ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ವೇಗಿಗಳ ‘ಸ್ವರ್ಗ’ದಲ್ಲಿ ಭಾರತ ಜಯಭೇರಿ

ಹೊಸ ವರ್ಷಕ್ಕೆ ರೋಹಿತ್ ಪಡೆಗೆ ಸಿಹಿ l ಬೂಮ್ರಾ ದಾಳಿಗೆ ಕುಸಿದ ಆತಿಥೇಯರು l ಏಡನ್‌ ಮಾರ್ಕರಂ ಶತಕ
ರೋಷನ್ ತ್ಯಾಗರಾಜನ್
Published 4 ಜನವರಿ 2024, 23:50 IST
Last Updated 4 ಜನವರಿ 2024, 23:50 IST
ಅಕ್ಷರ ಗಾತ್ರ

ಕೇಪ್‌ಟೌನ್:  554 ನಿಮಿಷಗಳು, 642 ಎಸೆತಗಳು, 33 ವಿಕೆಟ್‌ಗಳು ಮತ್ತು 464 ರನ್‌ಗಳು.

ಗುರುವಾರ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್‌ನ ಮುಖ್ಯಾಂಶಗಳು ಇವು. ಟೆಸ್ಟ್‌ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿದ ಈ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ದಾಖಲಿಸಿತು. ಸರಣಿ ಸೋಲು ತಪ್ಪಿಸಿಕೊಂಡ ರೋಹಿತ್ ಶರ್ಮಾ ಬಳಗವು 1–1ರಿಂದ ಸಮಬಲ ಸಾಧಿಸಿತು.

ವೇಗಿ ಜಸ್‌ಪ್ರೀತ್ ಬೂಮ್ರಾ (61ಕ್ಕೆ6) ಅವರ ಅಮೋಘ ಬೌಲಿಂಗ್‌ನಿಂದಾಗಿ ಆತಿಥೇಯ ತಂಡವು  ಎರಡನೇ ಇನಿಂಗ್ಸ್‌ನಲ್ಲಿ 36.5 ಓವರ್‌ಗಳಲ್ಲಿ 176 ರನ್ ಗಳಿಸಿ ಆಲೌಟ್ ಆಯಿತು. ಆರಂಭಿಕ ಬ್ಯಾಟರ್ ಏಡನ್ ಮರ್ಕರಂ (106; 103ಎ, 4X17, 6X2)  ಗಳಿಸಿದ ಶತಕದಿಂದಾಗಿ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಸೋಲು ತಪ್ಪಿಸಿಕೊಂಡಿತು.  79 ರನ್‌ಗಳ ಗುರಿಯೊಡ್ಡುವಲ್ಲಿ ಯಶಸ್ವಿಯಾಯಿತು.

ಅನಿರೀಕ್ಷಿತ ಬೌನ್ಸರ್‌ಗಳು ಮತ್ತು ಸ್ವಿಂಗ್ ಎಸೆತಗಳ ‘ಆಪ್ತಮಿತ್ರ’ನಂತಿದ್ದ ಪಿಚ್‌ನಲ್ಲಿ ಈ ಗುರಿಯೂ ತುಸು ಸವಾಲಿನದ್ದೇ ಆಗಿತ್ತು.  ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 55 ರನ್‌ಗಳಿಗೆ ಆಲೌಟ್ ಆಗಿತ್ತು. 

ಆದರೆ ಈ ಆತಂಕವನ್ನು ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (28; 23ಎ) ಮತ್ತು ರೋಹಿತ್ (ಅಜೇಯ 17) ದೂರ ಮಾಡಿದರು.

ಆರು ಬೌಂಡರಿ ಚಚ್ಚಿದ ಯಶಸ್ವಿ ಜಯದ ಹಾದಿಯನ್ನು ಸರಳಗೊಳಿಸಿದರು. ಭಾರತ 12 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 80 ರನ್ ಗಳಿಸಿ ಜಯಿಸಿತು.  

ಭಾರತದ ವೇಗಿಗಳು ದಕ್ಷಿಣ ಆಫ್ರಿಕಾದ ಎಲ್ಲ 20 ವಿಕೆಟ್‌ಗಳನ್ನು (ಎರಡೂ ಇನಿಂಗ್ಸ್ ಸೇರಿ) ತಮ್ಮ ಬುಟ್ಟಿಗೆ ಹಾಕಿಕೊಂಡರು. ಭಾರತೀಯ ಬೌಲರ್‌ಗಳು ಒಟ್ಟಾರೆ ಮೂರನೇ ಮತ್ತು ದಕ್ಷಿಣ ಆಫ್ರಿಕಾದ ಎದುರು ಎರಡನೇ ಬಾರಿ ಈ ದಾಖಲೆ ಬರೆದರು.  2018ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಇಂತಹ ವಿಕ್ರಮ ಸಾಧಿಸಿದ್ದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ದಿನವೇ ಮುಕ್ತಾಯವಾದ 25ನೇ ಪಂದ್ಯ ಇದಾಗಿದೆ. ಅದರಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಆಡಿತ್ತು.

ಪಿಚ್‌ ಪರಿಸ್ಥಿತಿ: ಆದರೆ ಇಷ್ಟೆಲ್ಲದರ ನಡುವೆ ಕ್ರಿಕೆಟ್ ಜಯಿಸಿತೇ ಎಂಬ ಪ್ರಶ್ನೆ ಕಾಡಿತು. ಕೆಲವರು ಟಿ20 ಕ್ರಿಕೆಟ್‌ನಿಂದಾಗಿ ಹೀಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಚ್‌ ಪರಿಸ್ಥಿತಿಯಿಂದಾಗಿ ಈ ಫಲಿತಾಂಶ ಬಂದಿದೆ.

ಅಸಹಜವಾದ ಬೌನ್ಸ್, ಲೇಟ್‌ ಸ್ವಿಂಗ್ ಮತ್ತು ಕ್ರಾಸ್‌ ವಿಂಡ್ ಪರಿಣಾಮದಿಂದಾಗಿ ಚೆಂಡಿನ ಚಲನೆಯನ್ನು ಗುರುತಿಸುವಲ್ಲಿ  ಉಭಯ ತಂಡಗಳ ಬ್ಯಾಟರ್‌ಗಳು ಪ್ರತಿಕ್ಷಣವೂ ಹರಸಾಹಸಪಟ್ಟಿದ್ದು ಸುಳ್ಳಲ್ಲ.

ಐದು ದಿನಗಳ ಮಾದರಿಯ ಕ್ರಿಕೆಟ್‌ ಬಗ್ಗೆ ಕಾಳಜಿ ವ್ಯಕ್ತಪಡಿಸುವವರು ಹುಬ್ಬೇರಿಸಿದ್ಧಾರೆ. ಈ ರೀತಿ ಅತಿ ಕಡಿಮೆ ಸಮಯದಲ್ಲಿ ಫಲಿತಾಂಶ ಬಂದರೆ ಈ ದೀರ್ಘ ಮಾದರಿಯ ಕ್ರಿಕೆಟ್‌ ಭವಿಷ್ಯವೇನು ಎಂಬ ಚರ್ಚೆಯೂ ನಡೆಯುತ್ತಿದೆ.

ನ್ಯೂಲ್ಯಾಂಡ್ಸ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ’

ಕೇಪ್‌ಟೌನ್‌: ಆರು ವರ್ಷಗಳ ಹಿಂದೆ ಇಲ್ಲಿಯೇ ಟೆಸ್ಟ್‌ ಪಯಣ ಆರಂಭಿಸಿದ್ದ ಜಸ್‌ಪ್ರೀತ್‌ ಬೂಮ್ರಾ ಅವರಿಗೆ ನ್ಯೂಲ್ಯಾಂಡ್ಸ್ ಕ್ರೀಡಾಂಗಣದ ಜೊತೆ ಭಾವನಾತ್ಮಕ ಸಂಬಂಧ. ಇದಕ್ಕೆ ಪೂರಕ ಎಂಬಂತೆ ಅವರು ಎರಡನೇ ಟೆಸ್ಟ್‌ನಲ್ಲಿ ತೋರಿದ ನಿರ್ವಹಣೆಗೆ ಅವರು ಗುರುವಾರ ‘ಸರಣಿಯ ಸರ್ವೋತ್ತಮ’ ಆಟಗಾರ ಗೌರವಕ್ಕೆ ಪಾತ್ರರಾದರು.

ಬೂಮ್ರಾ 2018ರಲ್ಲಿ ಇಲ್ಲಿಯೇ ಪದಾರ್ಪಣೆ ಮಾಡಿದ್ದು, ಹರಿಣಗಳ ನಾಡಿನಲ್ಲಿ ಮೂರನೇ ಬಾರಿ ಐದು ವಿಕೆಟ್‌ ಗೊಂಚಲು ಪಡೆದರು.

‘ನನ್ನ ಹೃದಯದಲ್ಲಿ ಈ ಕ್ರೀಡಾಂಗಣಕ್ಕೆ ವಿಶೇಷ ಸ್ಥಾನವಿದೆ’ ಎಂದು ಎರಡು ಟೆಸ್ಟ್‌ಗಳ ಸರಣಿಯಲ್ಲಿ 12 ವಿಕೆಟ್ ಪಡೆದ ಬೂಮ್ರಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.‌ ‘ಆ ಪಯಣ 2018ರಲ್ಲಿ ಆರಂಭವಾಯಿತು. ಈಗ ನಮ್ಮ ಬೌಲಿಂಗ್ ಪಡೆ ಅನುಭವಿಯಾಗಿದ್ದು, ಇಲ್ಲಿ ಪರಿಣಾಮಕಾರಿಯಾಗಬೇಕೆಂಬ ಆಸೆಯಿತ್ತು. ಆದರೆ ಇಷ್ಟು ತ್ವರಿತವಾಗಿ ಪಂದ್ಯ ಮುಗಿಯುವುದೆಂದು ನಿರೀಕ್ಷಿಸಿಯೇ ಇರಲಿಲ್ಲ’ ಎಂದರು ಬೂಮ್ರಾ.

‘ನಮ್ಮ ತಂಡ ಪರಿವರ್ತನೆಯ ಹಾದಿಯಲ್ಲಿದೆ. ಆದರೆ ಸಂದೇಶ ಒಂದೇ– ಹೋರಾಟ ಮಾಡುವುದು. ಸಾಕಷ್ಟು ಬೌಲರ್‌ಗಳು ಬದಲಾಗಿದ್ದಾರೆ. ಆದರೆ ತಂಡದ ಸಂದೇಶ ಬದಲಾಗಿಲ್ಲ’ ಎಂದರು.

ಡಬ್ಲ್ಯುಟಿಸಿ: ಮತ್ತೆ ‌ಅಗ್ರಸ್ಥಾನಕ್ಕೆ ಭಾರತ

ಕೇಪ್‌ಟೌನ್:  ಈ ಪಂದ್ಯದಲ್ಲಿ ಗೆಲುವಿನ ನಂತರ ಭಾರತ ತಂಡವು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನ ದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಸೋತು ಭಾರತ ಆರನೇ ಸ್ಥಾನಕ್ಕೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT