ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಸ್‌–ಅಶ್ವಿನ್‌ ಮುಖಾಮುಖಿ: ಗೆಲುವಿನ ಭರವಸೆಯಲ್ಲಿ ಕ್ಯಾಪಿಟಲ್ಸ್‌

ಫಿರೋಜ್‌ ಷಾ ಕೋಟ್ಲಾ
Last Updated 19 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಹ್ಯಾಟ್ರಿಕ್ ಗೆಲುವಿನ ನಂತರ ಸೋಲಿಗೆ ಶರಣಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ತವರಿನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೆಣಸಲಿದೆ.

ಟೂರ್ನಿಯ ಆರಂಭದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಮುಂಬೈನಲ್ಲಿ ಗೆದ್ದಿದ್ದ ಕ್ಯಾಪಿಟಲ್ಸ್ ನಂತರ ಏಳು–ಬೀಳುಗಳನ್ನು ಕಂಡಿದೆ. ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ತಂಡ ನಂತರ ಸೂಪರ್ ಓವರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಸೋಲುಣಿಸಿತ್ತು. ನಂತರ ಸತತ ಎರಡು ಪಂದ್ಯ ಸೋತಿತ್ತು. ಆದರೆ ಪುಟಿದೆದ್ದ ತಂಡ ಸತತ ಮೂರು ಪಂದ್ಯಗಳಲ್ಲಿ ಗೆದ್ದಿತ್ತು.

ಗುರುವಾರ ತವರಿನಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದ ಕಾರಣ ಮತ್ತೆ ಆತಂಕಕ್ಕೆ ಒಳಗಾಗಿದೆ. ಸ್ಥಳೀಯ ಪ್ರೇಕ್ಷಕರ ಬೆಂಬಲ, ರಿಕಿ ಪಾಂಟಿಂಗ್‌ ಮತ್ತು ಸೌರವ್ ಗಂಗೂಲಿ ಅವರು ತುಂಬಿದ ನೈತಿಕ ಬಲ ಯಾವುದೂ ತಂಡದ ಕೈ ಹಿಡಿಯಲಿಲ್ಲ. ಆದ್ದರಿಂದ ತಪ್ಪುಗಳನ್ನು ಸರಿಪಡಿಸಿಕೊಂಡು ಕಿಂಗ್ಸ್ ವಿರುದ್ಧ ಗೆಲ್ಲುವ ಬಯಕೆಯೊಂದಿಗೆ ತಂಡ ಕಣಕ್ಕೆ ಇಳಿಯಲಿದೆ. ಪ್ಲೇ ಆಫ್‌ ಹಂತಕ್ಕೇರಬೇಕಾದರೆ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೇಲೇರುವ ಬಯಕೆ: ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವನ್‌ ಪಂಜಾಬ್ ತಂಡ ಪಂದ್ಯ ಗೆದ್ದು ಒಂದು ಸ್ಥಾನ ಮೇಲೇರಲು ಪ್ರಯತ್ನಿಸಲಿದೆ. ಮೂರು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿರುವ ರವಿಚಂದ್ರನ್ ಅಶ್ವಿನ್‌ ಬಳಗ ಮತ್ತೊಂದು ಗೆಲುವಿನ ತವಕದಲ್ಲಿದೆ.

ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ಗಳಿಸದ ರಿಷಭ್ ಪಂತ್‌ ಗುರುವಾರದ ಪಂದ್ಯದಲ್ಲಿ ಮಿಂಚಲಿಲ್ಲ. ಹೀಗಾಗಿ ಮತ್ತೊಮ್ಮೆ ಅವರ ಮೇಲೆ ಎಲ್ಲರು ಕಣ್ಣು ನೆಟ್ಟಿದ್ದಾರೆ. ಆರಂಭಿಕ ಜೋಡಿ ಶಿಖರ್‌ ಧವನ್ ಮತ್ತು ಪೃಥ್ವಿ ಶಾ ಕೂಡ ಮತ್ತೊಮ್ಮೆ ಲಯ ಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ.

ಮೊದಲ ಸುತ್ತಿನಲ್ಲಿ ಕ್ಯಾಪಿಟಲ್ಸ್ ಎದುರು ಕಿಂಗ್ಸ್‌ 14 ರನ್‌ಗಳಿಂದ ಗೆದ್ದಿತ್ತು. ಹೀಗಾಗಿ ಈ ಪಂದ್ಯದಲ್ಲೂ ಗೆಲ್ಲುವ ಭರವಸೆಯಲ್ಲಿದೆ. ಕೆ.ಎಲ್‌.ರಾಹುಲ್‌, ಕ್ರಿಸ್ ಗೇಮ್‌ ಮತ್ತು ಡೇವಿಡ್ ಮಿಲ್ಲರ್ ಬ್ಯಾಟಿಂಗ್‌ನಲ್ಲೂ ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಮುಜೀಬ್ ಉರ್ ರಹಿಮಾನ್‌ ಮುಂತಾದವರು ಬೌಲಿಂಗ್‌ನಲ್ಲೂ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT