ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ಜಿಂಬಾಬ್ವೆಗೆ ಬಾಂಗ್ಲಾದೇಶ ತಿರುಗೇಟು

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಢಾಕಾ : ನಜ್ಮುಲ್ ಹೊಸೇನ್ ಮತ್ತು ನಾಯಕ ಮೊಮಿನುಲ್ ಹಕ್ ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ಶೇರ್ –ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಗೆ ತಿರುಗೇಟು ನೀಡಿದೆ.

ಎರಡನೇ ದಿನವಾದ ಭಾನುವಾರ ದಿನದಾಟದ ಮುಕ್ತಾಯಕ್ಕೆ ಬಾಂಗ್ಲಾದೇಶ ಮೂರು ವಿಕೆಟ್‌ಗೆ 240 ರನ್ ಗಳಿಸಿದ್ದು ಎದುರಾಳಿಗಳ ಮೊತ್ತ ಹಿಂದಿಕ್ಕಲು ಕೇವಲ 25 ರನ್‌ಗಳ ಅಗತ್ಯವಿದೆ. ಮೊದಲ ದಿನ 6 ವಿಕೆಟ್‌ಗಳಿಗೆ 228 ರನ್ ಗಳಿಸಿದ್ದ ಜಿಂಬಾಬ್ವೆ ಭಾನುವಾರ ಬೆಳಿಗ್ಗೆ 37 ರನ್‌ ಸೇರಿಸಿ ಆಲೌಟಾಯಿತು.

ಬಾಂಗ್ಲಾದೇಶದ ಆರಂಭ ಉತ್ತಮವಾಗಿರಲಿಲ್ಲ. ವಿಕ್ಟರ್ ನ್ಯಾವುಚಿ ಆರಂಭಿಕ ಬ್ಯಾಟ್ಸ್‌ಮನ್‌ ಸೈಫ್ ಹಸನ್ ಅವರ ವಿಕೆಟ್ ಉರುಳಿಸಿ ನಾಲ್ಕನೇ ಓವರ್‌ನಲ್ಲೇ ಪೆಟ್ಟು ನೀಡಿದರು. ಆದರೆ ತಮೀಮ್ ಇಕ್ಬಾಲ್ (41; 89 ಎಸೆತ, 7 ಬೌಂಡರಿ) ಜೊತೆಗೂಡಿದ ನಜ್ಮುಲ್ ಹೊಸೇನ್ (71; 139 ಎ, 7 ಬೌಂ) ಎರಡನೇ ವಿಕೆಟ್‌ಗೆ 78 ರನ್ ಸೇರಿಸಿ ತಂಡಕ್ಕೆ ಚೇತರಿಕೆ ತುಂಬಿದರು. ನಂತರ ನಜ್ಮುಲ್ ಮತ್ತು ಮೊಮಿನುಲ್ ಹಕ್ (ಬ್ಯಾಟಿಂಗ್ 79; 120 ಎ, 9 ಬೌಂ) 76 ರನ್ ಸೇರಿಸಿದರು. ಮೊಮಿನುಲ್ ಮತ್ತು ಮುಷ್ಫಿಕುರ್ ರಹೀಂ ಕ್ರೀಸ್‌ನಲ್ಲಿದ್ದಾರೆ.

ಚಕಾಬ್ವ ಏಕಾಂಗಿ ಹೋರಾಟ: ಭಾನುವಾರ ಜಿಂಬಾಬ್ವೆಯ ಇನಿಂಗ್ಸ್ ಮುಂದುವರಿಸಿದ ತಿರಿಪಾನೊ ಮತ್ತು ಆನ್ಸ್ಲಿ ನೊವು ಅವರನ್ನು ಜಾಯೇದ್ ಔಟ್ ಮಾಡಿದರು. ಶೂಮ ಶೂನ್ಯಕ್ಕೆ ಔಟಾದರು. ಈ ನಡುವೆ ರೇಗಿಸ್ ಚಕಾಬ್ವ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಜಿಂಬಾಬ್ವೆ: (ಶನಿವಾರ 90 ಓವರ್‌ಗಳಲ್ಲಿ 6ಕ್ಕೆ 228): 106.3 ಓವರ್‌ಗಳಲ್ಲಿ 265 (ರೇಗಿಸ್ ಚಕಾಬ್ವ 30; ಅಬು ಜಾಯೇದ್ 71ಕ್ಕೆ4, ನಯೀಮ್ ಹಸನ್ 70ಕ್ಕೆ4, ತೈಜುಲ್ ಇಸ್ಲಾಂ 90ಕ್ಕೆ2); ಬಾಂಗ್ಲಾದೇಶ: 71 ಓವರ್‌ಗಳಲ್ಲಿ 3ಕ್ಕೆ 240 (ತಮೀಮ್ ಇಕ್ಬಾಲ್ 41, ನಜ್ಮುಲ್ ಹೊಸೇನ್ 71, ಮೊಮಿನುಲ್ ಹಕ್ ಬ್ಯಾಟಿಂಗ್ 79, ಮುಷ್ಫಿಕುರ್ ರಹೀಂ ಬ್ಯಾಟಿಂಗ್ 32; ಡೊನಾಲ್ಡ್ ತಿರಿಪಾನೊ 40ಕ್ಕೆ1, ನ್ಯಾವುಚಿ 41ಕ್ಕೆ1, ಚಾರ್ಲ್‌ಟನ್ ಶೂಮ 46ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT