ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2021: ಸುಲಭ ರನೌಟ್ ಅವಕಾಶ ಕೈಚೆಲ್ಲಿದ ಆ್ಯಂಡ್ರೆ ರಸೆಲ್

Last Updated 19 ಏಪ್ರಿಲ್ 2021, 11:05 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್, ರನೌಟ್ ಮಾಡುವ ಸುಲಭ ಅವಕಾಶವನ್ನು ಕೈಚೆಲ್ಲಿರುವುದು ಕ್ರೀಡಾಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ಆರ್‌ಸಿಬಿ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಘಟನೆ ನಡೆದಿತ್ತು. ರಸೆಲ್ ಎಸೆದ ಅಂತಿಮ ಓವರ್‌ನಲ್ಲಿ ಎಬಿ ಡಿ ವಿಲಿಯರ್ಸ್, ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 21 ರನ್ ಸೊರೆಗೈದಿದ್ದರು.

ಆದರೆ 19ನೇ ಓವರ್‌ನ ಐದನೇ ಎಸೆತದಲ್ಲಿ ವಿಲಿಯರ್ಸ್‌ಗೆ ರನ್ ನಿರಾಕರಿಸುವಲ್ಲಿ ರಸೆಲ್ ಯಶಸ್ವಿಯಾಗಿದ್ದರು. ತಮ್ಮದೇ ದಾಳಿಯಲ್ಲಿ ವಿಲಿಯರ್ಸ್ ಹೊಡೆದ ಚೆಂಡು ರಸೆಲ್ ಕೈಯಲ್ಲಿ ಭದ್ರವಾಗಿ ಸೇರಿತ್ತು. ಈ ಸಂದರ್ಭದಲ್ಲಿ ನಾನ್ ಸ್ಟ್ರೈಕರ್‌ನಲ್ಲಿದ್ದ ಕೈಲ್ ಜೇಮಿಸನ್ ಸಿಂಗಲ್ ರನ್ ಕದಿಯುವ ಪ್ರಯತ್ನದಲ್ಲಿದ್ದರು.

ರಸೆಲ್‌‌ಗೆ ಜೇಮಿಸನ್‌ ಅವರನ್ನು ರನೌಟ್ ಮಾಡುವ ಸುಲಭ ಅವಕಾಶವಿತ್ತು. ಈ ಸಂದರ್ಭದಲ್ಲಿ ಜೇಮಿಸನ್ ಸಹ ಆಸೆ ಕೈಬಿಟ್ಟಿದ್ದರು. ಆದರೆ ಅತಿ ಒತ್ತಡದ ಸನ್ನಿವೇಶದಲ್ಲಿ ಚೆಂಡು ಕೈಯಲ್ಲಿದ್ದರೂ ರನೌಟ್ ಮಾಡುವ ಪ್ರಯತ್ನಕ್ಕೆ ಮುಂದಾಗದ ರಸೆಲ್ ಅಂತಿಮ ಎಸೆತವನ್ನು ದಾಳಿ ಮಾಡುವುದಕ್ಕಾಗಿ ಹೆಜ್ಜೆ ಹಾಕಿದರು.

ರಸೆಲ್ ಈ ನಡೆಯು ಕೋಲ್ಕತ್ತ ನಾಯಕ ಏಯಾನ್ ಮಾರ್ಗನ್ ಸೇರಿದಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಡಗೌಟ್‌ನಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಿಸುತ್ತಿದ್ದ ವಿರಾಟ್, ಆಶ್ಚರ್ಯಚಕಿತರಾಗಿ ಈ ಸನ್ನಿವೇಶವನ್ನು ಗಮನಿಸುತ್ತಿದ್ದರು.

ರಸೆಲ್ ಈ ರೀತಿ ಮಾಡಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಫಿಟ್ನೆಸ್ ಸಮಸ್ಯೆಯೇ ಅಥವಾ ಒತ್ತಡದ ಸನ್ನಿವೇಶದಲ್ಲಿ ಮರೆವು ಸಂಭವಿಸಿತೇ ಎಂಬುದು ಸ್ಪಷ್ಟವಾಗಿಲ್ಲ.

ಅಂದ ಹಾಗೆ ಕೋಲ್ಕತ್ತ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 38 ರನ್ ಅಂತರದ ಗೆಲುವು ದಾಖಲಿಸಿತ್ತು. ಎಬಿ ಡಿ ವಿಲಿಯರ್ಸ್ (76*) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (78) ಗೆಲುವಿನ ರೂವಾರಿ ಎನಿಸಿದ್ದರು. ಅತ್ತ ಕೋಲ್ಕತ್ತ ಪರ ರಸೆಲ್ 20 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT