ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇಗಿಗಳ ಸಾಲಿಗೆ ಮತ್ತೊಂದು ಪ್ರತಿಭೆ ಆಕಾಶದೀಪ್

Published : 25 ಸೆಪ್ಟೆಂಬರ್ 2024, 23:33 IST
Last Updated : 25 ಸೆಪ್ಟೆಂಬರ್ 2024, 23:33 IST
ಫಾಲೋ ಮಾಡಿ
Comments

ಕಾನ್ಪುರ: ವೇಗದ ಬೌಲರ್ ಆಕಾಶದೀಪ್ ಇಲ್ಲಿಯವರೆಗೆ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಭಾರತದ ಪಿಚ್‌ಗಳಲ್ಲಿ ಯಶಸ್ವಿಯಾಗಿರುವ ಅವರು ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. 

ಈಚೆಗೆ ಅವರು ರಾಂಚಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿಯೇ (38ಕ್ಕೆ3) ಗಮನ ಸೆಳೆಯುವಂತಹ ಬೌಲಿಂಗ್ ಮಾಡಿದ್ದರು. 27 ವರ್ಷದ ಆಕಾಶ್, ಚೆನ್ನೈನಲ್ಲಿ ಮುಗಿದ ಬಾಂಗ್ಲಾದೇಶದ ಮೊದಲ ಪಂದ್ಯದಲ್ಲಿಯೂ ಮಿಂಚಿದರು. 

ಪಂದ್ಯದಲ್ಲಿ  ತಮ್ಮ ಮೊದಲ ಓವರ್‌ನಲ್ಲಿ ಶಿಸ್ತಿನಿಂದ ಬೌಲಿಂಗ್ ಮಾಡಿದರು. ನಂತರದ ಓವರ್‌ನಲ್ಲಿ ಸತತ ಎರಡು ವಿಕೆಟ್ ಗಳಿಸಿ ತಂಡಕ್ಕೆ ಮುನ್ನಡೆ ನೀಡುವಲ್ಲಿ ಯಶಸ್ವಿಯಾದರು. ಅವರು ಪ್ರಯೋಗಿಸಿದ ಇನ್‌ಸ್ವಿಂಗರ್‌ಗೆ ಜಾಕೀರ್ ಹಸನ್ ಮತ್ತು ಮೊಮಿನುಲ್ ಹಕ್ ಅವರ ವಿಕೆಟ್‌ ಪತನವಾಗಿದ್ದವು. ಇನಿಂಗ್ಸ್‌ನಲ್ಲಿ 11 ಓವರ್‌ ಬೌಲಿಂಗ್ ಮಾಡಿದ್ದರು. 

ಐತಿಹಾಸಿಕ ನಗರವಾದ ಸಸಾರಾಮ್‌ (ಬಿಹಾರದ ರೋತಾಸ್ ಜಿಲ್ಲೆ) ನಿಂದ ಹೊರಹೊಮ್ಮಿದ ಟೆಸ್ಟ್ ಕ್ರಿಕೆಟಿಗ ಆಕಾಶ್ ಅವರು ಬೆಳೆದ ಹಾದಿ ಸುಲಭವೇನೂ ಆಗಿರಲಿಲ್ಲ. ಕ್ರಿಕೆಟ್ ಆಡಲು ನಿರ್ಧರಿಸಿದ್ದ ಆಕಾಶ್‌ ಅವರು ತಂದೆ, ತಾಯಿಯ ವಿರೋಧ ಎದುರಿಸಬೇಕಾಯಿತು. ಅಕ್ಕಪಕ್ಕದ ಕುಟುಂಬಗಳು ಮತ್ತು ಸಂಬಂಧಿಕರು ತಮ್ಮ ಮಕ್ಕಳು ಆಕಾಶ್ ಜೊತೆ ಬೆರೆಯದಂತೆ ನೋಡಿಕೊಂಡರು. 

2010ರ ಸುಮಾರಿಗೆ 14 ವರ್ಷದವರಾಗಿದ್ದ ಆಕಾಶ್ ತಮ್ಮ ಊರು ಬಿಟ್ಟು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಹೋದರು. ಅಲ್ಲಿ ತಮ್ಮ ಕ್ರಿಕೆಟ್‌ ಕನಸುಗಳನ್ನು ನನಸು ಮಾಡಲು ಪಣತೊಟ್ಟರು. ಅಲ್ಲಿದ್ದ ಚಿಕ್ಕಪ್ಪನ ಬೆಂಬಲ ದೊರೆಯಿತು. ಆಕಾಶ್‌ನನ್ನು ಅಕಾಡೆಮಿಯೊಂದಕ್ಕೆ ಸೇರಿಸಿದರು. 

ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿಯೇ ಆಕಾಶ್ ಅವರ ತಂದೆ ನಿಧನರಾದರು. ಇದರಿಂದಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೀಡಾಯಿತು. ಇದಾಗಿ ಸ್ವಲ್ಪ ಸಮಯವಾಗಿತ್ತು. ಆಕಾಶ್ ಅವರ ಅಣ್ಣ ಸಾವಿಗೀಡಾದರು. ಈ ಹಂತದಲ್ಲಿ ಆಕಾಶ್ ಕ್ರಿಕೆಟ್‌ನಿಂದ ದೂರವುಳಿಯಬೇಕಾಯಿತು. ತನ್ನ ಇಬ್ಬರು ತಂಗಿಯರ ಪೋಷಣೆಗಾಗಿ ಶ್ರಮಿಸಬೇಕಾಯಿತು. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿಯೂ ತಾವು ಕ್ರಿಕೆಟಿಗನಾಗುವ ಕನಸು ಕಮರಲು ಬಿಡಲಿಲ್ಲ.

ಮೂರು ವರ್ಷಗಳ ನಂತರ ಸಸಾರಾಮ್‌ನಿಂದ ಕೋಲ್ಕತ್ತಕ್ಕೆ ತೆರಳಿದರು. ಹಿತೈಷಿಯೊಬ್ಬರ ನೆರವಿನಿಂದ ಯುನೈಟೆಡ್ ಕ್ಲಬ್‌ ಸೇರಿಕೊಂಡರು. ಕ್ಲಬ್‌ ಕ್ರಿಕೆಟ್‌ನಲ್ಲಿ ವೇಗದ ಸರದಾರನಾಗಿ ಗಮನ ಸೆಳೆದರು.

‘ಆಕಾಶ್ ಬೆಳವಣಿಗೆಗೆ ತಾವು ಕಾರಣ ಎಂದು ಬಹಳಷ್ಟು ಜನ ಹೇಳಿಕೊಳ್ಳುತ್ತಾರೆ. ಆದರೆ ಅವರನ್ನು ಮೊದಲ ಬಾರಿ ಗುರುತಿಸಿದವರು ಮನೋಜ್ ತಿವಾರಿ. ಕ್ಲಬ್‌ ಕ್ರಿಕೆಟ್‌ನಲ್ಲಿ ಆಕಾಶ್ ಎದುರು ತಿವಾರಿ ಆಡಿದ್ದರು. ಅವರ ಬೌಲಿಂಗ್‌ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು‘ ಎಂದು ಸಂಸ್ಥೆಯ ಪದಾಧಿಕಾರಿಯೊಬ್ಬರು ಹೇಳುತ್ತಾರೆ. 

ನಂತರ ತಿವಾರಿ ಅವರ ಬೆಂಬಲದಿಂದ ಆಕಾಶ್ ಬೆಳವಣಿಗೆ ಏರುಮುಖವಾಯಿತು. ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ಗೆ ಅವರು 2019ರಲ್ಲಿ ಪದಾರ್ಪಣೆ ಮಾಡಿದರು. ಮುಕೇಶ್ ಕುಮಾರ್ ಮತ್ತು ಇಶಾನ್ ಪೊರೆಲ್ ಅವರೊಂದಿಗೆ ಆಕಾಶ್ ಜೊತೆಗೂಡಿ ಬಂಗಾಳ ಕ್ರಿಕೆಟ್ ತಂಡದ ಬೌಲಿಂಗ್ ಬೆನ್ನೆಲುಬಾಗಿದ್ದಾರೆ. 

ಇದೀಗ ಭಾರತ ತಂಡದಲ್ಲಿಯೂ ಆಕಾಶ್ ಅವರ ನಿಖರ ದಾಳಿ ಆರಂಭವಾಗಿದೆ. ಇದರೊಂದಿಗೆ ಭಾರತದ ವೇಗದ ಬೌಲರ್‌ಗಳಾದ ಬೂಮ್ರಾ, ಸಿರಾಜ್, ಶಮಿ, ಮುಕೇಶ್, ಆರ್ಷದೀಪ್, ನವದೀಪ್ ಸಿಂಗ್, ಪ್ರಸಿದ್ಧಕೃಷ್ಣ ಮತ್ತಿತರರ  ಸಾಲಿಗೆ ಮತ್ತೊಬ್ಬ ಪ್ರತಿಭಾವಂತನ ಸೇರ್ಪಡೆಯಾದಂತಾಗಿದೆ. 

ಕ್ರಿಕೆಟ್‌ನ ದಂತಕಥೆಗಳೇ ಆಗಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಅವರು ಈಗಲೂ ಕಠಿಣ ಅಭ್ಯಾಸ ಮಾಡುತ್ತಾರೆ. ಅವರ ಸಮರ್ಪಣಾಭಾವ ಶಿಸ್ತು ಮತ್ತು ಆಟದ ಬಗ್ಗೆ ಇರುವ ಪ್ರೀತಿ ದೊಡ್ಡದು. ಅವರ ಸಖ್ಯ ಲಭಿಸಿರುವುದು ನನ್ನ ಅದೃಷ್ಟ
–ಆಕಾಶದೀಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT