ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಭಯ ಮತ್ತು ನೋವಿನಿಂದ ಹೊರಬರುವುದು ದೊಡ್ಡ ಸವಾಲಾಗಿತ್ತು: ಕೆ.ಎಲ್. ರಾಹುಲ್

Published 10 ಸೆಪ್ಟೆಂಬರ್ 2023, 8:46 IST
Last Updated 10 ಸೆಪ್ಟೆಂಬರ್ 2023, 8:46 IST
ಅಕ್ಷರ ಗಾತ್ರ

ಕೊಲಂಬೊ: ತೀವ್ರ ಗಾಯದಿಂದ ಬಳಲುತ್ತಿದ್ದ ಭಾರತ ತಂಡದ ವಿಕೆಟ್‌ ಕೀಪರ್, ಬ್ಯಾಟರ್ ಕೆ.ಎಲ್. ರಾಹುಲ್, ಪುನಶ್ಚೇತನದ ಸಮಯದಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸುವುದು ದೊಡ್ಡ ಸವಾಲಾಗಿತ್ತು ಎಂದು ಹೇಳಿದ್ದಾರೆ.

ಐಪಿಎಲ್ ಸಮಯದಲ್ಲಿ ಗಾಯಗೊಂಡಿದ್ದ ಅವರು ಲಂಡನ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.

31 ವರ್ಷದ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಶ್ರೀಲಂಕಾ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಅವರು ಆಡಿರಲಿಲ್ಲ.

ಸೆಪ್ಟೆಂಬರ್ 4ರಂದು ನಡೆದ ಮೌಲ್ಯಮಾಪನದಲ್ಲಿ ಅವರು ಫಿಟ್ ಆಗಿದ್ದಾರೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾವನ್ನು ಸೇರಲು ಅನುಮತಿ ನೀಡಲಾಯಿತು. ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತಾತ್ಕಾಲಿಕ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.

‘ಪದೇ ಪದೇ ಗಾಯಗೊಂಡಾಗ ಮಾನಸಿಕವಾಗಿ ಅದನ್ನು ನಿಭಾಯಿಸುವುದು ಬಹಳ ಕಷ್ಟ. ಅಂತಹ ಸಂದರ್ಭದಲ್ಲಿ ತಮ್ಮ ಕೌಶಲ್ಯಗಳ ಬಗ್ಗೆ ಫೋಕಸ್ ಮಾಡುವುದು ಸಹ ಕಷ್ಟ. ಆ ಭಯ ಮತ್ತು ನೋವಿನಿಂದ ಹೊರಬರುವುದು ದೊಡ್ಡ ಸವಾಲಾಗಿತ್ತು’ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ರಾಹುಲ್ ಹೇಳಿದ್ದಾರೆ.

ವಿಕೆಟ್ ಕೀಪರ್ ಹೊಣೆ ನಿರ್ವಹಿಸಲು ಫಿಟ್ನೆಸ್ ಬಹಳ ಮುಖ್ಯ. ಅಂತಹ ದೊಡ್ಡ ಗಾಯದ ಬಳಿಕ ನಾನು ಹೇಗೆ ಆ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಯೋಚಿಸಿದ್ದೆ ಎಂದು ರಾಹುಲ್ ಹೇಳಿದ್ದಾರೆ.

‘ಆತ್ಮವಿಶ್ವಾಸವನ್ನು ತಂದುಕೊಳ್ಳುವುದು ಮತ್ತು ಗಾಯದ ನೋವಿನಿಂದ ಹೊರಬರುವುದಕ್ಕೆ ಅತ್ಯಂತ ಪರಿಶ್ರಮ ಬೇಕಿತ್ತು. ಏಕೆಂದರೆ, ನಾನು ತಂಡಕ್ಕೆ ಮರಳುವಾಗ ವಿಕೆಟ್ ಕೀಪರ್ ಜವಾಬ್ದಾರಿ ಹೊರಬೇಕೆಂಬುದು ನನಗೆ ತಿಳಿದಿತ್ತು. ಈ ಸಂದರ್ಭ ಫಿಸಿಯೊ ಬಹಳವಾಗಿ ನೆರವಾದರು’ ಎಂದು ರಾಹುಲ್ ಹೇಳಿದ್ದಾರೆ.

ಇಂದು ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್–4 ಪಂದ್ಯದಲ್ಲಿ ರಾಹುಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಲಭಿಸುವುದು ಬಹುತೇಕ ಖಚಿತ. ಅವರಿಗೆ ವಿಕೆಟ್‌ಕೀಪಿಂಗ್ ಹೊಣೆ ನೀಡುವ ನಿರೀಕ್ಷೆಯೂ ಇದೆ. ಆದರೆ ಇಶಾನ್ ಕಿಶನ್ ಕಳೆದ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಕುತೂಹಲ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT