ಸ್ಪಾಟ್‌ ಫಿಕ್ಸಿಂಗ್ ಹಗರಣದ ಬಗ್ಗೆ ರಜಾಕ್‌– ಏಟಿನ ನಂತರ ಬಾಯಿಬಿಟ್ಟ ಅಮೀರ್‌.....

ಬುಧವಾರ, ಜೂನ್ 26, 2019
23 °C

ಸ್ಪಾಟ್‌ ಫಿಕ್ಸಿಂಗ್ ಹಗರಣದ ಬಗ್ಗೆ ರಜಾಕ್‌– ಏಟಿನ ನಂತರ ಬಾಯಿಬಿಟ್ಟ ಅಮೀರ್‌.....

Published:
Updated:

ಕರಾಚಿ: ‘ಮೊಹಮದ್‌ ಆಮೀರ್‌ ಅವರಿಗೆ ಆಗಿನ ಪಾಕಿಸ್ತಾನ ಏಕದಿನ ತಂಡದ ನಾಯಕ ಅಫ್ರೀದಿ ಕಪಾಳಕ್ಕೆ ಹೊಡೆದ ನಂತರವಷ್ಟೇ ಅವರು ‘ಸ್ಪಾಟ್‌ ಫಿಕ್ಸಿಂಗ್‌’ ಬಗ್ಗೆ ಬಾಯಿಬಿಟ್ಟಿದ್ದರು. ಆದರೆ ಸಲ್ಮಾನ್‌ ಬಟ್‌, ಪಾಕಿಸ್ತಾನದ ಆ ವಿವಾದಿತ ಇಂಗ್ಲೆಂಡ್‌ ಪ್ರವಾಸಕ್ಕಿಂತ ಸಾಕಷ್ಟು ಮೊದಲೇ ಈ ಅಕ್ರಮದಲ್ಲಿ ಭಾಗಿಯಾಗಿದ್ದರು’ ಎಂದು ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್ ಹಗರಣ ಪಾಕಿಸ್ತಾನ ಕ್ರಿಕೆಟ್‌ಗೆ ಮಸಿಬಳಿದಿತ್ತು. ಜಿಎನ್‌ಎಸ್‌ ಸುದ್ದಿವಾಹಿನಿ ಜೊತೆ ಮಾತನಾಡುವಾಗ ಅಮೀರ್‌ ಪ್ರಕರಣದ ಬಗ್ಗೆ ಅವರು ಪ್ರಸ್ತಾಪಿಸಿದರು.

‘ಆತ (ಅಫ್ರೀದಿ) ಕೊಠಡಿಯಿಂದ ಹೊರಹೋಗುವಂತೆ ನನಗೆ ಹೇಳಿದ. ಕೆಲವೇ ಕ್ಷಣಗಳ ನಂತರ ಕೆನ್ನೆಗೆ ಹೊಡೆದ ಸದ್ದು ಕೇಳಿಸಿತು. ನಂತರ ಅಮೀರ್‌ ಸತ್ಯವನ್ನು ಬಿಚ್ಚಿಟ್ಟರು’ ಎಂದು 39 ವರ್ಷದ ರಜಾಕ್‌ ಹೇಳಿದರು.

‘ಪಾಕಿಸ್ತಾನ ಕ್ರಿಕೆಟ್‌ಗೆ ಕಳಂಕ ತಂದ ಈ ಘಟನೆಗೆ ಪಿಸಿಬಿ ಕೂಡ ಕಾರಣ. ಅದು ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ಐಸಿಸಿ ಎದುರು ತನ್ನ ಕ್ಷಮತೆ ಪ್ರದರ್ಶನ ಮಾಡುವ ಬದಲು, ತಾನೇ ನೇರವಾಗಿ ಮೂವರು ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಅವರ ಮೇಲೆ ಒಂದೆರಡು ವರ್ಷ ನಿಷೇಧ ಹೇರಬಹುದಿತ್ತು. ಹಾಗೆ ಮಾಡದ ಕಾರಣ ಪಿಸಿಬಿ ಮಾನ ಹರಾಜಾಯಿತು’ ಎಂದರು.

‘ಇಂಗ್ಲೆಂಡ್‌ನಲ್ಲಿ ಈ ಹಗರಣ ಬೆಳಕಿಗೆ ಬರುವ ಮೊದಲೇ ಬಟ್‌ ಉದ್ದೇಶಪೂರ್ವಕವಾಗಿ ವಿಕೆಟ್‌ ನೀಡುತ್ತಿದ್ದರು ಮತ್ತು ಬೇಕೆಂತಲೇ ಡಾಟ್‌ ಬಾಲ್‌ಗಳನ್ನು ಆಡುತ್ತಿದ್ದರು’ ಎಂದರು. ‘ನಾನು ನನ್ನ ಆತಂಕವನ್ನು ಶಹೀದ್‌ ಆಫ್ರೀದಿ ಜೊತೆ ಹಂಚಿಕೊಂಡಿದ್ದೆ. ಆದರೆ ಅವರು ಇದು ನಿನ್ನ ಭ್ರಮೆ. ಅಂಥದ್ದೇನೂ ಇಲ್ಲವೆಂದರು. ಆದರೆ ವೆಸ್ಟ್‌ ಇಂಡೀಸ್‌ನಲ್ಲಿ ಟಿ–20 ಪಂದ್ಯದ ವೇಳೆ ಬಟ್‌ ತಂಡದ ಹಿತರಕ್ಷಣೆಗೆ ಮುಂದಾಗದಿರುವುದು ನನಗೆ ಮನವರಿಕೆಯಾಯಿತು’ ಎಂದು ರಜಾಕ್‌ ಹೇಳಿದರು.

‘ಬಟ್‌ ಜೊತೆ ಆಡುವಾಗ ಒಂದು ರನ್‌ಗೆ ಓಡುವಂತೆ ಕೇಳಿದೆ. ಆದರೆ ಅವರು ಕಿವಿಗೊಡಲಿಲ್ಲ’ ಎಂದು ನೆನಪಿಸಿಕೊಂಡ ಅವರು, ‘ರನ್‌ ಬೇಡವೆನ್ನುವ ಅವರ ಈ ತಂತ್ರದಿಂದ ನನಗೆ ಆಚ್ಚರಿಯಾಯಿತು. ನನಗೂ ಆಡಲು ಬಿಡುವಂತೆ ಕೇಳಿದೆ. ಅವರು ಎರಡು– ಮೂರು ಎಸೆತಗಳಲ್ಲಿ ರನ್‌ ಗಳಿಸದೇ ನಂತರವಷ್ಟೇ ನನಗೆ ಸ್ಟ್ರೈಕ್‌ ನೀಡುತ್ತಿದ್ದರು. ಇದರಿಂದ ನಿರಾಸೆ ಉಂಟಾಗುತಿತ್ತು. ಒತ್ತಡ ಹೆಚ್ಚಿ ಔಟಾಗಬೇಕಾಗುತಿತ್ತು’ ಎಂದರು. 

ಸಲ್ಮಾನ್‌ ಬಟ್‌, ಮೊಹಮದ್ ಅಮೀರ್‌ ಜೊತೆ ಮೊಹಮದ್‌ ಆಸಿಫ್‌ ಅವರನ್ನು 2010ರ ಸೆಪ್ಟೆಂಬರ್‌ನಲ್ಲಿ ಮೊದಲು ಅಮಾನತು ಮಾಡಲಾಗಿತ್ತು. ನಂತರ ಐಸಿಸಿಯ ಭ್ರಷ್ಟಾಚಾರ ತಡೆ ನ್ಯಾಯಮಂಡಳಿ ಐದು ವರ್ಷಗಳ ಅವಧಿಗೆ (2011ರ ಆರಂಭದಿಂದ) ನಿಷೇಧ ಹೇರಿತ್ತು.

ಈಗ ಮೂವರೂ ಕ್ರಿಕೆಟ್‌ಗೆ ಮರಳಿದ್ದಾರೆ. ಆದರೆ ವಿಶ್ವಕಪ್‌ಗೆ ಮೊಹಮದ್‌ ಅಮೀರ್‌ ಮಾತ್ರ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !