ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಕಣ್ಮಣಿ ಸಚಿನ್‌ಗೆ 50 ವರ್ಷ: A ಯಿಂದ Z ವರೆಗೆ ವಿಶಿಷ್ಟ ವಿವರಣೆ

Published 24 ಏಪ್ರಿಲ್ 2023, 9:02 IST
Last Updated 24 ಏಪ್ರಿಲ್ 2023, 9:02 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕ್ರಿಕೆಟ್‌ ಕಣ್ಮಣಿ ಸಚಿನ್‌ ತೆಂಡೂಲ್ಕರ್ ಅವರು ಸೋಮವಾರ 50ನೇ ವರ್ಷ ಪೂರೈಸಲಿದ್ದಾರೆ. ಈ ದಿಗ್ಗಜ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ 10 ವರ್ಷಗಳಾದರೂ ಈಗಲೂ ಜನಮಾನಸದಲ್ಲಿ ಅವರ ಆಟ, ವ್ಯಕ್ತಿತ್ವ ಹಸುರಾಗಿಯೇ ಇದೆ.

ಮುಂಬೈ ಆಟಗಾರನ ಮೂರೂವರೆ ದಶಕಗಳ ಕ್ರಿಕೆಟ್‌ ಜೀವನದ ಹಾದಿಯಲ್ಲಿ ಬಂದ ಜನರು, ಸ್ಥಳಗಳು, ಪ್ರಮುಖ ಇನಿಂಗ್ಸ್‌ನ ಮಜಲುಗಳನ್ನು ‘ಎ’ಯಿಂದ ‘ಝೆಡ್‌’ವರೆಗಿನ ಅಕ್ಷರಮಾಲೆಯ ಅನುಕ್ರಮಣಿಕೆಯಲ್ಲಿ ಪಿಟಿಐ ಸುದ್ದಿಸಂಸ್ಥೆ ಇಲ್ಲಿ ದಾಖಲಿಸಿದೆ.

A: ಅಂಜಲಿ, ಅರ್ಜುನ್‌, ಅಜಿತ್‌. ಅಂಜಲಿ ಅವರು ಜೀವನಸಂಗಾತಿಯಾಗಿ ಸಚಿನ್‌ ಬೆನ್ನಹಿಂದೆ ನಿಂತವರು. ಮಗ ಅರ್ಜುನ್‌ ತಂದೆಯ ಆಡಿದ ಆಟದಲ್ಲೇ ಮುಂದುವರಿಯುತ್ತಿದ್ದಾರೆ. ಸಚಿನ್‌ ಕ್ರಿಕೆಟ್ ಆರಂಭದ ದಿನಗಳಲ್ಲಿ ಬೆನ್ನೆಲುಬಾಗಿ ನಿಂತವರು ಸೋದರ ಅಜಿತ್‌.

B: ಬ್ರಿಸ್ಟಲ್‌– ಈ ಕ್ರಿಕೆಟ್‌ ತಾಣದ ಜೊತೆ ಸಚಿನ್‌ಗೆ ಭಾವನಾತ್ಮಕ ನಂಟು. 1999ರ ವಿಶ್ವಕಪ್‌ ಮಧ್ಯೆಯೇ ತಂದೆ ರಮೇಶ್ ತೆಂಡೂಲ್ಕರ್‌ ಮುಂಬೈನಲ್ಲಿ ನಿಧನರಾಗಿದ್ದರು. ವಾರದಲ್ಲೇ ಇಂಗ್ಲೆಂಡ್‌ಗೆ ಮರಳಿದ ಸಚಿನ್‌ ಇಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಬಿರುಸಿನ 140 ರನ್‌ ಹೊಡೆದಿದ್ದರು.

C: ಸೆಂಚೂರಿಯನ್‌– ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತಮ್ಮ ಅಮೋಘ ಇನಿಂಗ್ಸ್‌ಗಳಲ್ಲಿ ಒಂದನ್ನು ದಕ್ಷಿಣ ಆಫ್ರಿಕದ ಈ ಕ್ರೀಡಾಂಗಣದಲ್ಲಿ 2003ರ ವಿಶ್ವಕಪ್‌ ವೇಳೆ ಆಡಿದ್ದರು. ಪಾಕಿಸ್ತಾನ ವಿರುದ್ಧ ಗಳಿಸಿದ್ದ 98 ರನ್‌ಗಳು ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಅವಿಸ್ಮರಣೀಯ. ಶೋಯೆಬ್‌ ಅಖ್ತರ್‌ ಬೌಲಿಂಗ್‌ನಲ್ಲಿ ಪಾಯಿಂಟ್‌ ಮೇಲಿಂದ ಎತ್ತಿದ ಸಿಕ್ಸ್‌ ಸದಾ ನೆನಪಿನಲ್ಲಿ ಉಳಿಯವ ಹೊಡೆತ.

D: ‘ದಿ ಡಾನ್‌’. ಡಾನ್ ಬ್ರಾಡ್ಮನ್‌ ಟೆಸ್ಟ್‌ನಲ್ಲಿ 99.94ರ ಸರಾಸರಿಯೊಂದಿಗೆ ವಿಶ್ವದ ಮಹೋನ್ನತ ಬ್ಯಾಟರ್‌ ಎನಿಸಿದ್ದಾರೆ. ಆದರೆ ಇಂಥ ಮಹಾನ್‌ ಆಟಗಾರನೇ, ಸಚಿನ್ ಅವರ ಬ್ಯಾಟಿಂಗ್‌ ಶೈಲಿ ತಮ್ಮ ಆಟದ ರೀತಿಯಲ್ಲೇ ಇದೆ ಎಂದು ಮೆಚ್ಚುಗೆ ಸೂಚಿಸಿದ್ದು ಕ್ರಿಕೆಟ್‌ ಲೋಕದ ಗಮನ ಸೆಳೆದಿತ್ತು.

E: ಈಡನ್‌ ಗಾರ್ಡನ್ಸ್‌. ತವರು ವಾಂಖೆಡೆ ಸಚಿನ್‌ ಪಾಲಿಗೆ ಪಂಚಪ್ರಾಣ. ಇಲ್ಲಿಯೇ 200ನೇ ಟೆಸ್ಟ್ ಆಡಿರಬಹುದು. ಆದರೆ ಈಡನ್‌ ಗಾರ್ಡನ್‌ ಅವರ ಮೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದು. 1993ರ ಹೀರೊ ಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಅವರು ಮೊದಲ ಬಾರಿ ಬೌಲರ್‌ ಆಗಿ ಪ್ರಸಿದ್ಧಿಗೆ ಬಂದರು. ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದಲ್ಲಿ ಕೊನೆಯ ಓವರ್‌ ಬೌಲ್‌ ಮಾಡಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. 50ನೇ ಓವರ್‌ನಲ್ಲಿ ಬರೇ 3 ರನ್‌ ಕೊಟ್ಟು ಬೌಲರ್‌ ಆಗಿಯೂ ಸೈ ಎನಿಸಿದರು.

F: (ಫೆರಾರಿ): ತೆಂಡೂಲ್ಕರ್ ಅವರಿಗೆ ‘ಫೆರಾರಿ’ ಅಚ್ಚುಮೆಚ್ಚಿನ ಕಾರು. ಫೆರಾರಿ ಅವರ ಮೆಚ್ಚಿನ ಫಾರ್ಮುಲಾ ವನ್‌ ತಂಡ ಕೂಡ. 2002ರಲ್ಲಿ ಅವರು 29ನೇ ಟೆಸ್ಟ್‌ ಶತಕ ಹೊಡೆದು ಡಾನ್‌ ಬ್ರಾಡ್ಮನ್‌ ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾಗ ಫೆರಾರಿ ಕಂಪನಿ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿತ್ತು.

G: ಗುಜರನ್‌ವಾಲಾ: ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸಿರಬಹುದು. ಆದರೆ 463 ಪಂದ್ಯಗಳಲ್ಲಿ ಮೊದಲ ಏಕದಿನ ಪಂದ್ಯ ಆಡಿದ್ದು ಪಾಕಿಸ್ತಾನದ ಈ ನಗರದಲ್ಲಿ. ಆದರೆ ಖಾತೆ ತೆರೆಯದೇ ನಿರ್ಗಮಿಸಿದ್ದರು.

H: ಹ್ಯಾರಿಸ್‌ ಶೀಲ್ಡ್‌. ಮುಂಬೈನ ಈ ಪ್ರಸಿದ್ಧ ಅಂತರ ಶಾಲಾ ಕ್ರಿಕೆಟ್‌ ಟೂರ್ನಿಯಲ್ಲಿ ಅವರು ವಿನೋದ್ ಕಾಂಬ್ಳಿ ಜೊತೆ 664 ರನ್‌ ಸೇರಿಸುವ ಮೂಲಕ ಮೊದಲ ಬಾರಿ ಕ್ರಿಕೆಟ್‌ ಲೋಕದ ಗಮನ ಸೆಳೆದಿದ್ದರು.

I: ಇಂಜಮಾಮ್‌ ಉಲ್‌ ಹಕ್‌. ಪಾಕಿಸ್ತಾನ ತಂಡದ ಈ ಮಾಜಿ ನಾಯಕನ ಮಗ ಇಬ್ತಿಸಾಮ್‌, ಸಚಿನ್‌ ಅವರ ದೊಡ್ಡ ಅಭಿಮಾನಿ. 2004ರ ಪಾಕ್‌ ಪ್ರವಾಸದ ವೇಳೆ, ನೆಟ್‌ ಪ್ರಾಕ್ಟೀಸ್‌ ಸಂದರ್ಭ ಶಾಲಾ ವಿದ್ಯಾರ್ಥಿಯಾಗಿದ್ದ ಮಗನನ್ನು ಕರೆದುಕೊಂಡುಬಂದು ಸಚಿನ್‌ಗೆ ಪರಿಚಯಿಸಿದ್ದರು.

J: ಜಾನ್‌ ಮೆಕೆನ್ರೊ: ತೆಂಡೂಲ್ಕರ್ ಹದಿಹರೆಯದಲ್ಲಿದ್ದಾಗ ಟೆನಿಸ್‌ ಅಭಿಮಾನಿ. ಅಮೆರಿಕದ ಮೆಕೆನ್ರೊ ಅವರಿಗೆ ನೆಚ್ಚಿನ ಟೆನಿಸಿಗ. ಮನೆಯ ವಠಾರದಲ್ಲಿ ಮೆಕೆನ್ರೊ ರೀತಿ ತಲೆಗೆ ರೆಡ್‌ ಹೆಡ್‌ಬ್ಯಾಂಡ್ ಧರಿಸಿ ಓಡಾಡಿ ಖುಷಿಪಡುತ್ತಿದ್ದರು.

K: ಕಾಂಬ್ಳಿ. ಅಂತರ ಶಾಲಾ ಕ್ರಿಕೆಟ್‌ ಟೂರ್ನಿಯಲ್ಲಿ ವಿಶ್ವದಾಖಲೆ ಸ್ಥಾಪಿಸಿದಾಗ ಸಚಿವ ಅವರ ಜೊತೆಗಾರನಾಗಿದ್ದವರು ಕಾಂಬ್ಳಿ. ‘ಸಚಿನ್‌ ಲಿಫ್ಟ್‌ ಬಳಸಿ ಕ್ರಿಕೆಟ್‌ನ ಉತ್ತುಂಗಕ್ಕೆ ಏರಿದರು. ನಾನು ಮೆಟ್ಟಿಲು ಹತ್ತುತ್ತ ಕುಳಿತೆ’ ಎನ್ನುವ ಕಾಂಬ್ಳಿ ಹೇಳಿಕೆ ಆಗ ಪ್ರಸಿದ್ಧಿ ಪಡೆದಿತ್ತು.

L: ಲಾರಾ. ಒಂದು ಕಾಲದಲ್ಲಿ ಸಚಿನ್‌ ಮತ್ತು ಬ್ರಯಾನ್‌ ಲಾರಾ ಅವರಲ್ಲಿ ಯಾರು ಶ್ರೇಷ್ಠ ಆಟಗಾರ ಎನ್ನುವ ಚರ್ಚೆ ನಡೆದಿತ್ತು. ಆದರೆ ಇಬ್ಬರೂ 1990ರ ದಶಕದಲ್ಲಿ ಅಮೋಘ ಇನಿಂಗ್ಸ್‌ಗಳ ಮೂಲಕ ಕ್ರಿಕೆಟ್‌ ಜಗತ್ತನ್ನು ಬೆಳಗಿಸಿದರು. ಪೈಪೋಟಿಯಲ್ಲೂ ಲಾಲಿತ್ಯವಿತ್ತು.

M: ಮೆಕ್‌ಗ್ರಾತ್‌. ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್‌ ಗ್ಲೆನ್‌ ಮೆಕ್‌ಗ್ರಾತ್ ನಡುವಣ ಟೆಸ್ಟ್‌ ಪೈಪೋಟಿ ಸದಾ ಲವಲವಿಕೆಯಿಂದ ಕೂಡಿರುತಿತ್ತು. 1990 ಮತ್ತು 2000ನೇ ದಶಕದಲ್ಲಿ ಇಬ್ಬರೂ ಹಲವು ಸಲ ಮುಖಾಮುಖಿಯಾಗಿದ್ದರು. ಯಾರೊಬ್ಬರೂ ಇನ್ನೊಬ್ಬರ ಮೇಲೆ ಆಧಿಪತ್ಯ ಸಾಧಿಸಲಿಲ್ಲ.

N: ನರಸಿಂಗ್ ದೇವನಾರಾಯಣ್. ವೆಸ್ಟ್‌ ಇಂಡೀಸ್‌ನ ಈ ಆಫ್‌ ಸ್ಪಿನ್ನರ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರಲ್ಲ. ಆದರೆ 2013ರಲ್ಲಿ ವಾಂಖೆಡೆಯಲ್ಲಿ ನಡೆದ ಎರಡನೇ ಟೆಸ್ಟ್‌ ಸಂದರ್ಭದಲ್ಲಿ ಸಚಿನ್‌ ಅವರ ವಿಕೆಟ್‌ ಪಡೆದ ಕೊನೆಯ ಬೌಲರ್‌ ಎನಿಸಿದರು. ಸಚಿನ್‌ 74 ರನ್‌ ಗಳಿಸಿದ್ದರು.

O: ಓಲ್ಡ್‌ಟ್ರಾಫರ್ಡ್‌. ಈ ಕ್ರೀಡಾಂಗಣವನ್ನು ಸಚಿನ್ ಮೆರೆಯಲಿಕ್ಕಿಲ್ಲ. ಇಲ್ಲಿಯೇ ತಮ್ಮ ನೂರು ಅಂತರರಾಷ್ಟ್ರೀಯ ಶತಕಗಳ ಪೈಕಿ ಮೊದಲನೆಯನ್ನು ಬಾರಿಸಿದ್ದರು. ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಜೇಯ 199 ರನ್‌ ಗಳಿಸಿದ್ದರಿಂದ ಭಾರತ ಸೋಲಿನ ದವಡೆಯಿಂದ ಪಾರಾಯಿತು.

P: ಪೆಷಾವರ. ಸಚಿನ್‌ ವಿಶ್ವಕ್ರಿಕೆಟ್‌ಗೆ ತಮ್ಮ ಆಗಮನ ಸಾರಿದ್ದು ಇಲ್ಲಿ. ಪ್ರದರ್ಶನ ಪಂದ್ಯವೊಂದರಲ್ಲಿ ಅವರು ಕೇವಲ 18 ಎಸೆತಗಳಲ್ಲಿ 53 ರನ್‌ ಬಾರಿಸಿ ಟಿ–20 ಶೈಲಿಯಲ್ಲಿ ಆಡಿದ್ದರು. ಮಳೆಯಿಂದಾಗಿ ಪಂದ್ಯ ಪೂರ್ಣವಾಗಿ ನಡೆಯಲಿಲ್ಲ.

Q: ಅಬ್ದುಲ್‌ ಖಾದಿರ್. ಪಾಕಿಸ್ತಾನ ವಿರುದ್ಧ ಪಂದ್ಯವೊಂದರಲ್ಲಿ ಮುಷ್ತಾಕ್‌ ಅಹಮದ್‌ ವಿರುದ್ಧ ಸಚಿನ್‌ ಆಕ್ರಮಣಕಾರಿ ಆಟವಾಡಿದಾಗ ಖಾದಿರ್‌ ಹೇಳಿದ್ದರು– ‘ಹುಡುಗನಿಗೇಕೆ ಬಾರಿಸುತ್ತಿ. ನನ್ನ ಬೌಲಿಂಗ್‌ನಲ್ಲಿ ಹೊಡೆದು ತೋರಿಸು!’. ನಂತರದ್ದು ಇತಿಹಾಸ. ಖಾದಿರ್ ಅವರ ಒಂದೇ ಓವರ್‌ನಲ್ಲಿ ಸಚಿನ್‌ 28 ರನ್ ಚಚ್ಚಿದ್ದರು. ನಂತರವೂ ಅವರಿಗೆ ದುಃಸ್ವಪ್ನದಂತೆ ಕಾಡಿದ್ದರು.

R: ರಾಹುಲ್‌ ದ್ರಾವಿಡ್‌. ಇನ್ನೊಬ್ಬ ಪ್ರತಿಭಾವಂತ ಆಟಗಾರ ದ್ರಾವಿಡ್‌ ಜೊತೆ ಟೆಸ್ಟ್‌ ಪಂದ್ಯಗಳಲ್ಲಿ ಸಚಿನ್‌ 20 ಕ್ಕೂ ಹೆಚ್ಚುಬಾರಿ ಶತಕದ ಜೊತೆಯಾಟಗಳಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಜೊತೆಯಾಟಗಳಲ್ಲಿ ಒಟ್ಟು 6,920 ರನ್‌ಗಳು ಹರಿದುಬಂದಿವೆ.

S:ಶಿವಾಜಿ ಪಾರ್ಕ್ ಜಿಮ್ಖಾನ. ಇಲ್ಲಿಯೇ ಕೋಚ್‌ ರಮಾಕಾಂತ ಅಚರೇಕರ್‌ ಅವರ ಗರಡಿಯಲ್ಲಿ ಆಟದ ಸೂಕ್ಷ್ಮತೆಗಳನ್ನು ಕಲಿತವರು ಸಚಿನ್‌. ಈ ಜಿಮ್ಖಾನಾ ಮುಂಬೈ ಕ್ರಿಕೆಟ್‌ನ ತೊಟ್ಟಿಲು ಎನ್ನುವ ಹೆಸರೂ ಪಡೆದಿದೆ.

T: ಟೊರಾಂಟೊ. ಇಲ್ಲಿನ ಸ್ಕೇಟಿಂಗ್ ಮತ್ತು ಕರ್ಲಿಂಗ್ ಕ್ಲಬ್‌ ಮೈದಾನ ಸಚಿನ್‌ ಅವರಿಗೆ ವಿಶೇಷವಾದುದು. ಅವರು ಪಾಕ್‌ ವಿರುದ್ಧ ಇಲ್ಲಿಯೇ 89 ಎಸೆತಗಳಲ್ಲಿ 89 ರನ್‌ ಬಾರಿಸಿ ನಾಯಕನಾಗಿ ಮೊದಲ ಬಾರಿ ಪಂದ್ಯದ ಆಟಗಾರ ಪುರಸ್ಕಾರ ಪಡೆದಿದ್ದರು.

U:ಯು2. ತೆಂಡೂಲ್ಕರ್ ಅವರು ಹಿಂದಿ ಚಿತ್ರರಂಗದ ಮಹಾನ್‌ ಗಾಯಕಿ ಲತಾ ಮಂಗೇಶ್ಕರ್ ಅವರ ಅಪ್ಪಟ ಅಭಿಮಾನಿ. ಆದರೆ ಇಂಗ್ಲಿಷ್‌ ಹಾಡುಗಳಿಗೆ ಬಂದರೆ ಐರಿಸ್‌ ರಾಕ್‌ ಬ್ಯಾಂಡ್‌ ‘ಯು2’ ಸಚಿನ್‌ಗೆ ಅಚ್ಚುಮೆಚ್ಚಿನದು. ಅಭಿಮಾನಿ. ಅವರ u2 ಫೆವರೀಟ್‌ ಹಾಡು ‘ವೇರ್‌ ಸ್ಟ್ರೀಟ್ಸ್‌ ಹ್ಯಾವ್‌ ನೋ ನೇಮ್‌..’

V: ವಿರಾಟ್ ಕೊಹ್ಲಿ. ತೆಂಡೂಲ್ಕರ್‌ ನಿವೃತ್ತಿ ಪ್ರಕಟಿಸಿದಾಗ, ತಂದೆಯ ನೆನಪಿನಲ್ಲಿ ಧರಿಸಿದ್ದ ಸರವನ್ನು ವಿರಾಟ್‌, ಅವರಿಗೆ ಕೊಟ್ಟಿದ್ದರು. ವಾಂಖೆಡೆ ಡ್ರೆಸಿಂಗ್‌ ರೂಮ್‌ನಲ್ಲಿ ‘ತುಝ್‌ ಮೇ ರಬ್‌ ದಿಕ್ತಾ ಹೇ...’ ಎಂಬ ಆಗಿನ ಜನಪ್ರಿಯ ಗೀತೆ ಹಾಡಿದ್ದರು.

W: ವಿಂಬಲ್ಡನ್‌. ಸಚಿನ್‌ ವಿಂಬಲ್ಡನ್‌ ಟೂರ್ನಿಯನ್ನು ತಪ್ಪಿಸಿಕೊಳ್ಳುವುದು ಕಡಿಮೆ. ವಿಐಪಿ ಝೋನ್‌ನಲ್ಲಿ ಕುಳಿತು ಸೆಂಟರ್‌ಕೋರ್ಟ್‌ನಲ್ಲಿ ನಡೆಯುವ ಅಗ್ರ ಆಟಗಾರರ ಪಂದ್ಯಗಳನ್ನು ಸಚಿನ್‌ ವೀಕ್ಷಿಸುತ್ತಾರೆ.

X:ಸೇಂಟ್‌ ಕ್ಸೇವಿಯರ್‌ ಸ್ಕೂಲ್‌. ಈ ಶಾಲೆಯ ವಿರುದ್ಧವೇ ಶಾರದಾಶ್ರಮ ಶಾಲೆ ಪ್ರತಿನಿಧಿಸಿ ಸಚಿನ್‌ ಮತ್ತು ವಿನೋದ್‌ ಕಾಂಬ್ಳಿ 664 ರನ್‌ಗಳ ದಾಖಲೆಯ ಜೊತೆಯಾಟವಾಡಿದ್ದರು.

Z: ಜಿಂಬಾಬ್ವೆ. ಷಾರ್ಜಾದಲ್ಲಿ 1998ರ ಚಾಂಪಿಯನ್ಸ್‌ ಟ್ರೋಫಿ ಲೀಗ್‌ ಪಂದ್ಯದಲ್ಲಿ ಜಿಂಬಾಬ್ವೆಯ ವೇಗಿ ಹೆನ್ರಿ ಒಲೊಂಗಾ ಅವರು ಸಚಿನ್‌ ಅವರನ್ನು ಬೌನ್ಸರ್‌ನಿಂದ ಕಂಗೆಡಿಸಿ ವಿಕೆಟ್ ಪಡೆದಿದ್ದರು. ಆದರೆ ಫೈನಲ್‌ನಲ್ಲಿ ಸಚಿನ್ ಆಕರ್ಷಕ ಆಟವಾಡಿ 124 ರನ್‌ ಹೊಡೆದಿದ್ದರು. ಭಾರತ 120 ಎಸೆತಗಳಿರುವಂತೆ 10 ವಿಕೆಟ್‌ಗಳಿಂದ ಪಂದ್ಯ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT