ಗುರುವಾರ , ಮೇ 26, 2022
23 °C

ಗೌಪ್ಯ ವರದಿ ಸೋರಿಕೆ ತನಿಖೆಗೆ ಪೊಲೀಸರ ಮೊರೆಹೋದ ಸಿಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಆಸ್ಟ್ರೇಲಿಯಾದ ‘ಖ್ಯಾತನಾಮ’ ಕ್ರಿಕೆಟಿಗನೊಬ್ಬ ಮಾದಕ ವಸ್ತು ಸೇವಿಸಿದ ಕುರಿತ ಗೌಪ್ಯ ವರದಿಯೊಂದು ಮಾಧ್ಯಮಗಳಿಗೆ ಸೋರಿಕೆಯಾಗಿರುವುದರ ತನಿಖೆಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪೊಲೀಸರ ಮೊರೆ ಹೋಗಿದೆ. 

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಈ ವಿಷಯದ ಕುರಿತು ಭಾನುವಾರ ತಿಳಿಸಿದರು. ಈ ಪ್ರಕರಣದ ಬಗ್ಗೆ ‘ದ ಏಜ್’ ಸುದ್ದಿಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಹೆಜ್ಜೆ ಇಟ್ಟಿದೆ. 

‘ಬೆಳಿಗ್ಗೆ ಈ ಲೇಖನವನ್ನು ನೋಡಿದೆ. ಇದರಲ್ಲಿರುವ ಮಾಹಿತಿಗಳು ಆಧಾರರಹಿತವಾಗಿದೆ. ಯಾವುದೇ ಮಾಹಿತಿಯನ್ನು ಕದಿಯುವುದು ಅಪರಾಧ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ನಿಕ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗನೊಬ್ಬ ಕೊಕೆನ್ ಸೇವನೆ ಮಾಡಿ ಬಾಲ್ಕನಿಯಲ್ಲಿ ಮಹಿಳೆಯರೊಂದಿಗೆ ನಗ್ನವಾಗಿ ನರ್ತಿಸುತ್ತಿದ್ದನೆಂದು ಮಹಿಳೆಯೊಬ್ಬರು ನೀಡಿರುವ ಮಾಹಿತಿಯನ್ನು ಆಧರಿಸಿ ಪತ್ರಿಕೆಯು ವರದಿ ಮಾಡಿದೆ. ಮಾಹಿತಿ ನೀಡಿದ ಮಹಿಳೆಯು ತನ್ನನ್ನು ‘ಹೈ ಕ್ಲಾಸ್ ಎಸ್ಕಾರ್ಟ್‌‘ ಎಂದು ಹೇಳಿರುವ ಧ್ವನಿ ಮುದ್ರಣ ಇದೆ ಎಂದೂ ವರದಿಯಾಗಿದೆ.

ಈ ಪ್ರಕರಣದ ಬಗ್ಗೆ ಸಿಎದ ಮಾಜಿ ಸಮನ್ವಯ ಮುಖ್ಯಸ್ಥರಾದ ಸೀನ್ ಕ್ಯಾರೊಲ್ ಅವರ ಹೆಸರು ಕೂಡ ಕೇಳಿಬಂದಿದೆ. 

ಕ್ಯಾರೊಲ್ ಅವರು  ಒಂದು ವರ್ಷದ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ತೊರೆದಿದ್ದಾರೆ. 

ಹೋದ ತಿಂಗಳು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಅವರು  ಕ್ರಿಕೆಟ್ ಟಾಸ್ಮೆನಿಯಾದ ತಮ್ಮ ಸಹೋದ್ಯೋಗಿಯೊಬ್ಬರಿಗೆ ಅವಾಚ್ಯ ಪದಗಳಿದ್ದ ಸಂದೇಶ ಕಳಿಸಿದ್ದ ಕಾರಣಕ್ಕೆ ಅಮಾನತುಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು