ಶಕೀಬ್‌ಗೆ 200ನೇ ಪಂದ್ಯದ ಪುಳಕ

ಸೋಮವಾರ, ಜೂನ್ 24, 2019
29 °C

ಶಕೀಬ್‌ಗೆ 200ನೇ ಪಂದ್ಯದ ಪುಳಕ

Published:
Updated:
Prajavani

ಲಂಡನ್ (ಎಎಫ್‌ಪಿ): ಬಾಂಗ್ಲಾದೇಶದ ಆಲ್‌ರೌಂಡ್ ಆಟಗಾರ ಶಕೀಬ್ ಅಲ್ ಹಸನ್ ಏಕದಿನ ಕ್ರಿಕೆಟ್‌ನಲ್ಲಿ 200ನೇ ಪಂದ್ಯ ಆಡಲು ಸಜ್ಜಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಈ ಮಹತ್ವದ ಮೈಲಿಗಲ್ಲು ಸ್ಥಾಪಿಸುತ್ತಿರುವುದು ವಿಶೇಷ.

ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು ಶಕೀಬ್‌ಗೆ ಗೆಲುವಿನ ಉಡುಗೊರೆ ನೀಡಲು ತಂಡದ ಆಟಗಾರರು ಸಜ್ಜಾಗಿದ್ದಾರೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 21 ರನ್‌ಗಳಿಂದ ಮಣಿಸಿರುವುದರಿಂದ ತಂಡದ ಭರವಸೆ ಹೆಚ್ಚಿದೆ. ಆ ಪಂದ್ಯದಲ್ಲಿ ಶಕೀಬ್‌ 75 ರನ್ ಗಳಿಸಿದ್ದರು. ಇದರ ಪರಿಣಾಮ ತಂಡ ಆರು ವಿಕೆಟ್‌ಗಳಿಗೆ 330 ರನ್ ಗಳಿಸಿತ್ತು. ಇದು ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಎದುರಾಳಿಗಳನ್ನು 309 ರನ್‌ಗಳಿಗೆ ನಿಯಂತ್ರಿಸಿದ ತಂಡದ ಪರವಾಗಿ ಶಕೀಬ್ ಒಂದು ವಿಕೆಟ್ ಕಬಳಿಸಿದ್ದರು.

ಈ ಮೂಲಕ ಶಕೀಬ್, ಐದು ಸಾವಿರ ರನ್ ಮತ್ತು 250 ವಿಕೆಟ್ ಗಳಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದರು. ಶ್ರೀಲಂಕಾದ ಸನತ್ ಜಯಸೂರ್ಯ, ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲಿಸ್, ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಅಬ್ದುಲ್ ರಜಾಕ್ ಈ ಸಾಧನೆ ಮಾಡಿದ್ದ ಇತರ ಆಟಗಾರರು.

ಈ ಸಾಧನೆಗಳು ಬಾಂಗ್ಲಾದೇಶವನ್ನು ಭರವಸೆಯ ಅಲೆಯಲ್ಲಿ ತೇಲಿಸಿದೆಯಾದರೂ ನ್ಯೂಜಿಲೆಂಡ್ ತಂಡವನ್ನು ಮಣಿಸುವುದು ಸುಲಭವಲ್ಲ. ಕೇನ್ ವಿಲಿಯಮ್ಸನ್ ಬಳಗ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿತ್ತು. 

ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮರೆದಿದ್ದ ನ್ಯೂಜಿಲೆಂಡ್ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಶಕ್ತಿಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿತ್ತು. ಶ್ರೀಲಂಕಾವನ್ನು ಕೇವಲ 136 ರನ್‌ಗಳಿಗೆ ಆಲೌಟ್ ಮಾಡಿದ್ದ ನ್ಯೂಜಿಲೆಂಡ್ ನಂತರ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ಸುಲಭವಾಗಿ ಗೆದ್ದಿತ್ತು. ಬೌಲಿಂಗ್‌ನಲ್ಲಿ ಮ್ಯಾಟ್‌ ಹೆನ್ರಿ ಮತ್ತು ಲಾಕಿ ಫರ್ಗುಸನ್ ಪ್ರಭಾವಿ ದಾಳಿ ಸಂಘಟಿಸಿದ್ದರು. ಇಂಥ ಬಲಿಷ್ಠ ತಂಡವನ್ನು ಎದುರಿಸುವ ಸವಾಲು ಈಗ ‘ಹುಲಿ’ಗಳ ಮುಂದೆ ಇದೆ.

ತಂಡಗಳು: ನ್ಯೂಜಿಲೆಂಡ್‌: ಕೇನ್ ವಿಲಿಯಮ್ಸನ್ (ನಾಯಕ), ಟಾಮ್‌ ಬ್ಲಂಡೆಲ್, ಟ್ರೆಂಟ್ ಬೌಲ್ಟ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್ (ವಿಕೆಟ್‌ ಕೀಪರ್), ಕಾಲಿನ್ ಮನ್ರೊ, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್‌, ಮಿಷೆಲ್ ಸ್ಯಾಂಟನರ್‌, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ಲಿಟನ್ ದಾಸ್, ಮೆಹದಿ ಹಸನ್, ಮೊಸಾಡೆಕ್ ಹೊಸೇನ್, ರುಬೆಲ್ ಹೊಸೇನ್, ತಮೀಮ್ ಇಕ್ಬಾಲ್, ಅಬು ಜಾಯೇದ್, ಮಹಮ್ಮದುಲ್ಲ, ಮೊಹಮ್ಮದ್ ಮಿಥುನ್, ಮುಷ್ಫಿಕುರ್ ರಹೀಮ್ (ವಿಕೆಟ್‌ ಕೀಪರ್), ಮುಸ್ತಫಿಜುರ್ ರಹಿಮಾನ್, ಶಬ್ಬೀರ್ ರಹಿಮಾನ್, ಮೊಹಮ್ಮದ್ ಸೈಫುದ್ದೀನ್, ಸೌಮ್ಯ ಸರ್ಕಾರ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !