ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆ ಎದುರು 2ನೇ ಕ್ವಾಲಿಫೈಯರ್ ಪಂದ್ಯ: ಕ್ಯಾಪಿಟಲ್ಸ್‌ಗೆ ಚೊಚ್ಚಲ ಫೈನಲ್ ಕನಸು

Last Updated 9 ಮೇ 2019, 15:36 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಕಳೆದ ಬಾರಿಯ ರನ್ನರ್ ಅಪ್‌ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಜಯದ ಬೆನ್ನೇರಿ ಶುಕ್ರವಾರ ಕಣಕ್ಕೆ ಇಳಿಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿರುವ ಶ್ರೇಯಸ್ ಅಯ್ಯರ್ ಬಳಗ ಚೊಚ್ಚಲ ಫೈನಲ್‌ ಕನಸು ಹೊತ್ತು ಸಾಮರ್ಥ್ಯವನ್ನು ಪಣಕ್ಕಿಡಲಿದೆ.

ಚೆನ್ನೈನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ 80 ರನ್‌ಗಳಿಂದ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ ಪಟ್ಟಿಯ ಅಗ್ರ ಎರಡರಲ್ಲಿ ಸ್ಥಾನ ಗಳಿಸುವ ಕ್ಯಾಪಿಟಲ್ಸ್‌ ಆಸೆಗೆ ತಣ್ಣೀರು ಸುರಿಸಿತ್ತು. ಆದರೆ ನಂತರ ಪರಿಸ್ಥಿತಿ ಬದಲಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್‌ಗೆ ಸುಲಭವಾಗಿ ಮಣಿದಿತ್ತು. ಮೊದಲ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಎದುರು ಕ್ಯಾಪಿಟಲ್ಸ್‌ ಅಮೋಘ ಜಯ ಸಾಧಿಸಿತ್ತು.

ಹೀಗಾಗಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್‌ನಲ್ಲೂ ಗೆಲ್ಲುವ ವಿಶ್ವಾಸ ಹೊಂದಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಈ ತಂಡದ ಸವಾಲನ್ನು ಮೆಟ್ಟಿ ನಿಲ್ಲಲು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಾಧ್ಯವೇ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತು ಪಂಡಿತರಲ್ಲಿ ಕುತೂಹಲ ಮೂಡಿಸಿದೆ.

ಡೆಲ್ಲಿ ತಂಡ (ಈ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್‌) ಇದೇ ಮೊದಲ ಬಾರಿ ಪ್ಲೇ ಆಫ್ ಹಂತದಲ್ಲಿ ಗೆಲುವು ಸಾಧಿಸಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಪ್ರಶಸ್ತಿ ಸುತ್ತಿನ ಹಣಾಹಣಿಗೆ ಸಜ್ಜಾಗಲು ತಂಡ ಮೇರೆ ಮೀರಿ ಪ್ರಯತ್ನಿಸಲಿದೆ. ತಂಡದ ಭರವಸೆಗೆ ಸ್ಫೋಟಕ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಬಲ ತುಂಬಿದ್ದಾರೆ. ಬುಧವಾರ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ರಿಷಭ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಮತ್ತೊಮ್ಮೆ ಪ್ರತಿಭೆಯನ್ನು ಒರೆಗೆ ಹಚ್ಚಲು ಸಜ್ಜಾಗಿದ್ದಾರೆ.

ಪೃಥ್ವಿ ಶಾ ಮೇಲೂ ಕಣ್ಣು: ಕ್ಯಾಪಿಟಲ್ಸ್ ತಂಡದಲ್ಲಿರುವ ಮತ್ತೊಬ್ಬ ಯುವ ಆಟಗಾರ ಪೃಥ್ವಿ ಶಾ ಅವರ ಮೇಲೆಯೂ ಈಗ ಎಲ್ಲರ ಕಣ್ಣು ನೆಟ್ಟಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಅವರ ಪಾತ್ರವೂ ಮುಖ್ಯವಾಗಿತ್ತು. ಬುಧವಾರದ ಪಂದ್ಯದಲ್ಲಿ ಆಡಿರುವುದರಿಂದ ಕ್ಯಾಪಿಟಲ್ಸ್‌ಗೆ ಇಲ್ಲಿನ ಪಿಚ್‌ನ ಮರ್ಮ ತಿಳಿದಿದೆ. ಇದು ಕೂಡ ತಂಡಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿದೆ.

ಕಗಿಸೊ ರಬಾಡ ಅನುಪಸ್ಥಿತಿಯಲ್ಲಿ ಟ್ರೆಂಟ್ ಬೌಲ್ಟ್‌, ಇಶಾಂತ್ ಶರ್ಮಾ ಮತ್ತು ಕೀಮೊ ಪೌಲ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅನುಭವಿ ಆಟಗಾರ ಅಮಿತ್ ಮಿಶ್ರಾ ಭರವಸೆ ತುಂಬಿದ್ದಾರೆ.

ಸೂಪರ್ ಕಿಂಗ್ಸ್‌ನ ಇಮ್ರಾನ್ ಹಾಹೀರ್ ಮತ್ತು ಹರಭಜನ್ ಸಿಂಗ್ ದಾಳಿಯನ್ನು ಮೆಟ್ಟಿನಿಲ್ಲಲು ಸಾಧ್ಯವಾದರೆ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ಗಳು ರನ್ ಮಳೆ ಸುರಿಸುವ ಸಾಧ್ಯತೆ ಇದೆ.

ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಮತ್ತು ನಾಲ್ಕು ಬಾರಿ ರನ್ನರ್ ಅಪ್‌ ಆಗಿರುವ ಸೂಪರ್ ಕಿಂಗ್ಸ್‌ ಮೊದಲ ಕ್ವಾಲಿಫೈಯರ್‌ನಲ್ಲಿ ಅನುಭವಿಸಿದ ಸೋಲಿನ ಕಹಿ ಮರೆಯಲು ಪ್ರಯತ್ನಿಸಲಿದೆ. ಕೈಕೊಟ್ಟ ಬ್ಯಾಟ್ಸ್‌ಮನ್‌ಗಳು ಇಲ್ಲಿ ಲಯಕ್ಕೆ ಮರಳಬೇಕಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವ್ಯಾಟ್ಸನ್ ಮತ್ತು ಫಾಫ ಡು ಪ್ಲೆಸಿ ಅವರ ಮೇಲೆ ತಂಡ ಭರವಸೆ ಇರಿಸಿದೆ.

ತಂಡಗಳು: ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್‌), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್‌ ವ್ಯಾಟ್ಸನ್‌, ಫಾಫ್‌ ಡು ಪ್ಲೆಸಿ, ಮುರಳಿ ವಿಜಯ್‌, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ನೋಯ್‌, ರಿತುರಾಜ್‌ ಗಾಯಕವಾಡ್‌, ಡ್ವೇನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್‌, ಹರಭಜನ್ ಸಿಂಗ್‌, ಮಿಷೆಲ್ ಸ್ಯಾಂಟನರ್‌, ಶಾರ್ದೂಲ್ ಠಾಕೂರ್‌, ಮೋಹಿತ್ ಶರ್ಮಾ, ಕೆ.ಎಂ.ಆಸಿಫ್‌, ದೀಪಕ್ ಚಾಹರ್‌, ಎನ್‌.ಜಗದೀಶನ್, ಸ್ಕಾಟ್‌ ಕುಗೆಲಿನ್‌.

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೇಯಸ್ ಅಯ್ಯರ್‌ (ನಾಯಕ), ಪೃಥ್ವಿ ಶಾ, ಶಿಖರ್ ಧವನ್‌, ರಿಷಭ್ ಪಂತ್ (ವಿಕೆಟ್ ಕೀಪರ್‌), ಕಾಲಿನ್ ಇಂಗ್ರಮ್‌, ಕೀಮೊ ಪೌಲ್‌, ಅಕ್ಷರ್ ಪಟೇಲ್‌, ರಾಹುಲ್ ತೇವಾತಿಯಾ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಹನುಮ ವಿಹಾರಿ, ಅಂಕುಶ್‌ ಬೇನ್ಸ್‌, ಜೆ.ಸುಚಿತ್‌, ಮನಜೋತ್‌ ಕಾರ್ಲ, ಕ್ರಿಸ್ ಮಾರಿಸ್‌, ಶೇರ್ಫಾನೆ ರೂದರ್‌ಫಾರ್ಡ್‌, ಜಲಜ್ ಸಕ್ಸೇನ, ಸಂದೀಪ್‌ ಲಮಿಚಾನೆ, ಟ್ರೆಂಟ್ ಬೌಲ್ಟ್‌, ಆವೇಶ್ ಖಾನ್‌, ನಾತು ಸಿಂಗ್‌, ಬಂಡಾರು ಅಯ್ಯಪ್ಪ, ಕಾಲಿನ್ ಮನ್ರೊ.

ರಿಷಭ್ ಪಂತ್‌

ಪಂದ್ಯಗಳು – 15
ರನ್‌ –450
ಗರಿಷ್ಠ –78*
ಸ್ಟ್ರೈಕ್ ರೇಟ್– 163.63
ಅರ್ಧಶತಕ– 3
ಸಿಕ್ಸರ್‌ಗಳು– 26
ಬೌಂಡರಿಗಳು– 35

ಇಮ್ರಾನ್ ತಾಹೀರ್‌
ಪಂದ್ಯಗಳು – 15
ವಿಕೆಟ್ –23
ನೀಡಿದ ರನ್‌– 380
ಇಕಾನಮಿ– 6.62
4 ವಿಕೆಟ್ ಸಾಧನೆ– 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT