ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಕ್ರಿಕೆಟ್: ಭಾರತ ತಂಡಕ್ಕೆ ಸುಲಭದ ತುತ್ತಾದ ಪಾಕ್

ಅಲ್ಪಮೊತ್ತಕ್ಕೆ ಆಲೌಟ್‌ ಆದ ಪಾಕಿಸ್ತಾನ ತಂಡ
Last Updated 19 ಸೆಪ್ಟೆಂಬರ್ 2018, 19:59 IST
ಅಕ್ಷರ ಗಾತ್ರ

ದುಬೈ:ಭಾರತ ಕ್ರಿಕೆಟ್ ತಂಡವು ಬುಧವಾರ ರಾತ್ರಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ಎದುರು ಸುಲಭ ಜಯ ಸಾಧಿಸಿತು.

ದುಬೈ ಇಂಟರ್‌ನ್ಯಾಷನಲ್ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ (15ಕ್ಕೆ3) ಮತ್ತು ಸ್ಪಿನ್ನರ್ ಕೇದಾರ್ ಜಾಧವ್ (23ಕ್ಕೆ3) ಅವರ ದಾಳಿಯ ಬಲದಿಂದ ಭಾರತ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. ಪಾಕ್ ತಂಡವು ಗಳಿಸಿದ 162 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 29 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ ಗಳಿಸಿತು. ಮಂಗಳವಾರ ಹಾಂಕಾಂಗ್‌ ತಂಡದ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದ ರೋಹಿತ್ ಬಳಗವು ಇಲ್ಲಿ ನಿರಾಯಾಸ ಜಯ ದಾಖಲಿಸಿ ಸೂಪರ್‌ ಫೋರ್‌ ಹಂತ ತಲುಪಿತು.

ಆರಂಭದಲ್ಲಿಯೇ ಗರಿಗೆದರಿದ ಸಂಭ್ರಮ: ಸಂಜೆ ಪಂದ್ಯದ ಆರಂಭದಿಂದಲೇ ಭಾರತದ ಅಭಿಮಾನಿಗಳ ಸಂಭ್ರಮ ಗರಿಗೆದರಿತು. ಅದು ಇಡೀ ಪಂದ್ಯದುದ್ದಕ್ಕೂ ಹೆಚ್ಚುತ್ತಲೇ ಹೋಯಿತು. ಅದಕ್ಕೆ ಕಾರಣರಾದವರು ಭುವನೇಶ್ವರ್ ಕುಮಾರ್.

ಇನಿಂಗ್ಸ್‌ನ ಮೂರನೇ ಓವರ್‌ ಬೌಲಿಂಗ್ ಮಾಡಿದ ಅವರು ಇಮಾನ್‌ ಉಲ್ ಹಕ್ ವಿಕೆಟ್ ಕಬಳಿಸಿದರು.ಐದನೇ ಓವರ್‌ನಲ್ಲಿಯೂ ಭುವಿ ಪಾಕ್‌ ತಂಡಕ್ಕೆ ಮತ್ತೊಂದು ಪೆಟ್ಟು ನೀಡಿದರು. ಸ್ಫೋಟಕ ಬ್ಯಾಟ್ಸ್‌ಮನ್ ಫಖ್ರ್‌ ಜಮಾನ್‌ ವಿಕೆಟ್ ಕಬಳಿಸಿದರು. 43ನೇ ಓವರ್‌ನಲ್ಲಿ ಹಸನ್ ಅಲಿ ವಿಕೆಟ್ ಪಡೆದು ಕೆಳಕ್ರಮಾಂಕದ ಕುಸಿತಕ್ಕೆ ಕಾರಣರಾದರು.

ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ಎರಡು ಪಾಲುದಾರಿಕೆ ಆಟಗಳು ಮಾತ್ರ ನೆನಪಿನಲ್ಲಿ ಉಳಿದವು. ಬಾಬರ್ ಅಜಂ (47; 62ಎಸೆತ, 6ಬೌಂಡರಿ) ಮತ್ತು ಶೋಯಬ್ ಮಲಿಕ್ (43; 67ಎಸೆತ, 1ಬೌಂಡರಿ, 1ಸಿಕ್ಸರ್) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು. ಸ್ಪಿನ್ನರ್ ಕುಲದೀಪ್ ಯಾದವ್ ಈ ಜೊತೆಯಾಟವನ್ನು 22ನೇ ಓವರ್‌ನಲ್ಲಿ ಮುರಿದರು. ಬಾಬರ್ ಅಜಮ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ಸಂಭ್ರಮಿಸಿದರು. 25ನೇ ಓವರ್‌ನಲ್ಲಿ ಶೋಯಬ್ ಮಲಿಕ್ ರನ್‌ಔಟ್ ಆದರು.

ಫಹೀಮ್ ಅಸೀಫ್‌ (21 ರನ್) ಮತ್ತು ಮೊಹಮ್ಮದ್ ಅಮೀರ್ (ಔಟಾಗದೆ 18) ಎಂಟನೇ ವಿಕೆಟ್ ಜೊತೆಯಾಟದಲ್ಲಿ 37 ರನ್‌ಗಳನ್ನು ಪೇರಿಸಿದರು. ಆದರೆ ಅವರ ಜೊತೆಯಾಟವನ್ನು ಬೂಮ್ರಾ ಮುರಿದರು.

ಮಹಾರಾಷ್ಟ್ರದ ಕೇದಾರ್ ಜಾಧವ್ ತಮ್ಮ ಶಿಸ್ತಿನ ದಾಳಿಯಿಂದ ಪಾಕ್ ತಂಡದ ನಾಯಕ ಸರ್ಫರಾಜ್ ಅಹಮದ್, ಆಸಿಫ್ ಅಲಿ ಮತ್ತು ಶಾದಾಬ್ ಖಾನ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ಇದರಿಂದಾಗಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ರೋಹಿತ್ ಅರ್ಧಶತಕ: ಗುರಿ ಬೆನ್ನತ್ತಿದ ತಂಡಕ್ಕೆ ರೋಹಿತ್ ಶರ್ಮಾ (52; 39ಎಸೆತ, 6ಬೌಂಡರಿ, 3ಸಿಕ್ಸರ್) ಮತ್ತು ಶಿಖರ್ ಧವನ್ (46; 54ಎ, 6ಬೌಂ, 1ಸಿ) ಉತ್ತಮ ಆರಂಭ ನೀಡಿದರು. ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 36ನೇ ಅರ್ಧಶತಕ ದಾಖಲಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 86 ರನ್‌ ಪೇರಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಶಿಖರ್‌ ನಾಲ್ಕು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಅಂಬಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT