ಅಂಗವಿಕಲರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ

ಬುಧವಾರ, ಮಾರ್ಚ್ 27, 2019
26 °C
ಒಂದಾದ 4 ಕ್ರಿಕೆಟ್‌ ಸಂಸ್ಥೆಗಳು, ಟಿ–20 ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ

ಅಂಗವಿಕಲರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ

Published:
Updated:
Prajavani

ಹುಬ್ಬಳ್ಳಿ: ಚದುರಿ ಹೋಗಿದ್ದ ದೇಶದ ನಾಲ್ಕು ಅಂಗವಿಕಲರ ಕ್ರಿಕೆಟ್‌ ಸಂಸ್ಥೆಗಳು ಈಗ ಒಂದಾಗಿದ್ದು, ಅಂಗವಿಕಲರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ ಲಭಿಸಿದೆ.

ಇದೇ ವರ್ಷದ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟ್ವೆಂಟಿ–20 ವಿಶ್ವ ಸರಣಿ ನಡೆಯಲಿದೆ.

ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕಾದರೆ ದೇಶದ ದೈಹಿಕ ಅಂಗವಿಕಲರ ಎಲ್ಲ ಕ್ರಿಕೆಟ್‌ ಸಂಸ್ಥೆಗಳು ಒಂದಾಗಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿತ್ತು. ಆದ್ದರಿಂದ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿತ್‌ ವಾಡೇಕರ್‌ ಅವರು 30 ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭಿಸಿದ್ದ ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಜೊತೆ ದೆಹಲಿ, ಆಗ್ರಾ ಮತ್ತು ಕೋಲ್ಕತ್ತದ ಸಂಸ್ಥೆಗಳು ವಿಲೀನವಾಗಿವೆ.

ಕ್ರಿಕೆಟ್‌ ಸಂಸ್ಥೆಗಳು ಮೊದಲು ಬೇರೆಯಾಗಿದ್ದಾಗ ಆಯಾ ಸಂಸ್ಥೆಗಳು ಪ್ರತ್ಯೇಕ ಟೂರ್ನಿ ನಡೆಸುತ್ತಿದ್ದವು. ಆಟಗಾರರು ಕೂಡ ತಮಗೆ ಅನುಕೂಲವಾದ ಕ್ರಿಕೆಟ್‌ ಸಂಸ್ಥೆ ಪರ ಆಡುತ್ತಿದ್ದರು. ಪರಸ್ಪರ ಒಂದಕ್ಕೊಂದು ಟೂರ್ನಿಗಳಿಗೆ ಸಂಬಂಧವೇ ಇರುತ್ತಿರಲಿಲ್ಲ. ಇದನ್ನು ತಪ್ಪಿಸಬೇಕು, ದೇಶದಲ್ಲಿ ದೈಹಿಕ ಅಂಗವಿಕಲರ ಒಂದೇ ಕ್ರಿಕೆಟ್‌ ಸಂಸ್ಥೆ ಇರಬೇಕು ಎನ್ನುವ ಕಾರಣಕ್ಕೆ ಎಲ್ಲ ಸಂಸ್ಥೆಗಳು ಈಗ ಒಂದಾಗಿವೆ. ಇದರ ಬಗ್ಗೆ ಇತ್ತೀಚಿಗೆ ಮುಂಬೈನಲ್ಲಿ ನಡೆದ ಅಂಗವಿಕಲರ ಕ್ರಿಕೆಟ್‌ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಚರ್ಚೆಯಾಗಿತ್ತು.

‘ಬಿಸಿಸಿಐ ಮಾನ್ಯತೆ ನೀಡಿದ ಬಳಿಕ ಮಹಿಳಾ ಕ್ರಿಕೆಟ್‌ನಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅದೇ ರೀತಿ ದೈಹಿಕ ಅಂಗವಿಕಲರ ಕ್ರಿಕೆಟ್‌ ಅನ್ನು ಬಿಸಿಸಿಐ ವ್ಯಾಪ್ತಿಗೆ ಒಳಪಡಿಸಬೇಕೆಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಬಿಸಿಸಿಐ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಾರಿಯ ಟಿ–20 ವಿಶ್ವ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ’ ಎಂದು ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅಶೋಕ ವಾಡೇಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತದಲ್ಲಿ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಒಂದೇ ಇರಬೇಕು. ಅದಕ್ಕೆ ಬಿಸಿಸಿಐ ಮಾನ್ಯತೆ ಲಭಿಸಬೇಕು ಎನ್ನುವುದು ಸಹೋದರ ಅಜಿತ್‌ ವಾಡೇಕರ್‌ ಕನಸಾಗಿತ್ತು. ಅವರು ತೀರಿ ಹೋದ ಮೇಲೆ ಈ ಆಸೆ ಈಡೇರಿದೆ. ಮುಂದೆ ಅಂಗವಿಕಲರ ಕ್ರಿಕೆಟ್‌ಗೆ ಉನ್ನತ ಸ್ಥಾನಮಾನ ಲಭಿಸುತ್ತದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ದಕ್ಷಿಣ ವಲಯದ ಪ್ರತಿನಿಧಿಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಶಿವಾನಂದ ಗುಂಜಾಳ ‘ಬಿಸಿಸಿಐ ಮಾನ್ಯತೆ ನೀಡಿರುವ ಕಾರಣ ಆಟಗಾರರಿಗೆ ಸೌಲಭ್ಯಗಳು ಸಿಗುತ್ತವೆ. ಆಟಗಾರರ ಪ್ರವಾಸದ ಖರ್ಚನ್ನು ಅಂಗವಿಕಲರ ಕ್ರಿಕೆಟ್‌ ಸಂಸ್ಥೆಯೇ ಭರಿಸಲಿದೆ. ವಿನೋದ್‌ ಕಾಂಬ್ಳೆ ಭಾರತ ದೈಹಿಕ ಅಂಗವಿಕಲರ ತಂಡದ ಕೋಚ್‌ ಆಗಿ ನೇಮಕವಾಗುವ ಸಾಧ್ಯತೆಯಿದೆ’ ಎಂದರು.

ಏ. 1ರಂದು ಟ್ರಯಲ್ಸ್‌: ಟಿ–20 ವಿಶ್ವ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಏ. 1ರಂದು ಮುಂಬೈನಲ್ಲಿ ಟ್ರಯಲ್ಸ್‌ ನಡೆಯಲಿದೆ. ಮೇ 30ರ ಒಳಗೆ ಭಾರತ ತಂಡವನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಬೇಕು. ಜುಲೈನಲ್ಲಿ ತಂಡ ಇಂಗ್ಲೆಂಡ್‌ಗೆ ತೆರಳಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಪತ್ರ
ಇಂಗ್ಲೆಂಡ್‌ನಲ್ಲಿ ಆ. 3ರಿಂದ 17ರ ತನಕ ನಡೆಯಲಿರುವ ವಿಶ್ವ ಟಿ–20 ಸರಣಿಯಲ್ಲಿ ಪಾಲ್ಗೊಳ್ಳಲು ಬರುವಂತೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿಯ ದೈಹಿಕ ಅಂಗವಿಕಲರ ಕ್ರಿಕೆಟ್‌ ವಿಭಾಗದ ಮುಖ್ಯಸ್ಥ ಇಯಾನ್‌ ಮಾರ್ಟಿನ್‌, ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ರವಿ ಚೌಹಾಣ್‌ಗೆ ಮಾ. 11ರಂದು ಪತ್ರ ಬರೆದಿದ್ದಾರೆ.

**
ಬಿಸಿಸಿಐ ಮಾನ್ಯತೆ ಸಿಕ್ಕಿರುವುದರಿಂದ ಪ್ರಾಯೋಜಕರು ಮುಂದೆ ಬರುತ್ತಾರೆ. ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಕೂಡ ಸ್ವತಂತ್ರವಾಗಿ ಟೂರ್ನಿಗಳನ್ನು ಸಂಘಟಿಸಬಹುದು
–ಶಿವಾನಂದ ಗುಂಜಾಳ, ದಕ್ಷಿಣ ವಲಯದ ಪ್ರತಿನಿಧಿ, ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ

**
ಭಾರತದ ದೈಹಿಕ ಅಂಗವಿಕಲ ಕ್ರಿಕೆಟಿಗರಿಗೆ ವಿಶ್ವಮಟ್ಟದಲ್ಲಿ ಮಾನ್ಯತೆ ಸಿಗಬೇಕು ಎಂಬುದು ಅಜಿತ್‌ ವಾಡೇಕರ್ ಕನಸಾಗಿತ್ತು. ಅವರ ಆಸೆ ಈಗ ಈಡೇರಿದೆ.
–ಅಶೋಕ ವಾಡೇಕರ್, ಅಧ್ಯಕ್ಷ, ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !