ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮದಿನಕ್ಕೆ ಶತಕದ ಸಂಭ್ರಮ

ಮೊದಲ ಇನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಇಟ್ಟಿರುವ ಇಂಡಿಯಾ ರೆಡ್: ಮಿಂಚಿದ ಅಭಿಮನ್ಯು
Last Updated 5 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ತಮ್ಮ ಜನ್ಮದಿನ ಆಚರಿಸಿಕೊಳ್ಳಲಿರುವ ಅಭಿಮನ್ಯು ಈಶ್ವರನ್ ಗುರುವಾರ ಶತಕ ಗಳಿಸಿ ಸಂಭ್ರಮಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ ಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನದಾಟವು ಮಂದಬೆಳಕಿನಿಂದಾಗಿ ಸ್ಥಗಿತಗೊಳ್ಳುವ ಮುನ್ನ ಅಭಿಮನ್ಯು (ಬ್ಯಾಟಿಂಗ್ 102, 235 ನಿಮಿಷ, 173ಎಸೆತ, 11ಬೌಂಡರಿ, 2 ಸಿಕ್ಸರ್) ಶತಕ ಪೂರೈಸಿದರು. ಅದರಿಂದಾಗಿ ಇಂಡಿಯಾ ರೆಡ್ ತಂಡವು 52 ಓವರ್‌ ಗಳಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿತು.

ಬೆಳಿಗ್ಗೆ ಇಂಡಿಯಾ ಗ್ರೀನ್ ತಂಡವು 231ಕ್ಕೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್‌ನ ಬಾಕಿ ಚುಕ್ತಾ ಮಾಡಲು ರೆಡ್ ತಂಡವು ಇನ್ನೂ 56 ರನ್‌ಗಳನ್ನು ಗಳಿಸಬೇಕಿದೆ.

24 ವರ್ಷದ ಅಭಿಮನ್ಯು ಬಂಗಾಳ ರಣಜಿ ತಂಡದ ನಾಯಕನಾಗಿದ್ದಾರೆ. ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಇದು ಅವರ ಮೊದಲ ಶತಕ.

ಚಹಾ ವಿರಾಮದ ನಂತರ ಸುರಿದ ಮಳೆಯಿಂದಾಗಿ ಒಂದು ಗಂಟೆ ಸ್ಥಗಿತವಾಯಿತು. ಆಗ 83 ರನ್‌ ಗಳಿಸಿದ್ದ ಅಭಿಮನ್ಯು ಆಟ ಆರಂಭವಾದ ಮೇಲೆ ನೂರರ ಗಡಿ ಮುಟ್ಟಿದರು. ತಮ್ಮ ಸಹಆಟಗಾರರತ್ತ ಬ್ಯಾಟ್ ತೋರಿಸಿ ಸಂಭ್ರಮಿಸಿದರು. ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಾಖಿ ನೂಲನ್ನು ತೆಗೆದು ಪ್ರದರ್ಶಿಸಿದರು!

‘ಅದು ನನ್ನ ಸಹೋದರಿ ಪಲ್ಲವಿ ಕಟ್ಟಿದ ರಾಖಿ. ಈ ಶತಕವನ್ನು ಆಕೆಗೆ ಕಾಣಿಕೆ ನೀಡಿದ್ದೇನೆ’ ಎಂದು ಅಭಿಮನ್ಯು ಅವರು ಸಂಜೆ ಸುದ್ದಿಗಾರರಿಗೆ ತಿಳಿಸಿದರು.

ಹೋದ ಮೇ ತಿಂಗಳಲ್ಲಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಶ್ರೀಲಂಕಾ ’ಎ’ ಎದುರಿನ ಪಂದ್ಯದಲ್ಲಿ ದ್ವಿಶತಕ (233) ಬಾರಿಸಿದ್ದರು.

ಅದರ ನಂತರ ಅವರು ದಾಖಲಿಸಿದ ಶತಕ ಇದಾಗಿದೆ. ಪ್ರಿಯಾಂಕ್ ಪಾಂಚಾಲ್ (33 ರನ್) ಜೊತೆಗೆ ಇನಿಂಗ್ಸ್‌ ಆರಂಭಿಸಿದ ಅಭಿಮನ್ಯು ಮೊದಲ ವಿಕೆಟ್ ಜೊತೆ ಯಾಟದಲ್ಲಿ 87 ರನ್ ಸೇರಿಸಿದರು. ಅಂಕಿತ್ ರಜಪೂತ್ ಎಸೆತದಲ್ಲಿ ಔಟಾದರು. ರೌಂಡ್‌ರಾಬಿನ್ ಲೀಗ್‌ನಲ್ಲಿ ಉತ್ತಮವಾಗಿ ಆಡಿದ್ದ ಕರುಣ್ ನಾಯರ್ ಇಲ್ಲಿ ಕೇವಲ 20 ರನ್ ಗಳಿಸಿ ಔಟಾದರು. ಮಯಂಕ್ ಮಾರ್ಕಂಡೆ ಎಸೆತದಲ್ಲಿ ಕರುಣ್ ಕ್ಲೀನ್‌ಬೌಲ್ಡ್ ಆದರು.

ಆಗ ಅಭಿಮನ್ಯು ಜೊತೆಗೂಡಿದ ಅಂಕಿತ್ ಖಲ್ಸಿ (ಔಟಾಗದೆ 11; 44ಎಸೆತ, 1ಬೌಂಡರಿ) ತಾಳ್ಮೆಯ ಆಟಕ್ಕೆ ಮೊರೆಹೋದರು. ಇದರಿಂದಾಗಿ ವಿಕೆಟ್ ಪತನ ನಿಂತಿತು. ಮೈದಾನದ ಎಲ್ಲ ಭಾಗಗಳಿಗೂ ಚೆಂಡನ್ನು ಹೊಡೆದ ಅಭಿಮನ್ಯು ಬೌಲರ್‌ಗಳ ಪಾಲಿಗೆ ಕಬ್ಬಿಣದ ಕಡಲೆಯಾದರು. ಫ್ರಂಟ್‌ಫುಟ್ ಪಂಚ್, ಫ್ಲಿಕ್, ಕಟ್ ಮತ್ತು ಪುಷ್‌ಗಳ ಮೂಲಕ ರನ್‌ಗಳನ್ನು ಕಲೆಹಾಕಿದರು.

ಮಯಂಕ್ ಅರ್ಧಶತಕದ ಬಲ: ಬೆಳಿಗ್ಗೆ ಮಯಂಕ್ ಮಾರ್ಕಂಡೆ (ಔಟಾಗದೆ 76) ಅವರ ಅರ್ಧಶತಕದ ಬಲದಿಂದ ಇಂಡಿಯಾ ಗ್ರೀನ್ ತಂಡವು ಗೌರವಾರ್ಹ ಮೊತ್ತ ಗಳಿಸಿತು. ಮೊದಲ ದಿನದಾಟದಲ್ಲಿ ಗ್ರೀನ್ ತಂಡವು 49 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 147 ರನ್‌ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಮಯಂಕ್ ಮಾರ್ಕಂಡೆ ಬೆಳಗಿನ ವಾತಾವರಣದಲ್ಲಿ ಚುರುಕಾಗಿ ರನ್ ಗಳಿಸಿದರು. ತನ್ವೀರ್ ಉಲ್ ಹಕ್ (18 ರನ್) ಮತ್ತು ಅಂಕಿತ್ ರಜಪೂತ್ (30; 39ಎಸೆತ, 4ಬೌಂಡರಿ) ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಇನ್ನೂರು ರನ್‌ಗಳ ಗಡಿಯನ್ನು ದಾಟಿತು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಗ್ರೀನ್: 72.1 ಓವರ್‌ಗಳಲ್ಲಿ 231 (ಮಯಂಕ್ ಮಾರ್ಕಂಡೆ ಔಟಾಗದೆ 76, ಅಂಕಿತ್ ರಜಪೂತ್ 30, ಜಯದೇವ್ ಉನದ್ಕತ್ 83ಕ್ಕೆ4, ಸಂದೀಪ್ ವಾರಿಯರ್ 39ಕ್ಕೆ2, ಆವೇಶ್ ಖಾನ್ 56ಕ್ಕೆ2, ಆದಿತ್ಯ ಸರ್ವಟೆ 30ಕ್ಕೆ1), ಇಂಡಿಯಾ ರೆಡ್: 52 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 (ಪ್ರಿಯಾಂಕ್ ಪಾಂಚಾಲ್ 33, ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 102, ಕರುಣ್ ನಾಯರ್ 20, ಅಂಕಿತ್ ಖಲ್ಸಿ ಬ್ಯಾಟಿಂಗ್ 11, ಅಂಕಿತ್ ರಜಪೂತ್ 38ಕ್ಕೆ1, ಮಯಂಕ್ ಮಾರ್ಕಂಡೆ 24ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT