ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jasprit Bumrah| ಜಸ್‌ಪ್ರೀತ್ ಬೂಮ್ರಾ ಐಸಿಸಿ ತಿಂಗಳ ಆಟಗಾರ

ಜೋ ರೂಟ್, ಶಹೀನ್ ಅಫ್ರಿದಿಗೆ ಸ್ಥಾನ; ಮಹಿಳೆಯರ ಪಟ್ಟಿಯಲ್ಲಿ ನಟಾಯ, ಗ್ಯಾಬಿ, ಎಮಿಯರ್‌
Last Updated 6 ಸೆಪ್ಟೆಂಬರ್ 2021, 10:42 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಆಗಸ್ಟ್ ತಿಂಗಳ ಆಟಗಾರರ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಕ್ಕೆ ಅವರಿಗೆ ಈ ಸ್ಥಾನ ಒಲಿದಿದೆ.

ಪುರುಷರ ವಿಭಾಗದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮತ್ತು ಪಾಕಿಸ್ತಾನದ ವೇಗಿ ಶಹೀನ್ ಅಫ್ರಿದಿ ಅವರೂ ಇದ್ದಾರೆ. ಮಹಿಳೆಯರ ವಿಭಾಗದಲ್ಲಿ ಥಾಯ್ಲೆಂಡ್‌ನ ನಟಾಯ ಬೂಚಥಾಮ್ ಮತ್ತು ಐರ್ಲೆಂಡ್‌ನ ಗ್ಯಾಬಿ ಲ್ಯೂಯಿಸ್ ಹಾಗೂ ಎಮಿಯರ್ ರಿಚರ್ಡ್ಸನ್ ಪಟ್ಟಿಯಲ್ಲಿದ್ದಾರೆ.

ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಬೂಮ್ರಾ ಒಂಬತ್ತು ವಿಕೆಟ್ ಉರುಳಿಸಿದ್ದರು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದು ಒಂಬತ್ತನೇ ವಿಕೆಟ್‌ಗೆ ಮೊಹಮ್ಮದ್ ಶಮಿ ಜೊತೆ 89 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಜೋ ರೂಟ್‌ ಆಗಸ್ಟ್‌ನಲ್ಲಿ ನಡೆದ ಭಾರತ ಎದುರಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಶಹೀನ್ ಅಫ್ರಿದಿ ಅವರು ವೆಸ್ಟ್ ಇಂಡೀಸ್ ಎದುರಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 18 ವಿಕೆಟ್ ಕಬಳಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಉರುಳಿಸಿದ್ದರು.

ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳಿಸಿದ ಅವರು ಈ ಸಾಧನೆ ಮಾಡಿದ ಪಾಕಿಸ್ತಾನದ ನಾಲ್ಕನೇ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ವಸೀಂ ಅಕ್ರಂ, ವಖಾರ್ ಯೂನಿಸ್‌ ಮತ್ತು ಮೊಹಮ್ಮದ್ ಜಹೀದ್ ಈ ಸಾಧನೆ ಮಾಡಿದ್ದರು.

ಬೂಚಥಾಮ್ ಅವರು ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಮೂರು ಪಂದ್ಯಗಳ ಸರಣಿಯಲ್ಲಿ ತಂಡ 2–1ರ ಜಯ ಗಳಿಸಿತ್ತು. ಮಹಿಳೆಯರ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಗಳಿಸಲು ಲ್ಯೂವಿಸ್ ಮತ್ತು ರಿಚರ್ಡ್ಸನ್‌ ಕಾರಣರಾಗಿದ್ದರು. ಜರ್ಮನಿ ಎದುರು ತಂಡ 164 ರನ್‌ಗಳ ಗೆಲುವು ಸಾಧಿಸಿದ ಪಂದ್ಯದಲ್ಲಿ ಲ್ಯೂಯಿಸ್ ಶತಕ ಗಳಿಸಿದ್ದರು. ಈ ಮೂಲಕ ಶತಕ ಗಳಿಸಿದ ದೇಶದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. 60 ಎಸೆತಗಳಲ್ಲಿ 105 ರನ್‌ ಗಳಿಸಿದ ಅವರು ಆರು ಸಿಕ್ಸರ್ ಮತ್ತು 11 ಬೌಂಡರಿ ಸಿಡಿಸಿದ್ದರು. ರಿಚರ್ಡ್ಸನ್‌ ಒಟ್ಟು ಏಳು ವಿಕೆಟ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT