ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ | ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌; ಪರ, ವಿರೋಧ ಚರ್ಚೆ

Published 20 ನವೆಂಬರ್ 2023, 9:49 IST
Last Updated 20 ನವೆಂಬರ್ 2023, 9:49 IST
ಅಕ್ಷರ ಗಾತ್ರ

ಅಹಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟ್ರೋಫಿಯನ್ನು ಆರನೇ ಬಾರಿ ಗೆದ್ದು ಬೀಗಿದೆ. ಆದರೆ ಟ್ರೋಫಿಯೊಂದಿಗೆ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್‌ ನಡೆದುಕೊಂಡ ರೀತಿಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಕಾರ್ಯಕ್ರಮದ ನಂತರ ಆಸ್ಟ್ರೇಲಿಯಾದ ಆಟಗಾರರು ಹೋಟೆಲಿನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮಾರ್ಷ್ ಅವರು ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದು, ಕಾಲುಗಳನ್ನು ಟ್ರೋಫಿ ಮೇಲಿಟ್ಟ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಮಾರ್ಷ್ ನಡೆ ವಿಶ್ವಕಪ್ ಟ್ರೋಫಿಗೆ ಮಾಡಿರುವ ಅವಮಾನ ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಆರನೇ ಬಾರಿ ಗೆದ್ದ ತಂಡದ ಆಟಗಾರರ ಉದ್ಧಟತನ, ಅಹಂಕಾರ, ಕ್ರೀಡಾಮನೋಭಾವವಿಲ್ಲದ ನಡೆ ಎಂಬಿತ್ಯಾದಿಯಾಗಿ ಜರಿದಿದ್ದಾರೆ.

ಇದಕ್ಕೆ ಪೂರಕವಾಗಿ ಫುಟ್‌ಬಾಲ್ ವಿಶ್ವಕಪ್ ಗೆದ್ದ ಅಂರ್ಜೆಂಟೀನಾ ತಂಡದ ನಾಯಕ ಲಿಯಾನಲ್ ಮೆಸ್ಸಿ ಅವರು, ಟ್ರೋಫಿಯನ್ನು ತಮ್ಮ ಪಕ್ಕದಲ್ಲಿ ತಬ್ಬಿಕೊಂಡು ಮಲಗಿದ ಚಿತ್ರವನ್ನು ಹಲವರು ಹಂಚಿಕೊಂಡಿದ್ದಾರೆ. ಇದು ನಿಜವಾದ ಕ್ರೀಡಾ ಪ್ರೀತಿ ಎಂಬ ಒಕ್ಕಣೆಯನ್ನೂ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಇನ್ನೂ ಕೆಲವರು, ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ‘ಟ್ರೋಫಿ ಗೆದ್ದವರು ಅವರೇ ಹೊರತು ನೀವಲ್ಲ. ಹೀಗಾಗಿ ಅದರ ಸಂಪೂರ್ಣ ಹಕ್ಕು ಅವರಿಗಿದೆ. ನೀವು ಅದಕ್ಕಾಗಿ ಅಸೂಯೆಪಡಬೇಕಾಗಿಲ್ಲ’ ಎಂದಿದ್ದಾರೆ.

ಮಾರ್ಷ್‌ ಅವರು ತಮ್ಮ ಶೂ ಒಳಗೆ ಬಿಯರ್‌ ಹಾಕಿಕೊಂಡು ಕುಡಿದ ಚಿತ್ರವನ್ನೂ ಕೆಲವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೇ ಇಷ್ಟೊಂದು ಕಸಿವಿಸಿ ವ್ಯಕ್ತಪಡಿಸುತ್ತಿರುವ ಭಾರತೀಯರೇ ಇಲ್ಲಿ ನೋಡಿ, ಶೂ ಒಳಗೆ ಬಿಯರ್‌ ಹಾಕಿ ಕುಡಿಯುತ್ತಿರುವ ಆಸ್ಟ್ರೇಲಿಯಾದ ಮಂದಿ’ ಎಂದಿದ್ದಾರೆ.

ಇನ್ನೂ ಕೆಲವರು ಮಾರ್ಷ್‌ ಮಾತ್ರವಲ್ಲ, ಅರ್ಜೆಂಟೀನಾದ ಗೋಲ್‌ಕೀಪರ್ ಡಿಬು ಮಾರ್ಟಿನಜ್ ಅವರು ಚಿನ್ನದ ಗ್ಲೌಸ್‌ನೊಂದಿಗೆ ವೇದಿಕೆಯಲ್ಲೇ ತೋರಿದ ಭಂಗಿಯನ್ನೂ ಹಂಚಿಕೊಂಡಿದ್ದಾರೆ.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮಾರ್ಷ್‌ ಅವರು ಪಂದ್ಯದ ಭವಿಷ್ಯವನ್ನು ನುಡಿದಿದ್ದರು. ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 450 ರನ್ ಗಳಿಸಲಿದೆ. ಭಾರತ 95 ರನ್‌ಗಳಿಗೆ ಆಲ್‌ಔಟ್ ಆಗಲಿದೆ ಎಂದಿದ್ದೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವಿಶ್ವಕಪ್‌ ಮೇಲೆ ಕಾಲಿಟ್ಟಿದ್ದು ಅಭಿಮಾನಿಗಳ ನಡುವೆ ಅಕ್ಷರ ಸಮರಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT