ಗುರುವಾರ , ಮೇ 26, 2022
23 °C
ರವೀಂದ್ರ ಜಡೇಜ–ಫಫ್‌ ಡು ಪ್ಲೆಸಿ ಮುಖಾಮುಖಿ: ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮೇಲೆ ಕಣ್ಣು

IPL 2022: ಬೆಂಗಳೂರಿಗೆ ಸಾಟಿಯಾಗುವುದೇ ಚೆನ್ನೈ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವಿ ಮುಂಬೈ: ಸತತ ಮೂರು ಪಂದ್ಯಗಳಲ್ಲಿ ಗೆದ್ದು ಭರವಸೆಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೆಡೆ; ನಾಲ್ಕೂ ಪಂದ್ಯಗಳಲ್ಲಿ ಸೋತು ನಿರಾಸೆಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದೆಡೆ.

ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಈ ಎರಡು ತಂಡಗಳ ಮುಖಾಮುಖಿ ಕುತೂಹಲ ಕೆರಳಿಸಿದೆ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ಈ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್ ಮುಂಬೈ 15ನೇ ಆವೃತ್ತಿಯಲ್ಲಿ ಮೊದಲ ಜಯದ ಕನಸು ಹೊತ್ತು ಕಣಕ್ಕೆ ಇಳಿಯಲಿದೆ.

ಬೆಂಗಳೂರು ಮತ್ತು ಚೆನ್ನೈ ತಂಡಗಳೆರಡೂ ಹೊಸ ನಾಯಕರ ನೇತೃತ್ವದಲ್ಲಿ ಈ ಬಾರಿ ಆಡುತ್ತಿವೆ. ಹಿಂದಿನ ಆವೃತ್ತಿ ವರೆಗೂ ಚೆನ್ನೈ ತಂಡದಲ್ಲಿದ್ದ ಫಫ್ ಡು ಪ್ಲೆಸಿ ಈಗ ಬೆಂಗಳೂರು ತಂಡದ ನಾಯಕ. ಅವರ ನೇತೃತ್ವದಲ್ಲಿ ಆರಂಭದ ಪಂದ್ಯವನ್ನು ಸೋತಿದ್ದ ತಂಡ ನಂತರ ಚೇತರಿಸಿಕೊಂಡಿದೆ. ಹೀಗಾಗಿ ಹ್ಯಾಟ್ರಿಕ್ ಸಾಧನೆ ಮಾಡಲು ತಂಡಕ್ಕೆ ಸಾಧ್ಯವಾಗಿದೆ.

ರವೀಂದ್ರ ಜಡೇಜ ಮುಂದಾಳತ್ವದ ಚೆನ್ನೈಗೆ ಯಾವ ಪಂದ್ಯದಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಸತತ ಸೋಲಿನಿಂದಾಗಿ ತಂಡದ ಆತ್ಮವಿಶ್ವಾಸ ಕಳೆದುಹೋಗಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೇ ಹೇಳಿಕೊಂಡಿದ್ದಾರೆ. ಆದ್ದರಿಂದ ಭರವಸೆಯಿಂದ ಆಡಲು ತಂಡ ಮುಂದಾಗಲಿದೆ.

ರವೀಂದ್ರ ಜಡೇಜ ಅವರಿಗೆ ಸ್ವತಃ ಮಿಂಚಲು ಆಗಲಿಲ್ಲ. ತಂಡವನ್ನು ಸಮರ್ಪಕವಾಗಿ ಮುನ್ನಡೆಸುವುದಕ್ಕೂ ಸಾಧ್ಯವಾಗಲಿಲ್ಲ. ಅನುಭವಿ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಡ್ವೇನ್ ಬ್ರಾವೊ ಕೆಲವು ಪಂದ್ಯಗಳಲ್ಲಿ ಮಿಂಚಿದ್ದರೂ ಗೆಲುವಿನ ಕಾಣಿಕೆ ನೀಡುವಲ್ಲಿ ವಿಫಲರಾಗಿದ್ದಾರೆ. ತಂಡಕ್ಕೆ ಒಂದು ಬಾರಿ ಮಾತ್ರ 200 ರನ್‌ಗಳ ಮೊತ್ತ ದಾಟಲು ಸಾಧ್ಯವಾಗಿದೆ. ಉಳಿದ ಮೂರು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಮಾಡಿದೆ. 

ಬೆಂಗಳೂರು ತಂಡದ ವಾನಿಂದು ಹಸರಂಗ, ಡೇವಿಡ್ ವಿಲ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಎದುರಿಸುವ ಸವಾಲನ್ನು ಚೆನ್ನೈ ಬ್ಯಾಟರ್‌ಗಳು ಮೀರುವರೇ ಎಂಬುದು ಕುತೂಹಲದ ಪ್ರಶ್ನೆ.  ಈ ಹಿನ್ನೆಲೆಯಲ್ಲಿ ಯುವ ಬ್ಯಾಟರ್ ಋತುರಾಜ್ ಗಾಯಕವಾಡ್‌, ಆಲ್‌ರೌಂಡರ್ ಮೋಯಿನ್ ಅಲಿ ಮತ್ತು ಶಿವಂ ದುಬೆ ಮೇಲೆ ಕಣ್ಣು ನೆಟ್ಟಿದೆ. 

ಅನುಜ್, ವಿರಾಟ್ ಮೇಲೆ ನಿರೀಕ್ಷೆ

ಬೆಂಗಳೂರು ತಂಡ ಎಲ್ಲ ವಿಭಾಗಗಳಲ್ಲೂ ಲಯ ಕಂಡುಕೊಂಡಿದೆ. ಚೊಚ್ಚಲ ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಅನುಜ್ ರಾವತ್ ಮತ್ತು ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಮೇಲೆ ತಂಡದ ನಿರೀಕ್ಷೆ ಹೆಚ್ಚಿದೆ. ಯಾವುದೇ ರೀತಿಯ ಬೌಲಿಂಗ್ ದಾಳಿಯನ್ನು ಎದುರಿಸಬಲ್ಲ ಸಾಮರ್ಥ್ಯ ಇರುವ ಫಫ್ ಡು ಪ್ಲೆಸಿ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಬಲವಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು