ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನಕ್ಕೆ ಮಾರುಹೋದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರಾಡ್ ಹಾಗ್

Last Updated 22 ಆಗಸ್ಟ್ 2019, 8:22 IST
ಅಕ್ಷರ ಗಾತ್ರ

ಬೆಂಗಳೂರು: ‘ಅವರು ನಿಜಕ್ಕೂ ಕಲಾರಾಧಕರು. ದುಡ್ಡಿಗಾಗಿ ಈ ಕಲೆಯನ್ನು ಪ್ರದರ್ಶಿಸುವುದಿಲ್ಲ. ಅದರ ಮೇಲಿನ ಪ್ರೀತಿ, ಭಕ್ತಿಯಿಂದ ಇದನ್ನು ನಡೆಸುತ್ತಾರೆ. ಅವರ ಸಮರ್ಪಣಾಭಾವ ನನ್ನ ಮನತಟ್ಟಿತು’–

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಬ್ರಾಡ್ ಹಾಗ್ ಅವರು ಬೆಂಗಳೂರಿನ ವಿವಿ ಪುರಂನಲ್ಲಿರುವ ಯಕ್ಷಗಾನ ತರಬೇತಿ ಕೇಂದ್ರದ ಕುರಿತು ಹೇಳಿದ ಮೆಚ್ಚುಗೆಯ ನುಡಿಗಳಿವು.ಕರಾವಳಿ ಕಲಾ ಪ್ರತಿಷ್ಠಾನದ ಸತೀಶ್ ಅಗ್ಪಲ ನೇತೃತ್ವದ ಸಂಕೃತಿ ಯಕ್ಷಾನುಭವ ತಂಡದಿಂದ ತರಬೇತಿ ನಡೆಯುತ್ತಿದೆ.ಅಮೃತದೇವ ಕಟ್ಟಿನಕೆರೆ, ಪ್ರಿಯಾಂಕ ಮೋಹನ್, ಪ್ರಸಾದ್ ಚೇರ್ಕಾಡಿ, ನಿಖಿಲ್ ಪೈ ಮಾರ್ಗದರ್ಶನ ನೀಡುತ್ತಿದ್ದಾರೆ.

ಇಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪಂದ್ಯಗಳ ವೀಕ್ಷಕ ವಿವರಣೆಗಾರನಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ವಿಶೇಷಗಳ ಕಾರ್ಯಕ್ರಮಗಳನ್ನು ದಾಖಲಿಸುವ ಅಂಗವಾಗಿ ಅವರು ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಕುರಿತು ತಮ್ಮ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ನಮ್ಮ ದೇಶದಲ್ಲಿ ಡ್ರಮ್ ಬಳಸಿ ನರ್ತಿಸುವ ಒಂದು ಕಲೆಯಂತೆ ಯಕ್ಷಗಾನ ಇದೆ. ಆದರೆ ಇದು ಬಹಳ ವಿಶಿಷ್ಟವಾಗಿದೆ. ಅದಕ್ಕೆ ನಾನು ಕೂಡ ಒಂದಷ್ಟು ಹೆಜ್ಜೆ ಹಾಕಿದೆ. ಖುಷಿಯಾಯಿತು. ಆದರೆ ಅಲ್ಲಿ ಕಾರ್ಯನಿರ್ವಹಿಸುವವರ ಬಗ್ಗೆ ಬಹಳ ಗೌರವ ಮೂಡಿತು’ ಎಂದು ಬ್ರಾಡ್ ಹೇಳಿದರು.

ಗಾಂಧಿ ಬಜಾರಿನ ವಿದ್ಯಾರ್ಥಿ ಭವನದಲ್ಲಿ ಸವಿದ ದೋಸೆ ಚಟ್ನಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಬೆಂಗಳೂರು ಬಹಳ ಸುಂದರ ಊರು. ಇಲ್ಲಿ ಏನೆಲ್ಲಾ ಇದೆ. ಕೆಪಿಎಲ್ ಇಂತಹ ಅದ್ಬುತಗಳನ್ನು ಅನುಭವಿಸುವ ಅವಕಾಶ ಕೊಟ್ಟಿದೆ’ ಎಂದರು.

ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲು ಹೋದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಬ್ರಾಡ್ ಹಾಗ್ –ಟ್ವಿಟರ್ ಚಿತ್ರ
ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲು ಹೋದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಬ್ರಾಡ್ ಹಾಗ್ –ಟ್ವಿಟರ್ ಚಿತ್ರ

‘ಕೆಪಿಎಲ್ ಟೂರ್ನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ. ಏಕೆಂದರೆ ಇದು ಯುವಪ್ರತಿಭೆಗಳಿಗೆ ದೊಡ್ಡ ಅವಕಾಶ ಕೊಡುತ್ತಿರುವ ಟೂರ್ನಿಯಾಗಿದೆ. ಐಪಿಎಲ್‌ ಫ್ರ್ಯಾಂಚೈಸ್‌ಗಳ ಗಮನ ಸೆಳೆಯಲು ಇದೊಂದು ಉತ್ತಮ ವೇದಿಕೆ’ ಎಂದು ಬ್ರಾಡ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT