ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ: ಫೈನಲ್‌ಗೆ ಕರ್ನಾಟಕ ತಂಡ

Published 5 ಮಾರ್ಚ್ 2024, 16:00 IST
Last Updated 5 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಪಾರಸ್ ಗುರುಭಕ್ಷ್ ಆರ್ಯ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ಕರ್ನಾಟಕ ತಂಡವು ನಾಗ್ಪುರ ಸಮೀಪದ ಕಲಮ್ನದಲ್ಲಿ ನಡೆದ ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿದರ್ಭ ತಂಡವನ್ನು 278 ರನ್‌ಗಳಿಂದ ಮಣಿಸಿತು.

ಕಳೆದ ವಾರ ರಣಜಿ ಟ್ರೋಫಿಯ ಸೆಮಿಫೈನಲ್‌ನಲ್ಲಿ ಕರ್ನಾಟಕದ ಹಿರಿಯರ ತಂಡವು ವಿದರ್ಭದ ವಿರುದ್ಧ ಪರಾಭವಗೊಂಡಿತ್ತು. ಆದರೆ, ಕಿರಿಯರ (23 ವರ್ಷದೊಳಗಿನ) ತಂಡವು ವಿದರ್ಭದ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಮುನ್ನಡೆಯಿತು.

ಕಲಮ್ನದ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 393 ರನ್‌ಗಳ ಬೃಹತ್‌ ಮುನ್ನಡೆ ಪಡೆದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ 141 ರನ್‌ಗೆ ಕುಸಿಯಿತು. ವಿದರ್ಭ ತಂಡದ ಪ್ರವೀಣ್ ರೋಕ್ಡಿಯಾ ಮತ್ತು ಮಂದಾರ ಮಹಾಲೆ ಕ್ರಮವಾಗಿ ಐದು ಮತ್ತು ಎರಡು ವಿಕೆಟ್‌ ಪಡೆದರು.

ಗೆಲುವಿಗೆ 534 ರನ್‌ಗಳ ಗುರಿ ಪಡೆದ ವಿದರ್ಭ ತಂಡವು ಎರಡನೇ ಇನಿಂಗ್ಸ್‌ನಲ್ಲಿ 49 ಓವರ್‌ಗಳಲ್ಲಿ 256 ರನ್‌ಗೆ ಆಲೌಟ್‌ ಆಯಿತು. ಆರಂಭ  ಆಟಗಾರ ಅಭಿಷೇಕ್‌ ಎಸ್‌. ಅಗರ್‌ವಾಲ್‌ (78, 100ಎ) ಕೊಂಚ ಹೋರಾಟ ನಡೆಸಿದರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಪಡೆದಿದ್ದ ಕರ್ನಾಟಕ ಪಾರಸ್‌, ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಪಡೆದು ಮಿಂಚಿದರು.

ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ಮತ್ತು ಮುಂಬೈ ತಂಡಗಳು ಸೆಣಸುತ್ತಿದ್ದು, ವಿಜೇತ ತಂಡವು ಮಾರ್ಚ್‌ 10ರಿಂದ 13ರವರೆಗೆ ನಡೆಯುವ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಕರ್ನಾಟಕ 122.3 ಓವರ್‌ಗಳಲ್ಲಿ 466. ವಿದರ್ಭ 37.2 ಓವರ್‌ಗಳಲ್ಲಿ 73. ಎರಡನೇ ಇನಿಂಗ್ಸ್‌: ಕರ್ನಾಟಕ 44.1 ಓವರ್‌ಗಳಲ್ಲಿ 141 (ಪ್ರಖರ್‌ ಚತುರ್ವೇದಿ 26; ಪ್ರವೀಣ್ ರೋಕ್ಡಿಯಾ 32ಕ್ಕೆ 5, ಮಂದಾರ ಮಹಾಲೆ 18ಕ್ಕೆ 2). ವಿದರ್ಭ 49 ಓವರ್‌ಗಳಲ್ಲಿ 256 (ಅಭಿಷೇಕ್‌ ಎಸ್‌. ಅಗರ್‌ವಾಲ್‌ 78, ಸತ್ಯಂ ಭೋಯರ್ 34; ಪಾರಸ್ ಗುರ್ಬಕ್ಸ್ ಆರ್ಯ 108ಕ್ಕೆ 6, ಮೊಹ್ಸಿನ್ ಖಾನ್ 75ಕ್ಕೆ 2, ಧೀರಜ್‌ ಜೆ.ಗೌಡ 54ಕ್ಕೆ 2). ಫಲಿತಾಂಶ: ಕರ್ನಾಟಕಕ್ಕೆ 278 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT