ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಾಪುರ ಬುಲ್ಸ್‌ಗೆ ಕೆಪಿಎಲ್‌ ಕಿರೀಟ

ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಏಳು ವಿಕೆಟ್‌ಗಳ ಜಯ
Last Updated 6 ಸೆಪ್ಟೆಂಬರ್ 2018, 19:49 IST
ಅಕ್ಷರ ಗಾತ್ರ

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮುಂದೆ ಭರ್ಜರಿ ಆಟವಾಡಿದ ಬಿಜಾಪುರ ಬುಲ್ಸ್‌ ತಂಡದವರು ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದರು.

ಗುರುವಾರ ನಡೆದ ಫೈನಲ್‌ನಲ್ಲಿ ಭರತ್‌ ಚಿಪ್ಲಿ ನಾಯಕತ್ವದ ತಂಡ ರಾಬಿನ್‌ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಬ್ಲಾಸ್ಟರ್ಸ್‌ 20 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾದರೆ, ಬುಲ್ಸ್‌ 13.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ಮನೋಜ್‌ ಭಾಂಡಗೆ ಅವರ ಬೌಲಿಂಗ್‌ನಲ್ಲಿ ಕೆ.ಎನ್‌. ಭರತ್‌ ಭರ್ಜರಿ ಸಿಕ್ಸರ್‌ ಸಿಡಿಸಿ ಜಯ ತಂದುಕೊಡುತ್ತಿ ದ್ದಂತೆಯೇ ಬುಲ್ಸ್‌ ಆಟಗಾರರು ಅಂಗಳಕ್ಕೆ ಧಾವಿಸಿ ಗೆಲುವಿನ ಸಂಭ್ರಮ ಆಚರಿಸಿಕೊಂಡರು. ರಾಬಿನ್‌ ಉತ್ತಪ್ಪ ಬಳಗದವರು ಭಾರವಾದ ಹೆಜ್ಜೆಗಳೊಂದಿಗೆ ಅಂಗಳ ತೊರೆದರು.

ಸಣ್ಣ ಗುರಿ ಬೆನ್ನಟ್ಟಲು ಬುಲ್ಸ್‌ ಕಷ್ಟಪ ಡಲಿಲ್ಲ. ಎಂ.ಜಿ.ನವೀನ್‌ (43 ರನ್‌, 31 ಎಸೆತ, 5 ಬೌಂ, 2 ಸಿ) ಮತ್ತು ಚಿಪ್ಲಿ (19; 18 ಎಸೆತ) ಮೊದಲ ವಿಕೆಟ್‌ಗೆ 47 ರನ್‌ ಸೇರಿಸಿದರು. ಕೌನೈನ್‌ ಅಬ್ಬಾಸ್‌ ಹಾಗೂ ಭರತ್‌ (21; 7 ಎಸೆತ) ತಂಡವನ್ನು ಜಯದತ್ತ ಮುನ್ನಡೆಸಿದರು.

ಶಿಸ್ತಿನ ಬೌಲಿಂಗ್‌: ಟಾಸ್‌ ಗೆದ್ದ ಭರತ್‌ ಚಿಪ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಕೆ.ಪಿ. ಅಪ್ಪಣ್ಣ, ಕೆ.ಸಿ.ಕಾರ್ಯಪ್ಪ ಮತ್ತು ನವೀನ್‌ ಅವರು ಶಿಸ್ತಿನ ಬೌಲಿಂಗ್‌ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿ
ಸಿಕೊಂಡರು.

ಬುಲ್ಸ್‌ಗೆ ಮೊದಲ ಓವರ್‌ನಲ್ಲೇ ಯಶಸ್ಸು ಲಭಿಸಿತು. ಚಿಪ್ಲಿ ಅವರು ಚುರುಕಿನ ಫೀಲ್ಡಿಂಗ್‌ ಹಾಗೂ ನಿಖರ ಥ್ರೋ ಮೂಲಕ ಚೇತನ್‌ ವಿಲಿಯಂ (1) ಅವರನ್ನು ರನೌಟ್‌ ಮಾಡಿದರು. ರಾಬಿನ್‌ ಉತ್ತಪ್ಪ (9 ರನ್‌; 7 ಎಸೆತ) ಬೇಗನೇ ಮರಳಿದರು. ಐದು ಓವರ್‌ಗಳು ಕೊನೆಗೊಂಡಾಗ ತಂಡ ಎರಡು ವಿಕೆಟ್‌ಗೆ 24 ರನ್‌ ಗಳಿಸಿತ್ತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಜೀವದಾನ ಪಡೆದಿದ್ದ ಕೆ.ಬಿ.ಪವನ್‌ 25 ಎಸೆತಗಳಲ್ಲಿ 22 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಪವನ್‌ ದೇಶಪಾಂಡೆ ಕೂಡಾ ವಿಫಲರಾದರು. ಇದರಿಂದ ಒತ್ತಡಕ್ಕೆ ಒಳಗಾದ ತಂಡಕ್ಕೆ ಬಳಿಕ ಚೇತರಿಸಿಕೊಳ್ಳಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT