ ಮತ್ತೆ ಆರ್ಥಿಕ ಮತ್ತು ಮಿಲಿಟರಿ ದಿಗ್ಬಂಧನ ವಿಧಿಸಿತು. ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್ಖೈದಾ ಭಯೋತ್ಪಾದಕರು ನಡೆಸಿದ ದಾಳಿ (2001 ಸೆ. 11) ಮತ್ತೆ ಪಾಕಿಸ್ತಾನ ಮುಂಚೂಣಿಗೆ ಬರಲು ಕಾರಣವಾಯಿತು. ಆಫ್ಘಾನಿಸ್ತಾನವನ್ನು ಸೋವಿಯತ್ ಸೇನೆ ತೆರವು ಮಾಡಿದ ಮೇಲೆ ಅಲ್ಲಿನ ಆಡಳಿತ ಹಿಡಿದಿದ್ದವರು ಮುಜಾಹಿದ್ದೀನ್ಗಳು (ಮೊದಲು ಇವರಿಗೆ ಅಮೆರಿಕದ್ದೇ ಬೆಂಬಲ ಇತ್ತು). ಕೆಲ ವರ್ಷಗಳ ನಂತರ ಆ ದೇಶ ತಾಲಿಬಾನ್ ಉಗ್ರರ ವಶಕ್ಕೆ ಹೋಯಿತು. ಇಸ್ಲಾಮಿಕ್ ಭಯೋತ್ಪಾದನೆ ನೂರಾರು ಪಟ್ಟು ಬೆಳೆದದ್ದು ಈ ಕಾಲದಲ್ಲಿಯೇ. ರಾಕ್ಷಸ ಸ್ವರೂಪದಲ್ಲಿ ಬೆಳೆದು ನಿಂತಿದ್ದ ಅಲ್ಖೈದಾವನ್ನು ಮುಗಿಸಲು ಅಮೆರಿಕಕ್ಕೆ ಪಾಕ್ ಮೈತ್ರಿ ಅನಿವಾರ್ಯವಾಗಿತ್ತು.

ಈ ಹಿಂದೆಯೇ ಹೇಳಿದಂತೆ ಪಾಕಿಸ್ತಾನ ಈ ಮಿಲಿಟರಿ ನೆರವನ್ನು ಭಾರತದ ವಿರುದ್ಧ, ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಹೆಚ್ಚಿಸುವುದಕ್ಕಾಗಿ ಬಳಸಿಕೊಳ್ಳಲು ಹಿಂಜರಿಯಲಿಲ್ಲ. ಅದು ಮೊದಲಿನಿಂದಲೂ ರಕ್ಷಣಾ ತಂತ್ರವಾಗಿ ಆಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತ ಬಂದಿದೆ. ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಪಾಕಿಸ್ತಾನ ಕಪಟ ನಾಟಕ ಆಡುತ್ತಲೇ ಬಂದಿದೆ. ಇದು ಅಮೆರಿಕಕ್ಕೆ ತಿಳಿಯದೇ ಇರುವುದೇನಿಲ್ಲ.

ಆಫ್ಘಾನಿಸ್ತಾನದಿಂದ ಹೊರಬರಲು ಅಮೆರಿಕ ಹತಾಶ ಯತ್ನಗಳನ್ನು ಮಾಡುತ್ತಿದೆ. ಇದುವರೆಗೆ ತಾನು ಹೋರಾಡಿದ ತಾಲಿಬಾನ್, ಅಲ್ ಖೈದಾ, ಹಕ್ಕಾನಿ ಗುಂಪುಗಳಲ್ಲಿನ ಉದಾರವಾದಿಗಳ ಜೊತೆ ಹೊಂದಾಣಿಕೆ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂಬ ವರದಿಗಳಿವೆ. ಈ ಕೆಲಸಕ್ಕೆ ಪಾಕಿಸ್ತಾನವನ್ನೇ ಅಮೆರಿಕ ಬಳಸಿಕೊಳ್ಳುತ್ತಿದೆ ಎಂಬುದು ವಿಚಿತ್ರವೇ ಸರಿ. ಆಫ್ಘನ್ ಭಯೋತ್ಪಾದಕರಿಗೆ ಬೆಂಬಲವಾಗಿ ಪಾಕಿಸ್ತಾನದ ಮಿಲಿಟರಿಯೇ ನಿಂತಿರುವುದರಿಂದ ಅವರನ್ನು ಬಗ್ಗು ಬಡಿಯುವುದು ನ್ಯಾಟೋಗೆ ಕೂಡಾ ಕಷ್ಟವಾಗುತ್ತಿದೆ.

ಅಲ್ಖೈದಾ, ತಾಲಿಬಾನ್, ಹಕ್ಕಾನಿ ಭಯೋತ್ಪಾದಕರನ್ನು ಮಟ್ಟಹಾಕಬೇಕಾದರೆ ಮೊದಲು ಪಾಕಿಸ್ತಾನದ ಆಡಳಿತ, ಮಿಲಿಟರಿ ಮತ್ತು ಉಗ್ರವಾದಿಗಳನ್ನು ತಹಬಂದಿಗೆ ತರಬೇಕಾಗುತ್ತದೆ. ಅಂದರೆ ಪಾಕಿಸ್ತಾನದ ವಿರುದ್ಧವೇ ಅಮೆರಿಕ ಯುದ್ಧ ಘೋಷಿಸಬೇಕಾಗುತ್ತದೆ. ಹಾಗೆ ನೋಡಿದರೆ ಇರಾಕ್, ಆಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಇಳಿಯುವ ಮೊದಲೇ ಪಾಕಿಸ್ತಾನವನ್ನು ಪ್ರತಿಬಂಧಿಸಬೇಕಿತ್ತು. ಈ ವಿಚಾರದಲ್ಲಿ ಅಮೆರಿಕದ ಲೆಕ್ಕಾಚಾರ ತಪ್ಪಾಗಿದೆ. ಪಾಕ್ ಜತೆಗಿನ ಅತಿ ಸ್ನೇಹದಿಂದಾಗಿ ಅಮೆರಿಕ ಭಾರತ ಉಪಖಂಡವನ್ನು ಈಗ ಆಪತ್ತಿನ ಅಂಚಿಗೆ ತಂದು ನಿಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.