ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PAK vs AUS | ಕುಸಿದ ಆಸ್ಟ್ರೇಲಿಯಾ ನೆರವಿಗೆ ಸ್ಮಿತ್‌– ಮಾರ್ಷ್‌

Published 28 ಡಿಸೆಂಬರ್ 2023, 14:37 IST
Last Updated 28 ಡಿಸೆಂಬರ್ 2023, 14:37 IST
ಅಕ್ಷರ ಗಾತ್ರ

ಮೆಲ್ಬರ್ನ್: ಎರಡನೇ ಇನಿಂಗ್ಸ್‌ನಲ್ಲಿ 16 ರನ್‌ಗಳಾಗುಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾಕ್ಕೆ ಅನುಭವಿಗಳಾದ ಸ್ಟೀವ್‌ ಸ್ಮಿತ್ ಮತ್ತು ಮಿಚೆಲ್‌ ಮಾರ್ಷ್‌ ಆಸರೆಯಾದರು. ಪಾಕಿಸ್ತಾನ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಗುರುವಾರ ಆಟ ಮುಗಿದಾಗ ಆಸ್ಟ್ರೇಲಿಯಾ ಒಟ್ಟಾರೆ 6 ವಿಕೆಟ್‌ಗೆ 187 ರನ್ ಗಳಿಸಿದ್ದು, ಒಟ್ಟಾರೆ 241 ರನ್‌ಗಳ ಮುನ್ನಡೆ ಹೊಂದಿದೆ.

ಮಾರ್ಷ್ ನಾಲ್ಕು ರನ್‌ಗಳಿಂದ ಶತಕ ಕಳೆದುಕೊಂಡರೆ, ಸ್ಮಿತ್‌ ಬರೋಬರಿ 50 ರನ್ ಹೊಡೆದರಲ್ಲದೇ ಐದನೇ ವಿಕೆಟ್‌ಗೆ ಉಪಯುಕ್ತ 153 ರನ್‌ ಸೇರಿಸಿದರು. ಸ್ಲಿಪ್ಸ್‌ನಲ್ಲಿ ಸಲ್ಮಾನ್‌ ಅಘಾ ಹಿಡಿದ ಡೈವಿಂಗ್‌ ಕ್ಯಾಚ್‌ಗೆ ಮಾರ್ಷ್‌ ನಿರ್ಗಮನಿಸಬೇಕಾಯಿತು. ಸ್ಮಿತ್‌ ಅರ್ಧಶತಕಕ್ಕೆ 176 ಎಸೆತ ತೆಗೆದುಕೊಂಡರು. ಇದು ಅವರ ಎರಡನೇ ನಿಧಾನಗತಿಯ ಅರ್ಧಶತಕ ಎನಿಸಿತು.

ಇದಕ್ಕೆ ಮೊದಲು ಪ್ಯಾಟ್‌ ಕಮಿನ್ಸ್‌ (48ಕ್ಕೆ5) ಟೆಸ್ಟ್‌ ಜೀವನದಲ್ಲಿ ಹತ್ತನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದು, ಆಸ್ಟ್ರೇಲಿಯಾಕ್ಕೆ 54 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಲು ನೆರವಾದರು. ಅವರಿಗೆ ಬೆಂಬಲ ನೀಡಿದ ನೇಥನ್ ಲಯನ್ 73 ರನ್ನಿಗೆ 4 ವಿಕೆಟ್‌ ಪಡೆದರು. ಎರಡನೇ ಟೆಸ್ಟ್ ಆಡಿದ ವೇಗದ ಬೌಲರ್ ಅಮೀರ್ ಜಮಾಲ್ ಅಜೇಯ 33 ರನ್‌ ಗಳಿಸಿ ಆತಿಥೇಯ ಬೌಲರ್‌ಗಳನ್ನು ಕೆಲಕಾಲ ಕಾಡಿದರು.

ಬುಧವಾರ ದಿನದ ಕೊನೆಗೆ 6 ವಿಕೆಟ್‌ಗೆ 194 ರನ್‌ ಗಳಿಸಿದ್ದ ಪಾಕಿಸ್ತಾನದ ಮೊದಲ ಇನಿಂಗ್ಸ್‌ 264 ರನ್‌ಗಳಿಗೆ ಕೊನೆಗೊಂಡಿತು. ಆದರೆ ಪಾಕಿಸ್ತಾನ ತಕ್ಷಣವೇ ತಿರುಗೇಟು ನೀಡಿತು. ಆರು ರನ್‌ಗಳಾಗುಷ್ಟರಲ್ಲಿ ಉಸ್ಮಾನ್ ಖ್ವಾಜಾ ಮತ್ತು ಮಾರ್ನಸ್‌ ಲಾಬುಷೇನ್ ಮರಳಿದ್ದರು. ವಾರ್ನರ್‌ (6) ಮತ್ತು ಟ್ರಾವಿಸ್‌ ಹೆಡ್‌ (0) ಕೂಡ ಬೇಗನೇ ನಿರ್ಗಮಿಸಿದರು. ಎಡಗೈ ವೇಗದ ಬೌಲರ್‌ಳಾದ ಶಹೀನ್ ಶಾ ಅಫ್ರೀದಿ ಮತ್ತು ಮೀರ್‌ ಹಮ್ಝಾ ತಲಾ ಮೂರು ವಿಕೆಟ್ ಪಡೆದರು.

ಪಾಕಿಸ್ತಾನ, ಆಸ್ಟ್ರೇಲಿಯಾದ ನೆಲದಲ್ಲಿ ಸತತ 16ನೇ ಟೆಸ್ಟ್ ಸೋಲು ತಪ್ಪಿಸುವ ಪ್ರಯತ್ನದಲ್ಲಿದೆ. ಮೂರು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಜಯಗಳಿಸಿತ್ತು. ಮೂರನೇ ಟೆಸ್ಟ್‌ ಜನವರಿ 3ರಂದು ಸಿಡ್ನಿಯಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 318, ಪಾಕಿಸ್ತಾನ: 73.5 ಓವರುಗಳಲ್ಲಿ 264 (ಮೊಹಮ್ಮದ್‌ ರಿಜ್ವಾನ್‌ 42, ಅಮೀರ್ ಜಮಾಲ್ ಔಟಾಗದೇ 33; ಪ್ಯಾಟ್‌ ಕಮಿನ್ಸ್‌ 48ಕ್ಕೆ5, ನೇಥನ್ ಲಯನ್‌ 73ಕ್ಕೆ4); ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 62.3 ಓವರುಗಳಲ್ಲಿ 6 ವಿಕೆಟ್‌ಗೆ 187 (ಸ್ಟೀವನ್‌ ಸ್ಮಿತ್ 50, ಮಿಚೆಲ್‌ ಮಾರ್ಷ್‌ 96; ಶಹೀನ್ ಶಾ ಅಫ್ರೀದಿ 58ಕ್ಕೆ3, ಮೀರ್‌ ಹಮ್ಝಾ 27ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT