ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ‘ಆರಂಭದ’ ಗೊಂದಲ

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಇಂದು ನಾಂದಿ; ಶುಭಾರಂಭದ ನಿರೀಕ್ಷೆಯಲ್ಲಿ ಕೊಹ್ಲಿ ಬಳಗ
Last Updated 13 ಜನವರಿ 2020, 19:45 IST
ಅಕ್ಷರ ಗಾತ್ರ

ಮುಂಬೈ : ಶ್ರೀಲಂಕಾ ಎದುರಿನ ಟ್ವೆಂಟಿ–20 ಸರಣಿಯನ್ನು ಗೆದ್ದು ಹೊಸವರ್ಷದಲ್ಲಿ ಅದ್ದೂರಿ ಆರಂಭ ಕಂಡಿರುವ ಭಾರತ ತಂಡಕ್ಕೆ ಈಗ ಭಾರಿ ಸವಾಲು ಎದುರಾಗಿದೆ. ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿ ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಲಿಷ್ಠ ಪ್ರವಾಸಿ ತಂಡದ ವಿರುದ್ಧ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ, ವಿರಾಟ್ ಕೊಹ್ಲಿ ಬಳಗ.

ಟ್ವೆಂಟಿ–20 ಸರಣಿಯ ಸಂದರ್ಭದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಆದರೆ ಅವರೊಂದಿಗೆ ಇನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ. ಶಿಖರ್ ಧವನ್ ಅವರ ಅನುಭವ ಮತ್ತು ಕೆ.ಎಲ್‌.ರಾಹುಲ್ ಅವರ ಸ್ಥಿರ ಪ್ರದರ್ಶನದಲ್ಲಿ ಯಾವುದನ್ನು ಆರಿಸಬೇಕು ಎಂಬ ಗೊಂದಲ ತಂಡದ ಆಡಳಿತಕ್ಕೆ ಎದುರಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳು ಪ್ರತಿ ಬಾರಿ ಕುತೂಹಲದ ಗಣಿಯಾಗಿರುತ್ತವೆ. ಈ ಸರಣಿಯ ಪ್ರತಿಯೊಂದು ಪಂದ್ಯವೂ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಕ್ರಿಕೆಟ್ ಪ್ರಿಯರದ್ದು. ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಅವರ ಅಬ್ಬರ, ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ಸ್ಫೋಟಕ ಬ್ಯಾಟಿಂಗ್‌ನ ಸವಿ ಅನುಭವಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ನವದೀಪ್ ಸೈನಿ ಅವರ ವೇಗದ ದಾಳಿಯೂ ಸರಣಿಯನ್ನು ರೋಚಕವಾಗಿಸಲಿದೆ. ಐಪಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಪ್ಯಾಟ್ ಕಮಿನ್ಸ್‌, ಶಿಸ್ತುಬದ್ಧ ಬೌಲಿಂಗ್ ನಡೆಸಬಲ್ಲ ಕೇನ್ ರಿಚರ್ಡ್ಸನ್ ಮತ್ತು ಭರವಸೆಯ ಆಟಗಾರ ಮಿಷೆಲ್ ಸ್ಟಾರ್ಕ್, ಆಸ್ಟ್ರೇಲಿಯಾ ವೇಗದ ದಾಳಿಯ ಮುಂಚೂಣಿಯಲ್ಲಿದ್ದಾರೆ. ಅಲೆಕ್ಸ್ ಕ್ಯಾರಿ ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ಗೆ ಸಮನಾಗಿ ರಿಷಭ್ ಪಂತ್ ಕೂಡ ಮಿಂಚುವರೇ ಎಂಬುದೂ ಕುತೂಹಲ ಕೆರಳಿಸಿರುವ ಅಂಶ. ಮಾರ್ನಸ್ ಲಾಬುಶೇನ್ ಕೂಡ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಕೆ.ಎಲ್‌.ರಾಹುಲ್ ಉತ್ತಮ ಜೋಡಿ. ಆದರೆ ಆಸ್ಟ್ರೇಲಿಯಾ ವಿರುದ್ಧ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶಿಖರ್ ಧವನ್ ಹೊಂದಿರುವ ಪ್ರಾಬಲ್ಯವನ್ನು ತಂಡದ ಆಡಳಿತ ಮರೆಯಲಾರದು. ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾದಾಗ ಧವನ್ ಗಳಿಸಿದ ಭರ್ಜರಿ ಶತಕವು ಭಾರತಕ್ಕೆ ಸುಲಭ ಜಯ ಗಳಿಸಿಕೊಟ್ಟಿತ್ತು.

ಮಂಗಳವಾರದ ಪಂದ್ಯದಲ್ಲಿ ಇಬ್ಬರು ಮಣಿಗಂಟಿನ ಸ್ಪಿನ್ನರ್‌ಗಳಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದ್ದರಿಂದ ಯಜುವೇಂದ್ರ ಚಾಹಲ್ ಅವರನ್ನು ಕೈಬಿಟ್ಟು ಕುಲದೀಪ್ ಯಾದವ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಾಗಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್ ಅಯ್ಯರ್‌, ಮನೀಷ್ ಪಾಂಡೆ, ಕೇದಾರ್ ಜಾಧವ್‌, ರಿಷಭ್ ಪಂತ್‌ (ವಿಕೆಟ್ ಕೀಪರ್‌), ಶಿವಂ ದುಬೆ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್‌, ನವದೀಪ್ ಸೈನಿ, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್‌, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್‌ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಆ್ಯಷ್ಟನ್ ಅಗರ್‌, ಪೀಟರ್ ಹ್ಯಾಂಡ್ಸ್‌ಕಂಬ್‌, ಜೋಶ್ ಹ್ಯಾಜಲ್‌ವುಡ್‌, ಮಾರ್ನಸ್‌ ಲಾಬುಶೇನ್‌, ಕೇನ್‌ ರಿಚರ್ಡ್ಸನ್‌, ಸ್ಟೀವ್ ಸ್ಮಿತ್‌, ಮಿಷೆಲ್ ಸ್ಟಾರ್ಕ್‌, ಆ್ಯಷ್ಟನ್ ಟರ್ನರ್‌, ಡೇವಿಡ್ ವಾರ್ನರ್‌, ಆ್ಯಡಂ ಜಂಪಾ.

ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ರ‍್ಯಾಂಕಿಂಗ್‌

ಭಾರತ 2

ಆಸ್ಟ್ರೇಲಿಯಾ 4

ಭಾರತ–ಆಸ್ಟ್ರೇಲಿಯಾ ಮುಖಾಮುಖಿ

ಪಂದ್ಯಗಳು 137

ಭಾರತ ಜಯ 50

ಆಸ್ಟ್ರೇಲಿಯಾ ಜಯ 77

ಫಲಿತಾಂಶವಿಲ್ಲ 10

ಭಾರತ–ಆಸ್ಟ್ರೇಲಿಯಾ ಬಲಾಬಲ

ತಂಡ;ಪಂದ್ಯ;ಜಯ;ಸೋಲು;ಟೈ;ಫಲಿತಾಂಶವಿಲ್ಲ

ಭಾರತ;981;511;420;9;41

ಆಸ್ಟ್ರೇಲಿಯಾ;942;573;326;9;34

ಪ್ರಮುಖ ಅಂಶಗಳು

* ಡೇವಿಡ್ ವಾರ್ನರ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಐದು ಸಾವಿರ ರನ್ ಪೂರೈಸಲು ಇನ್ನು 10 ರನ್ ಬೇಕು. ಅತಿವೇಗದಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಅವರದಾಗಲಿದೆ. ಡೀನ್ ಜಾನ್ಸ್ 128 ಇನಿಂಗ್ಸ್‌ಗಳಲ್ಲಿ ಐದು ಸಾವಿರ ರನ್ ಪೂರೈಸಿದ್ದರು. ವಾರ್ನರ್‌ ಈ ವರೆಗೆ 114 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ.

* ಭಾರತದ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಲು ಇನ್ನು ಒಂದು ವಿಕೆಟ್ ಬೇಕು. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ ನಾಲ್ಕು ವಿಕೆಟ್ ಗಳಿಸಿದರೆಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆ ಮಾಡಲಿದ್ದಾರೆ.

ದಾಖಲೆಯ ಸನಿಹ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಶತಕ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ತವರು ನೆಲದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಅವರು ಸರಿಗಟ್ಟಲಿದ್ದಾರೆ.

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಒಟ್ಟು 20 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಬಗಲಲ್ಲಿ ಈಗ 19 ಶತಕಗಳು ಇವೆ. ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಸರಣಿಯ ಸಂದರ್ಭದಲ್ಲಿ ಕೊಹ್ಲಿ ಮೂರೂ ಮಾದರಿಗಳಲ್ಲಿ ನಾಯಕನಾಗಿ ವೇಗದ 11 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದರು.

ಕೆಳಕ್ರಮಾಂಕಕ್ಕೆ ವಿರಾಟ್?

‘ಶಿಖರ್ ಧವನ್ ಮತ್ತು ಕೆ.ಎಲ್‌.ರಾಹುಲ್‌ಗೆ ಅವಕಾಶ ನೀಡುವುದಕ್ಕಾಗಿ ನಾನು ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯಲು ಸಿದ್ಧ’ ಎಂದು ನಾಯಕ ವಿರಾಟ್ ಕೊಹ್ಲಿ ಸೋಮವಾರ ಹೇಳಿದರು.

ಅಭ್ಯಾಸ ನಡೆಸಿದ ಹಾರ್ದಿಕ್ ಪಾಂಡ್ಯ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೋಮವಾರ ಇಲ್ಲಿ ಭಾರತ ತಂಡದೊಂದಿಗೆ ಅಭ್ಯಾಸ ಮಾಡಿದರು. ಆರಂಭದಲ್ಲಿ ಕೆಲ ಹೊತ್ತು ವಿಕೆಟ್‌ಗೆ ಚೆಂಡನ್ನೆಸೆದ ಅವರು ನಂತರ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT