ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗೆ ರಾಹುಲ್ ಫಿಟ್; ಆರಂಭಿಕ ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ಮಾಡದಂತೆ ಸಲಹೆ

Published 18 ಮಾರ್ಚ್ 2024, 14:37 IST
Last Updated 18 ಮಾರ್ಚ್ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಿಂದ (ಎನ್‌ಸಿಎ) ಫಿಟ್‌ನೆಸ್‌ ದೃಢೀಕರಣ ಪಡೆದಿರುವ ಕೆ.ಎಲ್‌. ರಾಹುಲ್‌, ಲಖನೌ ಸೂಪರ್‌ ಜೈಂಟ್ಸ್‌ ನಾಯಕನಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್‌ ಮಾಡದಂತೆ ಅವರಿಗೆ ಸಲಹೆ ನೀಡಲಾಗಿದೆ.

ರಾಹುಲ್‌, ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಇತ್ತೀಚೆಗೆ ಮುಕ್ತಾಯವಾದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಅವರು ಮೂರನೇ ಪಂದ್ಯದ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದರು.

'ರಾಹುಲ್‌ಗೆ ಎನ್‌ಸಿಎ ದೃಢೀಕರಣ ನೀಡಿದೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಜೈಪುರದಲ್ಲಿ ಮಾರ್ಚ್‌ 24ರಂದು ನಡೆಯುವ ಮೊದಲ ಪಂದ್ಯಕ್ಕೂ ಮುನ್ನ, ಮಾರ್ಚ್‌ 20ರಂದು ಲಖನೌನಲ್ಲಿ ತಮ್ಮ ಸಹ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ. ಆರಂಭದ ಕೆಲವು ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್‌ ಮಾಡದಂತೆ ಎನ್‌ಸಿಎ ಸಲಹೆ ನೀಡಿದೆ. ಹಾಗಾಗಿ ಅವರು, ಬ್ಯಾಟರ್‌ ಆಗಿ ಮಾತ್ರವೇ ಆಡಲಿದ್ದಾರೆ' ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲಗಳು ತಿಳಿಸಿವೆ.

ರಾಹುಲ್‌ ಬದಲಿಗೆ ದಕ್ಷಿಣ ಆಫ್ರಿಕಾದ ಅಥವಾ ವೆಸ್‌ಇಂಡೀಸ್‌ನ ನಿಕೋಲಸ್‌ ಪೂರನ್‌ ಲಖನೌ ಪರ ವಿಕೆಟ್‌ಕೀಪಿಂಗ್‌ ಹೊಣೆ ಹೊರಲಿದ್ದಾರೆ.

ರಾಹುಲ್‌, ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ವಿಕೆಟ್‌ಕೀಪರ್‌ ಆಗಿ ಆಡುವ ಸಾಧ್ಯತೆ ಇದೆ. ಹಾಗಾಗಿ, ಐಪಿಎಲ್‌ನಲ್ಲಿ ವಿಕೆಟ್‌ಕೀಪಿಂಗ್‌ ಮಾಡುವುದು ಭವಿಷ್ಯದ ದೃಷ್ಟಿಯಿಂದ ಪ್ರಮುಖವಾಗಲಿದೆ.

'ಈ ಹಿಂದಿನ ಪ್ರದರ್ಶನವನ್ನು ಗಮನದಲ್ಲಿರಿಸಿ ರಾಹುಲ್‌ ಅವರನ್ನು ಭಾರತ ತಂಡದ ಅಗ್ರ ಕ್ರಮಾಂಕದ ಮೂರು ಸ್ಥಾನಗಳಿಗೆ ಪರಿಗಣಿಸಿಲ್ಲ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಅವರು ವಿಕೆಟ್‌ಕೀಪರ್‌–ಬ್ಯಾಟರ್‌ ಆಗಿ 5 ಅಥವಾ 6ನೇ ಕ್ರಮಾಂಕದಲ್ಲಿ ಆಡಬಹುದು. ಆದರೆ, ಬ್ಯಾಟರ್‌ ಆಗಿ ಮಾತ್ರವೇ ಆಡುವುದಾದರೆ, ಅವರಿಗಿಂತಲೂ ಉತ್ತಮ ಆಯ್ಕೆಯಾಗಿ ರಿಷಭ್‌ ಪಂತ್‌ ಹೊರತುಪಡಿಸಿ ರಿಂಕು ಸಿಂಗ್‌ ಇದ್ದಾರೆ' ಎಂದೂ ಬಿಸಿಸಿಐ ಮೂಲಗಳು ಹೇಳಿವೆ.

ಎನ್‌ಸಿಎ ಅಂಗಳದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೊ ತುಣುಕನ್ನು ರಾಹುಲ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT