ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲೆಯಲ್ಲಿ ಬ್ರಿಟಿಷ್ ರಾಜ್ಯಭಾರ: ಅಮೆರಿಕಕ್ಕೆ ಆಘಾತ

1500ಮೀ ಫ್ರೀಸ್ಟೈಲ್‌ ನಲ್ಲಿ ಲೆಡಕಿಗೆ ಚಿನ್ನದ ಸಂಭ್ರಮ; ಹೀಟ್ಸ್‌ನಲ್ಲಿ ಮೆಕಾನ್ ದಾಖಲೆ
Last Updated 28 ಜುಲೈ 2021, 14:36 IST
ಅಕ್ಷರ ಗಾತ್ರ

ಟೋಕಿಯೊ (ಎಪಿ): ಒಲಿಂಪಿಕ್ ಕೂಟದ ಈಜುಕೊಳದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ತಂಡವು ರಿಲೆಯಲ್ಲಿ ಚಿನ್ನದ ಪದಕ ಗೆದ್ದಿತು. ಅಮೆರಿಕ ತಂಡಕ್ಕೆ ಮುಖಭಂಗವಾಯಿತು.

ಮಂಗಳವಾರ ನಡೆದ ಪುರುಷರ 4X200 ಮೀಟರ್ಸ್ ಫ್ರೀಸ್ಟೈಲ್‌ ರಿಲೆಯಲ್ಲಿ ಬ್ರಿಟನ್ ಪಡೆಯು ಚಿನ್ನದ ಪದಕ ಜಯಿಸಿ ದಾಖಲೆ ಬರೆಯಿತು. ಟಾಮ್ ಡೀನ್, ಡಂಕನ್ ಸ್ಕಾಟ್ ಅವರು ಆ್ಯಂಕರ್ ಲೆಗ್‌ನಲ್ಲಿ ಮುನ್ನಡೆ ಸಾಧಿಸಿದರು. ಜೇಮ್ಸ್ ಗಯ್ ಮತ್ತು 18 ವರ್ಷದ ಮ್ಯಾಥ್ಯೂ ರಿಚರ್ಡ್ಸ್ ಮಿಡಲ್‌ ಲೆಗ್‌ನಲ್ಲಿ ಬಲ ತುಂಬಿದರು.

ಡೀನ್ ಮಂಗಳವಾರ ನಡೆದಿದ್ದ 200 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ ಜಯಿಸಿದ್ದರು. ಡಂಕನ್ ಬೆಳ್ಳಿ ಗಳಿಸಿದ್ದರು. ಆದರೆ ಅಮೆರಿಕ ತಂಡವು ನಾಲ್ಕನೇ ಸ್ಥಾನಕ್ಕೆ (7ನಿ,02.43ಸೆ) ಕುಸಿಯಿತು. ಈಜುಕೊಳದ ಸಾಮ್ರಾಟನಂತೆ ಮೆರೆದಿರುವ ಅಮೆರಿಕ, ಇತಿಹಾಸದಲ್ಲಿ ಮೊದಲ ಬಾರಿ ರಿಲೆ ಪದಕ ಗಳಿಸಲಿಲ್ಲ. ತಂಡದಲ್ಲಿ ಕೀರನ್ ಸ್ಮಿತ್, ಡ್ರಿವ್ ಕಿಬ್ಲರ್, ಜ್ಯಾಕ್ ಆ್ಯಪಲ್ ಮತ್ತು ಟೌನ್ಲಿ ಹಾಸ್ ಇದ್ದರು. ರಷ್ಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು.

‘ಹಲವಾರು ವರ್ಷಗಳ ಪ್ರಯತ್ನ ಇಂದು ಕೈಗೂಡಿದೆ. ದಿನದಿಂದ ದಿನಕ್ಕೆ ನಾವು ಬಲಶಾಲಿಗಳಾಗುತ್ತಿದ್ದೇವೆ‘ ಎಂದು ಬ್ರಿಟನ್ ತಂಡದ ಡೀನ್ ಹೇಳಿದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಮುನ್ನ ಟಾಮ್ ಡೀನ್ ಎರಡು ಬಾರಿ ಕೋವಿಡ್‌ ಸೋಂಕಿಗೊಳಗಾಗಿದ್ದರು.

ಬ್ರಿಟನ್ ತಂಡವು ಈ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಇತ್ತು. ಆದರೆ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತು. 2009ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕ ತಂಡವು (6ನಿ,58.55ಸೆ) ರಬ್ಬರ್‌ ಪೋಷಾಕು ಧರಿಸಿ ಈಜಿ, ದಾಖಲೆ ಮಾಡಿತ್ತು.

ಬ್ರಿಟನ್ ಮಹಿಳಾ ತಂಡವು 1912ರಲ್ಲಿ 4X100 ಮೀ ಫ್ರೀಸ್ಟೈಲ್ ರಿಲೆಯಲ್ಲಿ ಚಿನ್ನದ ಪದಕ ಜಯಿಸಿತ್ತು. 1908ರಲ್ಲಿ ಪುರುಷರ ತಂಡವು 4X200 ಮೀ ಫ್ರೀಸ್ಟೈಲ್ ರಿಲೆಯಲ್ಲಿ ಜಯಿಸಿತ್ತು. ಅದಾದ ನಂತರ ಈಗಲೇ ದಾಖಲೆಯ ಸಾಧನೆ ಮೂಡಿಬಂದಿದೆ.

ಮೈಕೆಲ್ ಪೆಲ್ಪ್ಸ್‌ ಕಿಡಿ

ಅಮೆರಿಕದ ದಿಗ್ಗಜ ಈಜುಪಟು ಮೈಕೆಲ್ ಪೆಲ್ಪ್ಸ್‌ ತಮ್ಮ ದೇಶದ ಈಜು ತಂಡದ ವೈಫಲ್ಯದ ಬಗ್ಗೆ ಕಿಡಿ ಕಾರಿದ್ದಾರೆ.

2016 ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಂತರ ಅವರು ನಿವೃತ್ತರಾಗಿದ್ದರು. ಈ ಬಾರಿ ಅವರು ಎನ್‌ಬಿಸಿಗೆ ವೀಕ್ಷಕ ವಿವರಣೆಗಾರನಾಗಿದ್ದಾರೆ.

‘ಇದು ಆಘಾತಕಾರಿ‘ ಎಂದು ತಂಡದ ಕೋಚ್‌ಗಳ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಚಿನ್ನಕ್ಕೆ ಮುತ್ತಿಟ್ಟ ಲೆಡಕಿ

ಛಲ ಬಿಡದ ಚಾಂಪಿಯನ್ ಕೇಟಿ ಲೆಡಕಿ ಬುಧವಾರ ತಮ್ಮ ಸಾಮರ್ಥ್ಯವನ್ನು ತೋರಿಸಿಯೇಬಿಟ್ಟರು. 1500 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಆದರೆ 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಸೋಲಿನ ಕಹಿ ಅನುಭವಿಸಿದರು.

ತುರುಸಿನ ಪೈಪೋಟಿಯಿದ್ದ ಸ್ಪರ್ಧೆಯಲ್ಲಿ ಕೇಟಿ 15ನಿಮಿಷ, 37.34ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರದೇ ದೇಶದ ಸುಲೈವಾನ್ ಎರಡನೇ ಸ್ಥಾನ ಪಡೆದರು. ಜರ್ಮನಿಯ ಸಾರಾ ಕೊಹ್ಲೆರ್ ಮೂರನೇ ಸ್ಥಾನ ಪಡೆದರು.

ಆದರೆ, 200 ಮೀ ಫ್ರೀಸ್ಟೈಲ್‌ನಲ್ಲಿ ಅವರು ನಿರಾಸೆ ಅನುಭವಿಸಿದರು. ನಾಲ್ಕನೇ ಸ್ಥಾನಕ್ಕಿಳಿದರು.

ಆಸ್ಟ್ರೇಲಿಯಾದ ಅರಿಯಾರ್ನ್ ಟಿಟ್ಮಸ್ (1ನಿ,53.50ಸೆ) ನೂತನ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಹಾಂಗ್‌ಕಾಂಗ್‌ನ ಹಾಗೈ (1ನಿ, 53.92ಸೆ) ಮತ್ತು ಕೆನಡಾದ ಒಲಿಕಸಿಯಾಕ್ (1ನಿ, 54,70ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಪಟ್ಟಿ

ಪುರುಷರ 4X200 ಫ್ರೀಸ್ಟೈಲ್ ರಿಲೆ

ತಂಡ; ಪದಕ; ಸಮಯ

ಬ್ರಿಟನ್; ಚಿನ್ನ; 6ನಿ,58.58ಸೆ

ರಷ್ಯಾ*;ಬೆಳ್ಳಿ; 7ನಿ,1.81ಸೆ

ಆಸ್ಟ್ರೇಲಿಯಾ; 7ನಿ,1.84ಸೆ

* ಐಒಸಿ ಧ್ವಜದಡಿಯಲ್ಲಿ ಸ್ಪರ್ಧೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT