ಶನಿವಾರ, ಮೇ 28, 2022
31 °C
ಆ್ಯಷಸ್ ಟೆಸ್ಟ್: ಕಮಿನ್ಸ್, ಲಯನ್ ಗರ್ಜನೆ; ರೂಟ್ ಅರ್ಧಶತಕ

Australia vs England 3rd Test| ಆಸ್ಟ್ರೇಲಿಯಾ ಮುಂದೆ ಮತ್ತೆ ಕುಸಿದ ಇಂಗ್ಲೆಂಡ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಪ್ಯಾಟ್ ಕಮಿನ್ಸ್ ವೇಗ ಮತ್ತು ನೇಥನ್ ಲಯನ್ ಸ್ಪಿನ್ ಮೋಡಿಯ ಮುಂದೆ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು. 

ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಆ್ಯಷಸ್ ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ 65.1 ಓವರ್‌ಗಳಲ್ಲಿ 185 ರನ್‌ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (36ಕ್ಕೆ3) ಮತ್ತು ಲಯನ್ (36ಕ್ಕೆ3) ಇಂಗ್ಲೆಂಡ್‌ಗೆ ಬಲವಾದ ಪೆಟ್ಟು ಕೊಟ್ಟರು.  ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡವು ದಿನದಾಟದ ಕೊನೆಗೆ 16 ಓವರ್‌ಗಳಲ್ಲಿ 1 ವಿಕೆಟ್‌ಗೆ  61 ರನ್ ಗಳಿಸಿತು. ಮಾರ್ಕಸ್ ಹ್ಯಾರಿಸ್ (ಬ್ಯಾಟಿಂಗ್ 20) ಮತ್ತು ಡೇವಿಡ್ ವಾರ್ನರ್ (38; 42ಎ) ತಂಡಕ್ಕೆ ಉತ್ತಮ ಆರಂಭ ಕೊಟ್ಟರು. 

ರೂಟ್ ಹೋರಾಟ– ಪ್ಯಾಟ್ ಆಟ: ಇಂಗ್ಲೆಂಡ್ ನಾಯಕ ಜೋ ರೂಟ್ (50; 82ಎಸೆತ, 4X4) ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್ ಕಟ್ಟಲು ಶ್ರಮಿಸಲಿಲ್ಲ. 

ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಕಮಿನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಲ್ಲದೇ ತಮ್ಮ ತಂಡಕ್ಕೆ  ಆರಂಭದಲ್ಲಿಯೇ ಭರ್ಜರಿ ಯಶಸ್ಸಿನ ಕಾಣಿಕೆ ನೀಡಿದರು. ಪ್ರವಾಸಿ ತಂಡದ ಆರಂಭಿಕ ಬ್ಯಾಟರ್ ಹಸೀಬ್ ಹಮೀದ್ ವಿಕೆಟ್‌ ಅನ್ನು ಎರಡನೇ ಓವರ್‌ನಲ್ಲಿ ಗಳಿಸಿದ ಕಮಿನ್ಸ್, ಎಂಟನೇ ಓವರ್‌ನಲ್ಲಿ ಜ್ಯಾಕ್ ಕ್ರಾಲಿ ಮತ್ತು 27ನೇ ಓವರ್‌ನಲ್ಲಿ ಡೇವಿಡ್ ಮಲಾನ್ ವಿಕೆಟ್‌ಗಳನ್ನೂ ಕಬಳಿಸಿದರು. 

ಇದರಿಂದಾಗಿ ಇಂಗ್ಲೆಂಡ್ ತಂಡವು ಕೇವಲ 61 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು.  ರೂಟ್ ಈ ಆತಂಕವನ್ನು ದೂರ ಮಾಡಲು ಶ್ರಮಿಸಿದರು. ಆದರೆ ಬೆನ್ ಸ್ಟೋಕ್ಸ್ (25 ರನ್) ಮತ್ತು ಜಾನಿ ಬೆಸ್ಟೊ (35; 75ಎ) ಅವರಿಬ್ಬರು ಮಾತ್ರ ರೂಟ್‌ಗೆ ಸ್ವಲ್ಪ ಜೊತೆಗೂಡಿದರು. ಆದರೆ, ಉಳಿದ ಬ್ಯಾಟರ್‌ಗಳು ಬೇಗನೆ ಔಟಾದರು. ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ರೂಟ್ ಔಟಾದರು. ಬೆಸ್ಟೋ ವಿಕೆಟ್ ಕೂಡ ಅವರ ಪಾಲಾಯಿತು. ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಒಲಿ ರಾಬಿನ್ಸನ್ (22; 26ಎ, 4X3) ಅಲ್ಪ ಕಾಣಿಕೆ ನೀಡಿದರು. ಆದರೂ ತಂಡವು ‘ದ್ವಿಶತಕ’ದ ಗಡಿ ಮುಟ್ಟಲಿಲ್ಲ. 

ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ಸೋಲು ಅನುಭವಿಸಿದೆ. ಸರಣಿ ಗೆಲುವಿನ ಆಸೆ ಜೀವಂತವಾಗುಳಿಯಬೇಕಾದರೆ ಈ ಪಂದ್ಯದಲ್ಲಿ ಜಯಿಸುವುದು ಇಂಗ್ಲೆಂಡ್‌ಗೆ ಅನಿವಾರ್ಯವಾಗಿದೆ. 

 ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 65.1 ಓವರ್‌ಗಳಲ್ಲಿ 185 (ಜೋ ರೂಟ್ 50, ಬೆನ್ ಸ್ಟೋಕ್ಸ್‌ 25, ಜಾನಿ ಬೆಸ್ಟೊ 35, ರಾಬಿನ್ಸನ್ 22, ಮಿಚೆಲ್ ಸ್ಟಾರ್ಕ್ 54ಕ್ಕೆ2, ಪ್ಯಾಟ್ ಕಮಿನ್ಸ್ 36ಕ್ಕೆ3, ನೇಥನ್ ಲಯನ್ 36ಕ್ಕೆ3) ಆಸ್ಟ್ರೇಲಿಯಾ: 16 ಓವರ್‌ಗಳಲ್ಲಿ 1 ವಿಕೆಟ್‌ಗೆ 61 ?ಮಾರ್ಕಸ್ ಹ್ಯಾರಿಸ್ ಬ್ಯಾಟಿಂಗ್ 20, ಡೇವಿಡ್ ವಾರ್ನರ್ 38, ಜೇಮ್ಸ್ ಆ್ಯಂಡರ್ಸನ್ 14ಕ್ಕೆ1) 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು