ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಲೆಗ್‌ ಸ್ಪಿನ್ ದಿಗ್ಗಜ ಶೇನ್ ವಾರ್ನ್ ವೃತ್ತಿಜೀವನದ ಆ 7 ಪ್ರಸಂಗಗಳು...

Last Updated 6 ಮಾರ್ಚ್ 2022, 4:39 IST
ಅಕ್ಷರ ಗಾತ್ರ

ಸಿಡ್ನಿ: ಲೆಗ್‌ ಸ್ಪಿನ್ ದಾಳಿ ಮೂಲಕ ಬ್ಯಾಟರ್‌ಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಿದ್ದ ಶೇನ್ ವಾರ್ನ್ ಅವರ ವೃತ್ತಿಜೀವನದಲ್ಲಿ ಅನೇಕ ರೋಚಕ ಪ್ರಸಂಗಗಳು ನಡೆದಿವೆ. ಅವುಗಳ ಪೈಕಿ ಎಂಟು ಪ್ರಸಂಗಗಳು ಹೆಚ್ಚು ಗಮನ ಸೆಳೆದಿದ್ದವು.

ಕೊಲಂಬೊದಲ್ಲಿ ಮ್ಯಾಜಿಕ್‌: ಮೈಕ್ ಗ್ಯಾಟಿಂಗ್‌ ಅವರಿಗೆ ಹಾಕಿದ ’ಶತಮಾನದ ಎಸೆತ’ಕ್ಕೂ ಮೊದಲು, 1992ರಲ್ಲಿ ಶೇನ್ ವಾರ್ನ್ ಮ್ಯಾಜಿಕ್ ಮಾಡಿದ್ದರು. ಕೊಲಂಬೊದಲ್ಲಿ 181 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಒಂದು ಹಂತದಲ್ಲಿ 127ಕ್ಕೆ 2 ರನ್‌ ಗಳಿಸಿ ವಿಶ್ವಾಸದಲ್ಲಿತ್ತು. ಈ ಸಂದರ್ಭದಲ್ಲಿ ವಾರ್ನ್ ಮತ್ತು ಗ್ರೆಗ್ ಮ್ಯಾಥ್ಯೂಸ್ ಆತಿಥೇಯರನ್ನು ಕಂಗೆಡಿಸಿದರು. ಮ್ಯಾಥ್ಯೂಸ್ 37ಕ್ಕೆ 4 ವಿಕೆಟ್ ಗಳಿಸಿದರೆ ತಾವು ಹಾಕಿದ ಕೊನೆಯ 13 ಎಸೆತಗಳಲ್ಲಿ ರನ್ ನೀಡದೆ 3 ವಿಕೆಟ್ ಕಬಳಿಸಿ ವಾರ್ನ್ ಮಿಂಚಿದ್ದರು.

ವಿಂಡೀಸ್‌ ಎದುರು ಜಯದ ಕಾಣಿಕೆ: 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಎರಡನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 52ಕ್ಕೆ 7 ವಿಕೆಟ್ ಉರುಳಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

ಗಾಬಾದಲ್ಲಿ ಹ್ಯಾಟ್ರಿಕ್‌: 1995ರಲ್ಲಿ ಇಂಗ್ಲೆಂಡ್ ಎದುರು ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ವಾರ್ನ್ 71ಕ್ಕೆ 8 ವಿಕೆಟ್‌ ಗಳಿಸಿದ್ದರು. ಈ ನಡುವೆ ಫಿಲ್ ಡಿಫ್ರೀಟಸ್, ಡ್ಯಾರೆನ್ ಗಫ್‌ ಮತ್ತು ಡೇವೋನ್ ಮಾಲ್ಕಮ್ ಅವರ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಸಾಧಿಸಿದ್ದರು. ಸರಣಿಯಲ್ಲಿ ಒಟ್ಟು 27 ವಿಕೆಟ್ ಪಡೆದಿದ್ದರು.

ಮೂರು ಓವರ್‌ಗಳಲ್ಲಿ ಮೂರು ವಿಕೆಟ್‌: 1999ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸೆಮಿಫೈನಲ್‌ನ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ಗಳಿಸಿದ್ದರು. 214 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ವಿಕೆಟ್ ಕಳೆದುಕೊಳ್ಳದೆ 48 ರನ್‌ ಗಳಿಸಿದ್ದಾಗ ವಾರ್ನ್ ಮಿಂಚಿದ್ದರು. ಅವರು 29ಕ್ಕೆ 4 ವಿಕೆಟ್ ಗಳಿಸಿದ್ದರು. ಪಂದ್ಯ ಟೈ ಆಗಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 33ಕ್ಕೆ 4 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು.

ಎರಡೇ ದಿನಗಳಲ್ಲಿ ಟೆಸ್ಟ್ ಮುಕ್ತಾಯ: 2002ರಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಶೇನ್ ವಾರ್ನ್ ಒಟ್ಟು 27 ವಿಕೆಟ್ ಉರುಳಿಸಿದ್ದರು. ಪಂದ್ಯವೊಂದನ್ನು ಎರಡನೇ ದಿನಗಳಲ್ಲಿ ಮುಕ್ತಾಯಗೊಳಿಸಲು ಅವರು ಆಸ್ಟ್ರೇಲಿಯಾಗೆ ನೆರವಾಗಿದ್ದರು.

40 ವಿಕೆಟ್‌ಗಳ ದಾಖಲೆ: 2005ರ ಆ್ಯಷಸ್ ಸರಣಿಯಲ್ಲಿ ವೇಗಿ ಗ್ಲೆನ್ ಮೆಗ್ರಾ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗದ ಚುಕ್ಕಾಣಿ ಶೇನ್ ವಾರ್ನ್ ಕೈಗೆ ಬಂದಿತ್ತು. ಸರಣಿಯಲ್ಲಿ ಸೋಲುಂಡರೂ ಅವರು ಒಟ್ಟು 40 ವಿಕೆಟ್ ಗಳಿಸಿದ್ದರು. ಐದು ಪಂದ್ಯಗಳ ಆ್ಯಷಸ್ ಸರಣಿಯಲ್ಲಿ ಇದು ಆಸ್ಟ್ರೇಲಿಯಾ ಪರ ದಾಖಲೆಯಾಗಿದೆ.

ಸ್ಟ್ರಾಸ್ ವಿಕೆಟ್‌; 700ರ ಸಾಧನೆ: 2007ರ ಇಂಗ್ಲೆಂಡ್ ಎದುರಿನ ಆ್ಯಷಸ್‌ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3–0 ಮುನ್ನಡೆ ಸಾಧಿಸಿತ್ತು. ಬಾಕ್ಸಿಂಗ್ ಡೇಯಂದು ಆರಂಭಗೊಂಡ ನಾಲ್ಕನೇ ಟೆಸ್ಟ್‌ನಲ್ಲಿ ಆಡಲು ಇಳಿದಾಗ ವಾರ್ನ್‌ ಬಳಿ 699 ವಿಕೆಟ್‌ಗಳಿದ್ದವು. ಆ್ಯಂಡ್ರ್ಯೂ ಸ್ಟ್ರಾಸ್ ಅವರನ್ನು ಔಟ್ ಮಾಡುವ ಮೂಲಕ ಅವರು 700ರ ಸಾಧನೆ ಮಾಡಿದರು. ಸರಣಿಯನ್ನು ಆಸ್ಟ್ರೇಲಿಯಾ 5–0ಯಿಂದ ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT