ನವದೆಹಲಿ: ‘ಭಾರತ ತಂಡದ ಜಸ್‌ಪ್ರೀತ್ ಬೂಮ್ರಾ ಅವರು ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ಅತ್ಯುತ್ತಮ ವೇಗದ ಬೌಲರ್. ಅವರ ವಿರುದ್ಧ ಆಡುವುದು ಬ್ಯಾಟರ್‌ಗಳಿಗೆ ಯಾವಾಗಲೂ ಸವಾಲಿನ ಸಂಗತಿ’ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ ತಂಡವು ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್- ಗಾವಸ್ಕರ್ ಟ್ರೋಫಿಗೆ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ನ.22ರಿಂದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡೂ ಸರಣಿಯನ್ನೂ ಭಾರತ ತಂಡ ಗೆದ್ದುಗೊಂಡಿದೆ. ಸರಣಿಗೆ ಮುನ್ನ ಸ್ಮಿತ್ ಅವರು ಬೂಮ್ರಾ ಬಗ್ಗೆ ಆಡಿರುವ ಮೆಚ್ಚುಗೆಯ ಮಾತು ಮಹತ್ವ ಪಡೆದಿದೆ.
‘ಬೂಮ್ರಾ ಒಬ್ಬ ಶ್ರೇಷ್ಠ ಬೌಲರ್. ಹೊಸ ಚೆಂಡು, ಸ್ವಲ್ಪ ಹಳೆಯ ಚೆಂಡು ಅಥವಾ ಹಳೆಯ ಚೆಂಡಿನಲ್ಲಿಯೂ ಬ್ಯಾಟ್ಸ್‌ಮನ್‌ಗಳಿಗೆ ಎಲ್ಲ ರೀತಿಯಲ್ಲೂ ಕಾಡುವ ಕೌಶಲ ಅವರಲ್ಲಿದೆ’ ಎಂದಿದ್ದಾರೆ.
35 ವರ್ಷ ವಯಸ್ಸಿನ ಸ್ಮಿತ್, ಭಾರತ ವಿರುದ್ಧದ ಕಳೆದೆರಡು ಸರಣಿಗಳಲ್ಲಿ ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಆಗಿದ್ದರು. ಈ ಬಾರಿಯೂ ಅದೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ.
109 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಒಟ್ಟು 9,685 ರನ್ ಗಳಿಸಿದ್ದು, ಮುಂದಿನ ಸರಣಿಯಲ್ಲಿ 10 ಸಾವಿರ ರನ್ ಮೈಲಿಗಲ್ಲು ದಾಟುವ ಅವಕಾಶವೂ ಇದೆ.
30 ವರ್ಷ ವಯಸ್ಸಿನ ಬೂಮ್ರಾ ಅವರು 2018ರ ಜನವರಿಯಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು, ಈತನಕ ಒಟ್ಟು 37 ಪಂದ್ಯಗಳಲ್ಲಿ 20.51 ಸರಾಸರಿಯಲ್ಲಿ 164 ವಿಕೆಟ್‌ಗಳನ್ನು ಕಬಳಿಸಿದ್ದಾರೆ.