ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ವಿನೋದ: ಲಿವಿಂಗ್ ಪಾರ್ಟ್‌ನರ್ಸ್

Last Updated 7 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಮಾರಮ್ಮನ ಗುಡಿತಾವು ಎರ‌್ರಾಬಿರ‌್ರಿ ಜನ ಜಾತ್ರಿ `ಚಾವಡಿ ಬುಕ್ ಆಗಿ ಮೂರು ತಿಂಗಳಾತು. ಮೇಟಿಂಗ್ ಮಾಡಕ್ಕೆ ತಾವಿಲ್ಲ~ ಅಂತ ಮಂಟೇಲಿಂಗಣ್ಣ ಕುಂಟು ನೆಪ ಒಡ್ಡಿದ. ಒಳಮರ್ಮ ಬ್ಯಾರೇನೇ. ಜಮೀನು ಕಂದಾಯ ವಸೂಲಾತಿಯಲ್ಲಿ ಅಪರಾ ತಪರಾ ಆಗೈತೆ ಅಂತ ಮೇಲಧಿಕಾರಿಗಳಿಗೆ ಕಂಪ್ಲೇಂಟ್ ಹೋಗಿ ಚೆಕಿಂಗ್‌ಗೆ ಬಂದಿರೋದು ಊರಿಗೇ ಗೊತ್ತು, ಅದು ಹೆಂಗಾದರೂ ಹೋಗಲಿ.
 
ಬರೋ ಡಿಸೆಂಬರ್‌ಗೆ ಪ್ರಳಯ. ಅದ್ಕೂ ಮುಂಚೆ ಸದಾನಂದಗೌಡರ ಸರ್ಕಾರ ಉರುಳ್ತೈತೆ ಗ್ಯಾರಂಟಿ. ಯಾಗ, ಎಗ್ಣ, ಮಾಟ, ಮಂತ್ರ ಅಂತ ಮಾಡಿಸ್ಬೋದೇ ಸಿವಾಯಿ, ಫಲಕೊಡಲ್ಲ ನಸೀಬು ಕೆಟ್ಟರೆ, ಇಪ್ಪತ್ತು ತಿಂಗಳು ಉಸಿರುಕೊಟ್ಟ ಸಿವಾನೆ ಇಪತ್ತು ನಿಮಿಷದಲ್ಲಿ ಕಿತ್ಕಂತಾನೆ. ಮಸಲ ಪ್ರಳಯ ಮೂರು ತಿಂಗಳು ಮುಂದೂಡಿತು ಅನ್ನಿ. ಆಗ ಸರ್ಕಾರ ಸೂಸೈಡ್ ಮಾಡ್ಕಂತದೆ ಅಂತ ಕ್ಯಾತ ಜ್ಯೋತಿಷಿ ಬೃಹತ್ ಕೂಷ್ಮಾಂಡ ಶರ್ಮರ ಅಂಬೋಣ ಉಳಿದಿರೋದು ಎರಡೇ ದಾರಿ.

 ಒಂದು ಘನತೆವೆತ್ತ ಗವರ್ನರ್ ಸಾಹೇಬರನ್ನು ಗದ್ದುಗೆಯಲ್ಲಿ ಕುಂಡ್ರಿಸಿ, ಬಹುಪರಾಕ್ ಮಾಡಿ ನಜ್ಹರ್ ಒಪ್ಪಿಸೋದು. ನಾಡಿನ ಚತುಷ್ಕೋಟಿ ಕನ್ನಡಿಗರಿಗೆ ಆಹ್ವಾನ ಕೊಡುವುದು. ಹರಿದಾಸರು, ಶಿವಭಕ್ತರು, ಬೊಂಬೊಂಬಾಬಾಗಳು, ಮಠಾಧೀಶರಾದಿಯಾಗಿ ಎಲ್ಲ ನಿರ್ಲಕ್ಷಿತ ಬಾಂಧವರನ್ನು ವಿಧಾನಸೌಧದ ಮುಂದಣ ಮೆಟ್ರೊ ಸುರಂಗ ಮಾರ್ಗದಲ್ಲಿ ಬಿಠಾಯಿಸಿ, ಕಪ್ಪುಜಾಗಟೆ, ಕೊಂಬು ಕಹಳೆ ಊದಿಸುವುದು. ಅದ್ಕೂ ಮದ್ಲೆ ತಿರುಮಂತ್ರ `ನಾರಾಯಣಾ ಘೋಯಿಂದಾ, ಏಳುಬೆಟ್ಟದ ಗಿರಿವಾಸಾ, ಗುರುಸಿದ್ದ ಮಲ್ಲೇಸಾ, ಉಘೇ~ `ಹಕಿಲಾಂಡ ಕೋಟಿ ಬ್ರಮ್ಮಾಂಡನಾಯಕಾ, ಈರಬದ್ರಾಂಜನೇಯ ವರದ ಗೋಯಿಂದೋ~
 `ಆನೆಮಲೆ, ಜೇನುಮಲೆ, ಹೆಪ್ಪತ್ತೇಳುಮಲೆ, ಗುಲಗಂಜಿಮಲೇ ಮಾದೇವ ಘೋಯಿಂದೋ `ಪ್ರಲ್ಹಾದ ಸಮ್ಮಾರಕಾ, ಇರಣ್ಯಕಸಿಪು ಸಂರಕ್ಸಕಾ, ಪೂತನೀ ಪ್ರಾಣಖಾಂತಾ, ತಾಟಕೀ ರುದಯವಲ್ಲಬಾ, ಸಿವನೇ ಸಂಬುಲಿಂಗ ಘೋಯಿಂದೋ.....~.

ಎರಡನೆಯದು ಗವರ್ನರ್ ಸಾಹೇಬರು ಗದ್ದುಗೆ ಏರದಂತೆ ತಡೆಯೊಡೆಸಬೇಕು. `ಪದಕುಸಿಯೆ ನೆಲವಿಹುದು ಮಂಕುತಿಮ್ಮ~ ಅಂತ ಆಳುವ ಪಕ್ಷ ಅಳುತ್ತಿರಲಿ, ಬದಲಿ ವ್ಯವಸ್ಥೆಗೆ ಪ್ರಜ್ಞಾವಂತರು, ಚಿಂತಕರು, ಹಂತಕರು, ಘ್ನಾನಪೀಠಿಗಳು ಮುಂದಾಗಬೇಕು, ಮುಳ್ಳೂರಿನ ಬುದ್ಧಿಜೀವಿಗಳಂತ ಇರೋದು ನಾವು ನಾಲ್ಕೇಮಂದಿ, ನಾನು, ಮಾದೇವು, ಹಾಯ್‌ಮುಳ್ಳೂರ್ ಸಂಪಾದಕ (ಹಾಲಿ) ಗವಿ ಜೆಳ್ಕೆರೆ ಮತ್ತು ಪ್ರೊಫೆಸರ್ ಉರಿಸಿಂಗರ್ ಮೇಲುಕೋಟೆ. ತಾಳಿ ಕಟ್ಟೋಕ್ಕೂ, ಎಣ ಒರೋದಕ್ಕೂ ನಾಕು ಮಂದಿ ಇದ್ದರೆ ಸಾಕು. ನಮ್ಮ ಬದುಕು ನಾಕು ತಂತಿಯ ಪಿಟೀಲು. ಹೀಗಾಗಿ, ಮಾರವ್ವನ ಗುಡಿ ತಾವು ಊರವರ ಸಭೆ ಸೇರಿಸಿ, ನಮ್ಮ ಅನಿಸಿಕೆಗಳನ್ನು ಇಂತು ಬಿಕ್ಕಿದೆವು.

 `ತಾಯಿ ಮಾರವ್ವಗೆ ಶರಣು. ಮುಳ್ಳೂರ ಹತ್ತು ಸಮಸ್ತರಿಗೆ ಕುಂತಲ್ಲೆ ಅಂಡೆತ್ತಿ ದೀಡು ನಮ್ಮಸ್ಕಾರಗಳನ್ನು ಆಚರಿಸುವೆವು. ಒಪ್ಪಿಸ್ಕಬೇಕು ಸಿವಾ. ಅದಾಗಿ, ನಮ್ಮ ನಾಡಿನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಇದು ಸಕಾಲ. ಸರ್ಕಾರ ಇಂಗು ತಿಂದ ಮಂಗನಂತೆ, ಕರೆಂಟು ಹೊಡೆದ ಕಾಗೆಯಂತೆ, ಕಂಗೆಟ್ಟು ಕುಂತಿದೆ. ಪಟ್ಟಣಗಳಲ್ಲಿ ಹಗಲಲ್ಲಿ ಗೆಳೆಯರಂತೆ ಇರುಳಲ್ಲಿ ಸತಿಪತಿಯರಂತೆ ಒಂದೇ ಸೂರಿನಡಿ ಮಲಗುವವರನ್ನು ಲಿವಿಂಗ್ ಪಾರ್ಟ್‌ನರ್ಸ್ ಎಂದು ಕರೆಯುತ್ತೇವಲ್ಲವೇ.
 
ನಾಳೆ ಮುಳ್ಳೂರಿನಲ್ಲೂ ಈ (ಅ)ವ್ಯವಸ್ಥೆ ಚಾಲೂ ಆದರೆ, ಪಂಚಾಯತು, ಪರಿಷತ್ತು, ಕೂಡುವಳಿ, ನಗ್ಣ, ಶೋಭನ ಇವೆಲ್ಲವೂ ಕಾಣೆಯಾಗಿ ಲಿವಿಂಗ್ ಪಾರ್ಟ್‌ನರ್ಸ್‌ಗಳ ಪ್ಯಾರಡೈಸ್ ಎಂದರೆ ಮುಳ್ಳೂರೆ ಎಂದು ಜನ ಆಡಿಕೊಂಡಾರಲ್ಲವೆ, ಆ ಮಾತು ಅಂತಿರಲಿ.

 ಈ ಮಂತ್ರಿಮಂಡಲ ಹುಟ್ಟುವುದಕ್ಕೂ ಮುಂಚೆ ಕಮಲ-ಹುಲ್ಲಿನ ಹೊರೆ ಎರಡೂ ಇಪ್ಪತ್ತು ತಿಂಗಳು ಲಿವಿಂಗ್ ಪಾರ್ಟ್‌ನರ್ಸ್ ಆಗಿ ಮರೆದದ್ದು ಮರೆತಿಲ್ಲ. ಆದರೆ ಈಗಿರುವ ಸರ್ಕಾರದಲ್ಲಿ ಅಂದರೆ ಚಡ್ಡಿ ಲಾಠಿಯ ಸರ್ಕಾರದಲ್ಲಿ ಚಡ್ಡಿ ಕಿತ್ತು ಚೆಲ್ಲಾಪಿಲ್ಲಿಯಾದ ಎಲ್ಲರೂ ಹೆಚ್ಚುಕಡಿಮೆ ಲಿವಿಂಗ್ ಪಾರ್ಟ್‌ನರ್ಸ್‌ಗಳೇ, ಒಂದಿಬ್ಬರು ಪರಪ್ಪನ ಅಗ್ರಹಾರ ಸೇರಿದರು.
 
ಸರ್ಕಾರ ತೊರೆದರು. ಅವರಲ್ಲಿ ಒಬ್ಬರು ಬೆನ್ನತೋರಿಸಿ ಎದೆನೋವೆಂದು ಎಗರಾಡುತ್ತ ಆಸ್ಪತ್ರೆ ಸೇರಿ ಪಂಚತಾರಾ ಆತಿಥ್ಯ ಪಡೆಯುತ್ತಿರುವುದಾಗಿ ಗುಸುಗುಸು. ಮತ್ತೊಬ್ಬರು ಆರ್.ಟಿ. ನಗರದಲ್ಲಿ ಕಾಲುಚಾಚಿ ಕೂಲ್ ಆಗಿದ್ದಾರೆಂದು ಸುದ್ದಿ. ಇನ್ನು ಆ ಐದನೆಯವರು `ಶ್ರಿರಾಮ ನೀ ನಾಮ ಏಮಿರುಚಿರಾ ರಾಮ ಎಂತ ರುಚಿರಾ~ ಅಂತ ಪಕ್ಷಬಿಟ್ಟು, ರಕ್ಷಿತಾ ಕಂಪೆನಿ ಸೇರಿ ಕುಕ್ಷಿಯ ಮೇಲೆ ಕೈಯಾಡಿಸುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಲಿವಿಂಗ್ ಪಾರ್ಟ್‌ನರ್ಸ್.

 ಬೆಂದ ಮನೆಯೊಳಗೆ ಹಿರಿದದ್ದೇ ಲಾಭ ಅಂತ ತಾರಾ. ಅತ್ತ ಪೂಜಾ ಗಾಂಧಿ, ಮಾಳವಿಕಾ ಸೊಂಟಕ್ಕೆ ಸೆರಗು ಕಟ್ಟಿ ಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರನೆ ಎಂದು ಹೊರೆ ಎತ್ತಿದರೆ, ಇತ್ತ ಮದುವೆ ಅಂತ ತಾರಮ್ಮಯ್ಯ ಆಡಿಸಿ, ಕೈಕೈ ಮಿಲಾಯಿಸಿದ ರಮ್ಯಾ `ಕೌನ್‌ಬನೇಗಾ ಕರೋಡ್~ ಪತಿಯ ಕನ್ನಡ ರೀಮೇಕ್‌ನಲ್ಲಿ ಪುನೀತ್ ಜತೆ ಮುಖಾಮುಖಿ.

ಇಂತಿರ್ಪ ಸಮಯದೊಳ್ ಭಿನ್ನಮತೀಯರನ್ನು ಒಗ್ಗೂಡಿಸಿ, ಪಿಂಜರಾಪೋಲ್‌ಗಳನ್ನು ಕೆಳಾಗಿಳಿಸಿ, ಒಂದು ಪರ‌್ಯಾಯ ಸರ್ಕಾರ ಕಟ್ಟುವುದರಲ್ಲಿ ತಾವು ಮುಳ್ಳೂರಿಗರ ಕೊಡುಗೆ ಏನು~? ಎಂದು ಕೇಳಿದ ಪ್ರಶ್ನೆಗೆ ಊರ ಹಿರಿಯಜ್ಜಿ ಇಂತೆಂದಿತು.

ನೋಡ್‌ಮಗ ನಾವು ಓಟು ಆಕಾಕ್ಕೆ ಬಂದಾಗ, ನೀಉಟ್ಟಿರಲಿಲ್ಲ. ಔದಾ? ಆರೆತ್ತವಳು ಮೂರೆತ್ತೋಳಿಗೆ ತೊಟ್ಟಿಲಾಡಿಸೋದು ಏಳುಕೊಟ್ಟಂಗೆ ನೀನೇನ ಬಾಸಣ ಬಿಗಿಯೋದು ಬರೆದಿಟ್ಕ- `ಇನ್ನ ನೂರು ವರುಸ ಆದರೂ ರಾಗಿ ಬೀಸೋದು ತೆಪ್ನಿಲ್ಲ. ಮುಂದಿನ ವರುಸ ಎಲೆಕ್ಸನ್ ಬರಲಿ ಮಗ, ನನ್ಮಗ ಯಾವನು ನಿಂತ್ಕತಾನೆ ಅವನ್ನ ಚಾವಡಿತಾವು ಕುಂಡ್ರಿಸಿಕೊಂಡು ಬೇವಿನ ಸೊಪ್ನಾಗೆ ಒಡೆದು ಬೂತ ಬಿಡಿಸ್ತೀಮಿ:

ಮುಳ್ಳೂರ‌್ನೋನು ಯಾವೊನು ಓಟು ಆಕ್ಬಾರ್ದು ಅಂತ ಮನೆಮನೆಗೂ ಏಳ್ಕಂಡು ಬತ್ತೀನಿ. ಮನಿಯಾಗ ನಾಟಿಕೋಳಿ ಐತೆ. ಕೆಂಪು ರಾಗಿ ಐತೆ. ಮುದ್ದೆ ಮಾಡ್ಕಂಡು, ಕೋಳಿ ಸಾರೊಳಗೆ ಕಿಮಿಚಿ ನುಂಗೋದ್ಬುಟು ಯಾವನೋಯ್ತಾನ್ಲೇ ಓಟು ಆಕಕ್ಕೆ~?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT