ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup | ನೆಟ್ಸ್‌ನಲ್ಲಿ ಬೆವರಿಳಿಸಿದ ರಾಹುಲ್

ಏಷ್ಯಾ ಕಪ್‌: ಭಾರತ ತಂಡದ ಆಟಗಾರರ ಆಭ್ಯಾಸ
Published 7 ಸೆಪ್ಟೆಂಬರ್ 2023, 15:31 IST
Last Updated 7 ಸೆಪ್ಟೆಂಬರ್ 2023, 15:31 IST
ಅಕ್ಷರ ಗಾತ್ರ

ಕೊಲಂಬೊ: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್ ಫೋರ್‌ ಹಂತದಲ್ಲಿ ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿರುವ ಭಾರತ ತಂಡದ ಕೆಲವು ಆಟಗಾರರು ಗುರುವಾರ ಇಲ್ಲಿ ಅಭ್ಯಾಸ ನಡೆಸಿದರು.

ಮಳೆಯ ಕಾರಣ ಮೈದಾನದಲ್ಲಿ ಪೂರ್ಣ ಪ್ರಮಾಣದ ಅಭ್ಯಾಸ ನಡೆಸಲು ಆಗಲಿಲ್ಲ. ಆದ್ದರಿಂದ ಕೊಲಂಬೊದ ನಾನ್‌ಡಿಸ್‌ಕ್ರಿಪ್ಟ್ಸ್ ಕ್ರಿಕೆಟ್‌ ಕ್ಲಬ್‌ನ ಒಳಾಂಗಣದ ನೆಟ್ಸ್‌ನಲ್ಲಿ ತಾಲೀಮು ನಡೆಯಿತು.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಕರ್ನಾಟಕದ ವಿಕೆಟ್‌ಕೀಪರ್ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಮೇ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನಾಲ್ಕು ತಿಂಗಳು ಅಂಗಳದಿಂದ ದೂರವುಳಿದಿದ್ದರು. ಏಷ್ಯಾ ಕಪ್‌ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಅವರು ಮಂಗಳವಾರ ಕೊಲಂಬೊದಲ್ಲಿ ತಂಡವನ್ನು ಸೇರಿಕೊಂಡಿದ್ದರು.

ಆರಂಭದಲ್ಲಿ ಕೆಲಹೊತ್ತು ‘ಥ್ರೋಡೌನ್‌’ಗಳನ್ನು ಎದುರಿಸಿದ ರಾಹುಲ್‌, ಬಳಿಕ ವೇಗದ ಬೌಲರ್‌ಗಳನ್ನು ಎದುರಿಸಿದರು. ಬ್ಯಾಟಿಂಗ್‌ ಅಭ್ಯಾಸದ ಬಳಿಕ ಒಂದಷ್ಟು ಹೊತ್ತು ದೈಹಿಕ ಕಸರತ್ತು ನಡೆಸಿದ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಸಮಾಲೋಚನೆ ನಡೆಸಿದ್ದು ಕಂಡುಬಂತು.

ರಾಹುಲ್‌ ಅಲ್ಲದೆ ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್‌ ಯಾದವ್‌, ಶುಭಮನ್‌ ಗಿಲ್‌ ಮತ್ತು ಶಾರ್ದೂಲ್‌ ಠಾಕೂರ್‌ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್‌ ತಾಲೀಮು ಕೈಗೊಂಡರು.

ಪಾಕಿಸ್ತಾನದ ಎಡಗೈ ವೇಗಿ ಶಾಹೀನ್‌ ಶಾ ಆಫ್ರಿದಿ ಅವರನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಭಾರತದ ಬ್ಯಾಟರ್‌ಗಳು ನೆಟ್ಸ್‌ನಲ್ಲಿ ಸ್ಥಳೀಯ ಎಡಗೈ ಬೌಲರ್‌ಗಳನ್ನು ಎದುರಿಸಿದ್ದು ಗಮನ ಸೆಳೆಯಿತು.

ಶುಭಮನ್‌ ಗಿಲ್‌ ಅವರು ಥ್ರೋಡೌನ್‌ಗಳನ್ನು ಮಾತ್ರ ಎದುರಿಸಿದರು. ಥ್ರೋಡೌನ್‌ ಪರಿಣತ ನುವಾನ್‌ ಸೆನೆವಿರತ್ನೆ ಅವರಿಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT