ಇಂಡಿಯನ್ ಪ್ರೀಮಿಯರ್ ಲೀಗ್: ವಂಚನೆ ತಡೆಗೆ ಎಫ್‌ಡಿಎಸ್

ನವದೆಹಲಿ: ಇದೇ 19ರಂದು ಯುಎಇಯಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ವಂಚನೆ ತಡೆಗೆ ಹಾಗೂ ಕಳ್ಳಾಟದ ಮೇಲೆ ಕಣ್ಣಿಡಲು ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಸ್ಪೋರ್ಟ್ ರಾಡಾರ್ ಕಂಪನಿಯ ಸಹಯೋಗ ಪಡೆದುಕೊಳ್ಳಲು ನಿರ್ಧರಿಸಿದೆ.
ಬ್ರಿಟನ್‌ನ ಕಂಪನಿಯಾಗಿರುವ ಸ್ಪೋರ್ಟ್ ರಾಡಾರ್‌ನ ವಂಚನೆ ಪತ್ತೆ ಸೇವೆ (ಎಫ್‌ಡಿಎಸ್) ಮೂಲಕ ಬಿಸಿಸಿಐಗೆ ನೆರವಾಗಲಿದೆ.
ಈ ಬಾರಿಯ ಐಪಿಎಲ್ ಪ್ರೇಕ್ಷಕರಿಲ್ಲದ ಅಂಗಣಗಳಲ್ಲಿ ನಡೆಯಲಿದೆ. ಬಿಸಿಸಿಐನ ಅಜಿತ್ ಸಿಂಗ್ ನೇತೃತ್ವದ ಭ್ರಷ್ಟಾಚಾರ ತಡೆ ಘಟಕ ಬೆಟ್ಟಿಂಗ್‌ನಂಥ ಕೃತ್ಯಗಳನ್ನು ತಡೆಯಲು ಸಜ್ಜಾಗಿದೆ. ರಾಜ್ಯಗಳು ಆಯೋಜಿಸುವ ಲೀಗ್‌ಗಳಲ್ಲಿ ಕೂಡ ಬೆಟ್ಟಿಂಗ್ ಜೋರಾಗಿರುವುದು ವರದಿಯಾದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಘಟಕ ಈ ಬಾರಿ ಹೆಚ್ಚು ಚುರುಕಾಗಿದೆ. ಸ್ಪೋರ್ಟ್ ರಾಡಾರ್ ಈ ಘಟಕದ ಜೊತೆಗೂಡಿ ಕಾರ್ಯನಿರ್ವಹಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಗೋವಾದಲ್ಲಿ ನಡೆದಿದ್ದ ಫುಟ್‌ಬಾಲ್ ಲೀಗ್‌ಗಳ ಆರು ಪಂದ್ಯಗಳಲ್ಲಿ ಮೋಸದಾಟ ನಡೆದದ್ದನ್ನು ಸ್ಪೋರ್ಟ್ ರಾಡಾರ್ ಪತ್ತೆ ಮಾಡಿದೆ. ಫಿಫಾ, ಯೂಯೆಫಾ ಮುಂತಾದ ಸಂಸ್ಥೆಗಳಿಗೂ ಈ ಕಂಪನಿ ನೆರವಾಗಿದೆ. ತಮಿಳುನಾಡು ಪ್ರೀಮಿಯರ್ ಕ್ರಿಕೆಟ್ ಲೀಗ್ ಸೇರಿದಂತೆ ಕೆಲವು ಪ್ರಮುಖ ಟೂರ್ನಿಗಳಲ್ಲಿ ಬೆಟ್ಟಿಂಗ್ ನಡೆದಿರುವುದು ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಮೇಲೆಯೂ ಗಂಭೀರ ನೋಟ ಇಡಲು ನಿರ್ಧರಿಸಲಾಗಿದೆ.
ಸ್ಪೋರ್ಟ್ ರಾಡಾರ್ ಕಂಪನಿ 600ಕ್ಕೂ ಹೆಚ್ಚು ಬುಕ್ಕಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಅವರು ಮೋಸದಾಟದಲ್ಲಿ ಭಾಗಿಯಾಗಲು ಮುಂದಾದರೆ ಪತ್ತೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ. ಪ್ರತಿದಿನ 50 ಲಕ್ಷದಷ್ಟು ಡೇಟಾ ಸೆಟ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಈ ಕಂಪನಿಗೆ ಇದೆ.
ಆಟಗಾರರನ್ನು ಮತ್ತು ನೆರವು ಸಿಬ್ಬಂದಿಯನ್ನು ಬಲೆಗೆ ಬೀಳಿಸಿ ವಂಚನೆಗೆ ಕುಮ್ಮಕ್ಕು ನೀಡುವ ಬುಕ್ಕಿಗಳು ಮಾತ್ರವಲ್ಲದೆ ಫ್ಯಾಂಟಸಿ ಗೇಮ್‌ಗಳ ಕಂಪನಿಗಳು ಕೂಡ ಕುಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
‘ಫ್ಯಾಂಟಸಿ ಗೇಮ್ ವಾಸ್ತವದಲ್ಲಿ ಬೆಟ್ಟಿಂಗ್ ಅಲ್ಲ. ಆದರೆ ಜೂಜಿನ ಸಾಧ್ಯತೆಗಳು ಅಲ್ಲಿ ಇವೆ. ಹೀಗಾಗಿ ಬೆಟ್ಟಿಂಗ್ ತಡೆಗೆ ನೆರವಾಗುವ ಕಂಪನಿ ಜೊತೆ ಬಿಸಿಸಿಐ ಕೈಜೋಡಿಸಿರುವುದು ನಿಜಕ್ಕೂ ಅಭಿನಂದನೀಯ‘ ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ಹೇಳಿದರು.
‘ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಸಣ್ಣ ಸಂಚಲನವಾದರೂ ಎಚ್ಚರಿಕೆ ನೀಡುವ 25 ಉಪಕರಣಗಳು ಇವೆ. ಗಣಿತದ ಮಾದರಿಗಳನ್ನು ಬಳಸಿಕೊಂಡು ಬುಕ್ಕಿಗಳ ಚಲನವಲನಗಳ ಮೇಲೆ ಗಮನ ಇರಿಸಲಾಗುತ್ತದೆ‘ ಎಂಬ ಮಾಹಿತಿ ಸ್ಪೋರ್ಟ್ ರಾಡಾರ್‌ನ ವೆಬ್‌ಸೈಟ್‌ನಲ್ಲಿರುವ ’25 ಲೈವ್ ಅಲರ್ಟ್ಸ್’ ಎಂಬ ವಿಭಾಗದಲ್ಲಿ ಇದೆ.
ಪಂದ್ಯಪೂರ್ವದಲ್ಲಿ ಎಚ್ಚರಿಕೆ ನೀಡಲು 44 ಉಪಕರಣಗಳು ಇವೆ. ಎಚ್ಚರಿಕೆ ಸಂದೇಶಗಳು ಎಫ್‌ಡಿಎಸ್‌ನಿಂದ ಬರುತ್ತವೆ ಎಂಬ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.