ಶುಕ್ರವಾರ, ಅಕ್ಟೋಬರ್ 7, 2022
24 °C
ಐಸಿಸಿಯಲ್ಲಿ 70 ವರ್ಷ ಮೀರಿದವರೇ ದೇಶದ ಪ್ರತಿನಿಧಿಗಳಾಗಬೇಕೆ? ಕೂಲಿಂಗ್‌ ಆಫ್‌ ಯಾಕೆ ಬೇಡ?

ನಿಯಮ ಪರಿಷ್ಕರಣೆ ಕುರಿತ ಬಿಸಿಸಿಐ ಮೇಲ್ಮನವಿ; ಇಂದು ಸುಪ್ರೀಂ ತೀರ್ಪು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ನಿಯಮಾವಳಿ ಪರಿಷ್ಕರಣೆಗೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ಮಂಗಳವಾರ ನ್ಯಾಯಪೀಠವು ವಿಚಾರಣೆ ನಡೆಸಿತು. ಬುಧವಾರ ಈ ಬಗ್ಗೆ ತೀರ್ಪು ನೀಡಲಾಗುವುದು ಎಂದೂ ನ್ಯಾಯಪೀಠ ತಿಳಿಸಿತು. 

‘ಪದಾಧಿಕಾರಿಗಳಿಗೆ ಕೂಲಿಂಗ್ ಆಫ್‌ ಅವಧಿ ನಿಯಮವನ್ನು ರದ್ದುಪಡಿಸಬೇಕೆಂದು ಕೇಳುತ್ತಿರುವುದೇಕೆ?  ಅದರಿಂದ ಪಟ್ಟಭದ್ರ ಹಿತಾಸಕ್ತಿಯನ್ನು ತಡೆಯಲು ಈ ನಿಯಮ ಸಹಾಯಕವಲ್ಲವೇ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯಲ್ಲಿ ಭಾರತವನ್ನು ಪ್ರತಿನಿಧಿಸಲು 70 ವರ್ಷ ಮೇಲ್ಪಟ್ಟವರೇ ಆಗಬೇಕೆಂದು ನೀವು ಬಯಸುವುದೇಕೆ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರ ನ್ಯಾಯಪೀಠವು ಅರ್ಜಿದಾರರನ್ನು ಕುಟುಕಿತು. 

‘ಬಿಸಿಸಿಐ ಸ್ವಾಯತ್ತ ಸಂಸ್ಥೆಯಾಗಿದೆ. ಮಂಡಳಿಯ  ಆಡಳಿತ ನಿರ್ವಹಣೆಯನ್ನು ಇಷ್ಟು ಸೂಕ್ಷ್ಮವಾಗಿ ವಹಿಸಬೇಕಾದ ಅಗತ್ಯವೇನು’ ಎಂದೂ ಪ್ರಶ್ನಿಸಿದೆ.

ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಆಧರಿಸಿ ಬಿಸಿಸಿಐಗೆ ನಿಯಮಾವಳಿಯನ್ನು ರೂಪಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಜಾರಿಗೊಳಿಸಲಾಗಿತ್ತು. 

ಈ ನಿಯಮಾವಳಿಯ ಪ್ರಕಾರ ಬಿಸಿಸಿಐ ಅಥವಾ ರಾಜ್ಯ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾದವರು ಎರಡು ಸತತ ಅವಧಿಗಳ  (ಪ್ತತಿ ಅವಧಿಯು ಮೂರು ವರ್ಷಗಳದ್ದು)ನಡುವೆ ಒಂದು ಅವಧಿಗೆ ಕೂಲಿಂಗ್ ಆಫ್‌ ನಿಯಮ (ವಿಶ್ರಾಂತಿ) ಪಾಲಿಸಬೇಕು.  

‘ಸದ್ಯ ಜಾರಿಯಲ್ಲಿರುವ ನಿಯಮಾವಳಿಯಲ್ಲಿರುವ ಕೂಲಿಂಗ್ ಆಫ್‌ ನಿಯಮವು ರಾಜ್ಯ ಸಂಸ್ಥೆಗಳಲ್ಲಿ ಒಂದು ವರ್ಷ ಹಾಗೂ ಬಿಸಿಸಿಐನಲ್ಲಿ ಒಂದು ವರ್ಷ ಪದಾಧಿಕಾರಿಯಾದ ನಂತರ ಅನ್ವಯವಾಗುತ್ತದೆ. ಇದರಿಂದಾಗಿ ಸತತ ಎರಡನೇ ಅವಧಿಗೆ ಮುಂದುವರಿಯಲು ಅವಕಾಶ ಇಲ್ಲವಾಗಿದೆ. ಆದರೆ ರಾಜ್ಯ ಹಾಗೂ ಬಿಸಿಸಿಐ ಸಂಸ್ಥೆಗಳು ಬೇರೆ ಬೇರೆ ಕಾರ್ಯಸ್ವರೂಪ ಹೊಂದಿವೆ. ಒಂದು ಅವಧಿಯಲ್ಲಿ ಉತ್ತಮ ನಾಯಕತ್ವವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕ್ರಿಕೆಟ್‌ ವ್ಯವಸ್ಥೆಗೆ ಹಾನಿಯಾಗುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಪರವಾಗಿ  ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ವಿವರಿಸಿದರು. 

‘ಸಮರ್ಥ ನಾಯಕತ್ವವನ್ನು ಬೇರುಮಟ್ಟದಿಂದ ಬೆಳೆಸಬೇಕು. ರಾಜ್ಯ ಸಂಸ್ಥೆಗಳು ಅಂತಹ ಅವಕಾಶವನ್ನು ನೀಡುತ್ತವೆ. ರಾಜ್ಯ ಸಂಸ್ಥೆಗಳಲ್ಲಿ ಅನುಭವ ಗಳಿಸಿ ಬಿಸಿಸಿಐ ಪದಾಧಿಕಾರಿಯಾಗುವ ಮಟ್ಟಕ್ಕೆ ಬೆಳೆಯಲು ಸಮಯ ಬೇಕು. ಆದರೆ, ಕೂಲಿಂಗ್ ಆಫ್‌ ನಿಯಮವನ್ನು ಮೂರು ವರ್ಷಗಳ ಒಂದೇ ಅವಧಿಯ ನಂತರ ಅನ್ವಯಿಸಿದರೆ ನಾಯಕತ್ವ ಬೆಳವಣಿಗೆಯು ಕುಂಠಿತವಾಗುತ್ತದೆ. ರಾಜ್ಯ ಸಂಸ್ಥೆಯಲ್ಲಿ ಸಕ್ರಿಯವಾಗಿರದವರು ಮಂಡಳಿಯ ಸದಸ್ಯತ್ವಕ್ಕೆ ಅರ್ಹರಾಗಿರುವುದಿಲ್ಲ’ ಎಂದು ಮೆಹ್ತಾ ವಿವರಿಸಿದರು. 

‘ನಾವು ಈಗ ಚರ್ಚೆ ನಡೆಸುತ್ತಿದ್ದೇವೆ. ಇಲ್ಲಿ ನಾವು ಯಾವುದೇ ತೀರ್ಪನ್ನು ಕೊಡುತ್ತಿಲ್ಲ. ಆದರೆ ಇಲ್ಲಿ ನಡೆಯುವ ಎಲ್ಲ ಸಂವಾದ, ಚರ್ಚೆಗಳನ್ನೂ ಸಾಮಾಜಿಕ ಜಾಲತಾಣಗಳು ತೀರ್ಪು ಎಂದೇ ಗ್ರಹಿಸುತ್ತವೆ. ಸತ್ಯಾಂಶಗಳನ್ನು ಆಳವಾಗಿ ಮನದಟ್ಟು ಮಾಡಿಕೊಳ್ಳುವ ಇಂತಹ ಗಹನವಾದ ಚರ್ಚೆಗಳಿಂದ ಸಾಧ್ಯ’ ಎಂದುನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟರು. 

ಇದೇ ಸಂದರ್ಭದಲ್ಲಿ ಅವರು, ’ಐಸಿಸಿಯಲ್ಲಿ 70 ವರ್ಷ ಮೇಲಿನವರನ್ನೇ ಬಿಸಿಸಿಐ ಪ್ರತಿನಿಧಿಗಳನ್ನಾಗಿ ಕಳಿಸಬೇಕೆಂದು ಯಾಕೆ ಹೇಳುತ್ತಿರಿ. 70 ಮೀರಿದವರು ಚೆನ್ನಾಗಿ ಕೆಲಸ ಮಾಡುವುದಿಲ್ಲವೆಂದು ನಾವು ಹೇಳುತ್ತಿಲ್ಲ. ನಮ್ಮ ಅಟಾರ್ನಿ ಜನರಲ್ ಕೂಡ 70 ವರ್ಷ ಮೀರಿದವರು. ಈ ವಯಸ್ಸಿನ ಹಲವು ವೈದ್ಯರು ಅದ್ಭುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕ್ರೀಡೆಯಲ್ಲಿ ಈ ರೀತಿ ಬೇಕೆ’ ಎಂದೂ ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ‘ಐಸಿಸಿಯು ಪ್ರತಿಯೊಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಅನುದಾನವನ್ನು ಹಂಚುತ್ತದೆ. ಬಿಸಿಸಿಐಗೆ ಎಷ್ಟು ಅನುದಾನ ಪಡೆಯಬೇಕು ಎಂಬ ಲೆಕ್ಕಾಚಾರಗಳನ್ನು ಮಾಡಲು 30–40 ವರ್ಷಗಳವರೆಗೆ ಕ್ರಿಕೆಟ್ ಆಡಳಿತದಲ್ಲಿ ಅನುಭವಿಗಳಾದವರಿಗೆ ಸಾಧ್ಯ. ಬೇರೆ ದೇಶಗಳ ಅನುಭವಿ ಹಾಗೂ ಹಿರಿಯ ವಯಸ್ಸಿನ ಪ್ರತಿನಿಧಿಗಳೊಂದಿಗೆ ಪೈಪೋಟಿ ಮಾಡಲು ಅನುಭವದ ಅಗತ್ಯವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು