ಗುರುವಾರ , ಮೇ 13, 2021
16 °C

ದ.ಆಫ್ರಿಕಾ ವಿಶ್ವಕಪ್ ತಂಡಕ್ಕೂ ಪುನರಾಗಮನ ಮಾಡಲಿರುವ ಎಬಿ ಡಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲೂ ಅಮೋಘ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿರುವ ಎಬಿ ಡಿ ವಿಲಿಯರ್ಸ್, ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ ವೇಳೆಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಪುನರಾಗಮನ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. 

ಈ ಕುರಿತು ಸ್ವತಃ ಎಬಿ ಡಿ ವಿಲಿಯರ್ಸ್ ಅವರೇ ಮಾಹಿತಿ ನೀಡಿದ್ದು, ಐಪಿಎಲ್ ಕೊನೆಯಲ್ಲಿ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: 

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ 37 ವರ್ಷದ ವಿಲಿಯರ್ಸ್, ಮಗದೊಂದು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಅಜೇಯ 76 ರನ್ ಚಚ್ಚಿದ್ದರು. ಇದರಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. 

ಓರ್ವ ಮಾಜಿ ಆಟಗಾರನಾಗಿರುವ ಹೊರತಾಗಿಯೂ ಯುವ ಕ್ರಿಕೆಟಿಗರಿಂತಲೂ ಮಿಗಿಲಾದ ಬ್ಯಾಟಿಂಗ್ ಕೌಶಲ್ಯ, ಫಿಟ್ನೆಸ್ ಹಾಗೂ ಬದ್ಧತೆಯನ್ನು ವಿಲಿಯರ್ಸ್ ಪ್ರದರ್ಶಿಸಿದ್ದರು. ಇದುವೇ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್ ಅವರನ್ನು ಪ್ರಭಾವಿತಗೊಳಿಸಿದ್ದು, ಇತ್ತೀಚೆಗಷ್ಟೇ ಪುನರಾಗಮನದ ಕುರಿತು ಎಬಿ ಡಿ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. 

ಈ ಕುರಿತು ಪ್ರತಿಕ್ರಿಯಿಸಿರುವ ಎಬಿ ಡಿ, ಐಪಿಎಲ್ ಕೊನೆಯ ವೇಳೆಯಲ್ಲಿ ಮಾತುಕತೆ ನಡೆಸಲಿದ್ದೇವೆ. ಆದರೆ ತಂಡದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ನಿರ್ಣಾಯಕವೆನಿಸುತ್ತದೆ. ತಂಡದೆಲ್ಲ ಆಟಗಾರರು ಉತ್ತಮ ನಿರ್ವಹಣೆ ನೀಡುತ್ತಿದ್ದು, ಹಾಗಾಗಿ ನನಗೊಂದು ಸ್ಥಾನ ದೊರಕಿದ್ದಲ್ಲಿ ಅತ್ಯುತ್ತಮ ಎಂದು ಹೇಳಿದ್ದಾರೆ. 

ಕಳೆದ ವರ್ಷವೇ ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್‌ನಲ್ಲಿ ಆಡಲು ವಿಲಿಯರ್ಸ್ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊರೊನಾವೈರಸ್‌ನಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಟಿ20 ವಿಶ್ವಕಪ್ ಮುಂದೂಡಲಾಗಿತ್ತು. ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಅಂದ ಹಾಗೆ ವಿಲಿಯರ್ಸ್ 2018ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 

ಇವನ್ನೂ ಓದಿ:ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು