ಮಂಗಳವಾರ, ಡಿಸೆಂಬರ್ 1, 2020
26 °C
ಮೊದಲ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ಆಡಿದ ಪ್ರಿಯಾ ಪೂನಿಯಾ; ಕೌರ್ ಮಿಂಚಿನ ಬ್ಯಾಟಿಂಗ್

ಸ್ಮೃತಿ–ಹರ್ಮನ್‌ಪ್ರೀತ್ ಫೈನಲ್ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಸ್ಮೃತಿ ಮಂದಾನ ನೇತೃತ್ವದ ಟ್ರೇಲ್‌ಬ್ಲೇಜರ್ಸ್‌ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್‌ನೋವಾಸ್‌ ತಂಡಗಳು ಐಪಿಎಲ್‌ ಅಂಗವಾಗಿ ನಡೆಯುತ್ತಿರುವ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಯ ಫೈನಲ್‌ನಲ್ಲಿ ಸೋಮವಾರ ಮುಖಾಮುಖಿಯಾಗಲಿವೆ. ಶನಿವಾರ ರಾತ್ರಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಕಳೆದ ಎರಡು ಬಾರಿಯ ಚಾಂಪಿಯನ್ ಸೂಪರ್‌ನೋವಾಸ್‌ ಎರಡು ರನ್‌ಗಳಿಂದ ಟ್ರೇಲ್‌ಬ್ಲೇಜರ್ಸ್ ವಿರುದ್ಧ ಜಯ ಗಳಿಸಿತು. ಇದರೊಂದಿಗೆ ಮಿಥಾಲಿ ರಾಜ್ ನಾಯಕತ್ವದ ವೆಲೋಸಿಟಿ ಟೂರ್ನಿಯಿಂದ ಹೊರಬಿದ್ದಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸೂಪರ್‌ನೋವಾ ತಂಡ 146 ರನ್ ಕಲೆ ಹಾಕಿತು.  ಗುರಿ ಬೆನ್ನತ್ತಿದ ಟ್ರೇಲ್‌ಬ್ಲೇಜರ್ಸ್‌ ಕೊನೆಯ ಎಸೆತದ ವರೆಗೂ ಹೋರಾಟ ನಡೆಸಿತು. ಡಿಯಾಂಡ್ರ ದೊತಿನ್ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್‌ಗೆ 44 ರನ್ ಸೇರಿಸಿದರು. ದೀಪ್ತಿ ಶರ್ಮಾ–ಹರ್ಲೀನ್ ಡಿಯೋಲ್ ಜೋಡಿ ಕೊನೆಯ ಓವರ್‌ಗಳಲ್ಲಿ ಉತ್ತಮ ಆಟವಾಡಿ ಜಯದ ಭರವಸೆ ಮೂಡಿಸಿದರು. ಆದರೆ ಸ್ಪಿನ್ನರ್ ರಾಧಾ ಯಾದವ್ ಮತ್ತು ಶಕೀರಾ ಸೆಲ್ಮಾನ್ ಪರಿಣಾಮಕಾರಿ ದಾಳಿ ಸಂಘಟಿಸಿ ಸೂಪರ್‌ನೋವಾಸ್‌ಗೆ ಜಯ ತಂದುಕೊಟ್ಟರು.

ಮೊದಲ ಪಂದ್ಯದಲ್ಲಿ ಸೋತಿದ್ದ ಸೂಪರ್‌ನೋವಾಸ್‌ಗೆ ಫೈನಲ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಂಡದ ಯೋಜನೆಗೆ ತಕ್ಕಂತೆ ಅರಂಭಿಕ ಜೋಡಿ ಆಡಿತು. ಚಾಮರಿ ಅಟ್ಟಪಟ್ಟು (67; 48 ಎಸೆತ, 5 ಬೌಂಡರಿ, 4 ಸಿಕ್ಸರ್‌), ಪ್ರಿಯಾ ಪೂನಿಯಾ (30; 37 ಎ, 3 ಬೌಂ) ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಕಲೆ ಹಾಕಿತು. ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಮತ್ತು ಸ್ಪಿನ್ನರ್‌ ದೀಪ್ತಿ ಶರ್ಮಾ ಅವರನ್ನು ‌‌ಚಾಮರಿ–ಪ್ರಿಯಾ ಜೋಡಿ ಆರಂಭದಲ್ಲೇ ದಂಡಿಸಿತು. 12 ಓವರ್‌ಗಳವರೆಗೆ ಕ್ರೀಸ್‌ನಲ್ಲಿದ್ದ ಪ್ರಿಯಾ ಮೊದಲ ವಿಕೆಟ್‌ಗೆ 89 ರನ್ ಸೇರಿಸಿದರು. 17ನೇ ಓವರ್‌ನಲ್ಲಿ ಹರ್ಲೀನ್ ಡಿಯೋಲ್ ಎಸೆತದಲ್ಲಿ ಚಾಮರಿ ಔಟಾದರು. ಹರ್ಮನ್‌ಪ್ರೀತ್ ಕೌರ್ 29 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು: ಸೂಪರ್‌ನೋವಾಸ್‌: 20 ಓವರ್‌ಗಳಲ್ಲಿ 6ಕ್ಕೆ 146 (ಪ್ರಿಯಾ ಪೂನಿಯಾ 30, ಚಾಮರಿ ಅಟ್ಟಪಟ್ಟು 67, ಹರ್ಮನ್‌ಪ್ರೀತ್ ಕೌರ್ 31; ಜೂಲನ್ ಗೋಸ್ವಾಮಿ 17ಕ್ಕೆ1, ಸಲ್ಮಾ ಖಾತೂನ್ 25ಕ್ಕೆ1, ಹರ್ಲೀನ್ ಡಿಯೋಲ್ 34ಕ್ಕೆ1); ಟ್ರೇಲ್‌ಬ್ಲೇಜರ್ಸ್‌: 20 ಓವರ್‌ಗಳಲ್ಲಿ 5ಕ್ಕೆ 144 (ಡಿಯಾಂಡ್ರ ದೊತಿನ್ 27, ಸ್ಮೃತಿ ಮಂದಾನ 33, ದೀಪ್ತಿ ಶರ್ಮಾ ಔಟಾಗದೆ 43, ಹರ್ಲೀನ್ ಡಿಯೋಲ್ 27; ಅನುಜಾ ಪಾಟೀಲ್ 18ಕ್ಕೆ1, ರಾಧಾ ಯಾದವ್ 30ಕ್ಕೆ2, ಶಕೀರಾ ಸೆಲ್ಮಾನ್ 31ಕ್ಕೆ2). ಫಲಿತಾಂಶ: ಸೂಪರ್‌ನೋವಾಗೆ 2 ರನ್‌ಗಳ ಜಯ; ಪಂದ್ಯದ ಶ್ರೇಷ್ಠ ಆಟಗಾರ್ತಿ: ಚಾಮರಿ ಅಟ್ಟಪಟ್ಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು