ಸೋಮವಾರ, ಮೇ 17, 2021
21 °C

ಡಾನ್ ಬ್ರಾಡ್ಮನ್‌ ಟೆಸ್ಟ್‌ ಕ್ಯಾಪ್‌ಗೆ ₹ 2.51 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ (ಎಪಿ): ಕ್ರಿಕೆಟ್ ದಂತಕಥೆ ಸರ್ ಡೋನಾಲ್ಡ್ ಬ್ರಾಡ್ಮನ್ ಅವರ ಟೆಸ್ಟ್‌ ಕ್ಯಾಪ್‌ ಅನ್ನು ಉದ್ಯಮಿಯೊಬ್ಬರು ₹ 2.51 ಕೋಟಿ ಕೊಟ್ಟು ಖರೀದಿಸಿದ್ದಾರೆ.

1928ರಲ್ಲಿ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆಯ ಪಂದ್ಯದಲ್ಲಿ ಧರಿಸಿದ್ದ ಕಡುಹಸಿರು ಬಣ್ಣದ ಕ್ಯಾಪ್‌ ಅನ್ನು ಹರಾಜಿಗಿಡಲಾಗಿತ್ತು.

ರೋಡ್ ಮೈಕ್ರೋಫೋನ್ಸ್‌ ಸಂಸ್ಥಾಪಕ ಪೀಟರ್ ಫ್ರೀಡ್‌ಮನ್  ಅವರು ಈ ಕ್ಯಾಪ್ ಖರೀದಿಸಿದ್ದಾರೆ. ಅವರು ಈಚೆಗಷ್ಟೇ ₹5.20 ಕೋಟಿ ಕೊಟ್ಟು ಖ್ಯಾತ ಗಾಯಕ   ಕರ್ಟ್ ಕೊಬೇನ್ ಬಳಿಸಿದ್ದ ಗಿಟಾರ ಖರೀದಿಸಿದ್ದರು.

ಕ್ರಿಕೆಟ್‌ ಸ್ಮರಣಿಕೆಗಳ ಹರಾಜಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿದ್ದರಲ್ಲಿ ಬ್ರಾಡ್ಮನ್ ಕ್ಯಾಪ್ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಮಾಜಿ ಲೆಗ್‌ ಸ್ಪಿನ್ನರ್ ಶೇನ್ ವಾರ್ನ್ ಅವರ ಕ್ಯಾಪ್‌ ಈಚೆಗೆ ಸುಮಾರು ಐದು ಕೋಟಿ ರೂಪಾಯಿ ಮೌಲ್ಯ ಗಳಿಸಿತ್ತು.  ವಾರ್ನ್ ಆ ಹಣವನ್ನು ಆಸ್ಟ್ರೇಲಿಯಾದ ಕಾಳ್ಮಿಚ್ಚು ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ್ದರು.

ಬ್ರಾಡ್ಮನ್ 20 ವರ್ಷ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದರು. 52 ಟೆಸ್ಟ್‌ಗಳಲ್ಲಿ ಆಡಿದ್ದ ಅವರ ಬ್ಯಾಟಿಂಗ್ ಸರಾಸರಿಯು 99.94 ಆಗಿದೆ.

’ಸರ್ ಡಾನ್ ಬ್ರಾಡ್ಮನ್ ಅವರು ಆಸ್ಟ್ರೇಲಿಯಾದ ದಿಗ್ಗಜ. ಅತ್ಯುನ್ನತ ಸಾಧಕ ಮತ್ತು ಬಹಳಷ್ಟು ದೇಶಗಳು, ಜನರಿಂದ ಗೌರವಿಸಲಾಗುವ ಮಹಾನ್ ವ್ಯಕ್ತಿ‘ ಎಂದು ಫ್ರೀಡ್‌ಮನ್ ಮಂಗಳವಾರ ಹೇಳಿದ್ದಾರೆ.

’ಈ ಕ್ಯಾಪ್‌ ನನಗೆ ದಕ್ಕಿರುವುದು ತುಂಬಾ ಸಂತಸ ತಂದಿದೆ. ಇಡೀ ದೇಶದ ತುಂಬ ಈ ಕ್ಯಾಪ್ ಪ್ರದರ್ಶನ ಏರ್ಪಡಿಸಲಾಗುವುದು. ಕ್ರೀಡಾ ಅಭಿಮಾನಿಗಳಿಗೆ ದರ್ಶನ ಮಾಡಿಸಲಾಗುವುದು‘ ಎಂದು ಫ್ರೀಡ್‌ಮನ್ ಹೇಳಿದ್ದಾರೆ .

ಈ ಕ್ಯಾಪ್‌ ಅನ್ನು ಹರಾಜು ಮಾಡುವುದರ ಹಿಂದೆ ಒಂದು ಅಪರಾಧದ ಕಥೆಯೂ ಇದೆ.

ಬ್ರಿಸ್ಬೆನ್‌ನಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದ ಬ್ರಾಡ್ಮನ್ ಅವರಿಗೆ ಕ್ಯಾಪ್ ನೀಡಲಾಗಿತ್ತು.  ಅಡಿಲೇಡ್‌ನಲ್ಲಿರುವ ತಮ್ಮ ಮನೆಯ ಪಕ್ಕದಲ್ಲಿರುವ ಸ್ನೇಹಿತ ಪೀಟರ್ ಡನ್‌ಹ್ಯಾಮ್ ಅವರಿಗೆ 1959ರಲ್ಲಿ ಬ್ರಾಡ್ಮನ್ ಅವರು ತಮ್ಮ ಕ್ಯಾಪ್‌ ಅನ್ನು ಕಾಣಿಕೆ ನೀಡಿದ್ದರು. ಹೋದ ಮೇ ತಿಂಗಳಿನಲ್ಲಿ  ಪೀಟರ್ ಅವರು ಒಂದು ವಂಚನೆ ಪ್ರಕರಣದಲ್ಲಿ ಜೈಲು ಸೇರಿದರು.

ಸುಮಾರು ಏಳು ಕೋಟಿ ರೂಪಾಯಿ ವಂಚನೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್‌ಗೆ ಎಂಟು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ತಮ್ಮ ಕೆಲವು ಸ್ನೇಹಿತರ ಸಲಹೆಯ ಮೇರೆಗೆ ಬ್ರಾಡ್ಮನ್ ಕ್ಯಾಪ್ ಮಾರಾಟಕ್ಕೆ ಪೀಟರ್ ಸಮ್ಮತಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು