ಶನಿವಾರ, ಏಪ್ರಿಲ್ 4, 2020
19 °C

ಮುಫಿಕುರ್‌ ರಹೀಂ ದಾಖಲೆ: ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ಆತಿಥೇಯ ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 106 ರನ್‌ ಅಂತರದ ಸುಲಭ ಜಯ ಸಾಧಿಸಿತು.

ಇಲ್ಲಿನ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ, ನಾಯಕ ಕ್ರೇಗ್‌ ಇರ್ವಿನ್‌ (107) ಅವರ ಶತಕದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 265 ರನ್‌ಗಳಿಗೆ ಆಲೌಟ್‌ ಆಗಿತ್ತು.

ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ ಪರ ನಾಯಕ ಮೊಮಿನುಲ್‌ ಹಕ್‌ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ಮುಷ್ಫಿಕುರ್‌ ರಹೀಂ ಭರ್ಜರಿ ಬ್ಯಾಟಿಂಗ್‌ ನಡೆಸಿದರು. 234 ಎಸೆತಗಳನ್ನು ಎದುರಿಸಿದ ಹಕ್‌ 14 ಬೌಂಡರಿ ಸಹಿತ 132 ರನ್ ಗಳಿಸಿದರೆ, ರಹೀಂ 318 ಎಸೆತಗಳಲ್ಲಿ 28 ಬೌಂಡರಿ ಸಹಿತ 203 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಇವರ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾ ತಂಡ 6 ವಿಕೆಟ್‌ ಕಳೆದುಕೊಂಡು 560 ರನ್‌ಗಳ ಬೃಹತ್‌ ಪೇರಿಸಿತು. ಈ ವೇಳೆ ನಾಯಕ ಹಕ್‌ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು.

395 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿ ಎರಡನೇ ಇನಿಂಗ್ಸ್‌ ಆರಂಭಸಿದ ಪ್ರವಾಸಿ ಪಡೆ ಕೇವಲ 189 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಬಾಂಗ್ಲಾ, ಇನಿಂಗ್ಸ್‌ ಹಾಗೂ 106 ರನ್‌ ಗೆಲುವು ಸಾಧಿಸಿ ಬೀಗಿತು.

ಸ್ಕೋರ್‌ ವಿವರ
ಜಿಂಬಾಬ್ವೆ ಮೊದಲ ಇನಿಂಗ್ಸ್‌:
106.3 ಓವರ್‌ಗಳಲ್ಲಿ 265ಕ್ಕೆ ಆಲೌಟ್‌
ಕ್ರೇಗ್‌ ಇರ್ವಿನ್‌ 107 ರನ್‌
ಅಬು ಜಾಯೆದ್‌ 71ಕ್ಕೆ 4 ವಿಕೆಟ್‌
ನಯೀಂ ಹಸನ್‌ 70ಕ್ಕೆ 4 ವಿಕೆಟ್‌

ಬಾಂಗ್ಲಾದೇಶ ಮೊದಲ ಇನಿಂಗ್ಸ್‌: 154 ಓವರ್‌ಗಳಲ್ಲಿ 6 ವಿಕೆಟ್‌ಗೆ 560
ಮುಷ್ಫಿಕುರ್‌ ರಹೀಂ ಅಜೇಯ 203 ರನ್‌
ಮೊಮಿನುಲ್‌ ಹಕ್‌ 132 ರನ್‌
ಐನ್ಸ್ಲೇ ಎನ್‌ಬ್ಲೊವು 170ಕ್ಕೆ 2

ಜಿಂಬಾಬ್ವೆ ಎರಡನೇ ಇನಿಂಗ್ಸ್‌: 57.3 ಓವರ್‌ಗಳಲ್ಲಿ 189ಕ್ಕೆ ಆಲೌಟ್‌
ಕ್ರೇಗ್‌ ಇರ್ವಿನ್‌ 43 ರನ್‌
ನಯೀಂ ಹಸನ್‌ 82ಕ್ಕೆ 5 ವಿಕೆಟ್‌
ತೈಜುಲ್ ಇಸ್ಲಾಂ 78ಕ್ಕೆ 4 ವಿಕೆಟ್‌

ರಹೀಂ ದಾಖಲೆ
ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ರಹೀಂ, ಬಾಂಗ್ಲಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 70 ಪಂದ್ಯಗಳ 130 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು ಸದ್ಯ 4413 ರನ್‌ ಪೇರಿಸಿದ್ದಾರೆ. 60 ಪಂದ್ಯಗಳ 115 ಇನಿಂಗ್ಸ್‌ಗಳಿಂದ 4405 ರನ್‌ ಗಳಿಸಿರುವ ತಮೀಮ್‌ ಇಕ್ಬಾಲ್‌ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು