ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾವಂತರೇಕೆ ಉಗ್ರರಾಗುತ್ತಾರೆ?

Last Updated 8 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಹೊಂಚು ಹಾಕಿದ್ದರು ಎಂದು ಶಂಕಿಸಲಾಗಿದ್ದವರನ್ನು ಬಂಧಿಸಿದ್ದು ಗೊತ್ತೇ ಇದೆ. ಆಶ್ಚರ್ಯದ ವಿಷಯವೆಂದರೆ, ಅದರಲ್ಲಿದ್ದವರೆಲ್ಲಾ ಉತ್ತಮ ಕೆಲಸದಲ್ಲಿದ್ದವರು.

ವಿದ್ಯಾವಂತರು, ಎಂಜಿನಿಯರ್‌ಗಳು, ವೈದ್ಯರು, ಪತ್ರಕರ್ತರು, ಹೀಗೆ ಸಮಾಜದಲ್ಲಿ ಒಳ್ಳೆಯ ಸ್ತರದಲ್ಲಿದ್ದವರು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗುವುದು, ಇತ್ತೀಚಿಗೆ ವಿಶ್ವವ್ಯಾಪಿಯಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣವೇನು?

ಅಮೆರಿಕದ ಎರಡು ಬೃಹತ್ ಕಟ್ಟಡಗಳನ್ನು 2001ರ ಸೆಪ್ಟೆಂಬರ್ 11ರಂದು ವಿಮಾನ ದಾಳಿಯ ಮೂಲಕ ನೆಲಸಮ ಮಾಡಿದ ನಂತರ ನೀತಿ-ನಿಯಮಗಳನ್ನು ರೂಪಿಸುವ ಅನೇಕ ತಜ್ಞರು, ಭಯೋತ್ಪಾದನೆ ಕೃತ್ಯಗಳ ವಿಶ್ಲೇಷಕರು,ಉಗ್ರಗಾಮಿ ಚಟುವಟಿಕೆಗಳ ಪ್ರತಿರೋಧ ಪರಿಣಿತರು ಇಡೀ ವಿಶ್ವವನ್ನೇ ನಡುಗಿಸಿದ ಈ ಘಟನೆಗೆ ಕಾರಣಗಳನ್ನು ಹುಡುಕುತ್ತಾ ಹೋದರು.

ಅನೇಕ ಯುವಕರು ಧರ್ಮದ ಪೊಳ್ಳು ಸಿದ್ಧಾಂತಕ್ಕೆ ಬಲಿಯಾಗಿ  ತಮ್ಮ ಜೀವವನ್ನು ಒತ್ತೆಯಿಟ್ಟಾದರೂ ಇಂತಹ ಘೋರ ದುರಂತಗಳಿಗೆ ಕಾರಣರಾಗುತ್ತಿರುವುದು ಏತಕ್ಕಾಗಿ ಎನ್ನುವ ಬಗ್ಗೆ ವ್ಯಾಪಕವಾಗಿ ಚರ್ಚಿಸಿ, ಶಿಕ್ಷಣ ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಜನ ಇಂತಹ ಉಗ್ರಗಾಮಿ ಸಂಘಟನೆಗಳತ್ತ ಸಾಗುತ್ತಿದ್ದಾರೆ ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು.

ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್‌ಬುಷ್ ಮೊದಲ್ಗೊಂಡು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಭಯೋತ್ಪಾದಕ ಚಟುವಟಿಕೆಗಳ ತಜ್ಞ ಜೆಸ್ಸಿಕಾ ಸ್ಟೆರ್ನ್‌ ಅವರವರೆಗೂ ಎಲ್ಲರೂ ಅಕ್ಷರಜ್ಞಾನ ಇಲ್ಲದಿರುವುದು ಹಾಗೂ ಬಡತನವೇ ಯುವಕರನ್ನು ಉಗ್ರಗಾಮಿಗಳನ್ನಾಗಿ ಪರಿವರ್ತಿಸುತ್ತಿದೆ ಎಂದು ಅಭಿಪ್ರಾಯ ಪಡುತ್ತಾರೆ.

2003 ರಲ್ಲಿ  ವಿಮಾನ ದಾಳಿಯ ಮುಖ್ಯ ಸಂಚಾಲಕ ಖಾಲಿದ್ ಶೇಖ್ ಮೊಹಮದ್, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ  ಬಂಧನಕ್ಕೊಳಗಾದ. ನಂತರ ಆತನನ್ನು ಅಮೆರಿಕನ್ನರು ವಿಚಾರಣೆಗೆ ಗ್ವಾಂಟನಾಮೋ ಬೇ ಗೆ ಕರೆದುಕೊಂಡು ಹೋದರು. 

2007ರಲ್ಲಿ ನಡೆದ ವಿಚಾರಣೆಯಲ್ಲಿ ಈ ದಾಳಿಯ ಮುಖ್ಯ ರೂವಾರಿ ತಾನೇ ಎಂದು ಆತ ಒಪ್ಪಿಕೊಂಡನಲ್ಲದೆ, ಇದಕ್ಕೆ ಆರ್ಥಿಕ ಸಹಾಯ ಹಾಗೂ ಯೋಜನೆಯ ರೂಪ ಕೊಟ್ಟ ವ್ಯಕ್ತಿಯೂ ನಾನೇ ಎಂದು ಹೇಳಿದ. ಅಲ್ಲಿಗೆ ಬಡತನವೇ ಭಯೋತ್ಪಾದನೆಗೆ ಮುಖ್ಯ ಕಾರಣವಲ್ಲ ಎನ್ನುವ ವಾದಕ್ಕೆ ಚಾಲನೆ ಸಿಕ್ಕಿತು.

2005ರಲ್ಲಿ ನಡೆದ ಲಂಡನ್‌ನ `ಟ್ಯೂಬ್ ಟ್ರೈನ್~ಹಾಗೂ ಬಸ್‌ಬಾಂಬ್ ದಾಳಿಯಲ್ಲಿ 38 ಜನ ಸತ್ತು ನೂರಾರು ಜನ ಗಂಭೀರವಾಗಿ ಗಾಯಗೊಂಡರು. ಈ ದಾಳಿಯ ಮುಖ್ಯ ರೂವಾರಿಯಾಗಿದ್ದವನು ಭಾರತೀಯ ಮೂಲದ ಬ್ರಿಟಿಷ್ ಸಂಜಾತ ಹರೂನ್ ರೀದ್ ಅಸ್ವತ್.

ಲಂಡನ್‌ನಲ್ಲಿ ಬಾಂಬ್ ದಾಳಿಯಾದ ದಿನವೇ ಆತ ಪಾಕಿಸ್ತಾನಕ್ಕೆ ಹಾರಿದ್ದ. ಎರಡು ವಾರಗಳ ನಂತರ ಇಂಗ್ಲೆಂಡಿನ ಬೇಹುಗಾರಿಕೆ ಸಂಸ್ಥೆ ಆತನನ್ನು ಜಾಂಬಿಯಾದಲ್ಲಿ ಬಂಧಿಸಿತ್ತು. ಈ ಬಾಂಬ್ ದಾಳಿಯ ಯೋಜನೆಗೆ ಪ್ರಮುಖ ನೆರವು ನೀಡಿದವನೇ ಅಸ್ವತ್ ಎಂದು ತಿಳಿದಾಗ ಇಂಗ್ಲೆಂಡಿನ ಮಿಲಿಟರಿ ಗುಪ್ತಚರ ಇಲಾಖೆಯಲ್ಲಿ ಎಲ್ಲರಿಗೂ ಅಚ್ಚರಿಯಾಗಿತ್ತು.

ಏಕೆಂದರೆ ವೈಯಕ್ತಿಕವಾಗಿ ಆತ ಈ ದಾಳಿಯಲ್ಲಿ ಪಾಲ್ಗೊಂಡಿರಲಿಲ್ಲ. ದುರಂತವೆಂದರೆ ಬ್ರಿಟಿಷ್ ಬೇಹುಗಾರಿಕೆ ಇಲಾಖೆ ಎಂ.ಐ.6 ಈತನನ್ನು ನಂಬಿಕಸ್ಥ ಎನ್ನುವ ಕಾರಣಕ್ಕೆ ತನ್ನ ಅನೇಕ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿತ್ತು. ಆಗಾಗ ಪಾಕಿಸ್ತಾನಕ್ಕೆ ಹೋಗಿ ಆತ ಬ್ರಿಟನ್‌ನ ಬೇಹುಗಾರಿಕೆ ಸಂಸ್ಥೆಗೆ ವರದಿ ಒಪ್ಪಿಸುತ್ತಿದ್ದ.
 
ಆದರೆ ಆತ ಇಂಗ್ಲೆಂಡಿನಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಏಕಮಾತ್ರ ಉದ್ದೇಶದಿಂದ ಎರಡೂ ಕಡೆ ಕೆಲಸ ಮಾಡುತ್ತಿದ್ದ ಒಬ್ಬ ಅಪಾಯಕಾರಿ `ಡಬಲ್‌ಏಜೆಂಟ್~ಎಂದು ಗೊತ್ತಾದಾಗ ಎಂ. ಐ.6 ಬೇಹುಗಾರಿಕೆ ಸಂಸ್ಥೆಯ ಮುಖ್ಯಾಧಿಕಾರಿಗಳಿಗೆಲ್ಲಾ ಅಚ್ಚರಿ.

ಏಕೆಂದರೆ ಒಮ್ಮೆ ಅಮೆರಿಕದ ಪ್ರತಿರೋಧಕ ಬೇಹುಗಾರಿಕೆ ದಳ ಅಮೇರಿಕದಲ್ಲೇ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಅಸ್ವತ್‌ನನ್ನು ಬಂಧಿಸಿದಾಗ ಎಂ. ಐ. 6 ನ ಮುಖ್ಯಸ್ಥರೇ ಈತನ ಪರ ವಹಿಸಿ ಮಾತನಾಡಿ ಆತನನ್ನು ಬಂಧಿಸಬಾರದೆಂದು ಮನವಿ ಮಾಡಿದ್ದರು.

ಲಂಡನ್ ಬಾಂಬ್ ದಾಳಿಯನ್ನು ಅಸ್ವತ್ ಮಾರ್ಗದರ್ಶನದಲ್ಲೇ ನಿರ್ವಹಿಸಿ ತಮ್ಮ ಪ್ರಾಣವನ್ನೂ ಕಳೆದುಕೊಂಡು ನೂರಾರು ಮುಗ್ಧರ ಬಲಿ ತೆಗೆದುಕೊಂಡ ನಾಲ್ವರು ಭಯೋತ್ಪಾದಕರಾದ ಪಾಕಿಸ್ತಾನಿ ಮೂಲದ ಮೊಹಮದ್ ಸಿದ್ದಿಕ್ ಖಾನ್, ಶೇಹ್‌ಜಾದ್ ತನ್ವೀರ್, ಹಸೀಬ್ ಹುಸೇನ್ ಹಾಗೂ ಜಮೈಕಾದಲ್ಲಿ ಹುಟ್ಟಿದ ಜರ್ಮೈನ್ ಲಿಂಡ್ಸೆ. ಇವರೆಲ್ಲಾ ಕುಟುಂಬ ಸಮೇತ ನೆಮ್ಮದಿಯ ಜೀವನ ನಡೆಸುತ್ತಿದ್ದವರೇ.
 
ಮಕ್ಕಳಿಗೆ ಲಂಡನ್‌ನಲ್ಲೇ ವಿದ್ಯಾಭ್ಯಾಸ ಕೊಡಿಸುತ್ತಿದ್ದವರು.  ಲಿಂಡ್ಸೆಯ ಪತ್ನಿ ಗರ್ಭಿಣಿ. ಜೊತೆಗೆ ಈ ನಾಲ್ವರಿಗೂ ಒಳ್ಳೆಯ ವೃತ್ತಿ ಇತ್ತು. ಉತ್ತಮ ಸಂಬಳವೂ ಬರುತ್ತಿತ್ತು. ಹೀಗಾದರೂ ಇವರೆಲ್ಲಾ ಸುಖ, ಶಾಂತಿಯ ನೆಮ್ಮದಿಯ ಜೀವನ ಬಿಟ್ಟು ತಪ್ಪುದಾರಿ ತುಳಿದು ಭಯೋತ್ಪಾದಕರಾದರು. ಲಂಡನ್ ಬಾಂಬ್‌ದಾಳಿಯ ತನಿಖೆಯಿಂದ ಕೇವಲ ಬಡತನ ಹಾಗೂ ಶಿಕ್ಷಣ ಇಲ್ಲದಿರುವುದು ಭಯೋತ್ಪಾದನೆಗೆ ಮೂಲ ಎನ್ನುವ ವಾದಕ್ಕೆ ಕೊಡಲಿ ಪೆಟ್ಟು ಬಿದ್ದಂತಾಯಿತು. 

2007 ಜೂನ್ 29 ರಂದು  ನಡೆದ ಗ್ಲಾಸ್ಗೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಇನ್ನೊಂದು ಉಗ್ರಗಾಮಿ ಚಟುವಟಿಕೆಯ ಯತ್ನದಲ್ಲಿ ಭಾಗಿಯಾಗಿದ್ದ ಬಿಲಾಲ್ ಅಬ್ದುಲ್ಲಾ ಹಾಗೂ ಖಫೀಲ್ ಅಹಮದ್ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಅಲ್ಲೇ ಮೆಕಾನಿಕಲ್ ಎಂಜಿನಿಯರಿಂಗ್  ವಿದ್ಯಾಭ್ಯಾಸ ಪೂರೈಸಿದವನು.
 
ನಂತರ ಬೆಲ್ಫಾಸ್ಟ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪೂರೈಸಿ ಡಾಕ್ಟರೇಟ್ ಪದವಿಗಾಗಿ ಓದುತ್ತಿದ್ದಾಗಲೇ ಈ ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡ ತೀಕ್ಷ್ಣವಾದ ಉಗ್ರಗಾಮಿ ಧೋರಣೆಯಿಂದ ಪ್ರಭಾವಿತನಾದ ವ್ಯಕ್ತಿ ಈತ. ಇದಲ್ಲದೇ ಈತನ ಜೊತೆ ಲಂಡನ್ ಭಯೋತ್ಪಾದಕ ದಾಳಿಯ ಯೋಜನೆಯನ್ನು ರೂಪಿಸಿದ್ದ ಬಿಲಾಲ್ ಅಬ್ದುಲ್ಲಾ  ಇಂಗ್ಲೆಂಡಿನಲ್ಲಿ  ವೈದ್ಯನಾಗಿ ಸೇವೆ ಮಾಡುತ್ತಿದ್ದ.

ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪ್ರಾಧ್ಯಾಪಕರಾಗಿದ್ದ ಜೋರ್ನ್‌-ಸ್ಟೆಫ್ಫೆನ್‌ಪಿಷ್ಕೆಯವರು 1990ರ ನಂತರದ ವರ್ಷಗಳಲ್ಲಿ ಜರ್ಮನಿಯಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು ಮತ್ತು ದ್ವೇಷದ ಅಪರಾಧಗಳ ಬಗ್ಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಕೇವಲ ಉಗ್ರಗಾಮಿಗಳ ಆರ್ಥಿಕ ಸ್ಥಿತಿ ಮಾತ್ರ ಅವರನ್ನು ಭಯಂಕರ ಅಪರಾಧಗಳಿಗೆ ಪ್ರಚೋದಿಸುತ್ತದೆ ಎನ್ನುವ ವಾದಕ್ಕೆ ಸ್ಪಷ್ಟ ಪುರಾವೆ ಸಿಗಲಿಲ್ಲ.

ಆರ್ಥಿಕವಾಗಿ ಸಬಲರಾದವರು ಫ್ಯಾಸಿಸ್ಟ್ ಧೋರಣೆಯ ಮನಸ್ಥಿತಿ ಬೆಳೆಸಿಕೊಂಡಾಗ ಇಂತಹ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಗಳಾಗಲು ಅಥವಾ ಅದಕ್ಕೆ ಬೆಂಬಲಿಸಲು ಹಿಂದೆ ಮುಂದೆ ನೋಡುವುದಿಲ್ಲ  ಎನ್ನುವುದನ್ನು ಈ ಸಮೀಕ್ಷೆ ಒತ್ತಿ ಹೇಳಿತ್ತು.

ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕ ಅಲನ್ ಬಿ. ಕ್ರೂಗರ್ ಹಾಗೂ ಪ್ರಾಗ್ ವಿಶ್ವ ವಿದ್ಯಾನಿಲಯದ ಸಂಶೋಧಕ ಜಿಟ್ಕಾ ಮಾಲೆಕೋವಾ ಅವರು ವೆಸ್ಟ್‌ಬ್ಯಾಂಕ್ ಹಾಗೂ ಗಾಜಾ ಪ್ರದೇಶದಲ್ಲಿ ದ್ವೇಷದ ಅಪರಾಧಗಳ ಬಗ್ಗೆ ನಡೆಸಿದ ಇನೊಂದು ಸಮೀಕ್ಷೆಯಲ್ಲೂ ಪ್ಯಾಲೆಸ್ಟೈನ್ ಹಾಗೂ ಇಸ್ರೇಲಿನ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗವಹಿಸಿದವರಲ್ಲಿ ಹೆಚ್ಚು ಜನ ಸುಶಿಕ್ಷಿತರು ಹಾಗೂ ಆರ್ಥಿಕವಾಗಿ ಸಾಕಷ್ಟು ಸಬಲರಾಗಿದ್ದವರು ಎನ್ನುವುದನ್ನು ಸಂಶೋಧನೆಗಳ ಮೂಲಕ ನಿರೂಪಿಸಿದ್ದಾರೆ.

1990ರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸತ್ತ ಪ್ಯಾಲೆಸ್ಟೈನ್ ಹಾಗೂ ಇಸ್ರೇಲಿನ ಉಗ್ರಗಾಮಿಗಳ ಹಿನ್ನೆಲೆಯನ್ನು ವಿಶ್ಲೇಷಿಸಿದಾಗ ಈ ಸತ್ಯ ಗೋಚರವಾಗಿದೆ. ಅದೂ ಅಲ್ಲದೇ ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಥಿಸುವವರು ಕೂಡ ತಮ್ಮ ಶೈಕ್ಷಣಿಕ ಸಾಧನೆಯಿಂದ ಉತ್ತಮ ಸ್ಥಾನ ಹೊಂದಿ, ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದವರೇ ಆಗಿದ್ದರು.  

 ಹೀಗೆ ಭಯೋತ್ಪಾದಕ ಚಟುವಟಿಕೆಯ ಹೆಜ್ಜೆ ಗುರುತುಗಳ ಹಿಂದೆ ಬಡತನದಿಂದ ಅನಿವಾರ್ಯವಾಗಿ ತೊಡಗಿಸಿಕೊಂಡ ಉದಾಹರಣೆಗಳಿಲ್ಲ. ಶ್ರೀಮಂತರು ಹಾಗೂ ಸುಶಿಕ್ಷಿತರೇ ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT