ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಆಟ ಮುಗಿಯಿತು ಎಂದವರು ಯಾರು?: ವಿದಾಯ ಕುರಿತ ಪೋಸ್ಟ್‌ಗೆ ವಾರ್ನರ್ ಕಿಡಿ

Published 22 ನವೆಂಬರ್ 2023, 12:42 IST
Last Updated 22 ನವೆಂಬರ್ 2023, 12:42 IST
ಅಕ್ಷರ ಗಾತ್ರ

ಭಾರತದ ಆತಿಥ್ಯದಲ್ಲಿ ನಡೆದ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟಕೇರಿದೆ.

37 ವರ್ಷದ ಡೇವಿಡ್‌ ವಾರ್ನರ್‌ ಈ ಬಾರಿ ಆಸ್ಟ್ರೇಲಿಯಾ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಅವರು ಆಡಿರುವ 11 ಪಂದ್ಯಗಳಲ್ಲಿ ತಲಾ ಎರಡು ಶತಕ ಮತ್ತು ಎರಡು ಅರ್ಧಶತಕ ಸಹಿತ 535 ರನ್ ಗಳಿಸಿದ್ದಾರೆ.

ವಾರ್ನರ್‌ ಸೇರಿದಂತೆ ಕೆಲ ಹಿರಿಯ ಕ್ರಿಕೆಟಿಗರಿಗೆ ಇದು ಕೊನೆಯ ಏಕದಿನ ವಿಶ್ವಕಪ್‌ ಟೂರ್ನಿಯಾಗಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ರೀಡಾ ವೆಬ್‌ಸೈಟ್‌ ESPNcricinfo ಕೂಡ ತನ್ನ ಎಕ್ಸ್‌ (ಟ್ವಿಟರ್) ಪುಟದಲ್ಲಿ ವಾರ್ನರ್‌ ನಿವೃತ್ತಿಯ ಬಗ್ಗೆ ಬರೆದುಕೊಂಡಿದೆ.

ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ವಾರ್ನರ್‌ ನೀಡಿರುವ ಪ್ರದರ್ಶನದ ಕುರಿತ ಅಂಕಿ–ಅಂಶಗಳನ್ನೊಳಗೊಂಡ ಚಿತ್ರ ಹಂಚಿಕೊಂಡಿರುವ ESPNcricinfo, ಅದ್ಭುತ ದಾಖಲೆಗಳೊಂದಿಗೆ ಡೇವಿಡ್‌ ವಾರ್ನರ್‌ ಅವರು ಏಕದಿನ ವಿಶ್ವಕಪ್‌ ವೃತ್ತಿಜೀವನ ಕೊನೆಗೊಂಡಿದೆ ಎಂದು ಉಲ್ಲೇಖಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾರ್ನರ್‌, 'ನನ್ನ ಆಟ ಮುಗಿಯಿತು ಎಂದು ಹೇಳಿದವರು ಯಾರು?' ಎಂದು ಪ್ರಶ್ನಿಸಿದ್ದಾರೆ.

ಈ ಟ್ವೀಟ್‌ಗೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ಬಂದಿವೆ. 'ವಾರ್ನರ್‌ ಅವರ 2.0 ಆವೃತ್ತಿ ಈಗಷ್ಟೇ ಆರಂಭವಾಗಿದೆ', 'ಉತ್ತಮ ಲಯದಲ್ಲಿದ್ದೀರಿ. ಫಿಟ್‌ನೆಸ್‌ ಅನ್ನೂ ಕಾಯ್ದುಕೊಂಡಿದ್ದೀರಿ. ನೀವು ಮತ್ತೊಂದು ವಿಶ್ವಕಪ್ ಆಡಬೇಕು' ಎಂದು ಕೆಲವರು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು, 'ನೀವು ಈಗಾಗಲೇ ಸಾಕಷ್ಟು ಸಾಧಿಸಿದ್ದೀರಿ. ವಿದಾಯ ಹೇಳಲು ಇದು ಸೂಕ್ತ ಸಮಯ' ಎಂದು ಸಲಹೆ ನೀಡಿದ್ದಾರೆ.

ವಾರ್ನರ್‌ ಸಾಧನೆ
ಟೆಸ್ಟ್‌ ಕ್ರಿಕೆಟ್‌
ನಲ್ಲಿ 109 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಾರ್ನರ್‌, 199 ಇನಿಂಗ್ಸ್‌ಗಳಲ್ಲಿ 8,487 ರನ್‌ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ, 25 ಶತಕ ಮತ್ತು 36 ಅರ್ಧಶತಗಳು ಸೇರಿವೆ.

ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ಪರ 161 ಪಂದ್ಯಗಳಲ್ಲಿ ಆಡಿದ್ದು, 159 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 22 ಶತಕ ಹಾಗೂ 33 ಅರ್ಧಶತಕ ಸಹಿತ 6,932 ರನ್‌ ಅವರ ಬ್ಯಾಟ್‌ನಿಂದ ಬಂದಿವೆ.

ವಾರ್ನರ್‌ ಟಿ–20 ಕ್ರಿಕೆಟ್‌ನಲ್ಲಿ 99 ಪಂದ್ಯ ಆಡಿದ್ದಾರೆ. 141ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿರುವ ಅವರು 1 ಶತಕ ಹಾಗೂ 24 ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ 2,894 ರನ್‌ ಕಲೆಹಾಕಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ..
ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಪರ ಏಕದಿನ ವಿಶ್ವಕಪ್‌ನಲ್ಲಿ 29 ಪಂದ್ಯಗಳನ್ನು ಆಡಿರುವ ವಾರ್ನರ್‌, 6 ಶತಕ ಮತ್ತು 5 ಅರ್ಧಶತಕ ಸಹಿತ 1,527 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT