ಶನಿವಾರ, ನವೆಂಬರ್ 16, 2019
°C

ಫ್ರ್ಯಾಂಚೈಸ್‌ ಲೀಗ್ ಪದ್ಧತಿ ಸರಿಯಿಲ್ಲ: ಎಸಿಯು

Published:
Updated:

ನವದೆಹಲಿ: ಫ್ರ್ಯಾಂಚೈಸ್ ಆಧಾರಿತ ಕ್ರಿಕೆಟ್ ಲೀಗ್‌ಗಳ ವ್ಯವಸ್ಥೆಯ ಮರುರಚನೆಯ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ತಡೆ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ  ಪ್ರಮುಖ ಆಟಗಾರರಾದ ಸಿ.ಎಂ. ಗೌತಮ್ ಮತ್ತು ಅಬ್ರಾರ್ ಖಾಜಿ ಸೇರಿ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ದಾರ್ ಕೂಡ ಪೊಲೀಸರ ವಶದಲ್ಲಿದ್ದಾರೆ. ಈಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆದ ಆರೋಪ ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಸಂಘಟಿಸಲಾಗುತ್ತಿರುವ ಲೀಗ್ ಟೂರ್ನಿಗಳ ಕುರಿತು ಅಜಿತ್ ಸಿಂಗ್, ‘ಈ ತಂಡಗಳನ್ನು ಹರಾಜು ಪ್ರಕ್ರಿಯೆಯಲ್ಲಿ ರಚಿಸಲಾಗುತ್ತದೆ. ಆದರೆ, ಈ ಪ್ರಕ್ರಿಯೆಯನ್ನು ಬಿಸಿಸಿಐ ನಡೆಸುತ್ತಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಳೇ ನಡೆಸುತ್ತಿವೆ. ಇದರಿಂದಾಗಿ ಫ್ರ್ಯಾಂಚೈಸ್‌ ಮಾಲೀಕತ್ವದ ಕುರಿತು ಸೂಕ್ತ ಪರಿಶೀಲನೆಗಳು ಆಗುತ್ತಿಲ್ಲ. ಹೆಚ್ಚು ದುಡ್ಡು ಕೊಡುವವರಷ್ಟೇ ಮಾಲೀಕತ್ವ ವಹಿಸುತ್ತಿದ್ದಾರೆ. ಈ ಪದ್ಧತಿ ಮರುಪರಿಶೀಲನೆ ಅಗತ್ಯ’ ಎಂದಿದ್ದಾರೆ.

‘ಫ್ರ್ಯಾಂಚೈಸ್‌ಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಬೇಕು ಎಂಬ ಸಲಹೆಗಳು ಇವೆ. ಆದರೆ ಎಲ್ಲ ವಿಚಾರದಲ್ಲಿಯೂ ಪೊಲೀಸರ ವಿಚಾರಣೆ ಸರಿ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಯಾರದಾದರೂ ಅಪರಾಧ ಹಿನ್ನೆಲೆ ಇದ್ದರೆ ಮಾತ್ರ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸುತ್ತಾರೆ’ ಎಂದರು.

‘ಬಿಡ್‌ ಪ್ರಕ್ರಿಯೆಯ ಭಾಗವಹಿಸುವವರೆಲ್ಲರ ಆರ್ಥಿಕ ಸ್ಥಿತಿಯ ಅಧಿಕೃತ ದಾಖಲೆಗಳನ್ನು ಪಡೆಯಬೇಕು. ಅವರ ಹಿನ್ನೆಲೆಯನ್ನು ಕೂಲಂಕಷವಾಗಿ ತಿಳಿದಿರಬೇಕು’ ಎಂದರು.

‘ಈ ಲೀಗ್‌ ಟೂರ್ನಿಗಳನ್ನು ಸ್ಥಗಿತಗೊಳಿಸುವ ಬಗ್ಗೆ ಬಹಳಷ್ಟು ಜನರು ನನ್ನ ಅಭಿಪ್ರಾಯ ಕೇಳಿದ್ದಾರೆ. ಆದರೆ, ಈ ವಿಷಯದಲ್ಲಿ ಬಿಸಿಸಿಐ ನಿರ್ಧಾರ ಕೈಗೊಳ್ಳಬೇಕು. ಒಬ್ಬ ವ್ಯಕ್ತಿಯು ಅನಾರೋಗ್ಯಕ್ಕೀಡಾದಾಗ ಆತನನ್ನು ನೀವು ಕೊಲ್ಲಲು ಸಾಧ್ಯವಿಲ್ಲ. ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನಿಸುತ್ತೀರಿ ಅಲ್ಲವೇ? ಅದೇ ರೀತಿ ವ್ಯವಸ್ಥೆಯನ್ನು ಸರಿಪಡಿಸುವತ್ತ ಯೋಚಿಸಬೇಕು. ಕೆಪಿಎಲ್ ಫಿಕ್ಸಿಂಗ್ ಪ್ರಕರಣ ತನಿಖೆ ಮಾಡುತ್ತಿದ್ದೇವೆ. ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ’ ಎಂದು ಐಪಿಎಸ್ ಅಧಿಕಾರಿಯೂ ಆಗಿರುವ ಅಜಿತ್ ಸಿಂಗ್ ಹೇಳಿದರು.

ಪ್ರತಿಕ್ರಿಯಿಸಿ (+)